ಜಿಂಬಾಬ್ವೆಯಂತಾಯಿತೇ ಆಸ್ಟ್ರೇಲಿಯಾ?
Team Udayavani, Oct 21, 2017, 12:24 PM IST
ವಿಶ್ವ ಕ್ರಿಕೆಟ್‌ನ ಅತ್ಯಂತ ಬಲಿಷ್ಠ ತಂಡ ಎಂದಾಕ್ಷಣ ನೆನಪಾಗುವುದೇ ಆಸ್ಟ್ರೇಲಿಯಾ. ಎಲ್ಲಾ ತಂಡಗಳನ್ನು ಸೋಲಿಸಿ ಮೆರೆಯುತ್ತಿದ ಆಸ್ಟ್ರೇಲಿಯಾ ಈಗ ಮೇಲಿಂದ ಮೇಲೆ ಸೋಲುಗಳನ್ನು ಕಾಣುತ್ತಿದೆ. ಆರಂಭದಲ್ಲಿ ಗೆಲ್ಲುವವರಂತೆಯೇ ಆಡುವ ಆಸ್ಟ್ರೇಲಿಯನ್ನರು ಅರ್ಧ ಪಂದ್ಯದ ನಂತರ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅದೇ ಕಾರಣದಿಂದ ಸೋಲಿನ ಸರಪಳಿಗೆ ಸಿಕ್ಕಿಕೊಳ್ಳುತ್ತಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಭಾರತ ಆಡಿದ ಪಂದ್ಯಗಳನ್ನೆಲ್ಲ ಗೆದ್ದಾಗ ಭಾರತದ ಕ್ರಿಕೆಟ್ ಅಭಿಮಾನಿಗಳು ತೀರಾ ಹರ್ಷೋದ್ಗಾರ ಮಾಡಿರಲಿಕ್ಕಿಲ್ಲ. ಅವರಿಗೆ ಗೊತ್ತಿತ್ತು, ಸದ್ಯದ ಮಟ್ಟಿಗೆ ಶ್ರೀಲಂಕಾ ದುರ್ಬಲವಾಗಿದೆ. ಶ್ರೀಲಂಕಾದ ನೆಲದಲ್ಲೂ ಅದನ್ನು ಸುಲಭವಾಗಿ ಸೋಲಿಸಬಹುದು. ಭಾರತದ ಫಾರಂ ಕೂಡ “ಗಾಯ ಮುಕ್ತವಾಗಿದ್ದರಿಂದ ಶ್ರೀಲಂಕಾಕ್ಕೆ ಶೂನ್ಯವುಣಿಸುವುದು ನಿಕ್ಕಿಯಾಗಿತ್ತು. ದಾಖಲೆಗಳ ವೃದ್ಧಿಗೆ ಆ ಪ್ರವಾಸ ಸಹಾಯ ಮಾಡಿತು. ಇದೇ ವೇಳೆ ಭಾರತ ಸ್ವದೇಶಕ್ಕೆ ಮರಳಿ ತನ್ನೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡುವುದು ಹೆಚ್ಚು ಪೈಪೋಟಿಯಿಂದ ಕೂಡಿರುತ್ತದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆಸೀಸ್ ತಂಡ ಅದನ್ನು ಸುಳ್ಳು ಮಾಡಿತು.
ಏಕದಿನ ಸರಣಿಯ ಒಂದು ಪಂದ್ಯವೂ ಸೇರಿದಂತೆ ಏಳು ಪಂದ್ಯಗಳಲ್ಲಿ ಕಾಂಗರೂ ಪಡೆ ಎರಡು ಪಂದ್ಯ ಗೆದ್ದಿದೆ. ಮುಖ್ಯವಾಗಿ, ಟಿ20 ಸರಣಿ 1-1ರಿಂದ ಸಮಬಲದಲ್ಲಿ ಮುಕ್ತಾಯವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದಾದರೂ ಆಸ್ಟ್ರೇಲಿಯಾದ ಹೀನಾಯ ಏಕದಿನ ಸರಣಿ ಸೋಲು ಊಹೆಗೆ ನಿಲುಕದ್ದು. ನಿಜಕ್ಕಾದರೆ, ನಾಲ್ಕನೇ ಪಂದ್ಯದಲ್ಲಿ ಕೂಡ ಭಾರತ ತನ್ನ ಪ್ರಥಮ ಪಂಕ್ತಿಯ ಭುವನೇಶ್ವರ್ ಕುಮಾರ್ ಹಾಗೂ ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ಕೊಡದೆ ಆಡಿಸಿದ್ದರೆ ಫಲಿತಾಂಶ ಭಿನ್ನವಾಗಿರುವ ಸಾಧ್ಯತೆಯಿತ್ತು. ಶಮಿ ಹಾಗೂ ಉಮೇಶ್ ಯಾದವ್ ತಮ್ಮ ನಡುವಿನ 20 ಓವರ್‌ಗಳಲ್ಲಿ 133 ರನ್ ಬಿಟ್ಟುಕೊಟ್ಟಿದ್ದು 21 ರನ್‌ಗಳ ಸೋಲಿನಲ್ಲಿ ಎದ್ದುಕಾಣುತ್ತದೆ. ಆ ಮಟ್ಟಿಗೆ ಎರಡನೇ ಟಿ20 ಪಂದ್ಯದ ಆಸ್ಟ್ರೇಲಿಯಾ ಗೆಲುವು ಮಾತ್ರ ಅಧಿಕಾರಯುತವಾದುದು. ಏಕೆ ಹೀಗೆ?
ನೆಪಗಳು ಗಟ್ಟಿಯಾದುದಲ್ಲ!
ಈ ಮೊದಲು ಭಾರತದ ಹವಾಮಾನ, ಪಿಚ್‌ಗಳು ವಿದೇಶಿ ಆಟಗಾರರಿಗೆ ಅಪರಿಚಿತ. ಇದಕ್ಕೆ ಹೊಂದಿಕೊಳ್ಳುವುದಕ್ಕೆ ಸಾಧ್ಯವಾಗದ ಕಾರಣ ಕಷ್ಟವಾಯಿತು ಎಂಬ ನೆಪ ಹೇಳಿದ್ದರೂ ನಡೆಯುತ್ತಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಆಗಮನದ ನಂತರ ಇಂಥಾ ನೆಪಗಳು ನಿರ್ಗಮಿಸಲೇಬೇಕಾಗಿದೆ! ಕಳೆದ 8 ವರ್ಷಗಳಿಂದ ಐಪಿಎಲ್ ಆಡುತ್ತಿರುವ ಡೇವಿಡ್ ವಾರ್ನರ್ ಇಲ್ಲಿ ನಾಲ್ಕು ಸಾವಿರಕ್ಕೂ ರನ್ ಕೂಡಿಸಿದ್ದಾರೆ. ಬೌಲರ್ ಜೇಮ್ಸ್ ಫಾಕ್ನರ್ ಎರಡೆರಡು ಬಾರಿ ಐದು ವಿಕೆಟ್ ಗೊಂಚಲನ್ನೇ ಕತ್ತರಿಸಿದ್ದಾರೆ. ಅಬ್ಬಬ್ಟಾ, ಮ್ಯಾಕ್ಸ್‌ವೆಲ್‌ರ ಐಪಿಎಲ್ ಸ್ಟ್ರೈಕ್‌ರೇಟ್ 164. ಇತ್ತೀಚೆಗೆ ನಡೆದ ಏಕದಿನ ಸರಣಿಯ ಐದು ಪಂದ್ಯಗಳ ನಂತರ ನೋಡಿದರೆ 88ರ ಸರಾಸರಿಯಲ್ಲಿ ನಾಥನ್ ಕೋಲ್ಟ್ ನಿಲ್ ಎರಡು ವಿಕೆಟ್, 10.32ರ ಸರಾಸರಿಯಲ್ಲಿ ಫಾಕ್ನರ್ ಕೂಡ ಅಷ್ಟೇ ವಿಕೆಟ್ ಪಡೆದರೆ ಮ್ಯಾಕ್ಸ್‌ವೆಲ್‌ರ ರನ್ ರೇಟ್ 27ರ ಸರಾಸರಿಯಲ್ಲಿ. ವಾರ್ನರ್‌ರ ರನ್ ಕೇವಲ 9.5 ಸರಾಸರಿಯಲ್ಲಿ ಬಂದಿದ್ದರೆ ತಂಡ ಸುಧಾರಿಸಿಕೊಳ್ಳುವುದು ಕಷ್ಟ ಕಷ್ಟ.
ಭಾರತದಲ್ಲಿ ಏಕದಿನ ಸರಣಿಗೆ ಇಳಿಯುವ ಮುನ್ನ ಆಸ್ಟ್ರೇಲಿಯಾದ ಒನ್‌ಡೇ ರ್‍ಯಾಂಕಿಂಗ್ ಕಳಪೆಯಾಗಿರಲಿಲ್ಲ. ದಕ್ಷಿಣ ಆಫ್ರಿಕಾದ ಅಗ್ರ ಸ್ಥಾನದ ನಂತರ ಕಾಂಗರೂಗಳಿಗೇ ಸ್ಥಾನ ಮೀಸಲಿತ್ತು. ಆನಂತರದ ಮೂರನೇ ಸ್ಥಾನದಲ್ಲಿ ಭಾರತವಿತ್ತು. ಆದರೆ ಆಸೀಸ್ ಪಡೆ ಆತ್ಮವಿಶ್ವಾಸದ ಓಝೊàನ್ ಪದರವನ್ನು ಕಳಚಿಕೊಂಡು ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯನ್ನು 1-1ರಿಂದ ಸಮ ಮಾಡಿಕೊಳ್ಳುವಲ್ಲಿಯೇ ಏದುಸಿರು ಬಿಟ್ಟು ಭಾರತಕ್ಕೆ ಬಂದಿತ್ತು.
ಇನ್ನೊಂದು ರೀತಿಯಲ್ಲಿ ನೋಡಿದರೆ ಆಸ್ಟ್ರೇಲಿಯಾದ ಏಕದಿನ ಪ್ರದರ್ಶನ ಸಾಮರ್ಥ್ಯ ಸ್ವದೇಶೇತರ ನೆಲದಲ್ಲಿ ಇತ್ತೀಚೆಗೆ ನಿರಾಶಾದಾಯಕವಾಗಿದೆ. ಆಡಿದ 15 ಪಂದ್ಯಗಳಲ್ಲಿ 12 ಸೋಲು ಸಣ್ಣದಲ್ಲ. ಆ ಮಟ್ಟಿಗೆ ಭಾರತದಲ್ಲಿ ಅದು ಸೋಲು ಕಂಡ ಪ್ರತಿ ಪಂದ್ಯದಲ್ಲಿ ಕನಿಷ್ಠ ಯಾವುದೋ ಒಂದು ಹಂತದಲ್ಲಿ ಅದು ಮೇಲುಗೈ ಸಾಧಿಸಿದ್ದುಂಟು. ಹಾಗಿದ್ದೂ ಯಾವ ಪಂದ್ಯವನ್ನು ಅವರು ಉಳಿಸಿಕೊಳ್ಳಲಿಲ್ಲ ಎಂಬುದಕ್ಕೆ ಅದರ ಮಧ್ಯಮ ಕ್ರಮಾಂಕವನ್ನೇ ದೂರಬೇಕೇನೋ. ಸ್ಟೀವ್ ಸ್ಮಿತ್‌ರಂಥ ನಾಯಕ ಭಾರತದ ರನ್ ಮೆಷಿನ್ ಪಿಚ್‌ನಲ್ಲಿ ಕೇವಲ 2 ಅರ್ಧ ಶತಕಗಳ ಸಮೇತ 142 ರನ್ ಗಳಿಸಿದರೆ ಸಾಕೇ? ಸರಣಿಯಲ್ಲಿ ಕಾಂಗರೂ ಪರ ಡೇವಿಡ್ ವಾರ್ನರ್ ಹಾಗೂ ಏರಾನ್ ಫಿಂಚ್ ಏಕೈಕ ಶತಕಗಳನ್ನು ಬಾರಿಸಿದರು. ವಾರ್ನರ್ ಶತಕ ನಾಲ್ಕನೇ ಪಂದ್ಯದ ದುರ್ಬಲ ಭಾರತದ ಬೌಲಿಂಗ್ ಪಡೆಯ ವಿರುದ್ಧ ಬಂದಿದ್ದು ಎಂಬಿತ್ಯಾದಿ ಮಾಹಿತಿಗಳೆಲ್ಲ ಆಸ್ಟ್ರೇಲಿಯಾದ ಕಡೆ ನಕಾರಾತ್ಮಕ ನೋಟ ಬೀರುತ್ತವೆ!
ಮಧ್ಯಮ ಕ್ರಮಾಂಕ ಗಢ ಗಢ !
ಈ ಬಗ್ಗೆ ವಿಶ್ಲೇಷಣೆಗಳು ನಡೆದಿವೆ. ವಿಕೆಟ್‌ಗಳು ಸೈಕಲ್ ಸ್ಟಾಂಡ್‌ನ ಸೈಕಲ್ ಒಂದರ ಮೇಲೊಂದು ಬೀಳುವಂತೆ ಬಿದ್ದಿವೆ ಎಂಬ ನವಜೋತ್‌ಸಿಂಗ್ ಸಿಧು ಅವರ ಹಾಸ್ಯ ಈಗ ಆಸ್ಟ್ರೇಲಿಯಾಕ್ಕೆ ಅನ್ವಯಿಸುತ್ತದೆ. ಭಾರತದ ಎದುರಿನ ಎರಡನೇ ಪಂದ್ಯದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು 63 ರನ್‌ಗೆ ಆರು ವಿಕೆಟ್ ಕಳೆದುಕೊಂಡು ಕೈ ಚೆಲ್ಲಿದರೆ ನಾಲ್ಕು ದಿನಗಳ ಮುನ್ನ ಡಕ್‌ವರ್ತ್ ಲೂಯಿಸ್ ಗುರಿಯಲ್ಲೂ 109ಕ್ಕೆ 8 ವಿಕೆಟ್ ಕಳೆದುಕೊಳ್ಳಬೇಕಿತ್ತೇ? ಹಿಂದೆ ಹೋಗಿ, ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 118ಕ್ಕೆ 8 ವಿಕೆಟ್ ಪತಪತನೆ ಬಿದ್ದಿದ್ದು, ಕಾಣುತ್ತದೆ. ಇತ್ತ ಫೆಬ್ರವರಿಗೆ ಬಂದರೆ ಈಡನ್ ಪಾರ್ಕ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 67 ರನ್ ಜೋಡಿಸುವಷ್ಟರಲ್ಲಿ 6 ವಿಕೆಟ್ ಪತನ, ಛೇ! ಪಟ್ಟಿ ಇಷ್ಟಕ್ಕೆ ಮುಗಿಯುವುದಿಲ್ಲ… 12 ತಿಂಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಅವರೂರಿನಲ್ಲಿ 121 ರನ್ ಸಂಪಾದಿಸುವಲ್ಲಿ 8 ವಿಕೆಟ್ ನಷ್ಟ, ಸೋಲು. ಈ ರೀತಿ ಮಧ್ಯದ ಕ್ರಮಾಂಕ ದಿಟ್ಟವಾಗಿ ನಿಲ್ಲದೇ ಹೋಗಿದ್ದೇ ವಿದೇಶಗಳಲ್ಲಿನ ಸತತ 10 ಏಕದಿನ ಸೋಲಿಗೆ ಕಾರಣವಾಗಿದೆ.
ತಕ್ಷಣಕ್ಕೆ ಸಮಸ್ಯೆ ಬಗೆಹರಿಸಬೇಕೆಂದಿದ್ದರೆ ಆಸ್ಟ್ರೇಲಿಯಾ ಸ್ವದೇಶದಲ್ಲಿ ಮಾತ್ರ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡುತ್ತೇನೆ ಎಂದು ನಿರ್ಧರಿಸಬಹುದಷ್ಟೇ! ಅಂಕಿ ಅಂಶಗಳ ಪ್ರಕಾರ ಸ್ವದೇಶದಲ್ಲಿ ಈಗಲೂ ಕಾಂಗರೂ ಪಡೆ ಬಲಿಷ್ಟ. ನವೆಂಬರ್ 2014ರಿಂದ ಆರಂಭಿಸಿ ಈವರೆಗೆ ಸ್ವಂತ ನೆಲದಲ್ಲಿ ಆಸ್ಟ್ರೇಲಿಯಾ ಫಲಿತಾಂಶ ಕಂಡ 27 ಪಂದ್ಯಗಳನ್ನು ಆಡಿದೆ. ನಂಬಿ, ಅದರಲ್ಲಿ ಅದು 25 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ!
ಹಿಂಬಾಲಿಸಿದ ಸೋಲು!
ವಾಸ್ತವವಾಗಿ ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಮೂರು ಟೆಸ್ಟ್ ಗಳ ಸರಣಿಯನ್ನಾಡಲು ಭಾರತಕ್ಕೆ ಬಂದಿತ್ತು. ಆ ಸಂದರ್ಭದಲ್ಲಿ ಅದು 2-0ಯ ಮುಖಭಂಗವನ್ನೂ ಅನುಭವಿಸಿತ್ತು. ಉಳಿದ ಏಕದಿನ, ಟಿ20 ಸರಣಿ ಮುಯ್ಯಿ ತೀರಿಸಲು ಸೆಪ್ಟೆಂಬರ್ ಅವಧಿಯಲ್ಲಿ ಎರಡನೇ ಬಾರಿ ಬಂದಿತ್ತು. ಫಲಿತಾಂಶ ಮಾತ್ರ ಒಂದೇ! ಅಷ್ಟೇಕೆ, ಈ ಬಾರಿಯ ಟಿ20 ಸರಣಿ ಸಮಗೊಂಡಿದೆ ಎಂಬುದನ್ನು ಬಿಟ್ಟರೆ ಈ ವಿಭಾಗದಲ್ಲಿಯೂ ಭಾರತವು ಆಸ್ಟ್ರೇಲಿಯಾ ಎದುರು ಚಾಂಪಿಯನ್ ಪ್ರದರ್ಶನ ತೋರಿದೆ. ಈ ಟಿ20 ಸರಣಿಗೂ ಮುನ್ನ ಆಡಿದ 13 ಪಂದ್ಯದಲ್ಲಿ 9 ಬಾರಿ ಕಾಂಗರೂ ಪರಾಜಿತವಾಗಿತ್ತು. ಅದಕ್ಕೂ ಹಿಂದಿನ ಸತತ ಆರು ಪಂದ್ಯವನ್ನು ಸೋತಿತ್ತು. ಸ್ವದೇಶದಲ್ಲಿ ಕೊಹ್ಲಿ ಪಡೆ ವಿರುದ್ಧ 3-0ಯ ಹೀನಾಯ ಪರಾಭವವನ್ನೂ ಕಂಡಿತ್ತು. ಭಾರತದಲ್ಲಿ ಈ ಮುನ್ನ ಆಡಿದ್ದ ಮೂರು ಟಿ20 ಪಂದ್ಯಗಳನ್ನು 2007, 2013, 2016ರಲ್ಲಿ ಸೋತಿತ್ತು.
ಈ ಎಲ್ಲ ಹಿನ್ನಡೆಗಳ ನಡುವೆಯೂ ಬೆಳ್ಳಿ ರೇಖೆಯೊಂದು ಕಾಣಿಸಿದೆ. ಗುವಾಹತಿನಲ್ಲಿ ಕಾಂಗರೂ ಪಡೆ ಟಿ20 ಪಂದ್ಯ ಗೆದ್ದಿದೆ! ನೆನಪಿಸಿಕೊಳ್ಳಿ, ಈ ಹಿಂದೆ ಭಾರತ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾಗಳಲ್ಲಿ ಹೀಗೆ ಅಪರೂಪಕ್ಕೊಂದು ಪಂದ್ಯ ಗೆದ್ದಿದ್ದರೆ ವಿಶ್ವ ಗೆದ್ದಂತೆ ಆಡುತ್ತಿದ್ದೆವು. ಈಗ ವಿಶ್ವ ಗೆದ್ದಂತಾಡುವುದು ಆಸ್ಟ್ರೇಲಿಯಾದವರ ಸರದಿ, ಖುಷಿಪಟ್ಟುಕೊಳ್ಳಲಿ ಬಿಡಿ!!
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.