![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Dec 12, 2019, 4:53 AM IST
ಚಿನ್ನು ಕೈಲಿ ಸ್ಕೇಲ್ ಹಿಡಿದು ಮೋತಿ ನಾಯಿಯ ಬಳಿ “ನಿನ್ನ ಹೆಸರು ಹೇಳು’ ಎಂದು ಅಪ್ಪಣೆ ಹೊರಡಿಸುತ್ತಿದ್ದಳು. ಅದಕ್ಕೋ… ಈ ಮಗು ಏನು ಮಾಡಿದರೂ ಚಂದವೇ. ಬಾಲ ಅಲ್ಲಾಡಿಸುತ್ತ ಮಿಕಿ ಮಿಕಿ ಯಜಮಾನಿಯ ಹಾವಭಾವವನ್ನೇ ಮಿಕಿ ಮಿಕಿ ಎಂದು ನೋಡುತ್ತಿತ್ತು.
ಚಿನ್ನು ಅಜ್ಜ ಅಜ್ಜಿಯ ಮುದ್ದಿನ ಮೊಮ್ಮಗಳು. ದಿನವಿಡೀ ಅಜ್ಜನ ಹಿಂದೆ ಮುಂದೆ ಸುತ್ತುತ್ತಾ, ಅಜ್ಜಿ ಕೊಡುವ ಕಡಲೆ, ಚಕ್ಕುಲಿ ಅಗಿಯುತ್ತ, ಕಥೆಗಾಗಿ ಅವರನ್ನು ಪೀಡಿಸುತ್ತ ಇದ್ದ ಚಿನ್ನುವನ್ನು ಅಪ್ಪ ಶಾಲೆಗೆ ಸೇರಿಸಿದಾಗ ಅವಳಿಗೆ ವಿಪರೀತ ದುಃಖವಾಗಿತ್ತು. “ಅಜ್ಜ, ಅಜ್ಜಿಯನ್ನು ಕೂಡಾ ನನ್ನ ಜೊತೆ ಶಾಲೆಗೆ ಸೇರಿಸು ಅಪ್ಪಾ’ ಎಂದು ರಚ್ಚೆ ಹಿಡಿದು ಅತ್ತಳು. ಅಜ್ಜಿ ನಗೆ ತಡೆಯಲಾಗದೆ ನಕ್ಕಾಗ ಮೂತಿ ಊದಿಸಿಕೊಂಡಿದ್ದಳು. ಮೊಮ್ಮಗಳನ್ನು ಸಮೀಪಕ್ಕೆ ಕರೆದ ಅಜ್ಜ, ಜೇಬಿನಲ್ಲಿದ್ದ ಖರ್ಜೂರ ತೆಗೆದು ಕೊಟ್ಟಾಗ ಕೋಪ ಹೋಯಿತು. ಅವರು ಪೇಟೆಗೆ ಕರೆದುಕೊಂಡು ಹೋಗಿ ಅವಳಿಗೆ ಇಷ್ಟವಾದ ಪುಟಾಣಿ ಸ್ಕೂಲ್ ಬ್ಯಾಗ್ ತೆಗೆಸಿಕೊಟ್ಟರು.
“ಮಾರನೇ ದಿನದಿಂದ ಸ್ಕೂಲಿಗೆ ಹೋಗಲೇಬೇಕು. ಹಟ, ಮೊಂಡುತನ, ರಚ್ಚೆ ಹಿಡಿದು ರಂಪ ತೆಗೆದರೆ ಎರಡೇಟು ಬೀಳುತ್ತದೆ’ ಎಂದು ಗದರಿಸಿದರು ಅಪ್ಪ. “ಸ್ಕೂಲಿಗೆ ಹೋಗುತ್ತೇನೆ; ಅಜ್ಜ, ಅಜ್ಜಿಗೆ ಬರಲಾಗದೆ ಇದ್ದರೆ ಮೋತಿ ನಾಯಿ ಬರಲಿ’ ಎಂದು ರಾಜಿಗೆ ಒಪ್ಪಿದಳು. “ನಾಯಿಯನ್ನು ಸ್ನಾನ ಮಾಡಿಸಿ, ಯೂನಿಫಾರಮ್ ಹಾಕಿಸಿ ಕಳಿಸುವಾ. ಈಗ ಮೊದಲು ನೀನು ಹೋಗು’ ಎಂದರು ಅಪ್ಪ.
ಚಿನ್ನುವಿನ ಶಾಲೆ ಮನೆಯ ಸಮೀಪದಲ್ಲೇ ಇತ್ತು. ಮರುದಿನ ಅಜ್ಜ, ಕರೆದುಕೊಂಡು ಹೊರಟರು. ನಾಲ್ಕಾರು ದಿನ ಸ್ಕೂಲಿಗೆ ಹೋಗಲು ಗೋಳಾಡಿದ ಚಿನ್ನುವಿಗೆ ಹೊಸ ಹೊಸ ಸ್ನೇಹಿತರು ಸಿಕ್ಕಿ ಆಟವಾಡುವಾಗ ಅಳು ಮರೆತೇ ಹೋಯಿತು. ಟೀಚರ್ ಹೇಳುವ ಅಭಿನಯ ಗೀತೆ, ಮಂಗನ ಕಥೆ ಎಲ್ಲವನ್ನೂ ಕಣ್ಣರಳಿಸಿ ಕೇಳಿದಳು. ಮನೆಗೆ ಬಂದ ನಂತರ ಹೋಂವರ್ಕ್ ಮಾಡಲು ನೆಚ್ಚಿನ ತಾಣ ಮನೆಯ ಪಕ್ಕದ ಹಲಸಿನ ಮರದ ಬುಡ. ನಡು ಮಧ್ಯಾಹ್ನದ ಹೊತ್ತಿಗೂ ತಂಪಾದ ನೆರಳು, ಗಾಳಿ ಅಲ್ಲಿತ್ತು. ಕಾಲಿನ ಬುಡದಲ್ಲಿ ಮೋತಿ ನಾಯಿ ಬಾಲ ಅಲ್ಲಾಡಿಸುತ್ತ ಚಿಕ್ಕ ಯಜಮಾನಿಯ ಕಾವಲಿಗೆ ಕೂರುತ್ತಿತ್ತು. ಚಿನ್ನುವಿಗೆ ಅಜ್ಜಿ ಏನೇ ತಿಂಡಿ ಕೊಟ್ಟರೂ ಅದರಲ್ಲಿ ಅರ್ಧ ಪಾಲು ಮೋತಿ ನಾಯಿಗೆ ಸಲ್ಲುತ್ತಿತ್ತು. ಚಿನ್ನು ತಾನೊಂದು ತುಂಡು ತಿಂದು ಇನ್ನೊಂದನ್ನು ನಾಯಿಗೆ ಕೊಡುತ್ತಿದ್ದಳು.
ರಜಾ ದಿನಗಳಲ್ಲಿ ಹಿತ್ತಲಿನ ಮಾವಿನ ಮರದಡಿಯಲ್ಲಿ ತನಗಾಗಿಯೇ ಅಜ್ಜ ಮಾಡಿಸಿದ ಪುಟ್ಟ ಮರದ ಕುರ್ಚಿಯಲ್ಲಿ ಕೂತು ಶಾಲೆಯ ಆಟ ಶುರು ಮಾಡುತ್ತಿದ್ದಳು. ಕೈಲಿ ಸ್ಕೇಲ್ ಹಿಡಿದು ಮೋತಿಯ ಬಳಿ “ನಿನ್ನ ಹೆಸರು ಹೇಳು’ ಎಂದು ಅಪ್ಪಣೆ ಹೊರಡಿಸುತ್ತಿದ್ದಳು. ಅದಕ್ಕೋ… ಈ ಮಗು ಏನು ಮಾಡಿದರೂ ಚಂದವೇ. ಬಾಲ ಅಲ್ಲಾಡಿಸುತ್ತ ಮಿಕಿ ಮಿಕಿ ಯಜಮಾನಿಯ ಹಾವಭಾವವನ್ನೇ ತದೇಕಚಿತ್ತದಿಂದ ನೋಡುತ್ತಿತ್ತು.
ಮೋತಿ ಬೌ ಬೌ ಎಂದು ಬೊಗಳಿದಾಗ “ಹೆಸರು ಗೊತ್ತಿಲ್ವಾ? ದಡ್ಡ ನೀನು’ ಎಂದು ಹೊಡೆಯುವಂತೆ ಮಾಡುತ್ತಿದ್ದಳು. ಮೋತಿಗೆ ಚಿನ್ನುವಿನ ಆಟ ನೋಡಲೇ ಸೊಗಸು.
“ಅಜ್ಜಿ, ತಿಂಡಿಗೆ ಕರೆಯದೆ ಇದ್ದರೂ ಓಡಿ ಬರ್ತಿ. ಪಾಠ ಕಲಿಯಲು ಮಾತ್ರ ಆಗೋದಿಲ್ಲ ನಿಂಗೆ’ ಎಂದು ಚಿನ್ನು ಹೇಳಿದರೆ, ಮೋತಿ ಆಕಳಿಸುತ್ತಾ ನಿದ್ರಿಸಲು ಯತ್ನಿಸುತ್ತಿತ್ತು. ಅಷ್ಟರಲ್ಲಿ, ತನ್ನ ವ್ಯಾಪ್ತಿ ಪ್ರದೇಶದೊಳಕ್ಕೆ ಅನ್ಯನಾಯಿಗಳು ಕಾಲಿಟ್ಟ ಸುಳಿವು ಸಿಕ್ಕಿ ಮೋತಿ ಓಟ ಕಿತ್ತಿತು. ಅವುಗಳನ್ನು ಗದರಿ ಅಟ್ಟಿಸಿಕೊಂಡು ಹೋಗಿ ನಂತರವೇ ಹಿಂದಿರುಗಿದ್ದು. ಮರದಲ್ಲಿ ಹಕ್ಕಿಗಳು ಕಂಡರೂ ಮೋತಿಗೆ ಸಿಟ್ಟೇ. ಎಲ್ಲಿ ಅವು ಚಿನ್ನುವಿಗೆ ತೊಂದರೆ ಕೊಡುತ್ತವೋ ಎಂದು ಅದಕ್ಕೆ ಆತಂಕ.
ಚಿನ್ನುವನ್ನು, ಅಮ್ಮ ಸ್ನಾನ ಮಾಡಿಸುವಾಗಲೂ ಮೋತಿ ಬಚ್ಚಲುಮನೆಯ ಬಾಗಿಲ ಬಳಿ ಹೋಗಿ ನಿಲ್ಲುತ್ತಿತ್ತು. ತನಗೆ ಸ್ನಾನ ಕಂಡರಾಗದಿದ್ದರೂ ಚಿನ್ನುವಿಗೆ ಸ್ನಾನ ಮಾಡಿಸುವುದನ್ನು ಕಂಡಾಗ ಸಂತಸದಿಂದ ನಲಿಯುತ್ತಿತ್ತು. ನೀರು ತುಂಬಾ ಬಿಸಿ ಇದ್ದಾಗ ಚಿನ್ನು “ಅಮ್ಮಾ ಬಿಸಿ…’ ಎಂದು ಕೂಗುತ್ತಿದ್ದಳು. ಆಗ ಮಾತ್ರ ಚಿನ್ನು ಅಮ್ಮನನ್ನು ಕಂಡು ಬೊಗಳುತ್ತಾ ಚಿನ್ನುವಿನ ರಕ್ಷಣೆಗೆ ನಿಲ್ಲುತ್ತಿತ್ತು. ಸ್ಕೂಲಿನಿಂದ, ಸಂಜೆ ಅವಳು ಬರುವುದನ್ನೇ ಕಾಯುವ ನಾಯಿಯ ಸ್ವಾಮಿ ನಿಷ್ಟೆ, ಕಾಳಜಿ, ಚಿನ್ನುವಿನ ಬಗೆಗೆ ವಹಿಸುವ ಜಾಗರೂಕತೆ ನೋಡಿ ಎಲ್ಲರೂ ನಾಯಿಯನ್ನು ಮೆಚ್ಚಿಕೊಂಡಿದ್ದರು. ಮೋತಿಯಂಥ ನಾಯಿ ಬೇರೊಂದಿಲ್ಲ ಎಂದು ಮನೆಯವರಿಗೂ ಹಿಗ್ಗು.
– ಕೃಷ್ಣವೇಣಿ ಕಿದೂರು
You seem to have an Ad Blocker on.
To continue reading, please turn it off or whitelist Udayavani.