ಗುಬ್ಬಿಯ ಪಶ್ಚಾತ್ತಾಪ
Team Udayavani, Jan 18, 2018, 3:10 PM IST
ಒಂದು ಊರಿನಲ್ಲಿ ಎರಡು ಮರಗಳಿದ್ದವು. ಪಕ್ಕದಲ್ಲೇ ನದಿ ಹರಿಯುತ್ತಿದ್ದಿತು. ಅದೇ ದಾರಿಯಲ್ಲಿ ಹಾರಿ ಹೋಗುತ್ತಿದ್ದ ಗುಬ್ಬಿಯೊಂದು ಮೊದಲನೆಯ ಮರವನ್ನು ನೋಡಿ ಅದರಲ್ಲೇ ಒಂದು ಗೂಡು ಕಟ್ಟಿಕೊಳ್ಳಲು ಮನಸ್ಸು ಮಾಡಿತು. ಅದಕ್ಕೇ ಮೊದಲನೇ ಮರದ ಬಳಿ ಹೋಗಿ “ಮಳೆಗಾಲ ಬರುತ್ತಿದೆ, ನಾನು ಮತ್ತು ನನ್ನ ಮಕ್ಕಳು ವಾಸಿಸಲು ನಿನ್ನ ಕೊಂಬೆಯ ಮೇಲೆ ಒಂದು ಗೂಡು ಕಟ್ಟಿಕೊಳ್ಳಲೇ?’ ಎಂದು ಕೇಳಿತು. ಮೊದಲನೆ ಮರ ಗುಬ್ಬಿಗೆ ಅನುಮತಿ ನಿರಾಕರಿಸಿತು. ಚಿಕ್ಕ ಗುಬ್ಬಿಗೆ ಬೇಸರವಾಯಿತು.ನಿರಾಶೆಯಿಂದ ಎರಡನೇ ಮರದ ಬಳಿ ಹೋಗಿ ಸಹಾಯ ಮಾಡೆಂದು ಕೇಳಿಕೊಂಡಿತು. ಎರಡನೆ ಮರ ಒಪ್ಪಿಕೊಂಡಿತು.
ಗುಬ್ಬಿ ಮಹದಾನಂದದಿಂದ ಕುಣಿದು ಕುಪ್ಪಳಿಸುತ್ತಾ ಗೂಡು ಕಟ್ಟಲು ಶುರು ಮಾಡಿತು. ಮಳೆಗಾಲ ಪ್ರಾರಂಭವಾಗುವುದಕ್ಕೆ ಮುನ್ನವೇ ಗೂಡು ಕಟ್ಟಿತು. ಅದರಲ್ಲೇ ಗುಬ್ಬಿ ತನ್ನ ಮರಿಗಳೊಂದಿಗೆ ಆನಂದದಿಂದ ಕಾಲ ಕಳೆಯತೊಡಗಿತು. ಅಷ್ಟರಲ್ಲೇ ಮಳೆಗಾಲ ಪ್ರಾರಂಭವಾಯಿತು. ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಒಂದೆರಡು ದಿನಗಳಲ್ಲೇ ಪ್ರವಾಹ ಪ್ರಾರಂಭವಾಯಿತು. ಆ ಪ್ರವಾಹದಲ್ಲಿ ಮೊದಲನೇ ಮರ ಬೇರು ಸಮೇತ ಕೊಚ್ಚಿಕೊಂಡು ಹೋಯಿತು. ಎರಡನೇ ಮರದ ಮೇಲೆ ಕುಳಿತಿದ್ದ ಗುಬ್ಬಿ ಆದೃಶ್ಯವನ್ನು ನೋಡಿ “ದೇವರು ನಿನಗೆ ತಕ್ಕ ಶಿಕ್ಷೆ ನೀಡಿದ್ದಾನೆ. ನನಗೆ ಸಹಾಯ ಮಾಡಲು ನಿರಾಕರಿಸಿದೆಯಲ್ಲವೇ?’ ಎಂದು ನಗುತ್ತಾ ಹೇಳಿತು. “ಪ್ರವಾಹ ಬಂದರೆ ಕೊಚ್ಚಿಕೊಂಡು ಹೋಗುತ್ತೇನೆಂದು ನನಗೆ ಮೊದಲೇ ಗೊತ್ತಿತ್ತು. ಅದಕ್ಕೇ ನಿನಗೆ ಗೂಡು ಕಟ್ಟಲು ಅನುಮತಿ ನೀಡಲಿಲ್ಲ. ನನ್ನನ್ನು ಕ್ಷಮಿಸು. ನೀನು ನಿನ್ನ ಮರಿಗಳೊಂದಿಗೆ ಸುಖವಾಗಿ ಬಾಳು’ ಎಂದು ಹರಸಿ ಮೊದಲನೇ ಮರ ಪ್ರವಾಹದಲ್ಲಿ ತೇಲುತ್ತಾ ಹೋಯಿತು. ಈ ಮಾತುಗಳನ್ನು ಕೇಳಿದ ಪುಟ್ಟ ಗುಬ್ಬಿಗೆ ಅತೀವ ವೇದನೆಯಾಯಿತು.
ಹನಮಂತ ದೇಶಕುಲಕರ್ಣಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.