ಅಮ್ಮ,ಚಿಟ್ಟೆಗೆ ಮನೆಯ ದಾರಿ ಮರೆತುಹೋಗಿದೆಯಾ?
Team Udayavani, May 3, 2018, 11:40 AM IST
ರಾತ್ರಿ 8 ಗಂಟೆಯ ಸಮಯ. ಅಡುಗೆ ಮನೆಯ ಡೈನಿಂಗ್ ಜಾಗದಲ್ಲಿ ಅಪ್ಪ, ಅಮ್ಮ ಮತ್ತು ಪುಟ್ಟಿ ಊಟಕ್ಕೆ ಕುಳಿತಿದ್ದರು. ಚಿಟ್ಟೆಯೊಂದು ಅತ್ತಿಂದಿತ್ತ ಹಾರುತ್ತಿತ್ತು. ಸ್ವಲ್ಪ ಹೊತ್ತು ಕೂರುತ್ತಿತ್ತು ಮತ್ತೆ ಹಾರುತ್ತಿತ್ತು. ಕೆಲವೊಮ್ಮೆ ಟ್ಯೂಬ್‌ಲೈಟಿನ ಬಳಿ ಪಟ ಪಟ ಅಂತ ರೆಕ್ಕೆ ಆಡಿಸುತ್ತಿತ್ತು. ಸ್ಟೋರ್ ರೂಮಿನಲ್ಲಿ ಎಲ್ಲೋ ಕುಳಿತು ಮತ್ತೂಮ್ಮೆ ಹಾರಿ ಬಂದು ಕಾಣಿಸಿಕೊಳ್ಳುತ್ತಿತ್ತು. “ಅಮ್ಮ, ಚಿಟ್ಟೆ!’ ಎಂದಳು ಪುಟ್ಟಿ. ಎಲ್ಲರೂ ಚಿಟ್ಟೆಯತ್ತ ನೋಡಿದರು. “ರೀ, ಈ ಚಿಟ್ಟೆ ಬೆಳಗ್ಗಿನಿಂದ ಇಲ್ಲೇ ಹಾರುತ್ತಿದೆ. ಏನಾದರೂ ಮಾಡಿ.’ “ಹಾರಿ ಹೊರಗೆ ಹೋಗತ್ತೆ ಬಿಡು.’ “ಇಲ್ಲಾರೀ ಇಲ್ಲೇ ಹಾರುತ್ತಿದೆ. ಹಾಲಿಗೋ ಮೊಸರಿಗೋ ಬಿದ್ದು ಬಿಟ್ಟರೆ ಅಂತ ನನ್ನ ಚಿಂತೆ. ಏನಾದರೂ ಮಾಡಿ.’ “ಸರಿ ಬೆಳಿಗ್ಗೆ ನೋಡೋಣ. ಪೊರಕೆಯಿಂದ ಹೊಡೆದರಾಯಿತು.’ ಅಮ್ಮ ಅಪ್ಪನ ಸಂಭಾಷಣೆಯನ್ನು ಪುಟ್ಟಿ ಕೇಳಿಸಿಕೊಂಡಳು. “ಅಮ್ಮ, ಚಿಟ್ಟೆಗೆ ಸುಸ್ತಾಗಿದೆ ಅನಿಸುತ್ತೆ. ಪಾಪ! ಬೆಳಿಗ್ಗೆಯಿಂದ ಹಾರಾಟ ನಡೆಸುತ್ತಾ ಬಳಲಿದೆ. ನಾವೇ ಏನಾದರೂ ತಿನ್ನಿಸೋಣವ?’ ಎಂದ ಪುಟ್ಟಿಯ ಮಾತಿಗೆ ಅಪ್ಪ ಅಮ್ಮ ನಕ್ಕರು.
“ಅದು ಯಾಕೆ ಹೊರಗಡೆ ಹೋಗುತ್ತಿಲ್ಲ? ಅದಕ್ಕೆ ಮನೆಯ ದಾರಿ ಮರೆತು ಹೋಗಿದೆಯ? ಚಿಟ್ಟೆಯ ಅಪ್ಪ ಅಮ್ಮ ಎಲ್ಲಿರ್ತಾರೆ? ಅಪ್ಪ ಅಮ್ಮ ಸಿಗದೆ ಇದ್ದರೆ ಚಿಟ್ಟೆ ಅಳುತ್ತಾ?’ ಎಂಬ ಪ್ರಶ್ನೆಗಳಿಗೆ ಅಪ್ಪ ಅಮ್ಮ ಇಬ್ಬರೂ ಉತ್ತರಿಸದಿದ್ದುದಕ್ಕೆ ಪುಟ್ಟಿ ಸಿಟ್ಟು ಮಾಡಿಕೊಂಡು ಮುಖ ಊದಿಸಿಕೊಂಡಳು. ಅಮ್ಮ ಹೇಳಿದರು, “ಪುಟ್ಟಿà ಈಗ ಊಟ ಮಾಡು. ಚಿಟ್ಟೇನ ಅಪ್ಪ ನೋಡಿಕೊಳ್ಳುತ್ತಾರೆ. ಬೆಳಿಗ್ಗೇನೂ ಇಲ್ಲೇ ಇದ್ದರೆ ಪೊರಕೆಯಿಂದ ಹೊಡೆದು ಹಾಕ್ತಾರೆ.’ “ನೀವಿಬ್ಬರೂ ಕೆಟ್ಟವರು’ ಅಂತ ಹೇಳುತ್ತ ಪುಟ್ಟಿ ಊಟ ಮುಗಿಸಿ, ತನ್ನ ಮಲಗುವ ಕೋಣೆಗೆ ಹೋದಳು. ಚಿಟ್ಟೆ ಕಿಟಕಿಯ ಬಳಿ ಕುಳಿತು, ರೆಕ್ಕೆಯನ್ನು ನಿಧಾನವಾಗಿ ಆಡಿಸುತ್ತಿತ್ತು.
ರಾತ್ರಿ ಒಂದರ ಸಮಯ. “ರೀ, ಅಡುಗೆ ಮನೆಯಲ್ಲಿ ಏನೋ ಸಪ್ಪಳವಾಗುತ್ತಿದೆ. ಕಳ್ಳರೇ ಬಂದಿರಬೇಕು’ ಎಂದು ಅಮ್ಮ ಅಪ್ಪನನ್ನು ಎಬ್ಬಿಸಿದರು. ಅಪ್ಪ ಕಣ್ಣುಜ್ಜುತ್ತ ಮನಸ್ಸಿಲ್ಲದ ಮನಸ್ಸಿನಿಂದ ಎದ್ದರು. ಕೈಯಲ್ಲಿ ಒಂದು ಟಾರ್ಚು ಹಿಡಿದು ಅಡುಗೆ ಮನೆಯತ್ತ ಹೆಜ್ಜೆ ಹಾಕಿದರು. ಅಮ್ಮ ಕೂಡ ಅಪ್ಪನನ್ನು ಹಿಂಬಾಲಿಸಿದರು. ಅವರಿಗೊಂದು ಆಶ್ಚರ್ಯ ಕಾದಿತ್ತು! ಅಡುಗೆ ಮನೆಯಲ್ಲಿ ಪುಟ್ಟಿ ಇದ್ದಳು! ಅವಳು ಯಾರೊಡನೆಯೋ ಮಾತಾಡುತ್ತಿದ್ದಳು.
“ಚಿಟ್ಟೆಮರಿ, ಯಾಕೆ ನೀನು ನನ್ನ ಮಾತು ಕೇಳ್ತಾ ಇಲ್ಲ? ಬೆಳಿಗ್ಗೆಯಿಂದ ನಿನಗೆ ಹಸಿವಾಗ್ತಾ ಇಲ್ಲವಾ? ನೋಡು ಅಲ್ಲಿ ಲೋಟದಲ್ಲಿ ಹಾಲಿಟ್ಟಿದೀನಿ. ಬಂದು ಕುಡಿ ಅಂದರೂ ನನ್ನ ಮಾತು ಕೇಳ್ತಾ ಇಲ್ಲ. ನಿನ್ನನ್ನ ಹಿಡಿಯೋಣ ಅಂದರೆ ಕೈಗೇ ಸಿಗೋದಿಲ್ಲ. ನೀನು ಎಷ್ಟು ಮುದ್ದಾಗಿದ್ದೀಯ ಗೊತ್ತಾ?! ಕಿಟಕಿ ಬಾಗಿಲು ತೆರೆದೇ ಇದೆ. ಹೊರಗೆ ಹಾರಿ ಹೋಗಿಬಿಡು… ಅದಕ್ಕೆ ಮುಂಚೆ ಹಾಲು ಕುಡಿ. ಹಾರೋದಕ್ಕೆ ಶಕ್ತಿ ಬರತ್ತೆ. ಅಮ್ಮ ಯಾವಾಗ್ಲೂ ಹೇಳ್ತಿರ್ತಾರೆ. ನಿಮ್ಮಮ್ಮಾನೂ ಹೇಳ್ತಾರೆ ಅಲ್ಲವ? ನಾಳೆ ಅಪ್ಪ ಪೊರಕೆಯಿಂದ ಹೊಡೆದು ಬಿಟ್ಟರೆ ನಿನಗೆ ನೋವಾಗುತ್ತೆ, ನೀನು ಸತ್ತೇ ಹೋಗ್ತಿàಯ ಚಿಟ್ಟೆ ಮರಿ… ಈಗಲೇ ಹಾರಿ ಹೋಗಿಬಿಡು… ಪ್ಲೀಸ್, ನೀನು ಸಾಯಬಾರದು…’
ಅಪ್ಪ ಅಮ್ಮ ಬಾಗಿಲ ಸಂಧಿಯಿಂದ ಎಲ್ಲವನ್ನೂ ನೋಡುತ್ತಿದ್ದರು. ಪುಟ್ಟಿ ಚಿಟ್ಟೆಯ ಹಿಂದೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡುತ್ತಿದ್ದಳು. ಅವಳು ಚಿಟ್ಟೆಯನ್ನು ಮೃದುವಾಗಿ ಹಿಡಿಯಲು ಪ್ರಯತ್ನಿಸುತ್ತಿದ್ದಳು. ಚಿಟ್ಟೆ ನಿತ್ರಾಣವಾಗಿ ಅಲ್ಲೆಲ್ಲೋ ಕುಳಿತುಕೊಳ್ಳುತ್ತಿತ್ತು. ಕಿಟಕಿಯನ್ನು ಹಾಕಿ ಶಬ್ದ ಮಾಡುತ್ತ ಮತ್ತೆ ತೆರೆದಳು. “ಕಿಟಕಿ ತೆರೆದಿದೆ ಚಿಟ್ಟೆಮರಿ… ನೋಡು ಹೊರಗಡೆ ದಾರಿದೀಪ ಕೂಡ ಇದೆ. ರಸ್ತೆ ಚೆನ್ನಾಗಿ ಕಾಣಿಸ್ತಾ ಇದೆ. ಬೇಕಾದರೆ ನೀನು ಅಡುಗೆ ಮನೆಯಿಂದ ಹೊರಗೆ ಹಾರಿಹೋಗಿ ನಮ್ಮನೆ ಹೂ ತೋಟದಲ್ಲಿ ಬೆಳಗಿನ ತನಕ ಕೂತಿರು. ಆಮೇಲೆ ವಿಶ್ರಾಂತಿ ಪಡೆದು ಹಾರಿ ಹೋಗು…. ಬೆಳಿಗ್ಗೆ ತನಕ ಇಲ್ಲೇ ಇದ್ದರೆ ಅಪ್ಪ ನಿನ್ನನ್ನ ಸುಮ್ಮನೆ ಬಿಡೋಲ್ಲ…’ ಎನ್ನುತ್ತಾ ಪುಟ್ಟಿ ಕಣ್ಣೀರು ತಂದುಕೊಂಡು ಅತ್ತಳು.
ಚಿಟ್ಟೆ ಕಿಟಕಿಯ ಹತ್ತಿರ ಕುಳಿತಿತು. ಆಸೆಗಣ್ಣಿನಿಂದ ಪುಟ್ಟಿ ಚಿಟ್ಟೆ ಹಾರಿಹೋಗುತ್ತದೆಂದು ನೋಡಿದಳು. ಅನಿರೀಕ್ಷಿತವಾಗಿ ಅಡುಗೆ ಮನೆಯ ದೀಪ ಆರಿತು. ಕತ್ತಲಾಯಿತು. ಪುಟ್ಟಿಗೆ ಹೆದರಿಕೆಯಿಂದ “ಅಮ್ಮ’ ಎಂದು ಚೀರಿದಳು. ಅಮ್ಮ ಓಡಿಬಂದು “ಏನಾಯ್ತು ಕಂದ?’ ಅಂದರು. ಅಡುಗೆಮನೆಯ ದೀಪ ಮತ್ತೆ ಹತ್ತಿತ್ತು! ಅಮ್ಮನ ತೆಕ್ಕೆಯಲ್ಲಿ ಪುಟ್ಟಿ ಇದ್ದಳು. ಅಪ್ಪ ಕೂಡ ಒಳಬಂದು “ಹೆದರಿದೆಯ ಪುಟ್ಟಿ ?’ ಎಂದು ಕೇಳಿದರು. ಚಿಟ್ಟೆ ಕಾಣದೇ ಹೋದಾಗ “ಮತ್ತೆ ನನ್ನ ಚಿಟ್ಟೆ?’ ಎಂದಳು ಪುಟ್ಟಿ ಅಮ್ಮನನ್ನು ಬಿಗಿಯಾಗಿ ಅಪ್ಪುತ್ತ. “ಓ… ಅಲ್ಲಿ ಹಾರಿ ಹೋಗುತ್ತಿದೆ ನೋಡು. ದಾರಿ ದೀಪದ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ’ ಅಂದರು ಅಪ್ಪ. ಪುಟ್ಟಿಯ ಚಿಟ್ಟೆ ಹಾರಿಹೋಗುತ್ತಿತ್ತು. ಪುಟ್ಟಿಗೆ ಖುಷಿಯಾಯಿತು.
“ನಿನ್ನ ಚಿಟ್ಟೆ ಸುಖವಾಗಿ ಹಾರುತ್ತ ಅದರ ಅಮ್ಮನ ಬಳಿ ಹೋಗಿದೆ. ಈಗ ನೀನು ಬಾ. ಮಲಗು’ ಎನ್ನುತ್ತ ಅಮ್ಮ ಪುಟ್ಟಿಯನ್ನು ಎತ್ತಿ ಮುದ್ದು ಮಾಡುತ್ತ ಆಕೆಯ ಕೋಣೆಯತ್ತ ಕರೆದೊಯ್ದರು.
ಮತ್ತೂರು ಸುಬ್ಬಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.