ಪಚ್ಚಿ ಮತ್ತು ಜಾದೂ ವಿಮಾನ
Team Udayavani, Oct 10, 2019, 5:22 AM IST
ಚಿಂದಿ ಆಯುತ್ತಿದ್ದ ಪಚ್ಚಿಗೆ ಜಾದೂ ವಿಮಾನ ಸಿಕ್ಕಿತ್ತು. ಅದು ಅವನನ್ನು ಎಲ್ಲೆಲ್ಲಿಗೆ ಕೊಂಡೊಯ್ಯಿತು ಗೊತ್ತಾ?
ಚಿಂದಿ ಆಯುವ ಬಾಲಕ ಪಚ್ಚಿ ಒಂದು ಶಾಲೆಯ ಗೇಟಿನ ಮುಂದೆ ನಿಂತಿದ್ದ. ಅಲ್ಲಿ ಆಡುತ್ತಿದ್ದ ಶಾಲಾಮಕ್ಕಳನ್ನು ಕಂಡು ಅವನ ಕಣ್ಣುಗಳೂ ಚುರುಕಾದವು ಹೆಗಲಿಂದ ಇಳಿಬಿಟ್ಟಿದ್ದ ತನ್ನಗಿಂತಲೂ ದೊಡ್ಡದಾದ ಪ್ಲಾಸ್ಟಿಕ್ ಚೀಲದ ನೆನಪಾಯಿತು. ಮನೆಗೆ ಹೋಗಿ ಅಮ್ಮನಿಗೆ ತಲುಪಿಸಲು ತಡವಾಯಿತೆಂದುಕೊಂಡ. ಮಕ್ಕಳ ಸಂತಸದ ಕೂಗಾಟ ಓಡಾಟಗಳನ್ನು ನೋಡುತ್ತಲೇ ಮನೆಯತ್ತ ನಡೆದ. ಅಮ್ಮನ ಎದುರು ಪ್ಲಾಸ್ಟಿಕ್ ಚೀಲವನ್ನು ಸುರಿದ. ಅಷ್ಟರಲ್ಲಿ ಮನೆಯ ಛಾವಣಿಯ ತಗಡಿನ ಮೇಲೆ ಏನೋ ಬಿದ್ದ ಸದ್ದಾಯಿತು.
ಛಾವಣಿ ಹತ್ತಿ ನೋಡಿದಾಗ ಮೂಲೆಯಲ್ಲಿ ಒಂದು ಕರಿಕೋಟು ಬಿದ್ದಿರುವುದು ಕಾಣಿಸಿತು. ಆ ಕರಿಕೋಟನ್ನು ಕೈಗೆತ್ತಿಕೊಂಡ. ಅದನ್ನು ತೊಡುತ್ತಿದ್ದಂತೆಯೇ ಅವನ ವೇಷಭೂಷಣಗಳು ಬದಲಾದವು. ಮೀಸೆ ಮೂಡಿತು. ಅವನು ಏಕಾಏಕಿ ದೊಡ್ಡವನಾಗಿದ್ದ. ಅಷ್ಟರಲ್ಲಿ ಹಿಂದಿನಿಂದ ಯಾರೋ ತಳ್ಳಿದಂತಾಯಿತು. ಪಚ್ಚಿಗೆೆ ನಂಬಲಾಗಲೇ ಇಲ್ಲ. ಅವನ ಹಿಂದೆ ಒಂದು ಪುಟ್ಟ ವಿಮಾನ ನಿಂತಿತ್ತು. ಪಚ್ಚಿ ಪುಟ್ಟ ವಿಮಾನವನ್ನೇರಿ ಕುಳಿತ. ವಿಮಾನ ತನ್ನಷ್ಟಕ್ಕೆ ತಾನೇ ಮೇಲಕ್ಕೆ ಹಾರಿತು. ಪಚ್ಚಿ ತನ್ನ ಸೀಟನ್ನು ಬಿಗಿಯಾಗಿ ಹಿಡಿದುಕೊಂಡ.
ಮೇಲಕ್ಕೆ ಹೋಗುತ್ತಿದ್ದಂತೆ ಮೋಡಗಳು ಎದುರಾದವು, ಕೆಳಗೆ ಹೊಲ, ಗದ್ದೆ, ಮನೆಗಳು, ರಸ್ತೆಗಳು, ಕಟ್ಟಡಗಳು ಚಿಕ್ಕದಾಗುತ್ತಾ ಹೋದವು. ಪಚ್ಚಿಗೆ ತುಂಬ ಖುಷಿಯಾಯಿತು. ಸೀಟಿನ ಮೇಲೆ ಒಂದು ಪತ್ರ ಇತ್ತು ಪಚ್ಚಿ ಅದನ್ನು ತೆರೆದು ಓದಿದ. ಅದರಲ್ಲಿ “ಪ್ರಯಾಣಿಕ, ಯಾವ ಸ್ಥಳಕ್ಕೆ ಹೋಗಬೇಕೆಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೋ ಈ ವಿಮಾನ ಕ್ಷಣಮಾತ್ರದಲ್ಲಿ ಅಲ್ಲಿಗೆ ಕರೆದೊಯ್ಯುವುದು’ ಎಂದು ಬರೆಯಲಾಗಿತ್ತು. ಪಚ್ಚಿ ಅಂಜಿಕೆಯಿಂದಲೇ, ಕಣ್ಣುಮುಚ್ಚಿ ತಾಜ್‌ಮಹಲ್ ಅನ್ನು ನೆನಪಿಸಿಕೊಂಡ. ಕ್ಷಣ ಮಾತ್ರದಲ್ಲಿ ವಿಮಾನ ತಾಜ್‌ಮಹಲ್ ಮುಂದಿತ್ತು. ತಾಜ್‌ಮಹಲ್‌ನ ಸೌಂದರ್ಯವನ್ನು ಕಂಡು ಪಚ್ಚಿ ಮೂಕವಿಸ್ಮಿತನಾದ.
ಮುಂದೆ ಎಲ್ಲಿಗೆ ಹೋಗಲಿ ಎಂದು ಪಚ್ಚಿ ಯೋಚಿಸಿದ. ಅವನಿಗೆ ವಾಘಾ ಬಾರ್ಡರ್ ನೆನಪಾಯಿತು. ಹಿಂದೆ ಯಾವಾಗಲೋ ಪತ್ರಿಕೆಯಲ್ಲಿ ಅದರ ಕುರಿತು ಓದಿದ್ದ. ಅಲ್ಲಿಗೆ ಹೋಗಬೇಕೆನಿಸಿತು ಅವನಿಗೆ. ಕಣ್ಣು ಮುಚ್ಚಿ ವಾಘಾ ಬಾರ್ಡರ್‌ಅನ್ನು ನೆನೆಸಿಕೊಂಡ. ಮರುಕ್ಷಣದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ವಾಘಾ ಗಡಿಯ ಬಳಿ ಪಚ್ಚಿ ಇದ್ದ. ಭಾರತೀಯ ಹಾಗು ಪಾಕಿಸ್ತಾನದ ಸಿಪಾಯಿಗಳು ಅಲ್ಲಿ ಡ್ರಿಲ್ ಮಾಡುತ್ತಿದ್ದರು, ಸಲ್ಯೂಟ್ ಹೊಡೆಯುತ್ತಿದ್ದರು. ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದರು. ಪಚ್ಚಿ ಮೇಲ್ಗಡೆ ವಿಮಾನದಲ್ಲಿ ಕುಳಿತಲ್ಲಿಂದಲೇ ಖುಷಿಯಿಂದ ಚಪ್ಪಾಳೆ ತಟ್ಟಿದ.
ಪಚ್ಚಿಯ ಗಮನ ಸೀಟಿನ ಮೇಲೆ ಸರಿಯಿತು. ಅಲ್ಲಿ ಇನ್ನೊಂದು ಪತ್ರ ಪ್ರತ್ಯಕ್ಷವಾಗಿತ್ತು. ಅದರಲ್ಲಿ ಈ ರೀತಿ ಬರೆಯಲಾಗಿತ್ತು- “ವಿಮಾನದ ಅವಧಿ ಮುಗಿಯುತ್ತಿದೆ’. ಪಚ್ಚಿಗೆ ಇನ್ನು ಮನೆಗೆ ಹಿಂದಿರುಗುವುದು ಕ್ಷೇಮ ಎನ್ನಿಸಿತು. ಅವನು ತನ್ನ ಮನೆಯನ್ನು ನೆನೆದ. ಕೆಲವೇ ಸೆಕೆಂಡುಗಳಲ್ಲಿ ವಿಮಾನ ಅವನ ಮನೆಯ ಛಾವಣಿ ಮೇಲಿತ್ತು. ಪಚ್ಚಿ ಪುಟ್ಟ ವಿಮಾನದಿಂದ ಕೆಳಗಿಳಿದ. ವಿಮಾನ ನಿಧಾನವಾಗಿ ಮೇಲೇರಿ ಮರೆಯಾಯಿತು.
ಪಚ್ಚಿ ಮನೆಗೆ ವಾಪಸ್ಸಾಗುವ ಮುನ್ನ ಕರಿಕೋಟನ್ನು ಬಿಚ್ಚಿದ. ವೇಷಭೂಷಣ, ಮೀಸೆ ಎಲ್ಲಾ ಮಾಯವಾದವು. ಇದೆಲ್ಲಾ ಕರಿಕೋಟಿನ ಮ್ಯಾಜಿಕ್ ಎಂದು ಪಚ್ಚಿ ತಿಳಿದ. ಮನೆಗೆ ಹೋಗಿ ಕರಿಕೋಟನ್ನು ಪಚ್ಚಿ ಮೊಳೆ ಮೇಲೆ ನೇತು ಹಾಕಿ, ಬೆಳಗ್ಗಿನ ಘಟನೆಗಳನ್ನು ಮೆಲುಕು ಹಾಕುತ್ತಾ ಮಲಗಿದ. ಮರುದಿನ ಎದ್ದು ನೋಡಿದಾಗ ಕರಿಕೋಟು ಮೊಳೆಯ ಮೇಲೆ ಇರಲಿಲ್ಲ. “ಅಮ್ಮ ನನ್ನ ಕೋಟೆಲ್ಲಿ?’ ಎಂದು ಕೇಳಿದಾಗ ಅಮ್ಮ,”ನೀನು ಏಳುವುದಕ್ಕೆ ಮೊದಲೇ ಶಾಲೆಯ ಮಾಸ್ತರೊಬ್ಬರು ಬಂದಿದ್ದರು. ಅದು ಅವರ ಕೋಟಂತೆ. ತೆಗೆದುಕೊಂಡು ಹೋದರು. ನಾಳೆಯಿಂದ ನೀನೂ ಶಾಲೆಗೆ ಹೋಗಬೇಕಂತೆ.
ಇನ್ನೂ ಒಳ್ಳೆಯ ಕೋಟನ್ನು ಕೊಡಿಸ್ತಾರಂತೆ!’
ಪಚ್ಚಿ ಆಸೆ ತುಂಬಿದ ಕಣ್ಣುಗಳಿಂದ ಅಮ್ಮನನ್ನು ನೋಡಿದ! “ಅಮ್ಮ, ನಾನು ನಾಳೆಗಾಗಿ ಕಾಯಲಾರೆ. ಇಂದೇ ಶಾಲೆಗೆ ಹೋಗಿ ಮಾಸ್ತರರನ್ನು ಭೇಟಿ ಮಾಡುತ್ತೇನೆ’ ಎಂದ ಪಚ್ಚಿ.
– ಮತ್ತೂರು ಸುಬ್ಬಣ್ಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.