ಹಳತೆಂಬ ಕನ್ನಡ ಹಣತೆ
Team Udayavani, Nov 1, 2018, 6:00 AM IST
ಇಂದು ಕರ್ನಾಟಕ ರಾಜ್ಯೋತ್ಸವ. ಮಕ್ಕಳಲ್ಲಿ ಸಂವೇದನೆ, ಸೂಕ್ಷ್ಮಪ್ರಜ್ಞೆಯನ್ನು ಬೆಳೆಸಬೇಕಾದ ಜರೂರತ್ತು ಹಿಂದೆಂದಿಗಿಂತಲೂ ಈಗ ಹೆಚ್ಚಿರುವುದರಿಂದ ಈ ಕತೆಗಳನ್ನು ನೀಡಿದ್ದೇವೆ. ಮಕ್ಕಳ ಕಥೆಗಳೆಂದರೆ ಬರೀ ನೀತಿ ಕತೆಗಳಲ್ಲ, ಕಾಡು ಪ್ರಾಣಿಗಳ ಕತೆಗಳಲ್ಲ. ಸಾಹಸಮಯ ಕತೆಯೂ ಅಲ್ಲ. ವಿಚಾರಗಳನ್ನೂ ಸುಂದರವಾಗಿ ಸುಲಲಿತವಾಗಿ ಸಲೀಸಾಗಿ ಒಂದೇ ಓದಿಗೆ ಅರ್ಥ ಮಾಡಿಸುವುದು ಕತೆ. ಮಕ್ಕಳ ಕತೆಗಳೆಂದರೆ ಬರೀ ಮಕ್ಕಳಿಗೆ ಮಾತ್ರವೇ ಅಲ್ಲ! ಈ ಪುಟ್ಟ ಪ್ರಯತ್ನದಿಂದ ಓದುಗರಲ್ಲಿ ಕಿಂಚಿತ್ತಾದರೂ ಹಳೆ
ತಲೆಮಾರಿನ ಕತೆಗಾರರನ್ನು ಓದುವ ಮನಸ್ಸಾಗಲಿ, ಅವರನ್ನು ನೆನೆಸಿಕೊಳ್ಳುವಂತಾಗಲಿ ಎಂಬ ಹಂಬಲ ನಮ್ಮದು.
ಹಳ್ಳಿಯ ಇಲಿ, ಪಟ್ಟಣದ ಮೂಷಿಕ
ಒಂದು ಸಾರಿ ಪಟ್ಟಣದ ಇಲಿಯೊಂದು ಹಳ್ಳಿಗೆ ಬಂತು. ಹಳ್ಳಿಯ ಪ್ರಶಾಂತ ವಾತಾವರಣವನ್ನೂ, ಹುಲ್ಲುಗಾವಲುಗಳನ್ನೂ ನೋಡಿ ಅದಕ್ಕೆ ಆಶ್ಚರ್ಯವಾಯಿತು. ಹಳ್ಳಿಯ ಇಲಿ ಅದನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಹಸಿಯಾದ ಬಟಾಣಿಯನ್ನೂ, ಮೂಲಂಗಿ, ಸೊಪ್ಪು ಮತ್ತಿತರ ಕಾಳುಗಳನ್ನು ತಿನ್ನುವುದಕ್ಕೆ ಕೊಟ್ಟಿತು. ಆಗ ಪಟ್ಟಣದ ಇಲಿ ಹೇಳಿತು: “ನಮ್ಮೂರಿಗೆ ಬಾ. ಅಲ್ಲಿ ಎಷ್ಟೊಂದು ಥರದ ಆಹಾರ ಇದೆ, ನೋಡುವಿಯಂತೆ!’.
ಆ ಮಾತನ್ನು ಕೇಳಿ ಹಳ್ಳಿಯ ಇಲಿ ಪಟ್ಟಣಕ್ಕೆ ಹೊರಟಿತು. ದಾರಿಯಲ್ಲಿ ತಮ್ಮ ಮೇಲೆಯೇ ಓಡಾಡುವಂತಿದ್ದ ಬಸ್ಸು, ಕಾರು, ಲಾರಿಗಳನ್ನು ನೋಡಿ ಅದಕ್ಕೆ ಭಯವಾಯಿತು. ಕಡೆಗೆ ಆ ಎರಡೂ ಇಲಿಗಳು ದೊಡ್ಡ ಮನೆಯೊಂದನ್ನು ಪ್ರವೇಶಿಸಿದವು. ಮನೆಯ ಹಜಾರದಲ್ಲಿ ಸೊಗಸಾದ ರತ್ನಗಂಬಳಿ, ಬಗೆಬಗೆಯ ಕೂರುವ ಆಸನಗಳು ಇದ್ದವು. ಅಲ್ಲಿಂದ ಅಡುಗೆ ಮನೆಗೆ ನಡೆದವು. ಅಲ್ಲಿ ಬಿಸ್ಕತ್ತುಗಳು, ಪಾಯಸ, ಕಜ್ಜಾಯಗಳು, ಬಗೆಬಗೆಯ ಪಲ್ಯಗಳು ಇದ್ದವು. ನಡೆದು ಆಯಾಸವಾದ್ದರಿಂದ ಇಲಿಗಳು ಆ ಎಲ್ಲ ಭಕ್ಷ್ಯಗಳ ರುಚಿ ನೋಡತೊಡಗಿದವು.
ಆದರೆ, ಅಷ್ಟರಲ್ಲಿ ಬಾಗಿಲು ತೆಗೆದ ಸಪ್ಪಳವಾಯಿತು. ದಪ್ಪಗಿನ ಬೂಟಿನ ಶಬ್ದದ ಜೊತೆಗೆ ದೊಡ್ಡದೊಂದು ಬೆಕ್ಕು “ಮಿಯಾವ್’ ಎಂದ ಶಬ್ದವೂ ಕೇಳಿಸಿತು. ಹಳ್ಳಿಯ ಇಲಿ ಹೆದರಿ, “ಅದೇನು?’ ಎಂದು ಕೇಳಿತು. ಪಟ್ಟಣದ ಇಲಿ, “ಅದು ನನ್ನ ಯಜಮಾನ ಮತ್ತು ಅವನ ಬೆಕ್ಕು!’ ಎಂದಿತು. ಹಳ್ಳಿಯ ಇಲಿ ಒಂದೇ ಏಟಿಗೆ ನೆಗೆದು ಕಿಟಕಿಯಿಂದ ಹೊರಗೆ ಹಾರಿ ಹಳ್ಳಿಯತ್ತ ಓಡಿತು. ಅಂಥ ಹೆದರಿಕೆಯ ವಾತಾವರಣದಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ತಿನ್ನುವುದಕ್ಕಿಂತ, ತನ್ನ ಹಳ್ಳಿಯಲ್ಲಿ ಯಾರ ಹಂಗೂ ಇಲ್ಲದೆ ಬರಿಯ ಕಾಳು, ಸೊಪ್ಪುಗಳನ್ನು ತಿಂದು ಬದುಕುವುದೇ ಮಹದಾನಂದ ಎಂದುಕೊಂಡಿತು.
ರಾಜಧಾನಿಯಲ್ಲಿ ಎಷ್ಟು ಕಾಗೆಗಳಿವೆ?
ಅಕ್ಬರನ ಆಸ್ಥಾನದಲ್ಲಿ ದರ್ಬಾರು ನಡೆಯುತ್ತಿತ್ತು. ಮಾಮೂಲಿನ ರಾಜಕಾರಣ ಸಮಸ್ಯೆಗಳ ಚರ್ಚೆಯಾದ ಬಳಿಕ ಅಕºರ್ ಮಹಾರಾಜ ಇದ್ದಕ್ಕಿದ್ದಂತೆ,-“ನಮ್ಮ ರಾಜಧಾನಿಯಲ್ಲಿ ಎಷ್ಟು ಕಾಗೆಗಳಿವೆ ಗೊತ್ತೆ?’ ಎಂದು ಕೇಳಿದ.
ಸಭಾಸದರು, ಪಂಡಿತವರೇಣ್ಯರು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಇದೆಂಥ ಪ್ರಶ್ನೆ, ಇದಕ್ಕೆ ಉತ್ತರಿಸಲು ಸಾಧ್ಯವೇ ಎಂದು ಮನಸ್ಸಿನಲ್ಲಿಯೇ ಚಿಂತಿಸಿದರು. ಅವರಿಂದ ಉತ್ತರ ಬಾರದಿದ್ದುದನ್ನು ನೋಡಿ, ಅಕºರ್ ಮಹಾಮಂತ್ರಿ ಬೀರನಲ್ಲನತ್ತ ತಿರುಗಿ, “ನಿನಗೆ ಗೊತ್ತೇ ಬೀರಬಲ?’ ಎಂದು ಕೇಳಿದ.
ಬೀರಬಲ ಮೇಲೆದ್ದು, “ಗೊತ್ತು ಮಹಾಸ್ವಾಮಿ. ರಾಜಧಾನಿಯಲ್ಲಿ ಅರವತ್ತು ಸಾವಿರದ ಐದುನೂರ ಐವತ್ತು ಕಾಗೆಗಳಿವೆ’ ಎಂದು ಹೇಳಿದ.
“ಅದು ಹ್ಯಾಗೆ? ಒಂದು ವೇಳೆ ಆ ಸಂಖ್ಯೆಗಿಂತ ಜಾಸ್ತಿ ಕಾಗೆಗಳಿದ್ದರೆ?’ ಎಂದು ಪ್ರಶ್ನಿಸಿದ ಅಕ್ಬರ.
“ಆಗ ನಮ್ಮೂರಿನ ಕಾಗೆಗಳ ನೆಂಟರಿಷ್ಟರು ಬೇರೆ ಊರಿನಿಂದ ಇಲ್ಲಿಗೆ ಬಂದಿದ್ದಾರೆ ಎಂದಾಗುತ್ತದೆ’ ಎಂದ ಬೀರಬಲ.
“ಸರಿ. ಆದರೆ, ನೀನು ಹೇಳಿದ ಸಂಖ್ಯೆಗಿಂತ ಕಡಿಮೆ ಇದ್ದರೆ?’
“ಆಗ ನಮ್ಮೂರಿನ ಕಾಗೆಗಳು ಪರವೂರಿನ ನೆಂಟರ ಮನೆಗೆ ಹೋಗಿವೆ ಎಂದು ಅರ್ಥವಾಗ್ತದೆ ಬಾದಶಹ’ ಎಂದು ಜಾಣ್ಮೆಯಿಂದ ನುಡಿದ ಬೀರಬಲ.
-ಅನುಪಮಾ ನಿರಂಜನ
(“ದಿನಕ್ಕೊಂದು ಕಥೆ’ ಕಥಾಮಾಲೆಯಿಂದ)
ಪರಿಚಯ:
ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಅನುಪಮಾ ನಿರಂಜನ ಅವರು ಕನ್ನಡದ ಪ್ರಮುಖ ಬರಹಗಾರ್ತಿ. ಸಾಮಾಜಿಕ ಕಾದಂಬರಿಗಳು, ವೈದ್ಯಕೀಯ ಪುಸ್ತಕಗಳನ್ನು ಇವರು ಬರೆದಿದ್ದಾರೆ. ಮಕ್ಕಳಿಗಾಗಿ ಇವರು ಬರೆದ “ದಿನಕ್ಕೊಂದು ಕಥೆ’ ಎಂಬ 12 ಸಂಪುಟಗಳ ಕಥಾಮಾಲಿಕೆ ನಾಡಿನ ಮಕ್ಕಳೆಲ್ಲರೂ ಓದುವಂಥದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.