ಮೈಸೂರು ದಸರಾ ಮಹೋತ್ಸವ; ರತ್ನ ಖಚಿತ ಸ್ವರ್ಣ ಸಿಂಹಾಸನ
Team Udayavani, Sep 28, 2019, 3:10 AM IST
ರತ್ನ ಖಚಿತ ಸ್ವರ್ಣ ಸಿಂಹಾಸನ ನೋಡುವುದು ಕಣ್ಣಿಗೆಷ್ಟು ಹಬ್ಬವೋ ಅದನ್ನು ಜೋಡಿಸುವುದೂ ಅಷ್ಟೇ ನಾಜೂಕಿನ ಕೆಲಸ. ರಾಜಮನೆತನದವರ ನವರಾತ್ರಿ ಉತ್ಸವದ ಧಾರ್ಮಿಕ ಆಚರಣೆಗಾಗಿ ಅಂಬಾವಿಲಾಸ ಅರಮನೆಯಲ್ಲಿ ಜೋಡಿಸಲಾಗುವ ಈ ಸಿಂಹಾಸನವನ್ನು ಕಟ್ಟುವುದೇ ಒಂದು ಸುಂದರ ಸಾಹಸ. ಈ ಕೆಲಸದಲ್ಲಿ ಗೆಜ್ಜಗಳ್ಳಿ ಗ್ರಾಮಸ್ಥರು ಸಿದ್ಧಹಸ್ತರು…
ಮೈಸೂರು ಅರಮನೆ ಅಂದಾಕ್ಷಣ, ನಮ್ಮೊಳಗೆ ಅನೇಕ ಚಿತ್ರಗಳು ಕುಳಿತುಬಿಡುತ್ತವೆ. ದೊಡ್ಡ ಅರಮನೆ, ಕಮಾನುಗಳು, ಮಹಾರಾಜರ ಖಡ್ಗಗಳು, ರವಿವರ್ಮನ ಕಲಾಕೃತಿಗಳು… ಹೀಗೆ ಲೆಕ್ಕವೇ ಇಲ್ಲ. ದಸರಾ ಎನ್ನುವ ಹೊತ್ತಿಗೆ, ಹೀಗೆ ನೆನಪಿನಲ್ಲಿ ಉಳಿಯುವ ಪಟ್ಟಿ ದೊಡ್ಡದಾಗುತ್ತಾ, ಫಳಗುಟ್ಟುವ ಸಿಂಹಾಸನದ ಚಿತ್ರವೊಂದು ಮನಸೋಲುವಂತೆ ಮಾಡುತ್ತದೆ. ಅದೇ ರತ್ನಖಚಿತ ಸ್ವರ್ಣ ಸಿಂಹಾಸನ. ರಾಜಮನೆತನದವರ ನವರಾತ್ರಿ ಉತ್ಸವದ ಧಾರ್ಮಿಕ ಆಚರಣೆಗಾಗಿ ಅಂಬಾವಿಲಾಸ ಅರಮನೆಯಲ್ಲಿ ಜೋಡಿಸಲಾಗುವ ಈ ಸಿಂಹಾಸನವನ್ನು ಕಟ್ಟುವುದೇ ಒಂದು ಸುಂದರ ಸಾಹಸ.
ಶತಮಾನಗಳಿಂದಲೂ ರಾಜ ಮಹಾರಾಜರು ಇದೇ ಸಿಂಹಾಸನಾ ರೂಢರಾಗಿ ನವರಾತ್ರಿಯ ದಿನ ಖಾಸಗಿ ದರ್ಬಾರು ನಡೆಸಿಕೊಂಡು ಬಂದಿದ್ದಾರೆ. ರಾಜಪ್ರಭುತ್ವ ಅಳಿದು ಪ್ರಜಾ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಈ ದಿನಗಳಲ್ಲೂ ಅರಮನೆಯಲ್ಲಿ ಸಾಂಪ್ರದಾಯಿಕ ಪದ್ಧತಿಗಳನ್ನು ಕೈಬಿಟ್ಟಿಲ್ಲ. ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಇದೇ ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸುತ್ತಾರೆ. ಯುವರಾಜ ಯದುವೀರರು ಹಾಗೆ ಆಸೀನರಾಗುವ ಆ ಸಿಂಹಾಸನವನ್ನು ಕಟ್ಟುವುದು, ಮೈಸೂರು ತಾಲೂಕಿನ ಗೆಜ್ಜಗಳ್ಳಿಯ ಗ್ರಾಮಸ್ಥರು!
ನಾಜೂಕಿನ ಕೆಲಸ: ರತ್ನ ಖಚಿತ ಸ್ವರ್ಣ ಸಿಂಹಾಸನ ನೋಡುವುದು ಕಣ್ಣಿಗೆಷ್ಟು ಹಬ್ಬವೋ ಅದನ್ನು ಜೋಡಿಸುವುದೂ ಅಷ್ಟೇ ನಾಜೂಕಿನ ಕೆಲಸ. ಈ ಕೆಲಸದಲ್ಲಿ ಗೆಜ್ಜಗಳ್ಳಿ ಗ್ರಾಮಸ್ಥರು ಸಿದ್ಧಹಸ್ತರು. ಅದಕ್ಕಾಗಿಯೇ ರಾಜ ಮಹಾರಾಜರುಗಳ ಕಾಲದಿಂದಲೂ ನವರಾತ್ರಿ ಆರಂಭಕ್ಕೂ ಮೂರು ತಿಂಗಳ ಮೊದಲೇ ಅರಮನೆಯಿಂದ ಪರಿಚಾರಕರು, ಗೆಜ್ಜಗಳ್ಳಿಗೆ ಹೋಗಿ ವೀಳ್ಯ ಕೊಟ್ಟು ಆಹ್ವಾನ ನೀಡಿ ಬರುತ್ತಿದ್ದರು. ರಾಜ ಪುರೋಹಿತರು ನಿಗದಿಪಡಿಸಿದ ಶುಭ ಮುಹೂರ್ತದಲ್ಲಿ ಗೆಜ್ಜಗಳ್ಳಿಯ ಗ್ರಾಮಸ್ಥರು ಬಂದು ಸ್ವರ್ಣ ಸಿಂಹಾಸನವನ್ನು ಜೋಡಿಸಿ ಹೋಗುತ್ತಿದ್ದರು. ಸಿಂಹಾಸನ ಜೋಡಣೆಗೆ ಬರುವ ಗೆಜ್ಜಗಳ್ಳಿಯ ಜನರಿಗೆ ರಾಜಮರ್ಯಾದೆ ನೀಡಿ, ಭಕ್ಷೀಸು ಕೊಟ್ಟು, ಕಳುಹಿಸಲಾಗುತ್ತಿತ್ತು.
ಮಹಾರಾಜ್ರು ಹೇಳಿ ಕಳಿಸವ್ರೆ…: ಸಿಂಹಾಸನ ಜೋಡಣೆ ಮಾತ್ರವಲ್ಲದೆ, ಖಾಸಗಿ ದರ್ಬಾರ್‌ಗೆ ಅಗತ್ಯವಾದ ಕಾರ್ಯಗಳಾದ ಅರಮನೆ ಆನೆ, ಕುದುರೆ, ಎತ್ತು, ಹಸು ಮೊದಲಾದವುಗಳನ್ನು ನೋಡಿಕೊಳ್ಳಲು ಈ ಹಿಂದೆ ಗೆಜ್ಜಗಳ್ಳಿಯ ನೂರಾರು ಗ್ರಾಮಸ್ಥರು ಪಾಲ್ಗೊಳ್ಳುತ್ತಿದ್ದರು. ರಾಜರು ಭಕ್ಷೀಸು ನೀಡುತ್ತಾರೆ ಎಂಬುದಕ್ಕಿಂತಲೂ ಅರಮನೆಯ ಒಳಗೆ ನೋಡಿ ಬರಬಹುದು ಎಂಬ ಕುತೂಹಲದಿಂದಲೇ ಊರಿನ ಬಹಳಷ್ಟು ಜನ ಸಿಂಹಾಸನ ಜೋಡಣೆಗೆ ಹೋಗುತ್ತಿದ್ದರಂತೆ. “ಮಹಾರಾಜರು ಹೇಳಿ ಕಳಿಸವ್ರೆ’ ಎಂಬ ಕಾರಣಕ್ಕೆ ಇಡೀ ಊರಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿರುತ್ತಿತ್ತು.
“ನಾನು ಕಂಡಂತೆ ನಮ್ಮ ತಂದೆಯ ಕಾಲದಿಂದಲೂ ಊರಿನ ಪಟೇಲರಾದ ಮಹದೇವಪ್ಪ ಅವರ ಮನೆಗೆ ಅರಮನೆಯಿಂದ ಹೇಳಿ ಕಳುಹಿಸುತ್ತಿದ್ದರು. ಅವರು ಗ್ರಾಮದಿಂದ 15 ರಿಂದ 20 ಜನರನ್ನು ಕರೆದೊಯ್ಯುತ್ತಿದ್ದರು. ಅರಮನೆ ಕೆಲಸಗಳನ್ನು ಮಾಡಿಕೊಂಡು ಅಲ್ಲೇ ಅಡುಗೆ ಮಾಡಿ, ಊಟ ಸವಿದು, ಉಳಿಯುತ್ತಿದ್ದಂತೆ. ಆಗಿನ ಕಾಲಕ್ಕೆ ಅರಮನೆಯಲ್ಲಿ ದಿನಕ್ಕೆ 20 ರಿಂದ 50 ರೂ. ಕೊಡುತ್ತಿದ್ದರು. ಪಟೇಲ್ ಮಹದೇವಪ್ಪ ಅವರ ಜೊತೆಗೆ ಕೋಗಲ್ ಮಹದೇವಪ್ಪ, ಈರಪ್ಪ, ಭುಜಂಗಪ್ಪ, ಮೂಗಪ್ಪನ ಮಹದೇವಪ್ಪ ಮೊದಲಾದವರು ಹೋಗುತ್ತಿದ್ದರು. ನಾನು ಕೂಡ ಮೂರು ವರ್ಷ ಸಿಂಹಾಸನ ಜೋಡಣೆಗೆ ಹೋಗಿದ್ದೇನೆ’ ಎನ್ನುತ್ತಾರೆ, ಗೆಜ್ಜಗಳ್ಳಿ ಗ್ರಾ.ಪಂ. ಸದಸ್ಯ ಲೋಕೇಶ್.
ಜೋಡಣೆ ವೇಳೆ ಬಿಗಿ ಭದ್ರತೆ: ನವರಾತ್ರಿ ಸಂದರ್ಭದಲ್ಲಿ ರಾಜವಂಶಸ್ಥರು ನಡೆಸುವ ಖಾಸಗಿ ದರ್ಬಾರ್‌ನಲ್ಲಿ ಸಿಂಹಾಸನಾರೋಹಣಕ್ಕೆ ಬಳಸುವ ರತ್ನಖಚಿತ ಸ್ವರ್ಣ ಸಿಂಹಾಸನವನ್ನು ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರಾಜವಂಶಸ್ಥರ ಉಪಸ್ಥಿತಿಯಲ್ಲಿ ಅರಮನೆಯ ನೆಲಮಾಳಿಗೆಯಲ್ಲಿರುವ ಭದ್ರತಾಕೊಠಡಿಯಿಂದ ಹೊರತೆಗೆಯಲಾಗುತ್ತದೆ. ಈ ವೇಳೆ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಅರಮನೆಯೊಳಗೆ ಪ್ರವೇಶವಿರುವುದಿಲ್ಲ. ಬೆಳಗ್ಗೆಯಿಂದಲೇ ನವಗ್ರಹ ಹೋಮ, ಇತರ ಶಾಂತಿ ಪೂಜೆಯೊಂದಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಬೆಳಗ್ಗೆ ಅಂಬಾವಿಲಾಸ ಅರಮನೆಯಲ್ಲಿ ಸಿಂಹಾಸನ ಜೋಡಣೆಗೆ ಚಾಲನೆ ದೊರೆಯುತ್ತದೆ. ಪಟ್ಟದ ಆನೆ, ಹಸು, ಕುದುರೆಗಳು ಈ ಸುಂದರ ಸಂದರ್ಭಕ್ಕೆ ಸಾಕ್ಷಿಯಾಗುವುದು ವಿಶೇಷ.
ಜೋಡಣೆ ಹೇಗೆ?: ಈ ಸಿಂಹಾಸನವನ್ನು ಪ್ರಮುಖವಾಗಿ 13 ಭಾಗಗಳಾಗಿ ವಿಂಗಡಿಸಿಟ್ಟಿರಲಾಗುತ್ತದೆ. “ಆಸನದ ಒಂದು ಭಾಗ, ಅದನ್ನು ಹತ್ತಲು ಬಳಸುವ ಮೆಟ್ಟಿಲು ಮತ್ತೂಂದು ಭಾಗವಾಗಿಯೂ ಹಾಗೂ ಇದಕ್ಕೆ ಕಲಶವಿಟ್ಟಂತೆ ಸಿಂಗಾರಗೊಳಿಸುವ ಛತ್ರಿ ಮೂರನೇ ಭಾಗವಾಗಿ ಪ್ರತ್ಯೇಕವಾಗಿ ಇರಿಸಿದ್ದು, ಈ ಎಲ್ಲವನ್ನೂ ಜೋಡಿಸಲಾಗುವುದು. ಜೋಡಣಾ ಪ್ರಕ್ರಿಯೆಯನ್ನು “ಸ್ವರ್ಣಾಸನ ಜೋಡಣಾಕಾರ್ಯ’ ಎಂದು ಕರೆಯಲಾಗುತ್ತದೆ. ನವರಾತ್ರಿಯ ಮೊದಲ ದಿನ ರಾಜವಂಶಸ್ಥರು ಇದಕ್ಕೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಸಿಂಹದ ಆಕೃತಿಯನ್ನು ಇದಕ್ಕೆ ಜೋಡಿಸಲಾಗುತ್ತದೆ. ಆಗಲೇ ಇದು ಪರಿಪೂರ್ಣ ಸಿಂಹಾಸನ. ನವಮಿಯಂದು ರಾತ್ರಿ ಸಿಂಹಾಸನವನ್ನು ವಿಸರ್ಜನೆ ಮಾಡುವುದು ಇಲ್ಲಿನ ಕ್ರಮ.
ಮಣ್ಣಲ್ಲಿ ಹೂತಿದ್ದ ಸಿಂಹಾಸನ: ಅರಮನೆಯಲ್ಲಿರುವ ರತ್ನಖಚಿತ ಸಿಂಹಾಸನಕ್ಕೆ ಪೌರಾಣಿಕ, ಚಾರಿತ್ರಿಕ ಸ್ಪರ್ಶವೂ ಇದೆ. ಇದನ್ನು ಪಾಂಡವರ ಕಾಲದ್ದೆಂದು ಹೇಳಲಾಗುತ್ತದೆ. ಕಂಪುಲ ರಾಜನು ಇದನ್ನು ಪೆನಗೊಂಡದಲ್ಲಿ ಹೂತಿಟ್ಟಾಗ, ವಿದ್ಯಾರಣ್ಯರ ದಿವ್ಯದೃಷ್ಟಿಗೆ ಈ ಸಿಂಹಾಸನದ ಗೋಚರ ಸಿಗುತ್ತದೆ. ವಿಜಯನಗರವನ್ನು ಸಂಸ್ಥಾಪಿಸಿದ್ದ ಹರಿಹರನಿಗೆ ಅವರು ಈ ವಿಚಾರವನ್ನು ಮುಟ್ಟಿಸಿ, ಅದನ್ನು ಹೊರತೆಗೆಯಲಾಯಿತು ಎನ್ನುತ್ತದೆ ಇತಿಹಾಸ. ನಂತರ ಈ ಸಿಂಹಾಸನ ಆನೆಗೊಂದಿಯಲ್ಲಿ 150 ವರ್ಷವಿದ್ದು, ಯಾವಾಗ ವಿಜಯನಗರ ಸಾಮ್ರಾಜ್ಯ ಪತನವಾಯಿತೋ, ಆಗ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ರಾಯಭಾರಿಗೆ ಒಲಿಯಿತು. ರಾಜ ಒಡೆಯರ್, ಶ್ರೀರಂಗಪಟ್ಟಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಾಗ, ಸಿಂಹಾಸನ ಮೈಸೂರಿನ ಅರಮನೆಯ ಪಾಲಾಯಿತು ಎನ್ನುವುದು ಚರಿತ್ರೆಯ ದಾಖಲೆಗಳಲ್ಲಿ ಉಲ್ಲೇಖವಾದ ಕತೆ.
* ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ಕಾಣಬಹುದು. ನಾಲ್ಕು ಸಿಂಹಗಳು ಈ ಸಿಂಹಾಸನದ ವಿಶಿಷ್ಟ ಶೋಭೆ. ಕುದುರೆ, ಹಂಸ, ನಾಗದೇವತೆಯ ಚಿತ್ರ, ಸ್ವಸ್ತಿಕ್ ಅನ್ನೂ ಇಲ್ಲಿ ಚಿತ್ರಿಸಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಶ್ಲೋಕವಿರುವುದು ವಿಶೇಷ.
* ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.