ಹಕ್ಕಿಗಳ ಕಿತ್ತಾಟ
Team Udayavani, Jan 16, 2020, 5:36 AM IST
ಒಬ್ಬ ರೈತ ತನ್ನ ಹೊಲದಲ್ಲಿನ ತೆನೆಗಳನ್ನು ಒಂದು ಚೀಲದಲ್ಲಿ ತುಂಬಿಕೊಂಡು ಮನೆಯ ಕಡೆ ಹೊರಟಿದ್ದನು. ಅವನು ಹೊರಟ ದಾರಿಯಲ್ಲಿ ಅನೇಕ ಮರಗಳಿದ್ದವು. ಆ ಮರಗಳ ಮೇಲೆ ಕೆಲವು ಪಕ್ಷಿಗಳು ಗೂಡುಗಳನ್ನು ಕಟ್ಟಿಕೊಂಡಿದ್ದವು. ಗೂಡಿನಲ್ಲಿ ಕೆಲವು ಸಣ್ಣ, ದೊಡ್ಡ ಮರಿಗಳೂ ಇದ್ದವು.
ರೈತ ಚೀಲವನ್ನು ಹೊತ್ತುಕೊಂಡು ಹೋಗುತ್ತಿರಬೇಕಾದರೆ, ಚೀಲದಿಂದ ಒಂದು ಜೋಳದ ತೆನೆ ಹೊರಗೆ ಬಿದ್ದು ಬಿಟ್ಟಿತು. ತೆನೆ ಬೀಳುತ್ತಿರುವುದನ್ನು ಎರಡು ಹಕ್ಕಿಗಳು ನೋಡಿದವು. ಕೂಡಲೆ ಅವೆರಡೂ ಜೋಳದ ತೆನೆಯನ್ನು ಪಡೆಯಲು ಕೆಳಕ್ಕೆ ಹಾರಿ ಬಂದವು. ಅವುಗಳ ಜೊತೆಗೆ ಅವುಗಳ ಮರಿಗಳೂ ಇದ್ದವು. ಕೆಳಗೆ ಬಿದ್ದಿದ್ದ ತೆನೆಯನ್ನು ಎರಡೂ ಹಕ್ಕಿಗಳು ಕೊಕ್ಕಿನಲ್ಲಿ ಕಚ್ಚಿ ಹಿಡಿದವು. ಇದು ತನ್ನದು, ಇದು ತನ್ನದು ಜಗಳವನ್ನೂ ಪ್ರಾರಂಭಿಸಿದವು. ಅಮ್ಮ ಹಕ್ಕಿಗಳ ಜಗಳವನ್ನು ನೋಡಿ ಮರಿ ಹಕ್ಕಿಗಳು ತಾವೂ ಜಗಳವನ್ನು ಶುರು ಮಾಡಿದವು.
ಹೀಗೆ ಸ್ವಲ್ಪ ಸಮಯದವರೆಗೆ ಹಕ್ಕಿಗಳು ಜೋರಾಗಿ ಅರಚಾಡುತ್ತಿದ್ದವು. ಒಂದು ಕ್ಷಣ ಆ ಹಕ್ಕಿಗಳ ಗಮನ ತಮ್ಮ ತಮ್ಮ ಮರಿಗಳ ಕಡೆಗೆ ಹೋಯಿತು. ಮರಿಗಳು ಕಾಣಿಸಲಿಲ್ಲ. ಅರೆ! ಮರಿಗಳು ಎಲ್ಲಿ ಹೋದವು ಎಂದು ಸುತ್ತಲೂ ನೋಡಲಾಗಿ ಹಿಂದುಗಡೆಯಿಂದ “ಚೀಂವ್ ಚೀಂವ್’ ದನಿ ಕೇಳಿಸಿತು. ಆಗ ಎರಡೂ ಹಕ್ಕಿಗಳು ಹಿಂತಿರುಗಿ ನೋಡಿದವು.
ಮರಿಗಳು ತಮ್ಮ ಜೊತೆಗೆ ಇನ್ನೂ ಕೆಲವು ಮರಿಗಳನ್ನು ಸೇರಿಸಿಕೊಂಡು ಸಂತೋಷದಿಂದ ಆಟ ಆಡುತ್ತಿದ್ದವು. ತಮ್ಮ ಮರಿಗಳು ಜಗಳ ಮರೆತು ಸಂತೋಷದಿಂದ ಆಡುತ್ತಿದ್ದದ್ದನ್ನು ಕಂಡು ತಾಯಿ ಹಕ್ಕಿಗಳಿಗೆ ತಮ್ಮ ಬಗ್ಗೆಯೇ ನಾಚಿಕೆಯೆನಿಸಿತು. ಅವುಗಳೂ ತಮ್ಮ ಜಗಳವನ್ನು ಮರೆತು ಮಕ್ಕಳ ಆಟದಲ್ಲಿ ಪಾಲ್ಗೊಂಡವು. ರಸ್ತೆಯಲ್ಲಿ ಬಿದ್ದಿದ್ದ ಜೋಳದ ತೆನೆಯನ್ನು ಹಕ್ಕಿಗಳೆಲ್ಲವೂ ಒಟ್ಟಾಗಿ ತಿಂದವು.
– ಪ್ರೇಮಾ ಬಿರಾದಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.