ಆಪರೇಶನ್ ಸೀಬೆತೋಟ! ಸೀಬೇಕಾಯಿ ಕೀಳ್ಳೋಕ್ಕೆ ಆಸೆ, ಸಿಕ್ಕಿ ಬೀಳ್ಳೋ ಭಯ
Team Udayavani, Jan 26, 2017, 5:52 PM IST
ಬೆಲ್ ಹೊಡೆದಿದ್ದೇ ಅಜಯ್, ವರುಣ್ ಮತ್ತು ನಾನು ಕ್ಲಾಸ್‌ರೂಂನಿಂದ ಹೊರಗೋಡಿದೆವು. ನಾವು ಮೂವರು ಗೆಳೆಯರಲ್ಲಿ ಅಜಯ್ ಹೆಚ್ಚು ಸ್ಟ್ರಾಂಗ್, ನಮ್ಮಿಬ್ಬರಿಗಿಂತ ಹೆಚ್ಚು ಎತ್ತರ, ಕಟ್ಟುಮಸ್ತಿನ ಶಕ್ತಿವಂತ ಹುಡುಗ. ನಮಗೆಲ್ಲ ಅವನೇ ಲೀಡರ್. ವರುಣ್ ಮತ್ತು ನಾನು ಕುರಿಗಳ ಥರ ಅವನನ್ನು ಯಾವಾಗಲೂ ಹಿಂಬಾಲಿಸುವುದು ರೂಢಿ.
ಸಂಜೆ ನಾಲ್ಕಕ್ಕೆಲ್ಲ ಹೊಡೆಯೋ ಕೊನೆಯ ಬೆಲ್‌ಗೆ ಬೆಳಗ್ಗಿಂದಲೇ ಕಾತರದಿಂದ ಕಾಯುತ್ತಿದ್ದೆವು. ಹಾಗೆ ಕಾಯುವುದಕ್ಕೂ ಒಂದು ಕಾರಣ ಇತ್ತು.
ಬಹಳ ದಿನಗಳಿಂದ ನಾವು ಮೂವರು ಒಂದು ಯೋಜನೆಗೆ ಸ್ಕೆಚ್ ಹಾಕುತ್ತಿದ್ದೆವು. ಶಾಲೆಗೆ ಹೋಗಿಬರೋ ದಾರಿಯಲ್ಲಿ ಒಂದು ಪೇರಳೆ ತೋಟ ಇತ್ತು. ಎಳೆ ಸೀಬೆ ಮಿಡಿಗಳಿಂದ ಹಿಡಿದು ಹಳದಿ ಬಣ್ಣಕ್ಕೆ ತಿರುಗಿರೋ ಚೇಪೇ ಕಾಯಿ ತನಕ ಎಲ್ಲ ಬಗೆಯ ಪೇರಳೆಗಳಿಂದ ತುಂಬಿದ್ದ ತೋಟವಾಗಿತ್ತದು. ತುಕ್ಕು ಹಿಡಿದ ಗೇಟು, ಮಣ್ಣುಹಿಡಿದ ಕಬ್ಬಿಣದ ಬೇಲಿಯಿಂದ ಸುತ್ತುವರಿದಿತ್ತು. ಒಂದಲ್ಲ ಒಂದಿನ ಹೇಗಾದ್ರೂ ಮಾಡಿ ಆ ತೋಟದೊಳಗೆ ನುಗ್ಗಿ ಬೇಕಾದಷ್ಟು ಸೀಬೆ ಹಣ್ಣು ತಿಂದು ಬರಬೇಕು ಅನ್ನೋದು ನಮ್ಮ ಬಹುದಿನದ ಕನಸಾಗಿತ್ತು. ಯಾಕೋ ಈವರೆಗೂ ಒಂದಲ್ಲ ಒಂದು ಯಡವಟ್ಟಾಗ್ತಾನೇ ಇತ್ತು. ನಮ್ಮ ಪ್ಲಾನ್ ಮುಂದುವರಿಯುತ್ತಲೇ ಇತ್ತು. ಹೀಗಿರುವಾಗ ಒಂದಿನ ಬೆಳಗ್ಗೆಯೇ ಪ್ಲ್ರಾನ್ ಮಾಡಿಟ್ಟುಕೊಂಡಿದ್ದೆವು. ಸಂಜೆ ಕೊನೆಯ ಬೆಲ ಹೊಡೆದದ್ದೇ ಉಳಿದ ಮಕ್ಕಳಿಗಿಂತಲೂ ಮೊದಲೇ ಬೇರೆ ಒಳದಾರಿಯಲ್ಲಿ ಸೀಬೆ ತೋಟಕ್ಕೆ ಓಡಿ ಬರೋದು, ಉಪಾಯವಾಗಿ ತೋಟಕ್ಕೆ ನುಗ್ಗೊàದು ಅಂತ. ಹಾಗೆ ಓಡಿಬಂದವರು ತೋಟದ ಹತ್ತಿರ ಬರುವಾಗ ಆ ದಾರಿ ನಿರ್ಜನವಾಗಿತ್ತು. ಜನರ ಓಡಾಟವೇ ಇರಲಿಲ್ಲ.
“ನಮ್ಮ ಪ್ಲಾನ್‌ಗೆ ಇವತ್ತು ಒಳ್ಳೆ ದಿನ. ತೋಟಕ್ಕೆ ನುಗ್ಗೇ ಬಿಡೋಣ, ಹೊಟ್ಟೆ ತುಂಬ ಪೇರಳೆ ಹಣ್ಣು ತಿಂದು ಹಬ್ಬ ಮಾಡೋಣ’ ಅಂತ ಎಲ್ಲಿಲ್ಲದ ಉತ್ಸಾಹದಲ್ಲಿ ಗೇಟ್ ಹತ್ತಿಯೇ ಬಿಟ್ಟ ಅಜಯ್.
ಅವನನ್ನು ಹಿಂಬಾಲಿಸಿದ ವರುಣ್, “ವಾವ್, ಇದು ಮಜವಾಗಿದೆ, ಬಾರೋ ಅಜಿತ ..’ ಅಂತ ಕೂಗಿದ.
ನಾನು ನಿಂತಲ್ಲೇ ಕಂಪಿಸಿದೆ. ಅವರಿಬ್ಬರ ಶಕ್ತಿ, ಸಾಮರ್ಥ್ಯ ನನಗಿರಲಿಲ್ಲ. ವಯಸ್ಸಿನಲ್ಲೂ ಅವರಿಂದ ಚಿಕ್ಕವನಾಗಿದ್ದೆ, ಸಹಜವಾಗಿಯೇ ಭಯವಾಗ್ತಿತ್ತು. ಒಬ್ಬ ವಾಚ್‌ಮೆನ್ ಬಂದೂಕು ಹಿಡಿದು ತೋಟವನ್ನು ಕಾಯುತ್ತಿದ್ದದ್ದು ನನಗೆ ಗೊತ್ತಿತ್ತು. ನಾವೇನಾದರೂ ಪೇರಳೆ ಕದಿಯೋದು ಅವನ ಕಣ್ಣಿಗೆ ಬಿದ್ದರೆ ಬಂದೂಕಿನಿಂದ ಸಾಯಿಸಿಯೇ ಬಿಡಬಹುದು.ಅಜಯ್, ವರುಣ್ ನನಗಿಂತ ಶಕ್ತಿಶಾಲಿಗಳು. ಹೇಗಾದರೂ ಓಡಿ ತಪ್ಪಿಸಿಕೊಳ್ಳಬಹುದು, ವಾಚ್‌ಮೆನ್ ಕೈಗೆ ಸಿಗೋ ಬಲಿಪಶು ನಾನೇ ಆಗಿರಿ¤àನಿ, ಏನಪ್ಪ ಮಾಡೋದು ಅಂತ ನಿಂತಲ್ಲೇ ನಿಂತೆ. ಅವರಿಬ್ಬರು ಗೇಟ್ ಹತ್ತಿ ನಿಂತು ನನ್ನ ಕಡೆ ನೋಡುತ್ತಿದ್ದರು. ಗೇಟಿನಾಚೆ ಹಸಿರುಬಣ್ಣದ ಸೀಬೆಕಾಯಿ ತೂಗುತ್ತಿತ್ತು. ಒಂದು ಕಡೆ ಭಯ, ಇನ್ನೊಂದು ಕಡೆ ಸೀಬೆ ಕಾಯಿ ತಿನ್ನೋ ಆಸೆ. ಕೊನೆಗೂ ಅಜಯ್ ಶಕ್ತಿ ಮೇಲೆ ನಂಬಿಕೆ ಇಟ್ಟು ಗೇಟ್ ಹತ್ತಿಯೇಬಿಟ್ಟೆ.
ಮೂವರೂ ಗೇಟ್ ಹತ್ತಿ ತೋಟಕ್ಕೆ ಜಿಗಿದೆವು.
ವಾವ್Ø! ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಸೀಬೆತೋಟ. ದಾರಿಯ ಇಕ್ಕೆಲಗಳಲ್ಲಿ ಕಡುಹಸಿರಲ್ಲಿ ಬೆಳೆದ ಮರಗಳ ತುಂಬ ಹಸಿರು ಹಳದಿ ಬಣ್ಣದ ಪೇರಳೆ ಕಾಯಿ, ಹಣ್ಣುಗಳು. ಮೂವರೂ ಖುಷಿ ಕುಣಿದಾಡೋದೊಂದು ಬಾಕಿಯಿತ್ತು. ಅಜಯ್ ಹೊಟ್ಟೆಬಾಕನ ಹಾಗೆ ಅತಿಯಾಸೆಯಿಂದ ಬಲಿತ ಸೀಬೆಕಾಯಿಯನ್ನು ಆತುರಾತುರವಾಗಿ ತಿನ್ನುತ್ತಿದ್ದ, ಐದಾರು ಕಾಯಿಗಳನ್ನು ಜೇಬಿನಲ್ಲಿ, ಅಂಗಿಯೊಳಗೆ ಹಾಕಿಕೊಂಡಿದ್ದ. ನಾವಿಬ್ಬರು ಕೋತಿಗಳಂತೆ ಮರಕ್ಕೆ ಹತ್ತಿ ಹಾರಿ, ಅರೆಬರೆ ಸೀಬೆ ಕಾಯಿ ತಿಂದು ಬಿಸುಟು ಇನ್ನಿಲ್ಲದ ಮೋಜು ಮಾಡುತ್ತಿದ್ದೆವು. ನಾನೂ ಒಂದಿಷ್ಟು ಸೀಬೆಕಾಯಿಗಳನ್ನು ಜೇಬಿಗೆ ತುರುಕಿಕೊಂಡಿದ್ದೆ. ಅದನ್ನು ನನ್ನ ಕ್ಲಾಸ್‌ನ ಹುಡುಗರಿಗೆ ತೋರಿಸಿ, ಅವರ ಬಾಯಲ್ಲಿ ನೀರೂರುವ ಹಾಗೆ ಮಾಡಬೇಕು ಅನ್ನೋದು ನನ್ನಾಸೆಯಾಗಿತ್ತು. ಆ ಹೊತ್ತಿಗೆ ಅಜಯ್ ಕೂಗಿಕೊಂಡ.
“ಅಜಿತ್, ವರುಣ್ ಓಡಿ, ಓಡಿ .. ವಾಚ್‌ಮೆನ್ …’
ಅವನ ಜೋರು ದನಿಯ ಕಿರುಚಾಟ ಕಿವಿಗೆ ಬಿದ್ದಿದ್ದೇ ಕಕ್ಕಾಬಿಕ್ಕಿಯಾದೆ. ಆ ಕ್ಷಣ ಏನು ಮಾಡಬೇಕೆಂದೇ ಗೊತ್ತಾಗಿಲಿಲ್ಲ.
ಏರಿದ್ದ ಮರದ ಮೇಲಾºಗದಿಂದ ನೋಡಿದೆ, ಧೃಡಕಾಯ ಧಡಿಯನೊಬ್ಬ ಬಂದೂಕು ಹಿಡಿದು ನಾವಿದ್ದ ಕಡೆಗೇ ಬರುತ್ತಿದ್ದ. ನಾನು ಭಯದಿಂದ ತಿರುಗಿ ನೋಡಿದಾಗ ಅಜಯ್, ವರುಣ್ ಇಬ್ಬರೂ ಮರದಿಂದ ಹಾರಿ ಗೇಟ್‌ನ ಕಡೆ ಓಡುತ್ತಿದ್ದರು.
“ಅಜಿತ್ ಓಡೋ ..’ ಅಜಯ್ ಮತ್ತೂಮ್ಮೆ ಜೋರಾಗಿ ಕಿರುಚಿದ. ವಾಚ್‌ಮೆನ್ ಅವರನ್ನು ಅಟ್ಟಿಸಿಕೊಂಡು ಓಡುತ್ತ ಬರುತ್ತಿದ್ದ.
ತೋಟದ ಕೆಲಸಗಾರರನ್ನು ಕೂಗುತ್ತಾ, ” ಕಳ್ಳ, ಕಳ್ಳ ..ಹಿಡೀರಿ’ ಅಂತ ಅವರಿಬ್ಬರ ಹಿಂದೆ ಓಡಿದ.
ನಾನು ಮರದಿಂದ ಜಿಗಿದು ಅವರಿಬ್ಬರು ಹೋದ ದಾರಿಯಲ್ಲಿ ಶಕ್ತಿಮೀರಿ ಓಡಿದೆ.
ವಾಚ್‌ಮೆನ್ ವೇಗವಾಗಿ ನಮ್ಮೆಡೆಗೆ ಓಡಿ ಬರುತ್ತಿದ್ದ. ನನಗಿಂತ ಬಹಳ ಮುಂದಿದ್ದ ಅಜಯ್ ಮತ್ತು ವರುಣ್ ಇನ್ನೇನು ಗೇಟ್‌ನ್ನು ಸಮೀಪಿಸಲಿದ್ದರು. ಅಜಯ್ ಮತ್ತೆ ಮತ್ತೆ ಜೋರಾಗಿ ಕೂಗುತ್ತಿದ್ದ, “ಅಜಿತ್ ತಪ್ಪಿಸಿಕೋ, ವಾಚ್‌ಮೆನ್ ಬರಿ¤ದ್ದಾನೆ’ ನಾನು ಶಕ್ತಿಯನ್ನೆಲ್ಲ ಕಾಲಿಗೆ ವರ್ಗಾಯಿಸಿ ಓಡುತ್ತಿದ್ದೆ. ಆದರೂ ಅವರ ಸಮಕ್ಕೆ ಓಡಲು ಸಾಧ್ಯವೇ ಆಗಲಿಲ್ಲ. ನನ್ನ ಹಾಗೂ ವಾಚ್‌ಮೆನ್ ನಡುವಿನ ಅಂತರ ಕಡಿಮೆಯಾಗುತ್ತಿತ್ತು. ನಾನು ಹುಚ್ಚನಂತೆ ಓಡುತ್ತಿದ್ದೆ, ವಾಚ್‌ಮೆನ್ ಗೂಳಿಯಂತೆ ಹಿಂಬಾಲಿಸುತ್ತಿದ್ದ.
“ಈಗ ಜಂಪ್ ಮಾಡೋಣ’ ಗೇಟ್ ಸಮೀಪಿಸಿದ್ದೇ ಅಜಯ್ ಜೋರಾಗಿ ಕಿರುಚಿದ.
ನಾನು ಓಡಿಬಂದು ಗೇಟ್‌ಮೇಲೆ ಹತ್ತಿದೆ, ಅಷ್ಟರಲ್ಲಿ ..
ನನ್ನ ಜೇಬಿನಲ್ಲಿ ಉಳಿದಿದ್ದ ಸೀಬೆಕಾಯಿಗಳೂ ಕೆಳಬಿದ್ದವು. ಬಹಳ ಬೇಸರವಾಯಿತು. ಇಷ್ಟು ಕಷ್ಟಪಟ್ಟಿದ್ದಕ್ಕೆ ಒಂದಾದರೂ ಸೀಬೆಕಾಯಿ ತಗೊಂಡು ಹೋಗದಿದ್ರೆ ಏನ್ ಪ್ರಯೋಜನ? ಸೀಬೆಕಾಯಿ ತೋರಿಸಿ ಕ್ಲಾಸ್‌ನಲ್ಲಿ ಹೀರೋ ಆಗ್ಬೇಕಾದವ್ನು ಅನ್ಯಾಯವಾಗಿ ಅವರ ಕಣ್ಣಲ್ಲಿ ಚಿಕ್ಕವನಾಗಿ ಬಿಡ್ತೀನಿಲ್ವಾ, ಛೇ, ಕೆಲವು ಸೀಬೆಕಾಯನ್ನಾದ್ರೂ ಇಟ್ಕೊಳ್ಬೇಕು ಅಂದುಕೊಂಡೆ.
ಗೇಟ್ ಹತ್ತಿದವನು ಕೆಳಗಿಳಿದು ಕೆಳಬಿದ್ದ ಸೀಬೆಕಾಯಿಗಳನ್ನು ಹುಡುಕಿ ಹುಡುಕಿ ಜೇಬಿಗೆ ತುಂಬಿಸಿಕೊಂಡೆ.
“ಬಿಡೋ, ಅಜಿತ್, ಅದನ್ನು ಬಿಟ್ಟು ಬೇಗ ಗೇಟ್ ಹತ್ತಿ ತಪ್ಪಿಸ್ಕೋ, ವಾಚ್‌ಮೆನ್ ಬಂದಾಯ್ತು’ ಅಜಯ್ ಕಿರಿಚುತ್ತಲೇ ಇದ್ದ.
ಒಂದು ಕೈಯಲ್ಲಿ ಸೀಬೆಕಾಯಿ ತುಂಬಿದ್ದ ಜೇಬನ್ನು ಭದ್ರವಾಗಿ ಹಿಡಿದು ಇನ್ನೊಂದು ಕೈಯಲ್ಲಿ ಗೇಟನ್ನ ಹಿಡಿದು ಬ್ಯಾಲೆನ್ಸ್ ಮಾಡಿ ಹತ್ತಲಿಕ್ಕೆ ಪ್ರಯತ್ನಿಸಿದೆ, ಒಮ್ಮೆಲೇ ಕಾಲು ಜಾರಿ ಕೆಳಬಿದ್ದೆ!
ಬಿದ್ದದ್ದೊಂದೇ ಗೊತ್ತು, ಒರಟು ಕೈಯೊಂದು ನನ್ನ ತೋಳು ಹಿಡಿದು ಜಗ್ಗಿತು. ಆತಂಕ, ಗಾಬರಿ, ಭಯದಿಂದ ತಲೆ ಎತ್ತಲೂ ಭಯವಾಯ್ತು. ಆ ಕೈ ನನ್ನನ್ನು ಮೇಲಕ್ಕೆತ್ತಿತು, ತಲೆಎತ್ತಿ ಕೈ ಹಿಡಿದ ವ್ಯಕ್ತಿಯತ್ತ ನೋಡುವ ಪ್ರಯತ್ನ ಮಾಡುವಾಗ,
“ಏಳು ಮೇಲೆ’ ಅಧಿಕಾರವಾಣಿಯಿಂದ ಗುಡುಗಿದ. ಭಯದಲ್ಲಿ ನಡುಗುತ್ತ ಏಳುವುದೋ ಬೇಡವೋ ಎಂಬ ಗೊಂದಲದಲ್ಲಿ ಬಿದ್ದೆ!
(ಮುಂದುವರಿಯುವುದು)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.