ಮಂಗಮ್ಮನ ಸಂಚು ಬಯಲಾಯ್ತು!
Team Udayavani, Jan 11, 2018, 1:45 PM IST
ಚಂದ್ರಲೋಕದಲ್ಲಿ ಒಬ್ಬ ರಾಜನಿದ್ದನು. ಅವನಿಗೊಬ್ಬಳು ಮಗಳಿದ್ದಳು. ಮೂರು ಲೋಕದಲ್ಲಿಯೂ ಅವಳಷ್ಟು ಸೌಂದರ್ಯವತಿ ಯಾರೂ ಇಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ರಾಜನ ಆಸ್ಥಾನಕ್ಕೆ ಮಂಗಮ್ಮ ಎಂಬ ಹೆಂಗಸು ಕಸ ಗುಡಿಸಲು ಬರುತ್ತಿದ್ದಳು. ಅವಳಿಗೆ ದಿನೇಶ ಎಂಬ ಸೋಂಬೇರಿ ಮಗನಿದ್ದನು. ಅವನ ಓರಗೆಯವರು ದುಡಿಯುತ್ತಿದ್ದರೆ ದಿನೇಶ ಮಾತ್ರ ದಿನಪೂರ್ತಿ ಮಲಗಿಯೇ ಕಾಲಹರಣ ಮಾಡುತ್ತಿದ್ದನು.
ಒಂದು ದಿನ ಮಂಗಮ್ಮನಿಗೆ ಜ್ವರ ಬಂದಿತು. ಅರಮನೆಗೆ ಹೋಗಿ ಕಸ ಗುಡಿಸಲು ಆಗದೇ ಹೋಯಿತು. ಅದಕ್ಕೆ “ಒಂದೇ ಒಂದು ಬಾರಿ ಹೋಗಿ ಕಸ ಗುಡಿಸಿ ಬಾ ಇಲ್ಲದಿದ್ದರೆ ನನ್ನ ಕೆಲಸ ಹೋಗುತ್ತದೆ’ ಎಂದು ಮಂಗಮ್ಮ ಮಗನನ್ನು ಕೇಳಿಕೊಂಡಳು. ದಿನೇಶ ಮನಸ್ಸಿಲ್ಲದೆ ಪೊರಕೆ ಹಿಡಿದು ಹೊರಟ. ಅರಮನೆಯ ಸಭಾಂಗಣ ನೆಲದ ಮೇಲೆ ಕಿಟಕಿಯೊಳಗಿಂದ ಬಿಸಿಲು ಚೆಲ್ಲಿತ್ತು. ಅಲ್ಲೇ ದಿನೇಶನೂ ಕಸ ಗುಡಿಸುತ್ತಿದ್ದ. ಆ ಸಮಯದಲ್ಲಿ ನೆಲದ ಮೇಲೆ ನೆರಳೊಂದು ಮೂಡಿತು. ಯಾರದೆಂದು ತಲೆಯೆತ್ತಿ ನೋಡಿದರೆ, ಸ್ನಾನ ಮುಗಿಸಿ ಬಂದ ರಾಜಕುಮಾರಿ ತಲೆಗೂದಲನ್ನು ಬಿಸಿಲಿಗೆ ಹರವಿಕೊಳ್ಳುತ್ತಿದ್ದಳು. ಅವಳ ಅಪ್ರತಿಮ ಸೌಂದರ್ಯವನ್ನು ನೋಡಿದ ದಿನೇಶ ಮೂಕವಿಸ್ಮಿತನಾದ.
ಕೆಲಸ ಮುಗಿಸಿ ಮನೆಗೆ ಬಂದ ನಂತರವೂ ಅವನು ರಾಜಕುಮಾರಿಯ ಗುಂಗಿನಲ್ಲೇ ಇದ್ದ. ವಾರ ಕಳೆದರೂ ಮಂಕಾಗಿದ್ದ ಮಗನನ್ನು ಕಂಡು ಮಂಗಮ್ಮ ಏನು ವಿಷಯವೆಂದು ವಿಚಾರಿಸಿದಳು. ಅವನು ತಾನು ಕಂಡದ್ದನ್ನು ಹೇಳಿ ಮದುವೆಯಾದರೆ ಅವಳನ್ನೇ ಆಗುತ್ತೇನೆ ಎಂದು ಹಟ ಹಿಡಿದ. “ಆಯ್ತು ಬಿಡು ಏನಾದರೂ ಉಪಾಯ ಮಾಡುವೆ’ ಎಂದು ಮಂಗಮ್ಮನೂ ಸಮಾಧಾನಪಡಿಸಿದಳು.
ತುಂಬಾ ತಲೆಕೆಡಿಸಿಕೊಂಡು ಮಂಗಮ್ಮ ಒಂದು ತಂತ್ರ ಹೆಣೆದಳು. ರಾಜ ಮಹಾನ್ ದೈವಭಕ್ತನಾಗಿದ್ದ. ಈ ವಿಷಯ ಮಂಗಮ್ಮನಿಗೆ ತಿಳಿದಿತ್ತು. ಮಹಾರಾಣಿ ಸ್ನಾನಕ್ಕೆ ಹೋದ ಸಮಯದಲ್ಲಿ ಮಂಗಳಸೂತ್ರವನ್ನು ಕದ್ದಳು. ಸುದ್ದಿ ಕೇಳಿ ಇಡೀ ರಾಜ್ಯವೇ ಬೆಚ್ಚಿಬಿದ್ದಿತು. ಇದು ಅಪಶಕುನವೆಂದು ರಾಜ ಚಿಂತಾಕ್ರಾಂತನಾದ. ಮಂಗಮ್ಮ ರಾಜನ ಬಳಿಗೆ ತೆರಳಿ ತನಗೊಬ್ಬ ಮಾಂತ್ರಿಕ ಗುರು ಪರಿಚಯವಿರುವುದಾಗಿ ಹೇಳಿ ಆತ ಮಂಗಳಸೂತ್ರವನ್ನು ಹುಡುಕಿಕೊಡುತ್ತಾನೆ ಎಂದು ನಂಬಿಸಿದಳು. ಅದರಂತೆ ರಾಜನು ಅವನನ್ನು ಆಸ್ಥಾನಕ್ಕೆ ಕರೆಸಿಕೊಂಡ.
ಆ ಮಾಂತ್ರಿಕ ಗುರು ಬೇರಾರೂ ಆಗಿರದೆ ಪಕ್ಕದ ರಾಜ್ಯದಲ್ಲಿ ವಾಸಿಸುತ್ತಿದ್ದ ಮಂಗಮ್ಮನ ತಮ್ಮನಾಗಿದ್ದನು. ಅವನು, ಮಂಗಮ್ಮ ಮಂಗಳಸೂತ್ರವನ್ನು ಅವಿತಿಟ್ಟಿದ್ದ ಜಾಗವನ್ನು ತೋರಿಸಿಕೊಟ್ಟು ರಾಜನ ವಿಶ್ವಾಸಕ್ಕೆ ಪಾತ್ರನಾದ. ಅದರ ಜೊತೆಗೇ “ಮಹಾರಾಜಾ ಈಗ ಬಚಾವಾಗಿರುವೆ. ಆದರೆ ಮುಂದೆ ನಿನ್ನ ಪ್ರಾಣಕ್ಕೇ ಆಪತ್ತು ಬರಲಿದೆ. ಇದಕ್ಕೊಂದೇ ಪರಿಹಾರ. ಯುವರಾಣಿಯನ್ನು ಚಿನ್ನದ ಪೆಟ್ಟಿಗೆಯಲ್ಲಿಟ್ಟು ಕಾಡಿನಲ್ಲಿಎರಡು ದಿನ ಬಿಡಬೇಕು.’ ಇದನ್ನು ಕೇಳಿ ರಾಜನಿಗೆ ಬೇಸರವಾದರೂ ಎರಡು ದಿನ ತಾನೇ ಎಂದು ಒಪ್ಪಿದ. ಯುವರಾಣಿಯೂ ತನ್ನಿಂದ ತಂದೆಯ ಪ್ರಾಣ ಉಳಿಯುವುದಾದರೆ ಏನು ಮಾಡಲೂ ಸಿದ್ಧ ಎಂದು ಸಮ್ಮತಿ ಸೂಚಿಸಿದಳು.
ಯುವರಾಣಿಯಿದ್ದ ಪೆಟ್ಟಿಗೆಯನ್ನು ಕಾಡಿನಲ್ಲಿ ಬಿಟ್ಟು ಬಂದ ರಾಜ. ರಾಜ ಅರಮನೆಗೆ ವಾಪಸ್ಸಾಗುತ್ತಲೇ ದಿನೇಶ ತಾನು ಹೋಗಿ ಪೆಟ್ಟಿಗೆಯಿಂದ ಯುವರಾಣಿಯನ್ನು ಹೊರತೆಗೆದು, ಪುಸಲಾಯಿಸಿ ಮದುವೆಯಾಗುವ ಉಪಾಯ ಹೂಡಿದ್ದ. ಅದರಂತೆ ಕತ್ತಲಾಗುತ್ತಿದ್ದಂತೆ ದಿನೇಶ ಕಾಡಿಗೆ ಹೋಗಿ ಪೆಟ್ಟಿಗೆಯನ್ನು ತೆರೆದ. ಒಳಗೆ ರಾಜಕುಮಾರಿ ಇರಲಿಲ್ಲ. ಅದಕ್ಕೆ ಬದಲಾಗಿ ಕರಡಿಯಿತ್ತು. ಕರಡಿ ದಿನೇಶನನ್ನು ಅಟ್ಟಿಸಿಕೊಂಡು ಹೋಯ್ತು.
ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯುತ್ತದೆ ಎನ್ನುವ ಮಾತು ಈ ವಿಷಯದಲ್ಲಿ ನಿಜವಾಗಿತ್ತು. ಏಕೆಂದರೆ ಬೆಳಿಗ್ಗೆ ಪೆಟ್ಟಿಗೆಯನ್ನು ರಾಜ ಕಾಡಲ್ಲಿ ಬಿಟ್ಟು ಹೋದ ನಂತರ ಆ ದಾರಿಯಲ್ಲಿ ಬಂದ ಡಕಾಯಿತರು ಚಿನ್ನದ ಪೆಟ್ಟಿಗೆಯನ್ನು ನೋಡಿ ಎತ್ತಿಕೊಂಡು ಹೋಗಿದ್ದರು. ಪಕ್ಕದ ರಾಜ್ಯದ ರಾಜ ಚಂದ್ರಸೇನ ಡಕಾಯಿತರನ್ನು ಹಿಂಬಾಲಿಸುತ್ತಿದ್ದದ್ದು ಅವರಿಗೆ ತಿಳಿದಿರಲಿಲ್ಲ. ಕಡೆಗೂ ಡಕಾಯಿತರನ್ನು ಹಿಡಿದು ಹಾಕಿದ ಚಂದ್ರಸೇನ. ಅವರ ಬಳಿಯಿದ್ದ ಚಿನ್ನದ ಪೆಟ್ಟಿಗೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡ. ತೆರೆದು ನೋಡಿದಾಗ ಯುವರಾಣಿ ನಡೆದಿದ್ದೆಲ್ಲವನ್ನೂ ವಿವರಿಸಿದಳು. ಚಂದ್ರಸೇನನಿಗೆ ಮಂಗಮ್ಮ ಮತ್ತವಳ ತಮ್ಮನ ಸಂಚೆಲ್ಲಾ ತಿಳಿದುಹೋಯ್ತು. ಅವರೆಲ್ಲರಿಗೂ ಶಿಕ್ಷೆಯಾಯಿತು. ರಾಜ ತನ್ನ ಮಗಳನ್ನು ಚಂದ್ರಸೇನನಿಗೆ ಮದುವೆ ಮಾಡಿಕೊಟ್ಟ. ಪ್ರಜೆಗಳೆಲ್ಲರೂ ಹರ್ಷದಿಂದ ಘೋಷ ಕೂಗಿದರು.
ಪ್ರೊ. ಭಾರ್ಗವ ಎಚ್. ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.