ಕನಸು ಕಾಣುವ ಪುಟ್ಟ
Team Udayavani, Apr 27, 2017, 3:47 PM IST
ಪುಟ್ಟನಿಗೆ ಕನಸು ಕಾಣುವುದೆಂದರೆ ಬಹಳ ಇಷ್ಟ. ಒಮ್ಮೆ ಪ್ರಸಿದ್ಧ ಸಂಗೀತಗಾರನಾದ ಹಾಗೆ, ಇನ್ನೊಮ್ಮೆ ಪ್ರಖ್ಯಾತ ಓಟಗಾರನಾದ ಹಾಗೆ, ಮಗದೊಮ್ಮೆ ತರಗತಿಗೇ ಮೊದಲಿಗನಾಗಿ ಒಳ್ಳೆಯ ಅಂಕ ಪಡೆದ ಹಾಗೆ… ಹೀಗೆಲ್ಲಾ ಕನಸುಗಳನ್ನು ಕಾಣುತ್ತಿದ್ದನು.ಅವನ ಕನಸಿನಲ್ಲಿ ಯಾವತ್ತೂ ಸಾಧನೆ ಮಾಡುತ್ತಿದ್ದನು. ಆವಾಗ ಸುತ್ತಲಿದ್ದವರು ಭೇಷ್ ಎನ್ನುತ್ತಿದ್ದರು. ಆಗ ಪುಟ್ಟನಿಗೆ ಖುಷಿಯೋ ಖುಷಿ! ಆದರೆ ನಿದ್ದೆಯಿಂದ ಎದ್ದು ಕಣ್ಣು ತೆರೆದಾಗ ಅದು ಕನಸೆಂದು ತಿಳಿದು ಪೆಚ್ಚಾಗುತ್ತಿದ್ದನು.
ಒಂದು ದಿನ ಏಳುವುದು ತಡವಾಗಿ. “ಏಳ್ಳೋ ಬೇಗ…’ ಎಂದು ತೋಳು ಹಿಡಿದು ಅಮ್ಮ ಎಬ್ಬಿಸಿದಳು. ಪುಟ್ಟ ಅರೆಮನಸ್ಸಿನಿಂದ ಎದ್ದನು. ತಡವಾದುದರಿಂದ ಟೀಚರ್ ಕೊಟ್ಟ ಹೋಂವರ್ಕ್‌ನ್ನು ಮಾಡದೆ ಹಾಗೆಯೇ ಶಾಲೆಗೆ ಹೋದನು. ಶಿಕ್ಷೆಯನ್ನೂ ಅನುಭವಿಸಿದನು. ಮಕ್ಕಳೆಲ್ಲ ಅವನನ್ನು ಕಂಡು ನಗುತ್ತಿದ್ದರು.
ಕನಸಿನಲ್ಲಿ ಅವನನ್ನು ಹೊಗಳುತ್ತಾ, ಶಹಬ್ಟಾಸ್‌ಗಿರಿ ನೀಡುತ್ತಿದ್ದವರೆಲ್ಲರೂ ವಾಸ್ತವದಲ್ಲಿ ಏವನನ್ನು ಗೇಲಿ ಮಾಡುತ್ತಿದ್ದವರಾಗಿದ್ದರು. ಎಲ್ಲರ ಮೆಚ್ಚುಗೆ ಪಡೆಯಬೇಕೆಂಬ ಹುಮ್ಮಸ್ಸಿನಲ್ಲಿ ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದನಾದರೂ ಯಾವುದರಲ್ಲೂ ಅವನಿಗೆ ಬಹುಮಾನ ಸಿಗುತ್ತಿರಲಿಲ್ಲ. ಅವನಿಗೆ ಹಾಡುವುದೆಂದರೆ ತುಂಬಾ ಇಷ್ಟ. ಅವನು ಹಾಡುತ್ತಿದ್ದ ಕನಸುಗಳೇ ಹೆಚ್ಚು ಬೀಳುತ್ತಿದ್ದುದು. ಆದರೆ ವಾಸ್ತವದಲ್ಲಿ ಅವನು ಚೆನ್ನಾಗಿ ಹಾಡುತ್ತಿರಲಿಲ್ಲ. ಏಕೆಂದರೆ ಅವನು ಅಭ್ಯಾಸ ಮಾಡುತ್ತಿರಲಿಲ್ಲ. ಬರಿ ಕನಸು ಕಾಣುತ್ತಿದ್ದ ಅಷ್ಟೆ.
ಅದೊಂದು ದಿನ ಶಾಲೆಗೆ ಹೆಸರಾಂತ ಗಾಯಕರೊಬ್ಬರು ಬಂದಿದ್ದರು. ಅವರು ಪುಟ್ಟನ ಮೆಚ್ಚಿನ ಗಾಯಕರಾಗಿದ್ದರು. ಅವರ ಆಟೋಗ್ರಾಫ್ ಪಡೆಯುವ ಮನಸ್ಸು ಪುಟ್ಟನಿಗಾಯಿತು. ಮೆಲ್ಲನೆ ಸ್ಟೇಜ್ ಬಳಿಗೆ ಸಾಗಿದ ಪುಟ್ಟ. ಅಲ್ಲಿ ಸಂಗೀತ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ನಡೆಯುವುದಿತ್ತು. ಅದಾದ ಮೇಲೆ ವೇದಿಕೆ ಮೇಲೆ ತೆರಳಿ ಹಸ್ತಾಕ್ಷರ ಪಡೆಯೋಣ ಎಂದುಕೊಂಡನ ಪುಟ್ಟ. ಆದರೆ ಅಷ್ಟರಲ್ಲಿ ಕರೆಂಟ್ ಹೋಯಿತು. ಯಾರಿಗೂ ಕಾಣದಂತೆ ಹಸ್ತಾಕ್ಷರ ಪಡೆಯಲು ಇದೇ ಸುಸಂದರ್ಭ ಎಂದುಕೊಂಡು ವೇದಿಕೆಯೇರಿದ ಪುಟ್ಟ. ಅವನು ಇನ್ನೂ ವೇದಿಕೆ ಮಧ್ಯದಲ್ಲಿರುವಂತೆಯೇ ಕರೆಂಟು ಬಂದಿತು. ಒಮ್ಮೆಲೇ ಜಗ್ಗೆಂದು ಎಲ್ಲೆಡೆ ಬೆಳಕಾಯಿತು! ನೋಡಿದರೆ ಅಲ್ಲಿ… ಪ್ರಿನ್ಸಿಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲರೂ ಇದ್ದಾರೆ! “ಓಹೋ ಹಾಡುವುದಕ್ಕೆ ಬಂದಿದ್ದಾನೆ ಮೈಕ್ ಕೊಡಿ ಇವನಿಗೆ’ ಎಂದು ಎಲ್ಲರೂ ಅಪಹಾಸ್ಯ ಮಾಡುತ್ತಿದ್ದಾರೆ!
ಪುಟ್ಟ ಅಳತೊಡಗಿದ. ಭಯದಿಂದ ತತ್ತರಗೊಂಡಿದ್ದ ಪುಟ್ಟನನ್ನು ಆ ಗಾಯಕರು ನೋಡಿದರು. ಮುಗುಳ್ನಗುತ್ತ ಹತ್ತಿರ ಬಂದು ಹೆಗಲ ಮೇಲೆ ಕೈಹಾಕಿದರು. ಅವರು ಪುಟ್ಟನನ್ನು ಮಾತಾಡಿಸಿದಾಗ ತನ್ನ ಸಂಗೀತಾಸಕ್ತಿಯ ಕುರಿತು ಹೇಳಿಕೊಂಡ. ಅವರು ವಾರಾಂತ್ಯದಲ್ಲಿ ಸಂಗೀತ ಪಾಠಕ್ಕೆ ತಮ್ಮ ಮನೆಗೇ ಬರುವಂತೆ ಆಹ್ವಾನಿಸಿದರು. ಪುಟ್ಟನಿಗೆ ಆದ ಸಂತಸ ಅಷ್ಟಿಷ್ಟಲ್ಲ. ಬರಿ ಕನಸು ಕಾಣುವುದರಿಂದ ಏನೂ ಸಾಧನೆ ಮಾಡಲಾಗುವುದಿಲ್ಲವೆಂದೂ, ಕನಸನ್ನು ನನಸು ಮಾಡುವುದಕ್ಕೆ ಪರಿಶ್ರಮ ಪಡಬೇಕೆಂಬ ಸತ್ಯ ಪುಟ್ಟನಿಗೆ ಅರ್ಥವಾಯಿತು ಸ್ಟೇಜ್ ಮೇಲೆ ಹಾಡಿ ಎಲ್ಲರ ಮೆಚ್ಚುಗೆ ಗಳಿಸಲೇಬೇಕೆಂಬ ಹುಮ್ಮಸ್ಸಿನಲ್ಲಿ ಪುಟ್ಟ ಈಗ ಸಂಗೀತಾಭ್ಯಾಸವನ್ನು ಮಾಡಿದ. ಶಾಲಾ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಗೆದ್ದ. ಒಂದು ಸಮಯದಲ್ಲಿ ತಾನು ಕನಸು ಕಾಣುತ್ತಿದ್ದಂತೆ ಶಿಕ್ಷಕರ, ವಿದ್ಯಾರ್ಥಿಗಳ ಮೆಚ್ಚುಗೆಯನ್ನೂ ಪಡೆದ.
– ರಾಜೇಶ್ವರಿ ಜಯಕೃಷ್ಣ