ಬೆಕ್ಕಿಗೆ ಗಂಟೆ ಕಟ್ಟಲ್ಲ!
Team Udayavani, Aug 2, 2018, 11:50 AM IST
ಬಂಗಲೆಯ ಪಕ್ಕದಲ್ಲಿದ್ದ ಕಾರ್ ಷೆಡ್‌ನಲ್ಲಿ ಇಲಿಗಳೆಲ್ಲಾ ಸಭೆ ನಡೆಸಿದ್ದವು. ಬೆಕ್ಕಿನ ಕಾಟದಿಂದ ಪಾರಾಗುಗುವುದು ಹೇಗೆ ಎಂಬುದು ಸಭೆಯ ಉದ್ದೇಶ. ಬೆಕ್ಕಿಗೆ ಗಂಟೆ ಕಟ್ಟೋಣ ಎಂದು ಹಿರಿಯ ಇಲಿ ಸಲಹೆ ನೀಡಿತು. ಆದರೆ ಆ ಉಪಾಯ ತುಂಬಾ ಹಳೆಯದಾಯೆ¤ಂದು ಮಿಕ್ಕ ಇಲಿಗಳೆಲ್ಲಾ ರಾಗ ಎಳೆದವು. ತನ್ನ ಮಾತಿಗೆ ಬೆಲೆ ನೀಡಲಿಲ್ಲವಲ್ಲಾ ಎಂದು ಹಿರಿಯ ಇಲಿಗೆ ಕೋಪ ಬಂದಿತು.
ಆಗ ಇನ್ನೊಂದು ಹಿರಿಯ ಇಲಿ “ನಾವು ಚಿಕ್ಕವರಾಗಿದ್ದಾಗ ಆ ಉಪಾಯ ಫಲಿಸುತ್ತಿತ್ತು. ಅದೇ ಉಪಾಯ ಎಲ್ಲಾ ಕಾಲಕ್ಕೂ ಹೊಂದುತ್ತದೆ ಎಂದುಕೊಳ್ಳುವುದು ಮೂರ್ಖತನ. ನಮ್ಮ ಉಪಾಯವನ್ನು ಅಂದಿನ ಹಿರಿಯರು ಮೆಚ್ಚಿ ಪ್ರೋತ್ಸಾಹಿಸಿದಂತೆ ಇಂದಿನ ಯುವ ಇಲಿಗಳ ಮಾತನ್ನು, ಅಭಿಪ್ರಾಯವನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ’ ಎಂದಿತು.
ಮಿಕ್ಕ ಇಲಿಗಳು ಈ ಅಭಿಪ್ರಾಯವನ್ನು ಸ್ವಾಗತಿಸಿದವು. ಅವಮಾನಗೊಂಡಿದ್ದ ಹಿರಿಯ ಇಲಿ “ಆಯ್ತು ನೀವು ಹೇಳಿದಂತೆಯೇ ಆಗಲಿ. ಬೆಕ್ಕಿಗೆ ಗಂಟೆ ಕಟ್ಟುವ ಉಪಾಯ ಬೇಡ. ಇನ್ಯಾವ ಉಪಾಯ ಇದೆ ಹೇಳಿ ನೋಡೋಣ?’ ಎಂದು ಪ್ರಶ್ನೆ ಹಾಕಿತು. ಕಿರಿಯ ಇಲಿಗಳೆಲ್ಲಾ ಒಟ್ಟಾಗಿ ಗುಸುಗುಸು ಮಾತಾಡಿಕೊಂಡವು.
ನಾವು ಆಡಿ ತೋರಿಸುವುದಿಲ್ಲ, ಮಾಡಿ ತೋರಿಸುತ್ತೇವೆ ಎನ್ನುತ್ತಾ ಒಂದೊಂದು ಇಲಿ ಒಂದೊಂದು ದಿಕ್ಕಿಗೆ ಓಡಿ ಹೋದವು. ಸ್ವಲ್ಪ ಹೊತ್ತಿನಲ್ಲಿ ಅದೆಲ್ಲಿಂದಲೋ ಒಂದೊಂದು ವಸ್ತುವನ್ನು ಹಿಡಿದು ತಂದವು. ಹಿರಿಯ ಇಲಿ “ಈಗೇನ್ ಬೆಕ್ಕಿನ ಮೇಲೆ ಯುದ್ದ ಮಾಡೋಕಾಗುತ್ತಾ !?’ ಎಂದು ಅಣಕವಾಡಿತು.
ಆ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಬದಲಾಗಿ ಕಿರಿಯ ಇಲಿಗಳು ತಮ್ಮ ಕೆಲಸವನ್ನು ಮುಂದುವರಿಸಿದವು. ಸ್ವಲ್ಪ ಹೊತ್ತಿನ ಬಳಿಕ ಪ್ರಾತ್ಯಕ್ಷಿಕೆ ತೋರಿಸಲು ಎಲ್ಲಾ ಇಲಿಗಳನ್ನು ಕರೆದವು. ತಾವು ವಾಸಿಸುತ್ತಿದ್ದ ಮನೆಯ ಅಡುಗೆ ಕೋಣೆಯಲ್ಲಿ ಕೇಕ್ ಒಂದನ್ನು ಇಟ್ಟಿದ್ದರು.
ಅದರಿಂದ ಒಂದು ತುಣುಕನ್ನು ಹೇಗಾದರೂ ಮಾಡಿ ಹಾರಿಸಿಕೊಂಡು ಬರಬೇಕು. ಆ ಕೆಲಸವನ್ನು ಮಾಡುವುದು ಅಪಾಯಕಾರಿ, ಅಡುಗೆ ಮನೆಯಲ್ಲಿಯೇ ಬೆಕ್ಕು ಅಡ್ಡಾಡುತ್ತಿರುತ್ತದೆ ಎಂದು ಯಾವ ಇಲಿಯೂ ಮುಂದೆ ಬರಲಿಲ್ಲ. ಆಗ ಕಿರಿಯ ಇಲಿ ಸ್ಕ್ರೀನ್ ಆನ್ ಮಾಡಿತು.
ಅದರಲ್ಲಿ ಅಡುಗೆ ಕೋಣೆ ಕಾಣುತ್ತಿತ್ತು. ಅಲ್ಲಿ ಬೆಕ್ಕು ಇರಲಿಲ್ಲ. ಬೆಕ್ಕು ಎಲ್ಲಿದೆ ಎಂದುದನ್ನು ಕೂಡಾ ಕಿರಿಯ ಇಲಿ ತೋರಿಸಿತು. ಅದು ತನ್ನ ಮಾಲೀಕನ ಬೆಡ್‌ರೂಮಿನಲ್ಲಿ ಮಲಗಿತ್ತು. ಈಗ ಕಿರಿಯ ಇಲಿಗಳ ತಂಡ ಸೀದಾ ಅಡುಗೆ ಮನೆಗೆ ಹೋಗಿ ಕೇಕ್‌ನ ತುಣುಕನ್ನು ಕತ್ತರಿಸಿ ಗೂಡಿಗೆ ತಂದಿತು. ಇಲಿಗಳೆಲ್ಲಾ ಹರ್ಷೋದ್ಗಾರ ಮಾಡಿದವು.
* ವೀರೇಶ್ ಮಾಡ್ಲಾಕನಹಳ್ಳಿ