ಠಕ್ಕ ನರಿ ಮತ್ತು ಜಾಣ ಕೊಕ್ಕರೆ
Team Udayavani, Jul 6, 2017, 3:45 AM IST
ಒಂದು ಕಾಡು. ಅಲ್ಲೊಂದು ನರಿ. ಅದಕ್ಕೆ, “ತಾನೇ ಅತಿ ಬುದ್ಧಿವಂತ ಪ್ರಾಣಿ’ ಎಂಬ ಅಹಂಕಾರ. ಅದು ಸಮಯ ಸಿಕ್ಕಾಗಲೆಲ್ಲ ಇತರರನ್ನು ಹೀಯಾಳಿಸಿ, ತನ್ನ ಬುದ್ಧಿವಂತಿಕೆ ಪ್ರದರ್ಶಿಸುವುದು ಅದರ ಅಭ್ಯಾಸ. ಅದಕ್ಕೆ ಕೊಕ್ಕರೆಯೊಂದಿಗೆ ಗೆಳೆತನವಿತ್ತು.
ಒಂದು ನರಿ, ಕೊಕ್ಕರೆಯನ್ನು ಮನೆಯ ಔತಣಕೂಟಕ್ಕೆ ಆಹ್ವಾನಿಸಿತು. ಆ ದಿನ ಮಧ್ಯಾಹ್ನ ಕೊಕ್ಕರೆ ಊಟದ ಸಮಯಕ್ಕೆ ಸರಿಯಾಗಿ ನರಿಯ ಮನೆಗೆ ಬಂತು. ಭರ್ಜರಿ ಔತಣದ ನಿರೀಕ್ಷೆಯಲ್ಲಿದ್ದ ಅದು ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ.
ನರಿಯ ಮನೆಯವರೆಲ್ಲರೂ ಕೊಕ್ಕರೆಯನ್ನು ಸಂಭ್ರಮದಿಂದ ಸ್ವಾಗತಿಸಿದರು. ಅಡುಗೆ ಮನೆಯಿಂದ ಸೊಗಸಾದ ಪಾಯಸದ ವಾಸನೆ ಬರುತ್ತಿತ್ತು. ಆದರೆ ಮನೆಯವರ ಯಾರ ಮುಖದಲ್ಲೂ ಅಷ್ಟೊಂದು ಸಂತೋಷವಿರಲಿಲ್ಲ. ಕೊಕ್ಕರೆ “ಏನು ನರಿಯಣ್ಣಾ, ನಿನ್ನ ಮುಖದಲ್ಲಿ ಏನೋ ದುಗುಡವಿದೆ. ಏನಾದರೂ ತೊಂದರೆಯೆ?’ ಎಂದು ವಿಚಾರಿಸಿತು. ಅದಕ್ಕೆ ನರಿ “ಹೌದು ಕೊಕ್ಕರೆಯಣ್ಣಾ, ಮನೆಯಲ್ಲಿ ಏನೋ ತೊಂದರೆ. ಆದ್ದರಿಂದ ಔತಣಕ್ಕೆ ಪಾಯಸ ಬಿಟ್ಟು ಬೇರೆ ಏನನ್ನೂ ಕೊಡಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಬೇಸರ’ ಎಂದು ಅಲವತ್ತುಕೊಂಡಿತು. ನರಿಯ ಮಾತು ಕೇಳಿ, ಬೆಳಿಗ್ಗೆಯಿಂದ ಏನೂ ತಿನ್ನದಿದ್ದ ಕೊಕ್ಕರೆಗೆ ನಿರಾಸೆಯನ್ನು ತೋರಗೊಡದೆ, “ಪಾಯಸವಾದರೂ ಇದೆಯಲ್ಲಾ’ ಎಂದುಕೊಂಡು ನರಿಗೆ ಸಮಾಧಾನ ಹೇಳಿತು.
ನರಿ ಮತ್ತು ಕೊಕ್ಕರೆ ಊಟಕ್ಕೆ ಕುಳಿತವು. ನರಿಯಣ್ಣನ ಹೆಂಡತಿ ಎರಡು ಅಗಲವಾದ ತಟ್ಟೆಗಳಲ್ಲಿ ಘಮಘಮಿಸುವ ಬಿಸಿಯಾದ ಪಾಯಸವನ್ನು ಹರಡಿಕೊಂಡು ತಂದು ಅವುಗಳ ಮುಂದೆ ಇಟ್ಟಿತು. ನರಿ, ಕೊಕ್ಕರೆಗೆ, “ಸಂಕೋಚ ಬೇಡ. ಕೇಳಿ ಬಡಿಸಿಕೊಂಡು ಚೆನ್ನಾಗಿ ಊಟ ಮಾಡು’ ಎಂದು ಹೇಳಿ, “ಊಫ್ ಊಫ್’ ಎಂದು ಆರಿಸಿಕೊಂಡು ಸಶಬ್ದವಾಗಿ ಪಾಯಸವನ್ನು ನೆಕ್ಕಿ ಸವಿಯತೊಡಗಿತು. ಇತ್ತ ಉದ್ದ ಕೊಕ್ಕಿನ ಕೊಕ್ಕರೆಗೆ, ತಟ್ಟೆಯ ತಳದಲ್ಲಿ ತುಂಬಾ ತೆಳುವಾಗಿ ಹರಡಿಕೊಂಡಿದ್ದ ಪಾಯಸದ ಒಂದು ಗುಟುಕನ್ನೂ ಹೀರಿಕೊಳ್ಳಲಾಗಲಿಲ್ಲ. ಕೊಕ್ಕರೆ ಸಪ್ಪೆ ಮೋರೆ ಹಾಕಿಕೊಂಡು ಕುಳಿತುಕೊಂಡಿತು.
ಇತ್ತ ಪಾಯಸ ಮುಗಿಸಿದ ನರಿ, ಕೊಕ್ಕರೆಯನ್ನು ನೋಡಿ “ಏಕಣ್ಣಾ, ಪಾಯಸ ರುಚಿಸಲಿಲ್ಲವೆ?’ ಎಂದಿತು. ಅದಕ್ಕೆ ಕೊಕ್ಕರೆ “ನರಿಯಣ್ಣಾ ಪಾಯಸವೇನೋ ಚೆನ್ನಾಗಿಯೇ ಇದೆ. ಆದರೆ, ನನಗೆ ಸಕ್ಕರೆ ಖಾಯಿಲೆ ಇರುವುದರಿಂದ ಪಾಯಸ ತಿನ್ನುವುದಿಲ್ಲ’ ಎಂದಿತು. ನರಿ ಒಳಗೊಳಗೆ ನಗುತ್ತಾ, ಸಂತೈಸುವ ನಾಟಕವಾಡಿ ಕೊಕ್ಕರೆಯನ್ನು ಬೀಳ್ಕೊಟ್ಟು, ತನ್ನ ಬುದ್ಧಿವಂತಿಕೆಗೆ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿತು. ಅಷ್ಟಕ್ಕೆ ಸಮಾಧಾನಗೊಳ್ಳದ ನರಿ, ಅದರ ಬುದ್ಧಿವಂತಿಕೆ ಪ್ರಾಣಿ- ಪಕ್ಷಿಗಳಿಗೆಲ್ಲಾ ತಿಳಿಯಲೆಂದು, ಆ ಕತೆಗೆ ಉಪ್ಪು ಕಾರ ಹಚ್ಚಿ ಎಲ್ಲರಿಗೂ ಹೇಳಿ ಜಂಭಪಟ್ಟುಕೊಂಡಿತು.
ಮರುದಿನ ಕೊಕ್ಕರೆ, ನರಿಯನ್ನು ಸಂಧಿಸಿ, ಏನೂ ನಡೆದೇ ಇಲ್ಲವೇನೋ ಎಂಬಂತೆ, “ಅಣ್ಣಾ, ಮುಂದಿನ ವಾರ ನನ್ನ ಮನೆಯಲ್ಲಿ ಔತಣ ಇಟ್ಟುಕೊಳ್ಳೋಣ. ಒಳ್ಳೆಯ ಮೀನಿನ ಅಡುಗೆ ಮಾಡಿ ಬಡಿಸುತ್ತೇನೆ. ಆಗಬಹುದೆ?’ ಎಂದಿತು. ಮೀನಿನ ಹೆಸರು ಕೇಳಿಸುತ್ತಲೇ ನರಿಯ ಬಾಯಲ್ಲಿ ನೀರೂರಿ. ಔತಣಕ್ಕೆ ಬರಲು ಒಪ್ಪಿತು.
ಔತಣದ ದಿನ, ನರಿ ಬೆಳಿಗ್ಗೆಯಿಂದ ಏನೂ ತಿನ್ನದೆ ಮಧ್ಯಾಹ್ನ ಕೊಕ್ಕರೆಯ ಮನೆಗೆ ಬಂದಿತು. ಮನೆಯಲ್ಲೆಲ್ಲಾ ಮೀನಿನ ಅಡುಗೆಯ ಘಮಲು ತುಂಬಿತ್ತು. ಅದರ ವಾಸನೆಗೆ, ನರಿಯ ಬಾಯಲ್ಲಿ ನೀರೂ, ಹೊಟ್ಟೆಯಲ್ಲಿ ಹಸಿವೂ ಎರಡೂ ಹೆಚ್ಚಾದವು. ಕೊಕ್ಕರೆ, ಎರಡು ಕಡಿಮೆ ಅಗಲದ ಬಾಯಿಯುಳ್ಳ, ಉದ್ದ ಕುತ್ತಿಗೆಯ ಪಾತ್ರೆಯಲ್ಲಿ ಮೀನಿನ ಖಾದ್ಯಗಳನ್ನು ಅರ್ಧರ್ಧ ತುಂಬಿಸಿ ತಂದು ಒಂದನ್ನು ನರಿಗೆ ಕೊಟ್ಟು, ಇನ್ನೊಂದನ್ನು ತನ್ನ ಮುಂದಿಟ್ಟುಕೊಂಡು “ಸಂಕೋಚ ಬೇಡ. ಕೇಳಿ ಬಡಿಸಿಕೊಂಡು ಚೆನ್ನಾಗಿ ಊಟ ಮಾಡು ನರಿಯಣ್ಣಾ’ ಎಂದು, ತನ್ನ ಉದ್ದ ಕೊಕ್ಕಿನಿಂದ ಪಾತ್ರೆಯ ಆಳದಲ್ಲಿದ್ದ ಮೀನುಗಳನ್ನು ಅರಾಮವಾಗಿ ತಿನ್ನತೊಡಗಿತು.
ಇತ್ತ, ಪಾತ್ರೆ ಒಳಕ್ಕೆ ತನ್ನ ತಲೆಯನ್ನು ತೂರಿಸಲಾರದೆ, ಒಂದೇ ಒಂದು ಮೀನನ್ನೂ ತಿನ್ನಲಾಗಲಿಲ್ಲ. ಕೊಕ್ಕರೆಯ ಬುದ್ಧಿವಂತಿಕೆ ನರಿಗೆ ಅರ್ಥವಾಗಿತ್ತು. ತನ್ನ ಪಾಲಿನ ಊಟ ಮುಗಿಸಿ ಏನೋ ಹೇಳಲು ಬಂದ ಕೊಕ್ಕರೆಯ ಮಾತನ್ನು ಕೇಳಿಸಿಕೊಳ್ಳದೆ, ನರಿ ಊಟವನ್ನೂ ಬಿಟ್ಟು ಓಡಿಹೋಯಿತು. ನರಿಯ ಪಾಲಿನ ಊಟವನ್ನೂ ಸವಿದುಂಡ ಕೊಕ್ಕರೆ ವಿಜಯದ ನಗೆ ನಕ್ಕಿತು.
– ಡಾ. ಬಿ.ಆರ್. ಸತ್ಯನಾರಾಯಣ, ಬೆಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.