ಗಂಧರ್ವ ಮತ್ತು ಪಾಂಡವರ ಯುದ್ಧ
ಮಹಾಭಾರತದ ಕಥೆ
Team Udayavani, Jun 27, 2019, 5:00 AM IST
ಪತ್ನಿಯರೊಡನೆ ಸಂತಸದಿಂದಿದ್ದಾಗ ಭಂಗ ತಂದದ್ದಕ್ಕೆ ಅಂಗಾರಪರ್ಣನಿಗೆ ಸಿಟ್ಟು ಬಂತು. ಪಾಂಡವರನ್ನು ತಡೆದು “ರಾತ್ರಿಯ ಹೊತ್ತು ಇಲ್ಲಿ ಯಕ್ಷ ಕಿನ್ನರರು ವಿಹರಿಸುತ್ತಾರೆ. ನೀವೇಕೆ ಇಲ್ಲಿ ಬಂದಿರಿ? ನಾನು ಅಂಗಾರಪರ್ಣ. ನಮ್ಮ ವಿಹಾರಕ್ಕೆ ಅಡ್ಡಿಬಂದ ನಿಮ್ಮನ್ನು ಶಿಕ್ಷಿಸುತ್ತೇನೆ’ ಎಂದನು. ಪಾಂಡವರು “ಇದು ಸಾರ್ವಜನಿಕರು ನಡೆದಾಡುವ ಸ್ಥಳ. ಗಂಗೆಯ ಪವಿತ್ರಜಲವನ್ನು ಸ್ಪರ್ಶಿಸಿ ನಾವು ಮುಂದೆ ಹೋಗುತ್ತೇವೆ. ತಡೆಯಲಿಕ್ಕೆ ನೀವು ಯಾರು?’ ಎಂದು ಕೇಳಿದರು.
ಅಂಗಾರಪರ್ಣ ಎಂಬ ಗಂಧರ್ವನೊಬ್ಬನಿದ್ದ. ಅವನು ಕುಬೇರನ ಪುತ್ರ. ಅವನ ರಥ ಬೆಂಕಿಯಂತೆ ಪ್ರಕಾಶಮಾನವಾಗಿ ಬೆಳಗುತ್ತಿದ್ದುದರಿಂದ ಅವನಿಗೆ ಅಂಗಾರಪರ್ಣ ಎಂಬ ಹೆಸರಿತ್ತು. ಅವನು ಸುಂದರನೂ, ಚಾಕ್ಷುಷೀ, ವಿದ್ಯೆಯಲ್ಲಿ ನಿಪುಣನೂ ಆಗಿದ್ದ. ಚಾಕ್ಷುಷೀ ಎಂದರೆ ದೂರದರ್ಶಿತ್ವ. ಈ ಮಂತ್ರವನ್ನು ಜಪಿಸಿ ಮೂರುಲೋಕದಲ್ಲಿಯ ಯಾವುದೇ ವಸ್ತು, ಸಂಗತಿಯನ್ನು ತನ್ನಿಚ್ಛೆಯಂತೆ ತಿಳಿದುಕೊಳ್ಳಬಹುದಿತ್ತು. ಚಾಕ್ಷುಷೀ ವಿದ್ಯೆಯನ್ನು ಪಡೆಯಲು ಆರು ತಿಂಗಳ ಕಾಲ ಒಂಟಿಗಾಲಲ್ಲಿ ನಿಂತು ತಪಸ್ಸು ಮಾಡಬೇಕಿತ್ತು. ಈ ಅಪರೂಪದ ವಿದ್ಯೆಯನ್ನು ಮನುವು ಚಂದ್ರನಿಗೂ, ಚಂದ್ರನು, ವಿಶ್ವಾವಸು ಎಂಬ ಗಂಧರ್ವನಿಗೂ ಕೊಟ್ಟಿದ್ದನು. ವಿಶ್ವಾವಸುವು ಗಂಧರ್ವರಾಜನಾದ ಅಂಗಾರಪರ್ಣನ ತಪಸ್ಸಿಗೆ ಮೆಚ್ಚಿ, ಇದನ್ನು ಉಪದೇಶಿಸಿದ್ದನು.
ಒಮ್ಮೆ ಅಂಗಾರ ಪರ್ಣ ಗಂಗಾನದಿಯ ತೀರದಲ್ಲಿದ್ದ ಸುಂದರ ವನದಲ್ಲಿ ಪತ್ನಿಯರೊಡನೆ ಜಲಕ್ರೀಡೆಯಾಡುತ್ತಿದ್ದನು. ರಾತ್ರಿಯ ಹೊತ್ತು. ಹಾಲ ಬೆಳದಿಂಗಳು ಹಾಸಿತ್ತು. ಅದೇ ಸಮಯದಲ್ಲಿ ಪಾಂಡವರು ಅಲ್ಲಿಗೆ ಬಂದರು. ದ್ರೌಪದೀ ಸ್ವಯಂವರದಲ್ಲಿ ಪಾಲ್ಗೊಳ್ಳಲು ಏಕ ಚಕ್ರನಗರದಿಂದ ಹೊರಟ ಅವರು ಕಿರುದಾರಿ, ಕಾಡುಮೇಡು, ರಾಜಮಾರ್ಗ ಎನ್ನದೇ ಹಗಲಿರುಳೂ ಒಂದೇಸಮನೆ ನಡೆಯುತ್ತ, ಅಲ್ಲಿಗೆ ಬಂದುಮುಟ್ಟಿದ್ದರು. ತಾನು ಪತ್ನಿಯರೊಡನೆ ಸಂತಸದಿಂದಿದ್ದಾಗ ಭಂಗ ತಂದದ್ದಕ್ಕೆ ಅಂಗಾರಪರ್ಣನಿಗೆ ಸಿಟ್ಟು ಬಂತು. ಅವರನ್ನು ತಡೆದು “ರಾತ್ರಿಯ ಹೊತ್ತು ಇಲ್ಲಿ ಯಕ್ಷ ಗಂಧರ್ವ ಕಿನ್ನರರು ವಿಹರಿಸುತ್ತಾರೆ. ನೀವೇಕೆ ಇಲ್ಲಿ ಬಂದಿರಿ? ನಾನು ಅಂಗಾರಪರ್ಣ. ನಮ್ಮ ವಿಹಾರಕ್ಕೆ ಅಡ್ಡಿಬಂದ ನಿಮ್ಮನ್ನು ಶಿಕ್ಷಿಸುತ್ತೇನೆ’ ಎಂದನು. ಪಾಂಡವರು “ಇದು ಸಾರ್ವಜನಿಕರು ನಡೆದಾಡುವ ಸ್ಥಳ. ಗಂಗೆಯ ಪವಿತ್ರಜಲವನ್ನು ಸ್ಪರ್ಶಿಸಿ ನಾವು ಮುಂದೆ ಹೋಗುತ್ತೇವೆ. ತಡೆಯಲಿಕ್ಕೆ ನೀವು ಯಾರು?’ ಎಂದು ಕೇಳಿದರು.
ಅಂಗಾರಪರ್ಣ ಕೋಪಗೊಂಡು “ಹುಲುಮಾನವರೆ, ನಮ್ಮನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ. ನಾವು ಗಂಧರ್ವರು. ನಿಮಗೆ ತಕ್ಕ ಪಾಠಕಲಿಸುತ್ತೇನೆ’ ಎಂದು ಅವರ ಮೇಲೆ ಬಾಣಗಳ ಸುರಿಮಳೆಗರೆದ. ಕೋಪಗೊಂಡ ಅರ್ಜುನ “ಎಲೈ ಗಂಧರ್ವನೆ, ನಿನ್ನ ಅಹಂಕಾರ ಅತಿಯಾಯಿತು. ಪ್ರಯಾಣಿಕರಾದ ನಮ್ಮ ಹಕ್ಕನ್ನು ಕಸಿದುಕೊಳ್ಳಲೂ ನಿನಗೆ ಅಧಿಕಾರವಿಲ್ಲ. ಇದೋ ನಿನಗೆ ನಾನೂ ಬುದ್ಧಿಕಲಿಸುತ್ತೇನೆ’ ಎಂದು ಅಲ್ಲೇ ಇರುವ ಒಂದು ಮರದ ತುಂಡನ್ನು ಅಭಿಮಂತ್ರಿಸಿ, ಆಗ್ನೇಯಾಸ್ತ್ರವಾಗಿಸಿ ಅದನ್ನು ಪ್ರಯೋಗಿಸಿದ. ಅದು ಅಂಗಾರಪರ್ಣನ ರಥವನ್ನು ಸುಟ್ಟುಹಾಕಿತು. ಆಗ ಕೆಳಗೆ ಬಿದ್ದ ಗಂಧರ್ವನನ್ನು ಅರ್ಜುನ ಬಂಧಿಸಿ ಎಳೆದುಕೊಂಡು ಬಂದು ಧರ್ಮರಾಜನ ಎದುರು ಕೆಡವಿದ. ಅಂಗಾರಪರ್ಣನ ಮೈ ಸುಡುತ್ತಿತ್ತು. ಸಹಿಸಲಾರದೇ ಆತ ಕೂಗುತ್ತಿದ್ದ.
ಇದನ್ನೆಲ್ಲ ನೋಡುತ್ತಿದ್ದ ಆತನ ಪತ್ನಿಯರಲ್ಲೊಬ್ಬಳಾದ ಕುಂಭೀನಸಿ ಓಡಿಬಂದು ಧರ್ಮರಾಜನ ಪಾದಗಳಿಗೆ ಎರಗಿ, ಪತಿಯ ಪ್ರಾಣಭಿಕ್ಷೆಯನ್ನು ಬೇಡಿದಳು. ಮನಕರಗಿದ ಧರ್ಮರಾಜ ಗಂಧರ್ವನನ್ನು ಬಿಟ್ಟುಕಳಿಸುವಂತೆ ಅರ್ಜುನನಿಗೆ ಹೇಳಿದ. ಆಗ ಸಂತುಷ್ಟನಾದ ಅಂಗಾರಪರ್ಣ ಅರ್ಜುನ ನಿನ್ನ ಪರಾಕ್ರಮಕ್ಕೆ ಬೆರಗಾಗಿದ್ದೇನೆ. ನನ್ನಬಳಿ ಇರುವ ಅಮೋಘವಾದ ಚಾಕ್ಷುಷೀ ವಿದ್ಯೆಯನ್ನು ನಿನಗೆ ಉಪದೇಶಿಸುತ್ತೇನೆ. ಆರು ತಿಂಗಳು ತಪಸ್ಸಿನಿಂದ ಪಡೆಯಬೇಕಾದುದನ್ನು ತಕ್ಷಣದಲ್ಲಿಯೇ ನಿನಗೆ ಕೊಡುತ್ತೇನೆ’ ಎಂದು ಅದನ್ನು ಉಪದೇಶಿಸಿದ. ಅರ್ಜುನನೂ ಅದಕ್ಕೆ ಪ್ರತಿಯಾಗಿ ಗಂಧರ್ವನಿಗೆ ಆಗ್ನೇಯಾಸ್ತ್ರವನ್ನು ಉಪದೇಶಿಸಿ ಕೊಟ್ಟ. ಹೀಗೆ ಪಾಂಡವರೊಂದಿಗೆ ಸ್ನೇಹ ಮಾಡಿಕೊಂಡ ಅಂಗಾರಪರ್ಣ “ನೀವು ಧೌಮ್ಯ ಮಹರ್ಷಿಗಳನ್ನು ಗುರುವಾಗಿ ಸ್ವೀಕರಿಸಿ. ಉತ್ತಮ ಭವಿಷ್ಯ ನಿಮ್ಮದಾಗುತ್ತದೆ’ ಎಂದು ಸಲಹೆ ನೀಡಿದ. ಗಂಧರ್ವರಾಜನ ಸಲಹೆಯನ್ನು ಪಾಂಡವರು ಒಪ್ಪಿದರು.
ಅನಂತರ ಅಂಗಾರಪರ್ಣ ಅರ್ಜುನನಿಂದ ಸುಟ್ಟುಹೋದ ತನ್ನ ರಥವನ್ನು ಚಿತ್ರಚಿತ್ರವಾದ, ಅದ್ಭುತ ಪ್ರಕಾಶಮಾನವಾದ ರಥವನ್ನಾಗಿ ಹೊಸದಾಗಿ ನಿರ್ಮಾಣಮಾಡಿಕೊಂಡು, “ಚಿತ್ರರಥ’ ಎಂದು ಹೆಸರು ಬದಲಾಯಿಸಿಕೊಂಡು, ತನ್ನ ರಾಣಿಯರೊಂದಿಗೆ ಗಂಧರ್ವಲೋಕಕ್ಕೆ ಪ್ರಯಾಣಬೆಳೆಸಿದ. ಪಾಂಡವರು ಪಾಂಚಾಲ ನಗರದತ್ತ ಹೆಜ್ಜೆಹಾಕಿದರು.
– ವನರಾಗ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.