ಮಡಕೆ ಏಕೆ ಬಿಸಿಯಾಗುತ್ತಿಲ್ಲ?
Team Udayavani, Jul 18, 2019, 5:00 AM IST
ಒಂದು ವಾರ ಬೀರಬಲ್ ಅರಮನೆಗೆ ಹೋಗಲೇ ಇಲ್ಲ. ರಾಜ ಅಕ್ಬರ್, ಬೀರಬಲ್ಲನಿಗೆ ಏನಾಗಿದೆಯೆಂದು ನೋಡಿಕೊಂಡು ಬರಲು ರಾಜಭಟರನ್ನು ಕಳಿಸಿದ. ಬೀರಬಲ್ಲ “ನಾನು, ಒಂದು ವಾರದಿಂದ ಅನ್ನ ಮಾಡಲು ಪ್ರಯತ್ನಿಸುತ್ತಿದ್ದೇನೆ. ಮಡಕೆ ಬಿಸಿಯಾಗುತ್ತಲೇ ಇಲ್ಲ. ಅನ್ನ ಸಿದ್ಧವಾದ ಮೇಲೆಯೇ ಅರಮನೆಗೆ ಬರುತ್ತೇನೆ’ ಎಂದು ಹೇಳಿಕಳಿಸಿದ!
ರಾಜ್ಯದಲ್ಲಿ ಈ ಬಾರಿ ತುಂಬಾ ಚಳಿಯಿತ್ತು. ರಾಜ ಅಕ್ಬರನ ಮನದಲ್ಲಿ ಒಂದು ವಿಚಾರ ಮೂಡಿತು. ಅವನು ತನ್ನ ಮನದಿಂಗಿತವನ್ನು ಬೀರ್‌ಬಲ್‌ನಲ್ಲಿ ಹೇಳಿದ, “ಮಂತ್ರಿಗಳೇ, ಈ ಕೊರೆಯುವ ಚಳಿಯಲ್ಲಿ ಒಂದು ಸ್ಪರ್ಧೆಯನ್ನು ಏರ್ಪಡಿಸುವ ಇಚ್ಚೆಯಾಗಿದೆ. ಇಡೀ ರಾತ್ರಿ ನಮ್ಮ ಉದ್ಯಾನದ ಕೊಳದ ನೀರ ಮಧ್ಯೆ ಕುಳಿತುಕೊಳ್ಳುವುದು ಸವಾಲಿನ ಕೆಲಸವೇ ಸರಿ. ಈ ಸವಾಲನ್ನು ಪೂರ್ತಿಗೊಳಿಸಿದವರಿಗೆ ಒಂದು ಸಾವಿರ ಬಂಗಾರದ ನಾಣ್ಯಗಳನ್ನು ಕೊಡೋಣವೆಂದು ನಿರ್ಧರಿಸಿದ್ದೇನೆ. ಹಾಗೆಂದು, ಕೂಡಲೆ ಡಂಗುರ ಸಾರಿಸಿ.’.
ಮಹಾರಾಜರ ಅಪ್ಪಣೆಯಂತೆ ಮರುದಿನ ಮುಂಜಾನೆ ಡಂಗುರ ಸಾರಲಾಯಿತು. ಇದನ್ನು ರಾಮು ಕೇಳಿಸಿಕೊಂಡ. ಕಡುಬಡವನಾಗಿದ್ದ ಅವನು ತನ್ನ ಹೊಟ್ಟೆಪಾಡಿಗಾಗಿ, ಬಹುಮಾನದ ಮೇಲಿನ ಆಸೆಗೆ ಅರಸರ ಸವಾಲನ್ನು ಎದುರಿಸಲು ಸಿದ್ಧನಾದ. ಅಂದು ರಾತ್ರಿಯೇ ಅರಮನೆಯ ಉದ್ಯಾನವನದಲ್ಲಿ ಪರೀಕ್ಷೆಗೆ ವೇದಿಕೆ ಸಿದ್ಧವಾಯಿತು. ಕೊಳದ ಸುತ್ತಲೂ ರಾಜಭಟರು ನಿಂತಿದ್ದರು. ಅವರೆದುರೇ ರಾಮು ಒಂದು ಲಂಗೋಟಿಯನ್ನು ಮಾತ್ರ ಧರಿಸಿ ಕೊಳದೊಳಕ್ಕೆ ಇಳಿದ. ಕುತ್ತಿಗೆಯವರೆಗೂ ಮುಳುಗಿ ಮುಖ ಮಾತ್ರ ಕಾಣುವಂತೆ ಕುಳಿತ.
ಚಳಿ ವಿಪರೀತವಾಗಿತ್ತು. ಕೊಳದ ನೀರು ಮಂಜುಗಡ್ಡೆಯಷ್ಟು ತಣ್ಣಗಿತ್ತು. ರಾಮು ಅವಡುಗಚ್ಚಿ ಇಡೀ ರಾತ್ರಿ ಕೊಳದಲ್ಲೇ ಕಳೆದ. ಬೆಳಗಾಯಿತು. ಕಾವಲಿಗಿದ್ದ ಭಟರು ರಾಮುನನ್ನು ಬಾದಶಹ ಅಕºರ್ ಬಳಿ ಕರೆ ತಂದರು. ಅವನು, ಗಡಗಡ ನಡುಗುತ್ತಲೇ ತೊದಲುತ್ತಾ ನುಡಿದ “ಪ್ರಭು, ತಮ್ಮ ಪರೀಕ್ಷೆಯಲ್ಲಿ ನಾನು ವಿಜೇತನಾಗಿದ್ದೇನೆ. ದಯವಿಟ್ಟು ನನಗೆ ಒಂದು ಸಾವಿರ ಸುವರ್ಣ ನಾಣ್ಯಗಳನ್ನು ಕೊಡಿ.’ ಮಹಾರಾಜರಿಗೆ ಅಪಾರ ಅಚ್ಚರಿಯಾಯಿತು. “ಅಂಥ ಕಟಕಟ ಛಳಿಯಲ್ಲಿಯೂ ನೀನು ಹೇಗೆ ನೀರಿನಲ್ಲಿ ಕಳೆದೆ?’ ಎಂದವರು ಕೇಳಿದರು. ರಾಮು “ರಾತ್ರಿಯಿಡೀ ಅರಮನೆಯ ದೀಪಗಳನ್ನು ನೋಡುತ್ತಾ ಕಾಲ ಕಳೆದೆ’ ಎಂದನು.
ಈ ಮಾತು ಕೇಳುತ್ತಲೇ ಬಾದಷಹನ ಮುಖ ಕೋಪದಿಂದ ಕೆಂಪಗಾಯಿತು. ಅವನು “ಓಹೋ! ಅರಮನೆಯ ದೀಪಗಳ ಉಷ್ಟತೆಯಿಂದ ಕೊಳದ ನೀರು ಬೆಚ್ಚಗಾಗಿದೆ. ಆದ್ದರಿಂದಲೇ ಚಳಿ ನಿನಗೆ ತಾಕಿರಲಿಕ್ಕಿಲ್ಲ. ನಿನ್ನದೇನೂ ದೊಡ್ಡ ಸಾಧನೆಯಲ್ಲ. ಹಾಗಾಗಿ ನಿನಗೆ ಕಿಲುಬು ಕಾಸನ್ನೂ ಕೊಡುವುದಿಲ್ಲ. ಹೊರನಡೆ ಇಲ್ಲಿಂದ!’ ಎಂದ ಸಿಟ್ಟಿನಿಂದ. ರಾಮುವಿನ ಜಂಘಾಬಲವೇ ಉಡುಗಿ ಹೋಯಿತು. ಅನ್ಯಾಯವಾಗಿ ನನ್ನ ಶ್ರಮ ವ್ಯರ್ಥವಾಯಿತಲ್ಲ ಎಂದು ಅವನು ಹಲುಬಿದ.
ಅವನು ತನ್ನ ವಿಧಿಯನ್ನು ಹಳಿಯುತ್ತಾ ಅರಮನೆಯಿಂದ ಹೊರಬಂದ. ಅನತಿ ದೂರದಲ್ಲಿ ಬೀರಬಲ್ ಸಿಕ್ಕ. ಅವನು ರಾಮುವಿನ ಬೇಸರಕ್ಕೆ ಕಾರಣ ಕೇಳಿದ. ಅವನು ಬೀರಬಲ್ಲನಿಗೆ ನಡೆದುದೆಲ್ಲವನ್ನೂ ಅಳುತ್ತಲೇ ಹೇಳಿದ. ಬೀರಬಲ್ ರಾಮುವಿನ ಕಣ್ಣೊರೆಸಿ ನಿನಗೆ ಬಹುಮಾನ ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ಕೊಟ್ಟ.
ಇದಾದ ಮೇಲೆ ವಾರಗಳ ಕಾಲ ಬೀರಬಲ್ ಅರಮನೆಗೆ ಹೋಗಲೇ ಇಲ್ಲ. ಅಕºರ್, ಏನಾಗಿದೆಯೆಂದು ನೋಡಿಕೊಂಡು ಬರಲು ಬೀರಬಲ್ಲನ ಮನೆಗೆ ರಾಜಭಟರನ್ನು ಕಳಿಸಿದ. ಬೀರಬಲ್ಲ ತಾನು ಒಂದು ವಾರದಿಂದ ಅನ್ನ ಮಾಡಲು ಪ್ರಯತ್ನಿಸುತ್ತಿದ್ದೇನೆ, ಅಕ್ಕಿ ಬಿಸಿಯಾಗುತ್ತಲೇ ಇಲ್ಲ. ಅನ್ನ ಸಿದ್ಧವಾದ ಮೇಲೆಯೇ ಅರಮನೆಗೆ ಬರುತ್ತೇನೆ’ ಎಂದು ಹೇಳಿಕಳಿಸಿದ. ಅಕ್ಬರನಿಗೆ ಗೊಂದಲವಾಯಿತು. ಮರುದಿನ ತಾನೇ ಖುದ್ದಾಗಿ ಬೀರಬಲ್ಲನ ಮನೆಗೆ ಹೋದ. ಅಲ್ಲಿ ನೋಡಿದರೆ ಮನೆಯ ಹಿತ್ತಲ ಮರದ ಕೊಂಬೆಯ ಮೇಲೆ ಅನ್ನದ ಪಾತ್ರೆಯನ್ನು ನೇತು ಹಾಕಿದ್ದ. ಅದರ ಕೆಳಗೆ ನೆಲದ ಮೇಲೆ ಕಟ್ಟಿಗೆಗಳನ್ನು ಒಟ್ಟು ಮಾಡಿ ಬೆಂಕಿಯನ್ನು ಹಾಕಿದ್ದ.
ಅಕºರ್ “ಇದೇನು ತಮಾಷೆ ಬೀರಬಲ್ಲ. ಬೆಂಕಿಗೂ ಪಾತ್ರೆಗೂ ನಡುವೆ ಇಷ್ಟು ಅಂತರವಿದೆಯಲ್ಲ. ಪಾತ್ರೆಗೆ ಶಾಖ ಹೇಗೆ ತಗುಲುತ್ತದೆ? ಶಾಖ ತಾಗದೆ ಅನ್ನ ಹೇಗೆ ತಾನೇ ಬೇಯುತ್ತದೆ’ ಎಂದು ಕೇಳಿದ. “ಶಾಖ ತಗಲುತ್ತದೆ, ಮಹಾಪ್ರಭು’ ಎಂದ ಬೀರಬಲ್. ಅವನ ಮಾತಿಗೆ ಸೈನಿಕರೆಲ್ಲರೂ ನಕ್ಕರು. ಬೀರಬಲ್ ಸಮಾಧಾನದಿಂದ ನುಡಿದ “ಕಳೆದ ವಾರ ಬಡವನೊಬ್ಬ ನಿಮ್ಮ ಪಂದ್ಯದಲ್ಲಿ ಗೆದ್ದಾಗ, ಕೊಳದಿಂದ ಎಷ್ಟೋ ದೂರದಲ್ಲಿದ್ದ ದೀಪದ ಕಂಬದಿಂದ ಶಾಖ ಪಡೆದ ಎಂದು ಬಹುಮಾನ ಕೊಡದೇ ಕಳಿಸಿದರಲ್ಲ… ಹಾಗೆಯೇ ಇದೂ ಕೂಡಾ’. ಬೀರಬಲ್ಲನ ಮಾತು ಕೇಳಿ ಅಕºರನಿಗೆ ಬೀರಬಲ್ಲನ ಮಾತಿನ ಹಿಂದಿನ ಅರ್ಥ ಗೊತ್ತಾಯಿತು. ಅಕ್ಬರ್, ಬೀರಬಲ್‌ನನ್ನು ಅಪ್ಪಿಕೊಂಡು ಆ ಕೂಡಲೆ ಅಸ್ಥಾನಕ್ಕೆ ಕರೆದೊಯ್ದ. ರಾಮುನನ್ನು ಆಸ್ಥಾನಕ್ಕೆ ಕರೆಸಿ ತಾನು ಘೋಷಿಸಿದಂತೆ ಒಂದು ಸಾವಿರ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟು ಕಳಿಸಿದ. ರಾಮು ಕೃತಜ್ಞತೆಯಿಂದ ಬೀರಬಲ್‌ನಿಗೆ ವಂದಿಸಿದ.
ನಿರೂಪಣೆ- ಕೆ. ಶ್ರೀನಿವಾಸ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.