ವಿರಾಟನ ಆಶ್ರಯ
Team Udayavani, Jul 20, 2017, 5:20 AM IST
ಪಾಂಡವರ ವನವಾಸದ ಅವಧಿ ಹನ್ನೆರಡು ವರ್ಷಗಳು ಕಳೆದವು. ಅವರು ವೇಷ ಮರೆಸಿಕೊಂಡು ಯಾರಿಗೂ ಗುರುತು ತಿಳಿಯದಂತೆ ಒಂದು ವರ್ಷವನ್ನು ಕಳೆಯಬೇಕಾಗಿತ್ತು. ಯುಧಿಷ್ಠಿರನು ಒಂದು ದಿನ ತಮ್ಮಂದಿರನ್ನು ಕರೆದು, ತಾವು ಅಜ್ಞಾತವಾಸದ ಅವಧಿಯನ್ನು ಎಲ್ಲಿ ಕಳೆಯಬೇಕು? ಯಾರು ಯಾರು ಯಾವ ವೇಷಗಳನ್ನು ಧರಿಸಬೇಕು? ಎಂದು ಸಮಾಲೋಚಿಸಿದ. ಮತ್ಸé ದೇಶದ ರಾಜ ವಿರಾಟ. ಅವನು ಶೂರ, ಧರ್ಮಿಷ್ಠ, ಉದಾರಿ. ಆದ್ದರಿಂದ ಅವನ ರಾಜ್ಯದಲ್ಲಿರುವುದೇ ಕ್ಷೇಮ ಎಂದು ತೀರ್ಮಾನಿಸಿದರು. ಯುಧಿಷ್ಠಿರನು ತಾನು ಬ್ರಾಹ್ಮಣನ ವೇಷವನ್ನು ಧರಿಸಿ, ಕಂಕನೆಂಬ ಹೆಸರಿನಿಂದ, ರಾಜನ ಆಸ್ಥಾನವನ್ನು ಸೇರುವೆನೆಂದನು. ಭೀಮನು ತಾನು ಅರಮನೆಯಲ್ಲಿ ಅಡುಗೆಯವನಾಗಿ “ಬಲ್ಲವ’ ಎಂಬ ಹೆಸರನ್ನು ಇಟ್ಟುಕೊಳ್ಳುವುದಾಗಿ ಹೇಳಿದ. ಅರ್ಜುನನು “ಬೃಹನ್ನಳೆ’ ಎಂಬ ಹೆಸರಿಟ್ಟುಕೊಂಡು ಹೆಂಗಸಿನ ವೇಷದಲ್ಲಿ ಅರಮನೆಯಲ್ಲಿ ಸಂಗೀತ, ನೃತ್ಯಗಳನ್ನು ಹೇಳಿಕೊಡುವೆನೆಂದ. ನಕುಲನಿಗೆ ಅಶ್ವವಿದ್ಯೆ ಚೆನ್ನಾಗಿ ತಿಳಿದಿತ್ತು. ಅವನು “ಗ್ರಂಥಿಕ’ ಎಂಬ ಹೆಸರಿನಿಂದ ವಿರಾಟ ರಾಜನ ಕುದುರೆಗಳನ್ನು ನೋಡಿಕೊಳ್ಳಲು ನಿರ್ಧರಿಸಿದ. ಸಹದೇವನು “ತಂತ್ರಿಪಾಲ’ ಎಂದು ಹೆಸರಿಟ್ಟುಕೊಂಡು ವಿರಾಟನ ಗೋರಕ್ಷಕನಾಗುತ್ತೇನೆ ಎಂದ. ದ್ರೌಪದಿಯು “ಸೈರಂಧ್ರಿ’ ಎಂದು ಹೆಸರಿಟ್ಟುಕೊಂಡು ವಿರಾಟ ರಾಜನ ಹೆಂಡತಿ ಸುದೇಷ್ಣೆಯ ಸಖೀಯಾಗುವುದಾಗಿ ಹೇಳಿದಳು.
ಪಾಂಡವರು ತಮ್ಮೊಡನೆ ಇದ್ದವರನ್ನೆಲ್ಲ ಕಳುಹಿಸಿಬಿಟ್ಟರು. ಋಷಿಗಳಿಗೆ ಮತ್ತು ತಪಸ್ವಿಗಳಾದ ಬ್ರಾಹ್ಮಣರಿಗೆ ನಮಸ್ಕಾರ ಮಾಡಿ ತಾವಷ್ಟೇ ಜನ ಮುಂದಕ್ಕೆ ಹೊರಟರು. ವಿರಾಟನಗರದ ಸ್ಮಶಾನದ ಹತ್ತಿರಕ್ಕೆ ಬಂದಾಗ ದೊಡ್ಡದೊಂದು ಬನ್ನಿ ಮರ ಕಂಡಿತು. ತಮ್ಮ ಶಸ್ತ್ರಾಸ್ತ್ರಗಳನ್ನು ಮೂಟೆ ಕಟ್ಟಿ ಅದಕ್ಕೆ ತೂಗು ಹಾಕಿದರು. ಅಲ್ಲಿದ್ದ ದನಕಾಯುವ ಹುಡುಗರಿಗೆ, “ನಮ್ಮ ತಾಯಿ ಸತ್ತುಹೋದಳು. ಸತ್ತವರ ಹೆಣವನ್ನು ಮರಕ್ಕೆ ತೂಗು ಹಾಕುವುದು ನಮ್ಮ ಸಂಪ್ರಾದಯ’ ಎಂದು ಹೇಳಿದರು. ತಮ್ಮ ತಮ್ಮಲ್ಲಿ ಕ್ರಮವಾಗಿ ಜಯ, ಜಯಂತ, ವಿಜಯ, ಜಯತ್ಸೇನ ಮತ್ತು ಜಯದ್ಬಲ ಎನ್ನುವ ಹೆಸರುಗಳನ್ನಿಟ್ಟುಕೊಂಡರು. ಅನಂತರ ವಿರಾಟನಗರವನ್ನು ಪ್ರವೇಶಿಸಿದರು.
ಒಬ್ಬೊಬ್ಬರಾಗಿ ವಿರಾಟನ ಆಸ್ಥಾನಕ್ಕೆ ಮತ್ತು ಅರಮನೆಗೆ ಬಂದರು. ಅವರು ತೀರ್ಮಾನಿಸಿದ್ದಂತೆಯೇ ಅವನ ಆಶ್ರಯದಲ್ಲಿ ಕೆಲಸಕ್ಕೆ ಸೇರಿದರು. ಸುದೇಷ್ಣೆಗೆ ದ್ರೌಪದಿಯನ್ನು ಕಂಡು ಆಶ್ಚರ್ಯವಾಯಿತು. “ನೀನು ಅಪ್ರತಿಮ ಸುಂದರಿ. ನಿನ್ನನ್ನು ಕಂಡರೆ ಅರಸನೂ ಮೋಹಿಸಿಯಾನು. ಇತರ ಗಂಡಸರೂ ನಿನ್ನನ್ನು ಮೋಹಿಸಬಹುದು’ ಎಂದು ಹೇಳಿ ಅವಳನ್ನು ತನ್ನ ಪರಿವಾರಕ್ಕೆ ಸೇರಿಸಿಕೊಳ್ಳಲು ಹಿಂಜರಿದಳು. ಆದರೆ ದ್ರೌಪದಿ, “ನನಗೆ ಐದು ಜನ ಗಂಧರ್ವರು ಪತಿಗಳು ಅವರು ಸದಾ ನನ್ನ ರಕ್ಷಣೆಗಿರುತ್ತಾರೆ. ಯಾರಾದರೂ ನನಗೆ ಅಪಚಾರ ಮಾಡಿದರೆ ಅವರ ಸಾವು ಖಂಡಿತ. ನನ್ನನ್ನು ಆದರದಿಂದ ನೋಡಿಕೊಂಡವರಿಗೆ ಒಳಿತನ್ನು ಮಾಡುತ್ತಾರೆ’ ಎಂದಳು. ಸುದೇಷ್ಣೆಯು ಅವಳನ್ನು ತನ್ನ ಪರಿವಾರದಲ್ಲಿ ಸೇರಿಸಿಕೊಂಡಳು. ಅವರೆಲ್ಲರೂ ತಾವು ಯುಧಿಷ್ಠಿರನ ಸೇವೆಯಲ್ಲಿ ಅವನ ಅರಮನೆಯಲ್ಲಿ ಇದ್ದವರು ಎಂದು ಹೇಳಿಕೊಂಡರು. ಹೀಗೆ ಪಾಂಡವರ ಆಜ್ಞಾತವಾಸ ಪ್ರಾರಂಭವಾಯಿತು.
ಹತ್ತು ತಿಂಗಳ ಕಾಲವನ್ನು ಅವರು ಹೀಗೆ ಕಳೆದರು. ಒಬ್ಬರಿಗೊಬ್ಬರು ಆಧಾರವಾಗಿ ಸಾಧ್ಯವಾದಾಗ ತಮ್ಮ ತಮ್ಮಲ್ಲಿ ಮಾತನಾಡಿಕೊಂಡು ಕಾಲ ಕಳೆದರು.
– ಪ್ರೊ. ಎಲ್. ಎನ್ ಶೇಷಗಿರಿರಾವ್
ಅವರ “ಕಿರಿಯರ ಭಾಗವತ’ ಪುಸ್ತಕದಿಂದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.