ಮಿಸ್ಸಿಂಗ್ ಕಾಯಿನ್
Team Udayavani, Feb 21, 2019, 12:30 AM IST
ಮಕ್ಕಳೇ, ಕಳೆದ ವಾರ ಜಾದೂವಿನಿಂದ ದುಡ್ಡು ಸೃಷ್ಟಿಸೋದು ಹೇಗೆ ಎಂದು ಕಲಿತಿದ್ದೆವು. ಈ ವಾರ ದುಡ್ಡನ್ನು ಮಾಯ ಮಾಡೋದು ಹೇಗೆ ಎಂದು ಕಲಿಯೋಣ. ಇವೆಲ್ಲ ಟ್ರಿಕ್ಕುಗಳೂ ತುಂಬಾನೇ ಸುಲಭವಾದರೂ ಚೆನ್ನಾಗಿ ಕರಗತ ಮಾಡಿಕೊಂಡು ನಂತರ ಪ್ರದರ್ಶಿಸಿದರೆ ಮಾತ್ರ, ಮ್ಯಾಜಿಕ್ ಇನ್ನೂ ಚಂದವಾಗಿ ಕಾಣುತ್ತದೆ. ವೇದಿಕೆ ಮೇಲೆ ತಡಬಡಾಯಿಸಿದರೆ ಪ್ರೇಕ್ಷಕ ಚುರುಕಾಗಿ ಮ್ಯಾಜಿಕ್ ಗುಟ್ಟನ್ನು ತಿಳಿದುಬಿಡುತ್ತಾನೆ.
ಪ್ರದರ್ಶನ
ನಾಣ್ಯವನ್ನು ಪೇಪರ್‌ನಲ್ಲಿಟ್ಟು, ಅದನ್ನು ಮಡಚಿ, ಛೂ ಮಂತ್ರ ಎಂದು ಮಂತ್ರದ ಗಾಳಿಯನ್ನು ಹಾಕಿ ಪೇಪರನ್ನು ಬಿಡಿಸಿದಾಗ ಅದರಲ್ಲಿ ಎಲ್ಲರ ಕಣ್ಣೆದುರೇ ಇಟ್ಟ ನಾಣ್ಯ ಮಾಯವಾಗಿರುತ್ತದೆ! ಹೇಗೆ!? ನೀವೂ ಇದನ್ನು ಕಲಿಯಬೇಕೇ? ಹಾಗಿದ್ರೆ ಹೀಗೆ ಮಾಡಿ.
ಬೇಕಾಗುವ ವಸ್ತುಗಳು: ಒಂದು ಚೌಕಾಕಾರದ ಪೇಪರ್, ಒಂದು ನಾಣ್ಯ
ತಂತ್ರ ರಹಸ್ಯ
ಒಂದು ಚೌಕಾಕಾರದ ಪೇಪರ್ ಪೀಸ್‌ನ ಮಧ್ಯ ಭಾಗದಲ್ಲೊಂದು ನಾಣ್ಯವನ್ನಿರಿಸಿ(ಚಿತ್ರ1 ಗಮನಿಸಿ) ಅದರ ಕೆಳಭಾಗದಿಂದ ಮೇಲ್ಮುಖವಾಗಿ ಒಂದು ಮಡಿಕೆಯನ್ನು ಮಡಚಿ, ಉಳಿದ ಮೇಲಿನ ಮಡಿಕೆಯನ್ನು ಹಿಂದಕ್ಕೆ ತಳ್ಳುತ್ತಾ ಕೆಳಮುಖವಾಗಿ ಮಡಚಿ. ಇನ್ನುಳಿದ ಎರಡು ಮಡಿಕೆಗಳನ್ನು ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ಬರುವಂತೆ ಮಡಚಿ. ಎಡಗೈಯಲ್ಲಿ ಮಡಚಿದ ಪೇಪರ್‌ನಲ್ಲಿ ಇಟ್ಟ ನಾಣ್ಯ ತಲೆ ಕೆಳಗಾಗುವಂತೆ ಹಿಡಿದು ಅದಕ್ಕೆ ಛೂ ಮಂತ್ರವನ್ನು ಹಾಕುವಾಗ ನಾಣ್ಯವನ್ನು ಅಂಗೈಯಲ್ಲಿ
ಉದುರಿಸಿಕೊಳ್ಳಿ, ಮತ್ತು ಅದು ಕಾಣದಂತೆ ಅಂಗೈಯಲ್ಲಿ ಬಚ್ಚಿಟ್ಟುಕೊಳ್ಳಿ. ಖಾಲಿಯಾಗಿರುವ ಪೇಪರನ್ನು ನಿಧಾನವಾಗಿ ತೆರೆದು ಎಲ್ಲರಿಗೂ ತೋರಿಸಿ, ಆತ್ಮವಿಶ್ವಾಸದಿಂದ ಪೇಪರನ್ನು ಒಮ್ಮೆ ಕೊಡವಿ ಒಗೆಯಿರಿ.
ಈ ಮ್ಯಾಜಿಕ್ ಕುರಿತು ನಿಖರವಾಗಿ ತಿಳಿಯಲು ಈ ವಿಡಿಯೊ ನೋಡಿ.
ವಿಡಿಯೊ ಲಿಂಕ್: bit.ly/2BQBThd
ನಿರೂಪಣೆ: ಗಾಯತ್ರಿ ಯತಿರಾಜ್