ತಿರುಗುಬಾಣ
Team Udayavani, Feb 27, 2020, 5:08 AM IST
ರಾಮು ಆಟ- ಪಾಠಗಳಲ್ಲಿ ಬಹಳ ಜಾಣ. ಅವನು ತುಂಬಾ ತುಂಟನೂ ಆಗಿದ್ದ. ಶಾಲೆಯಲ್ಲಿ ಯಾವಾಗಲೂ ಏನಾದರೊಂದು ಕೀಟಲೆ ಮಾಡುತ್ತಿರುತ್ತಿದ್ದ. ರಾಮುವಿನ ತುಂಟಾಟ ಮಿತಿಮೀರಿದಾಗೆಲ್ಲಾ ಅವನ ಅಮ್ಮನನ್ನು ಶಾಲೆಗೆ ಕರೆಸಿಕೊಳ್ಳುತ್ತಿದ್ದ ಟೀಚರ್ “ಅವನಿಗೆ ಹೊಡೆದ ಇವನನ್ನು ತಳ್ಳಿದ ನೋಟ್ಸ್ ಹರಿದ’ ಎಂಬಿತ್ಯಾದಿ ದೂರುಗಳನ್ನು ಸಲ್ಲಿಸುತ್ತಿದ್ದರು. ರಾಮುವಿಗೆ ಬುದ್ದಿ ಹೇಳಿ ಹೇಳಿ ಅವನ ತಾಯಿಗೂ ಸಾಕಾಗಿ ಹೋಗಿತ್ತು. ಈ ಮಧ್ಯೆ ರಾಮುವಿನ ವಾರ್ಷಿಕ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬೇರೆ ಬಂತು. ಎರಡು ತಿಂಗಳಷ್ಟು ದೀರ್ಘ ಸಮಯ ಇವನ ತರಲೆಗಳನ್ನು ಸಹಿಸಿಕೊಳ್ಳುವುದು ಹೇಗಪ್ಪಾ? ಎಂದು ಅವರಮ್ಮನಿಗೆ ಹೊಸ ತಲೆನೋವು ಶುರುವಾಯಿತು. ಆಗ ಅವರೊಂದು ಉಪಾಯ ಮಾಡಿದರು. ರಾಮುವನ್ನು ದೂರದಲ್ಲಿರುವ ಅಜ್ಜಿಮನೆಗೆ ಬಿಟ್ಟು ಬಂದರು.
ಊರಿಗೆ ಹೋದ ರಾಮುವಿಗೆ ಆ ಪುಟ್ಟ ಹಳ್ಳಿಯಲ್ಲಿ ಹೊಸ ಹೊಸ ಗೆಳೆಯರು ಸಿಕ್ಕಿದರು. ಅವರೊಂದಿಗೆ ದಿನವಿಡೀ ಕಾಡುಮೇಡುಗಳಲ್ಲಿ ಅಲೆದ. ಹಳ್ಳತೊರೆಗಳಲ್ಲಿ ಈಜಾಡಿ ಸಂಭ್ರಮಿಸಿದ. ಹೊಸ ಗೆಳೆಯರಿಂದ ತಾನು ಇದುವರೆಗೆ ಕೇಳಿರದ ಹೊಸಹೊಸ ಆಟಗಳನ್ನು ಕಲಿತು ಆಡಿ ನಲಿದ. ರಜೆ ಮುಗಿಯುವ ಸಮಯ ಬಂದಾಗ ಅವನನ್ನು ಕರೆದೊಯ್ಯಲು ಅಮ್ಮ ಬಂದರು. ಅಜ್ಜಿಮನೆಯಿಂದ ಹೊರಡುವಾಗ ರಾಮುವಿಗೆ ತುಂಬಾ ಬೇಸರವಾಯಿತು.
ರಾಮು ಊರಿನಿಂದ ಮನೆಗೆ ಬಂದಮೇಲೆ ಮನೆಯ ಅಟ್ಟದಲ್ಲಿದ್ದ ಹಳೆಯ ಕೊಡೆಯೊಂದನ್ನು ಹೊರ ತೆಗೆದು ಅದರ ಕಡ್ಡಿಗಳನ್ನು ಕಿತ್ತು ಅದರಿಂದ ಊರಿನಲ್ಲಿ ತಾನು ಕಲಿತಿದ್ದ ಬಿಲ್ಲು ಮತ್ತು ಬಾಣವನ್ನು ತಯಾರಿಸಿದ. ಸಣ್ಣಪುಟ್ಟ ಹಕ್ಕಿಗಳಿಗೆ, ಕೀಟಗಳಿಗೆ ಬಾಣವನ್ನು ಗುರಿಯಿಟ್ಟು ಹೊಡೆಯುತ್ತಿದ್ದ. ಬಾಣ ತಾಗಿ ಹಕ್ಕಿಗಳು ನೋವಿನಿಂದ ಕಿರುಚಿದಾಗ ರಾಮು ಸಂತಸಪಡುತ್ತಿದ್ದ. ಒಮ್ಮೆ ಅಂಗಳದಲ್ಲಿ ಒಡಾಡುತ್ತಿದ್ದ ಓತಿಕ್ಯಾತಕ್ಕೆ ಬಾಣ ಬಿಟ್ಟ. ಅದು ಗೋಡೆಗೆ ಬಡಿದು ರಾಮುವಿನ ಕಾಲಿಗೆ ಬಂದು ತಾಕಿತು. ಅವನಿಗೆ ತಾಳಲಾರದಷ್ಟು ಉರಿಯಾಯಿತು. ಅಮ್ಮ ಉರಿ ಉರಿ ಎಂದು ಅಮ್ಮನ ಬಳಿ ಓಡಿದ. ಅಮ್ಮ ಗಾಯಕ್ಕೆ ಔಷಧಿ ಹಚ್ಚಿದರು. ಆವತ್ತಿನಿಂದ ರಾಮು ಪ್ರಾಣಿಗಳನ್ನು ಹಿಂಸಿಸುವುದನ್ನು ನಿಲ್ಲಿಸಿದ.
– ಹ.ನಾ.ಸುಬ್ರಹ್ಮಣ್ಯ ಕೊಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.