ನಿಪುಣ ವೇಷಗಾರ
Team Udayavani, Dec 14, 2019, 6:11 AM IST
ಹಿಂದೆ ರಾಜರ ಕಾಲದಲ್ಲಿ ಶತ್ರುಗಳನ್ನು ಕೊಲ್ಲಲು, ಗೋಸುಂಬೆಯ ಜೊಲ್ಲನ್ನು ಬಳಸುತ್ತಿದ್ದರಂತೆ. ಅದನ್ನು ನೋಡಿದರೆ, ಕೆಡುಕು ಅನ್ನೋದು ರೈತನ ಮನಸೊಳಗೆ ತುಂಬಿಹೋಗಿತ್ತು. ಇದನ್ನೆಲ್ಲ ಹೇಳುತ್ತಲೇ, ಆತ ಅಲ್ಲೇ ಇದ್ದ ಕಲ್ಲಿನಿಂದ, ಅದನ್ನು ಕೊಲ್ಲಲು ಮುಂದಾದ…
ತೆಳು ಕಾಡಿನ ನಡುವೆ ಕಪ್ಪು ಹಾದಿ. ಪ್ರಾಣಿಗಳ ಫೋಟೊ ತೆಗೆಯಲೆಂದೇ ಗೆಳೆಯ ಹರೀಶ್ ಬಡಿಗೇರ್ ಜೊತೆ ಹೊರಟಿದ್ದೆ. ಸುಮಾರು ಅಂಗೈಅಗಲದಷ್ಟು ಪುಟ್ಟದಾದ ಗೋಸುಂಬೆ ಮರಿಯೊಂದು, ಅಂಬೆಗಾಲಿಡುತ್ತಾ ಹೋಗುತ್ತಿದ್ದ ದೃಶ್ಯ ಕಣ್ಣಿಗೆ ಬಿತ್ತು. “ಗೋಸುಂಬೆ, ಗೋಸುಂಬೆ…!’ಗೆಳೆಯ ಅಚ್ಚರಿಯ ಉದ್ಗಾರ ತೆಗೆದ. ಹಾಗೆ ಕೂಗಿದ್ದು, ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ರೈತನ ಕಿವಿಗೆ ಬಿತ್ತೇನೋ… ಆತ ಓಡೋಡಿ ಬಂದ. “ಸ್ವಾಮಿ, ಅದನ್ನು ಜೀವಂತ ಉಳಿಸಬೇಡಿ. ಕೂಡಲೇ ಚಚ್ಚಿ ಹಾಕಿ.
ಅದು ವಿಷಕಾರಿ ಪ್ರಾಣಿ’ ಎಂದು ಕೂಗುತ್ತಾ, ಕೋಲು ಹಿಡಿದು ಬಂದ. ಅವನ ಆವೇಶಕ್ಕೆ ತಡೆಹಾಕಿ, ಕೈಯಲ್ಲಿದ್ದ ಕೋಲನ್ನು ಕಸಿದುಕೊಂಡೆ. “ಯಾಕಾಗಿ ಅದನ್ನು ಕೊಲ್ಲಬೇಕು?’, ಅಂತ ಕೇಳಿದೆ. ಆತನಿಗೆ ಯಾರೋ ಹೇಳಿದ್ದರಂತೆ. ಹಿಂದೆ ರಾಜರ ಕಾಲದಲ್ಲಿ ಶತ್ರುಗಳನ್ನು ಕೊಲ್ಲಲು, ಗೋಸುಂಬೆಯ ಜೊಲ್ಲನ್ನು ಬಳಸುತ್ತಿದ್ದರಂತೆ. ಅದನ್ನು ನೋಡಿದರೆ, ಕೆಡುಕು ಅನ್ನೋದು ಅವನ ಮನಸೊಳಗೆ ತುಂಬಿಹೋಗಿತ್ತು. ಇದನ್ನೆಲ್ಲ ಹೇಳುತ್ತಲೇ, ಆತ ಅಲ್ಲೇ ಇದ್ದ ಕಲ್ಲಿನಿಂದ, ಅದನ್ನು ಕೊಲ್ಲಲು ಮುಂದಾದ. ಅವನಿಗೆ ತಿಳಿ ಹೇಳಿ ಕಳಿಸುವುದರೊಳಗೆ ಸಾಕು ಸಾಕಾಯಿತು.
ಗೋಸುಂಬೆಯನ್ನು ಹತ್ತಿರದಿಂದ ನೋಡಿದಾಗ, ಹೊಸ ಪ್ರಾಣಿಯನ್ನು ನೋಡುತ್ತಿರುವ ಅನುಭವ ಉಂಟಾಯಿತು. ಆ ಪ್ರಾಣಿಯ ಹತ್ತಿರ ಹೋಗಿ ಕೈಯಲ್ಲಿದ್ದ ಕ್ಯಾಮೆರಾ ಕವರ್‌ನ ಹ್ಯಾಂಡಲ್ ಅನ್ನು ಹತ್ತಿರ ಹಿಡಿದಾಗ ತನ್ನ ಪುಟ್ಟದಾದ ಕಾಲುಗಳಿಂದ ಬಿಗಿಯಾಗಿ ಹಿಡಿದುಕೊಂಡಿತು. ಬೇಲಿಗಳ, ಕಲ್ಲು ಬಂಡೆಗಳ ಸಂದಿಗಳಲ್ಲಿ ಸಾಮಾನ್ಯವಾಗಿ ಕಾಣುವ ಓತಿಕ್ಯಾತದ ನೆಂಟನಂತೆ ತೋರುವ ಈ ಗೋಸುಂಬೆ, ಗಾಢವಾದ ಹಸಿರು ಬಣ್ಣದಿಂದ ರಚಿಸಿದ ಒಂದು ಕಲಾಕೃತಿಯಂತೆ ತೋರುತ್ತಿತ್ತು.
ಅಬ್ಬಬ್ಬಾ, ನಾಲಿಗೆಯೇ..!: ಅದನ್ನು ನೆಲದ ಮೇಲೆ ಬಿಟ್ಟು, ಅದರ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಿದೆವು. ಗೋಸುಂಬೆ ಮರಿಯ ಎದುರಿಗೆ ಒಂದು ಇರುವೆ ಚಲಿಸುತ್ತಿತ್ತು. ಅಲ್ಲಿಯವರಗೆ ತೆಪ್ಪಗೆ ಬಿದ್ದುಕೊಂಡಿದ್ದ ಗೋಸುಂಬೆ, ಇರುವೆಯು ಕಣ್ಣಿಗೆ ಬೀಳುತ್ತಿದ್ದಂತೆ ತನ್ನ ಉದ್ದನೆಯ ನಾಲಿಗೆಯನ್ನು ವೇಗದಿಂದ ಹೊರಚಾಚಿತು! ನಾಲಿಗೆ ತುದಿಯಲ್ಲಿನ ಅಂಟು ಪದಾರ್ಥಕ್ಕೆ ಆ ಇರುವೆ ಅಂಟಿಕೊಂಡಿತು. ಛಕ್ಕನೆ ಹೊರಚಾಚಿದ್ದ ನಾಲಿಗೆ, ಬೇಟೆ ಮುಗಿದೊಡನೆ ಅಷ್ಟೇ ವೇಗದಲ್ಲಿ ಬಾಯಿಯೊಳಗೆ ಸೇರಿತು.
ನಾಲಿಗೆಯ ಉದ್ದ ಎಷ್ಟಿತ್ತೆಂದರೆ, ಅಂದಾಜು ಅದರ ದೇಹದ ಮೂರರಷ್ಟಿರಬಹುದು! ನಾಲಿಗೆ, ಕಂದು ಮಿಶ್ರಿತ ನಸುಗೆಂಪಿನಿಂದ ಕೂಡಿತ್ತು. ಆದರೆ, ಆ ದೃಶ್ಯದ ಫೋಟೊ ಕ್ಲಿಕ್ಕಿಸಲು ಸಾಧ್ಯವಾಗಲಿಲ್ಲ. ಆ ದೃಶ್ಯದ ಫೋಟೊ ಸಲುವಾಗಿ ನನ್ನ ಸ್ನೇಹಿತ ಇರುವೆಗಳನ್ನು ಹಿಡಿದು ತಂದು ತಂದು, ಅದರ ಮುಂದೆ ಹಾಕುತ್ತಿದ್ದ. ಆದರೆ, ಅದು ತನ್ನ ಚಕ್ರಾಕಾರದ ಕಣ್ಣುಗಳನ್ನು ಮಾತ್ರ ತಿರುಗಿಸುತ್ತಾ ಗಂಭೀರವಾಗಿ ನಿಂತು ಕೊಂಡಿತ್ತಲ್ಲದೆ, ಆ ಇರುವೆಗಳನ್ನು ಕಬಳಿಸುವ ಪ್ರಯತ್ನಕ್ಕೆ ಮನಸ್ಸು ಮಾಡಲಿಲ್ಲ.
ಸ್ಟ್ರಾಂಗು “ಉಗುರು’: ಗೋಸುಂಬೆಯು ಶಾಸ್ತ್ರೀಯವಾಗಿ “ಕೆಮಿಲಿಯೋನಿಡೆ’ ಎಂಬ ಕುಟುಂಬಕ್ಕೆ ಸೇರಿದೆ. ಇದರ ದೇಹ ಸುಮಾರು 37 ಸೆಂ.ಮೀ.ಗಳಷ್ಟು ಉದ್ದವಿದ್ದು, ಚರ್ಮವು ಒಣ ಹುರುಪೆಗಳಿಂದ ಕೂಡಿರುತ್ತದೆ. ಕಾಲುಗಳಲ್ಲಿ ಐದು ಬೆರಳುಗಳಿದ್ದು, ಅವುಗಳ ತುದಿಗಳಲ್ಲಿ ಮೊನಚಾದ ಉಗುರುಗಳಿರುತ್ತವೆ. ಇವು ಮರವನ್ನೇರಲು ನೆರವಾಗುತ್ತವೆ.
ಕಣ್ಣುಗುಡ್ಡೆ ಅದ್ಭುತ ಕ್ಯಾಮೆರಾ: ಇದರ ಕಣ್ಣುಗುಡ್ಡೆ ಸ್ವತಂತ್ರವಾಗಿದ್ದು, ಎಲ್ಲ ದಿಕ್ಕುಗಳಲ್ಲಿಯೂ ತಿರುಗಬಲ್ಲ ಸಾಮರ್ಥ್ಯ ಪಡೆದಿದೆ. ಇದರಿಂದಾಗಿ ಗೋಸುಂಬೆ ಏಕಕಾಲದಲ್ಲಿ ಎರಡು ಬೇರೆ ಬೇರೆ ವಸ್ತುಗಳನ್ನು ನೋಡಬಲ್ಲದು. ಇದು ಮಾಂಸಾಹಾರಿ. ತನ್ನ ಅಂಟು ಅಂಟಾದ, ಹಾಗೂ ಬಹಳ ಉದ್ದದ ನಾಲಿಗೆ ಹೊರಚಾಚಿ, ಆಹಾರ ಭಕ್ಷಿಸುತ್ತದೆ. ಸಣ್ಣಗಾತ್ರದ ಕೀಟಗಳನ್ನು ತಿನ್ನುತ್ತದೆಯಾದರೂ, ದೊಡ್ಡ ದೇಹದ ಗೋಸುಂಬೆಗಳು ಚಿಕ್ಕ ಪಕ್ಷಿಗಳನ್ನು ಕಬಳಿಸುತ್ತವೆ.
ಗೋಸುಂಬೆಗಳು ತಮ್ಮ ಬೇಟೆಯನ್ನು ಒಂದು ಸೆಕೆಂಡಿನ ನೂರನೇ ಒಂದು ಭಾಗದಷ್ಟು ವೇಗದಲ್ಲಿ ಆಕ್ರಮಿಸುತ್ತವೆ. ಮೈ ಬಣ್ಣ ಬದಲಿಸುವುದಕ್ಕೆ ಗೋಸುಂಬೆ ಕುಖ್ಯಾತಿ ಹೊಂದಿದ್ದು, ಸುತ್ತಲಿನ ಪರಿಸರಕ್ಕೆ ಹೊಂದುವಂಥ ಬಣ್ಣವನ್ನು ತಳೆಯುತ್ತದೆ. ಇದನ್ನು ಪರೀಕ್ಷಿಸಲು ಗೋಸುಂಬೆ ಮರಿಯನ್ನು ಬೇರೆ ಬೇರೆ ವಸ್ತುಗಳ ಮೇಲೆ ಬಿಟ್ಟು ನೋಡಿದೆ. ಯಾವುದೇ ಬದಲಾವಣೆ ಕಾಣಲಿಲ್ಲ. ವಿಶೇಷ ಸಂದರ್ಭಗಳಲ್ಲಿ ಮಾತ್ರ.
ಅಂದರೆ ಶತ್ರುಗಳ ಸುಳಿವು ಸಿಕ್ಕಾಗ, ಸಿಟ್ಟಿಗೆದ್ದಾಗ ಅಥವಾ ಹೆದರಿದಾಗ, ತನಗೆ ಬೇಕಾದ ಆಹಾರ ಪಡೆಯುವಾಗ ಬಣ್ಣ ಬದಲಿಸುತ್ತವೆಂದು ತಿಳಿದು ಸುಮ್ಮನಾದೆವು. ಎದುರಿಗಿದ್ದಾಗ ಒಂದು ಮಾತಾಡಿ, ಹಿಂದಿನಿಂದ ಮತ್ತೂಂದು ಮಾತನಾಡುವ ನಂಬಿಕೆಗೆ ಅರ್ಹರಲ್ಲದ ವ್ಯಕ್ತಿಗಳನ್ನು ಸಾಮಾನ್ಯವಾಗಿ ಗೋಸುಂಬೆಗೆ ಹೋಲಿಸುವ ವಾಡಿಕೆ ಇದೆ. ನಾಲ್ಕೆçದು ಫೋಟೋ ಕ್ಲಿಕ್ಕಿಸಿ, ಗೋಸುಂಬೆಯ ಕಂಪ್ಲೀಟ್ ದರ್ಶನ ಮುಗಿದ ಮೇಲೆ, ಆ ಮರಿಯನ್ನು ರಸ್ತೆ ಬದಿಯ ಗಿಡದ ಮೇಲೆ ಬಿಟ್ಟು ಬಂದಾಗಲೇ ಮನಸ್ಸಿಗೆ ಸಮಾಧಾನವಾಯಿತು.
* ಚಿತ್ರ- ಲೇಖನ: ನಾಮದೇವ ಕಾಗದಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.