ಸೀಯಾ ಮತ್ತು ಸಾಕವ್ವ
Team Udayavani, Nov 28, 2019, 4:43 AM IST
ಸೀಯಾಳಿಗೆ ತನ್ನ ಮನೆಗೆ ಪಾತ್ರೆ ತೊಳೆಯುವ ಕೆಲಸಕ್ಕೆ ಬರುತ್ತಿದ್ದ ಸಾಕವ್ವನನ್ನು ಕಂಡರೆ ತುಂಬಾ ಅಕ್ಕರೆ. ಒಂದು ದಿನ ಸೀಯಾಳಿಗೆ ಸಾಕವ್ವ ಓದಲು ಬರೆಯಲು ಕಲಿತರೆ ಚೆನ್ನ ಎಂದೆನ್ನಿಸಿತು. ಅಂದಿನಿಂದ ಸಾಕವ್ವನಿಗೆ ಕನ್ನಡ ಪಾಠ ಶುರು ಮಾಡಿದಳು. ಮುಂದೇನಾಯ್ತು?
ಬೆಳ್ಳಂಬೆಳಿಗ್ಗೆ ಸಾಕವ್ವಳ ಪಾತ್ರೆ ತೊಳೆಯುವ ಸದ್ದಿನಿಂದ ಸೀಯಾ ಎಚ್ಚರಗೊಂಡಳು. ಎದ್ದವಳೇ ಅಮ್ಮನ ಬಳಿ ತೆರಳಿ “ಅಮ್ಮ ಸಾಕವ್ವ ಬಂದಿದ್ದಾಳಾ? ಎಂದು ಪ್ರಶ್ನಿಸಿದಳು. ಅಮ್ಮ ಯಾಕೆ ಎಂದು ಕೇಳಿದಾಗ, “ನಾನು ಸಾಕವ್ವಳಿಗೆ ಕನ್ನಡ ಓದೋದು ಬರೆಯೋದು ಕಲಿಸಬೇಕು’ ಎಂದಳು. ಸೀಯಾಳ ಮಾತು ಕೇಳಿ ಅಮ್ಮ ನಕ್ಕರು. ಸಾಕವ್ವ ಸೀಯಾಳ ಮನೆಯಲ್ಲಿ ಪಾತ್ರೆ ತೊಳೆಯಲು ಬರುತ್ತಿದ್ದ ಅಜ್ಜಿ. 60ರ ಆಸುಪಾಸಿನಲ್ಲಿದ್ದ ಸಾಕವ್ವ ಒಮ್ಮೆಯೂ ಶಾಲೆಯ ಮೆಟ್ಟಿಲು ಹತ್ತಿದವಳಲ್ಲ. ಸಾಕವ್ವ ಹೆಬ್ಬೆಟ್ಟು ಒತ್ತುವುದನ್ನು ಬಿಟ್ಟು, ವಿದ್ಯಾವಂತರಂತೆ ತನ್ನ ಹೆಸರನ್ನು ಸಹಿ ಮಾಡಬೇಕು ಎನ್ನುವುದು ಸೀಯಾಳ ಆಸೆಯಾಗಿತ್ತು. ಅದನ್ನು ಹೇಳಿಕೊಂಡಾಗ ಅಮ್ಮ ಅಂದರು “ಸಾಕವ್ವಳಿಗೆ ಯಾಕೆ ಕಷ್ಟ ಕೊಡ್ತೀಯ ಸೀಯಾ? ಈ ವಯಸ್ಸಿನಲ್ಲಿ ಯಾಕೆ ಓದೋ, ಬರೆಯೋ ಉಸಾಬರಿ? ಬಿಟ್ಟುಬಿಡು, ಪಾಪ… ಮುದುಕಿ!’. “ಹಾಗಲ್ಲ ಅಮ್ಮ. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಕನ್ನಡ ಸುಂದರವಾದ ಭಾಷೆ. ನಮ್ಮ ನೆಲದ ಭಾಷೆ. ಅದನ್ನು ಓದಲು ಬರೆಯಲು ಕಲಿತರೆ ಚೆನ್ನ’ ಎಂದೆಲ್ಲಾ ಹೇಳಿ ಒಂದು ಪುಟ್ಟ ಭಾಷಣವನ್ನೇ ಒಪ್ಪಿಸಿದಳು ಸೀಯಾ. ಅಮ್ಮನಿಗೆ ಸೀಯಾಳ ಮಾತುಗಳನ್ನು ಕೇಳಿ ಸಂತಸವಾಯಿತು.
ವರಾಂಡದಲ್ಲಿ ಒಂದು ಚಾಪೆ ಹಾಕಿ ಸಾಕವ್ವ ತನ್ನ ಕೆಲಸಗಳನ್ನು ಮುಗಿಸುವುದನ್ನೇ ಕಾದಳು. ಹಳೆ ಸ್ಲೇಟು. ಕನ್ನಡ ಕಾಗುಣಿತದ ಪುಸ್ತಕ, ಮಗ್ಗಿ ಪುಸ್ತಕ, ಬಳಪ, ಪೆನ್ಸಿಲ್ ಎಲ್ಲವನ್ನೂ ಜೋಡಿಸಿಟ್ಟುಕೊಂಡಳು. ಕೆಲಸ ಮುಗಿಸಿ ಬಂದ ಸಾಕವ್ವ “ಯಾಕವ್ವಾ ನನಗೆ ಓದು ಬರಹ’ ಎಂದಳು ನಾಚುತ್ತಾ. “ಚಿಂತೆ ಮಾಡಬೇಡ. ಇವತ್ತು, ಕನ್ನಡದ ಅಕ್ಷರಗಳನ್ನು ಕಲಿಯೋಣ’ ಎನ್ನುತ್ತ ಸೀಯಾ ಸ್ಲೇಟಿನ ಮೇಲೆ ಬರೆದುದನ್ನು ತನ್ನೊಡನೆ ಜೋರಾಗಿ ಪುನರುತ್ಛರಿಸುವಂತೆ ತಿಳಿಸಿದಳು. ಮೊದಮೊದಲು ಸಾಕವ್ವನಿಗೆ ಕಷ್ಟವಾಗತೊಡಗಿತು. ಸೀಯಾ ಬಿಡಲಿಲ್ಲ. ಉತ್ಸಾಹದಿಂದ ಹೇಳಿಸಿದಳು. ಒಂದು ಗಂಟೆಯ ನಂತರ ಸೀಯಾ ಮರೆಯದೆ ಮನೆಗೆಲಸವನ್ನು ಮಾಡಿಕೊಂಡು ಬರುವಂತೆ ಒಂದಷ್ಟು ಅಕ್ಷರಗಳನ್ನು ಅಭ್ಯಾಸ ಮಾಡುವಂತೆ ಹೇಳಿದಳು. “ನೀನು ಹೀಗೆ ಪಾಠ ಹೇಳಿಕೊಟ್ಟರೆ ಸಾಕವ್ವ ನಮ್ಮ ಮನೆ ಕೆಲಸವನ್ನೇ ಬಿಟ್ಟಾಳು’ ಎಂದು ಅಮ್ಮ ಹೇಳಿದ್ದು ಸೀಯಾಳ ಕಿವಿಗೂ ಬಿದ್ದಿತು. ಮರುದಿನವೂ ಪಾತ್ರೆ ತೊಳೆದ ನಂತರ ಸಾಕವ್ವನಿಗೆ ಸೀಯಾ ಕನ್ನಡ ಪಾಠ ಹೇಳಿಕೊಟ್ಟಳು. ಸಾಕವ್ವ ಕೂಡ ಉತ್ಸಾಹದಿಂದಲೇ ಸೀಯಾಳ ಜೊತೆ ಭಾಗಿಯಾದಳು.
ಸಾಕವ್ವನ ಉತ್ಸಾಹ ಕಂಡು ಅಮ್ಮನಿಗೂ, ಸೀಯಾಳಿಗೂ ಸಂತಸವಾಯಿತು. ಸೀಯಾಳಂತೂ “ನೋಡುತ್ತಾ ಇರಿ, ಸಾಕವ್ವ ಬಹಳ ಬೇಗ ಎಲ್ಲವನ್ನೂ ಕಲಿಯುತ್ತಾಳೆ’ ಎಂದಳು. ಹೀಗೆಯೇ ಒಂದು ತಿಂಗಳು ಕಳೆಯಿತು. ಯಾವತ್ತೂ ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಸಾಕವ್ವ ಅಂದೇಕೋ ಬರಲೇ ಇಲ್ಲ. ಮಾರನೇ ದಿನವೂ ಸೀಯಾ ಕಾದಿದ್ದೇ ಬಂತು. ಸಾಕವ್ವನ ಪತ್ತೆ ಇರಲಿಲ್ಲ. ಅಮ್ಮ “ನೋಡಿದೆಯಾ, ಕನ್ನಡ ಪಾಠ ಕಲಿಸುವ ಭರದಲ್ಲಿ ಸಾಕವ್ವ ಮನೆ ಕೆಲಸಕ್ಕೆ ಬರದಂತೆ ಮಾಡಿಬಿಟ್ಟೆ’ ಎಂದುಬಿಟ್ಟರು. ಸೀಯಾಳಿಗೆ ತುಂಬಾ ಬೇಜಾರಾಯಿತು. ಅಷ್ಟರಲ್ಲಿ ಬಾಗಿಲಲ್ಲಿ ಯಾರದೋ ದನಿ ಕೇಳಿಸಿತು. ನೋಡಿದರೆ ಸಾಕವ್ವ ಸ್ಲೇಟು ಬಳಪ ಹಿಡಿದು ನಿಂತಿದ್ದಳು. ಅಮ್ಮ “ಯಾಕೆ ಸಾಕವ್ವ ಮನೆ ಕಡೆ ಬರಲೇ ಇಲ್ಲ’ ಎಂದು ಕೇಳಿದಾಗ ತಾಯವ್ವ “ಚಿಕ್ಕ ತಾಯವ್ವ ಮನೆಯಲ್ಲಿ ಮಾಡಲೆಂದು ಓಮಕ್ಕು (ಹೋಮ್ ವರ್ಕ್) ಕೊಟ್ಟಿದ್ದರು. ಅದನ್ನು ಕಲಿತು ಬರುವಷ್ಟರಲ್ಲಿ ತಡವಾಯಿತು’ ಎಂದರು. ಸೀಯಾಳನ್ನು ಕಂಡಾಕ್ಷಣ ತಾಯವ್ವ “ಸೀಯವ್ವ ನೋಡವ್ವ ನಾ ಮಾಡಿಕೊಂಡು ಬಂದಿರೋ ಓಮಕ್ಕು ಸರಿ ಇದೆಯಾ ಅಂತ…’ ಎನ್ನುತ್ತಾ ತಾನು ಬರೆದ ಸ್ಲೇಟನ್ನು ಸೀಯಾಳ ಮುಂದಿರಿಸಿದಳು. ಅಮ್ಮ ಮತ್ತು ಮಗಳು ಆಶ್ಚರ್ಯದಿಂದ ಒಬ್ಬರನ್ನೊಬ್ಬರು ನೋಡಿಕೊಂಡರು. ಸ್ಲೇಟಿನ ಮೇಲೆ “ನಾನು ಸಾಕವ್ವ’ ಎಂದು ಬರೆದಿತ್ತು! ಸೀಯಾಳ ಸಂತಸ ಹೇಳತೀರದು.
-ಮತ್ತೂರು ಸುಬ್ಬಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.