ಪುರಾಣ ಕತೆ: ಭಕ್ತ ಧ್ರುವ
Team Udayavani, Mar 2, 2017, 10:59 AM IST
ಉತ್ಥಾನಪಾದ ಎನ್ನುವವನು ಒಬ್ಬ ರಾಜ. ಅವನಿಗೆ ಇಬ್ಬರು ಹೆಂಡತಿಯರು- ಸುನೀತಿ ಮತ್ತು ಸುರುಚಿ. ಅವನಿಗೆ ಸುರುಚಿಯಲ್ಲಿ ಹೆಚ್ಚು ಪ್ರೀತಿ. ಸುನೀತಿಯ ಮಗ ಧ್ರುವ.
ಸುರುಚಿಯ ಮಗ ಉತ್ತಮ. ಒಂದು ದಿನ ಉತ್ತಮಕುಮಾರನನ್ನು ತಂದೆಯು ಪ್ರೀತಿಯಿಂದ ತೊಡೆಯ ಮೇಲೆ ಕೂರಿಸಿ ಕೊಂಡಿದ್ದನು. ಆಗ ಧ್ರುವಕುಮಾರ ಬಂದ. ಅವನಿಗೆ ತಾನೂ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಬೇಕೆಂದು ಆಸೆಯಾಯಿತು. ಅವನು ಹಾಗೆ ಕುಳಿತುಕೊಳ್ಳಲು ಪ್ರಯತ್ನಿಸಿದ.
ಆಗ ಅಲ್ಲಿಗೆ ಬಂದ ಸುರುಚಿಯು “ನಿನಗೆ ರಾಜನ ತೊಡೆಯ ಮೇಲೆ ಕುಳಿತುಕೊಳ್ಳುವ ಯೋಗ್ಯತೆ ಇಲ್ಲ’ ಎಂದು ಗದರಿಸಿ ಎಳೆದು ಹಾಕಿದಳು. ಅವನ ಮನಸ್ಸು ಚಿಕ್ಕದಾಯಿತು. ತಂದೆಯು ತನ್ನ ವಿಷಯದಲ್ಲಿ ಉದಾಸೀನನಾಗಿರುವುದನ್ನು ಕಂಡು ದುಃಖವಾಯಿತು. ಅಳುತ್ತಾ ತಾಯಿಯ ಬಳಿಗೆ ಹೋದ. ಏನು ನಡೆಯಿತೆಂದು ತಿಳಿದಾಗ ಅವಳು “ಮಗೂ ಸುರುಚಿಯ ಮಾತು ನಿಜ. ನಿನ್ನ ತಂದೆಗೆ ನಾನು ಅವರ ಹೆಂಡತಿ ಎಂದು ಹೇಳಿಕೊಳ್ಳುವುದಕ್ಕೂ ಇಷ್ಟವಿಲ್ಲ. ನನ್ನ ಅದೃಷ್ಟ ಕೆಟ್ಟದ್ದು. ಭಗವಂತನನ್ನು ಭಕ್ತಿಯಿಂದ ಆರಾಧಿಸು. ಅವನ ಅನುಗ್ರಹದಿಂದ ನಿನ್ನ ಆಸೆ ಸಫಲವಾಗುವುದು’ ಎಂದಳು.
ಧ್ರುವನು ದೇವರ ಧ್ಯಾನ ಮಾಡಲು ಮನೆಯನ್ನು ಬಿಟ್ಟು ಕಾಡಿಗೆ ಹೊರಟ. ದಾರಿಯಲ್ಲಿ ನಾರದರು ಅವನನ್ನು ಕಂಡರು. ಅವನ ಉದ್ದೇಶವನ್ನು ತಿಳಿದುಕೊಂಡು, “ಮಗೂ, ಕಾಡಿನಲ್ಲಿ ಕ್ರೂರ ಮೃಗಗಳಿರುತ್ತವೆ. ಧ್ಯಾನದಿಂದ ಭಗವಂತನನ್ನು ಒಲಿಸಿ ಕೊಳ್ಳುವುದು ಬಹಳ ಕಷ್ಟ. ಮನೆಗೆ ಹಿಂತಿರುಗು’ ಎಂದು ಹೇಳಿದರು.
ಧ್ರುವನು ಆ ಮಾತಿಗೆ ಒಪ್ಪದೆ “ಮಹಾತ್ಮರೆ, ನಾನು ಈಗ ಬಯಸುತ್ತಿರುವುದು ನನ್ನ ತಂದೆಯ ಸಿಂಹಾಸನವನ್ನಲ್ಲ, ಮೂರು ಲೋಕಗಳಲ್ಲಿಯೂ ಶ್ರೇಷ್ಠವಾದ ಪದವಿಯನ್ನು. ಅದನ್ನು ಭಗವಂತನಿಂದ ಬೇಡಿ ಪಡೆಯುತ್ತೇನೆ. ತಾವು ನನ್ನನ್ನು ಹರಸಬೇಕು.’ ಎಂದ. ನಾರದರು ಅವನ ದೃಢ ಮನಸ್ಸನ್ನೂ
ಗುರಿಯನ್ನೂ ಮೆಚ್ಚಿ ವಾಸುದೇವ ಮಂತ್ರವನ್ನು ಹೇಳಿಕೊಟ್ಟು ಅದನ್ನು ಜಪಿಸುವಂತೆ ಹೇಳಿದರು. ಅವನನ್ನು ಆಶೀರ್ವದಿಸಿದರು. ಧ್ರುವಕುಮಾರನು ಒಂದೇ ಮನಸ್ಸಿನಿಂದ ವಾಸುದೇವ ಮಂತ್ರ ಜಪಿಸುತ್ತ ದೇವರನ್ನು ಕುರಿತು ತಪಸ್ಸು ಮಾಡಿದ. ಮೊದಲ ತಿಂಗಳು ಮೂರು ದಿನಗಳಿಗೆ ಒಂದು ಸಲ ಸಿಕ್ಕ
ಹಣ್ಣುಗಳನ್ನು ತಿನ್ನುತ್ತಿದ್ದ. ಎರಡನೆಯ ತಿಂಗಳು ಆರು ದಿನಗಳಿಗೆ ಒಂದು ಸಲ ತರಗಲೆಗಳನ್ನೂ, ಹುಲ್ಲನ್ನೂ ತಿನ್ನುತ್ತಿದ್ದ. ಮೂರನೆಯ ತಿಂಗಳು ಒಂಬತ್ತು ದಿನಗಳಿಗೆ ಒಂದು ಸಲ ಒಂದಿಷ್ಟು ನೀರನ್ನು ಕುಡಿಯುತ್ತಿದ್ದ. ನಾಲ್ಕನೆಯ ತಿಂಗಳು, ಹನ್ನೆರಡು ದಿನಗಳಿಗೆ ಒಮ್ಮೆ ಗಾಳಿಯನ್ನು ಮಾತ್ರ ಸೇವಿಸುತ್ತಿದ್ದ. ಆನಂತರ ಏನೂ ಆಹಾರವೇ ಇಲ್ಲ. ದೃಢವಾದ ಭಕ್ತಿಯಿಂದ ತನ್ನ ಮನಸ್ಸನ್ನು ಪರಮಾತ್ಮನ ಪಾದಗಳಲ್ಲಿ ನಿಲ್ಲಿಸಿದ.
ಕಡೆಗೆ ಭಗವಂತನು ಅವನ ಪರಿಶುದ್ಧ ಭಕ್ತಿಯನ್ನು ಮೆಚ್ಚಿ ಪ್ರತ್ಯಕ್ಷನಾದ. ಧ್ರುವನಿಗೆ ರೋಮಾಂಚನವಾಯಿತು. ಭಗವಂತನ ದರ್ಶನದಿಂದ ಅವನ ಮನಸ್ಸಿನಲ್ಲಿ ದಿವ್ಯಜ್ಞಾನವು ಬೆಳಗಿತು. ಅವನು ಭಗವಂತ ಪಾದಗಳಿಗೆ ನಮಸ್ಕರಿಸಿ ಅವನನ್ನು ಸ್ತುತಿಸಿದನು. ಭಗವಂತನು “ನಿನ್ನ ತಂದೆಯ ರಾಜ್ಯವನ್ನು ಅವನ ನಂತರ ನೀನೇ ಆಳುವೆ. ಆನಂತರ ನಿನಗೆ ಸೂರ್ಯ, ಚಂದ್ರ, ಗ್ರಹ, ನಕ್ಷತ್ರಗಳಿಗಿಂತ ಉನ್ನತ ಸ್ಥಾನವನ್ನು ಕೊಡುತ್ತೇನೆ’ ಎಂದು ಹೇಳಿ
ಅಂತರ್ಧಾನನಾದನು. ಧ್ರುವನು ಕಾಡಿಗೆ ಹೋದ ನಂತರ ಉತ್ಥಾನಪಾದನಿಗೆ ತಾನು ನಡೆದುಕೊಂಡ ರೀತಿ ತಪ್ಪು ಎನಿಸಿತು. ಮಗನು ಕಾಡಿನಲ್ಲಿ ಎಷ್ಟು ಕಷ್ಟ ಪಡುತ್ತಿರುವನೋ ಎಂದು ದುಃಖವಾಯಿತು. ನಾರದರೂ ಅವನಿಗೆ ಬುದ್ಧಿ ಹೇಳಿದರು. ಧ್ರುವನು ತಾಯಿಯ ಮನೆಗೆ ಹಿಂದಿರುಗಿದ. ಸುನೀತಿಗೆ ಬಹಳ
ಸಂತೋಷವಾಯಿತು. ಸಂಭ್ರಮವಾಯಿತು. ಮಗನು ಹಿಂದಿರುಗಿದ ಸುದ್ದಿಯನ್ನು ಕೇಳಿ ಉತ್ಥಾನಪಾದನು ಅವನನ್ನು ವೈಭವದಿಂದ ಅರಮನೆಗೆ ಬರಮಾಡಿಕೊಂಡ. ಕೆಲವು ವರ್ಷಗಳ ನಂತರ ಧ್ರುವನಿಗೆ ಪಟ್ಟಾಭಿಷೇಕ ಮಾಡಿ ಉತ್ಥಾನಪಾದನು ತಪಸ್ಸು ಮಾಡಲು ಕಾಡಿಗೆ ಹೋದ. ಧ್ರುವನು ಹೆಂಡತಿ ಮಕ್ಕಳೊಡನೆ ಬಹುಕಾಲ ಸಂತೋಷವಾಗಿದ್ದ. ಅವನ ತಮ್ಮ ಉತ್ತಮನು ಕಾಡಿಗೆ ಹೋದಾಗ ಒಬ್ಬ ಯಕ್ಷನೊಡನೆ ಕಾದಾಡಿ ಸತ್ತುಹೋದ. ಅವನ ತಾಯಿ ಸುರುಚಿಯು ಮಗನನ್ನು ಹುಡುಕಿಕೊಂಡು ಕಾಡಿಗೆ ಹೋಗಿ ಅಲ್ಲಿ ಕಾಡ್ಗಿಚ್ಚಿಗೆ ಸಿಕ್ಕಿ ಸತ್ತುಹೋದಳು.
ಧ್ರುವನು ಬಹುಕಾಲ ರಾಜ್ಯಭಾರ ಮಾಡಿ ಆನಂತರ ಬದರಿಕಾಶ್ರಮಕ್ಕೆ ಹೋಗಿ ಭಗವಂತನ ಧ್ಯಾನದಲ್ಲಿ ನಿರತನಾದನು. ಅವನು ಈ ಪ್ರಪಂಚವನ್ನು ಬಿಟ್ಟಾಗ ಪರಮಾತ್ಮನು ಕಳುಹಿಸಿದ ವಿಮಾನದಲ್ಲಿ ಎಂದೂ ನಾಶವಾಗದ, ಎಲ್ಲ ಗ್ರಹಗಳಾಚೆ ಇದ್ದ ಲೋಕಕ್ಕೆ ಹೋದನು. ಅದನ್ನು ಧ್ರುವಲೋಕ ಎನ್ನುತ್ತಾರೆ.
(ಪ್ರೊ. ಎಲ್. ಎಸ್ ಶೇಷಗಿರಿರಾವ್ ಅವರ “ಕಿರಿಯರ ಭಾಗವತ’ ಪುಸ್ತಕದಿಂದ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.