ಅವಿರತ ಪ್ರಯತ್ನ
Team Udayavani, Jul 29, 2017, 3:31 PM IST
ಸರ್ಕಾರದ ಯಾವ ಸಹಾಯವನ್ನೂ ಪಡೆಯದೇ, ಹಿಂದುಳಿದ ಸರ್ಕಾರಿ ಕನ್ನಡ ಶಾಲೆಗಳನ್ನು ಜೀರ್ಣೋದ್ದಾರ ಮಾಡಲು ಕೆಲವು ಸಾಫ್ಟವೇರ್ ಕ್ಷೇತ್ರದ ಕೆಲವು ಸಮಾನ ಮನಸ್ಕ ಗೆಳೆಯರು ನಿರ್ಧರಿಸಿದರು. ಆಗ ಶುರುವಾದದ್ದೇ “ಅವಿರತ ಪ್ರತಿಷ್ಠಾನ’.
ಅದು ಚನ್ನಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ. ಶಾಲೆಯ ಮುಂದೆ ನಿಂತು ಅದು ತಲುಪಿದ್ಧ ಸ್ಥಿತಿಯನ್ನು ಕಂಡಾಗ ಈ “ಟೆಕ್ಕಿಗಳ’ ಕರುಳು ಚುರ್ ಅಂದಿತು. ಕೊಠಡಿಯೊಳಗಿನ ಛಾವಣಿಯಿಂದ ಸೂರ್ಯ ಇಣುಕಿ ನೋಡುತ್ತಿದ್ದ. ನಕ್ಷತ್ರಗಳಂತೆ ಕಾಣುತ್ತಿದ್ದ ಕಿಂಡಿಗಳು, ವಿದ್ಯಾರ್ಥಿಗಳು ಕುಳಿತುಕೊಳ್ಳಲು ಇದ್ದ ಬೆಂಚುಗಳೂ ಮುರಿದಿದ್ದವು. ಕುಡಿಯುವ ನೀರು ಅಲ್ಲಿ ಹುಡುಕಿದರೂ ಸಿಗಲೊಲ್ಲದು. ಬಾಗಿಲುಗಳಿಲ್ಲದ ಕಿಟಕಿಗಳಿಂದ ಗಾಳಿ ಬೆಳಕು ಮಾತ್ರ ಪುಗಸಟ್ಟೆಯಾಗಿ ಸಿಗುತ್ತಾ ಇತ್ತು.
ಇಂತಹ ವ್ಯವಸ್ಥೆಯಲ್ಲಿ ಮಕ್ಕಳು ಹೇಗೆ ಓದುತ್ತಾರೆ? ಏನು ಬರೆಯುತ್ತಾರೆ? ಸರ್ಕಾರಿ ಶಾಲೆಗಳಿಗೆ ಏಕೆ ಇಷ್ಟೊಂದು ಕಡುಬಡತನ? ಹೀಗೆಂದುಕೊಂಡದ್ದು ಕೆ.ಟಿ ಸತೀಶ್ ಅಂಡ್ ಟೀಂ. ಇವರುಗಳು ಸಿಲಿಕಾನ್ ಸಿಟಿಯಲ್ಲಿ ಉತ್ತಮ ಉದ್ಯೋಗದಲ್ಲಿದ್ದವರು. ಈ ಸರ್ಕಾರಿ ಶಾಲೆಯ ಮುಂದೆ ನಿಂತು ಅದರ ಪರಿಸ್ಥಿತಿಯನ್ನು ನೋಡಿದಾಗ ಅವರ ಮನಸ್ಸು ಕದಲಿತ್ತು. ಶಾಲೆಯ ಮಕ್ಕಳ ನೈಜ ಪರಿಸ್ಥಿತಿ ಕಂಡು ಮರುಗಿದ ಇವರು, ನಾವ್ಯಾಕೆ ಇಂತಹ ಹಿಂದುಳಿದ ಕನ್ನಡ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬಾರದು ಎಂದುಕೊಂಡರು. ಮೊದ ಮೊದಲು ಭಾಷಾ ಪರ ಹೋರಾಟವನ್ನು ಮಾಡಲು ಯೋಚಿಸಿತ್ತು ಈ ತಂಡ. ಆನಂತರ, ಹೋರಾಟಕ್ಕಿಂತ ಸಮಾಜಮುಖೀ ಕಾರ್ಯಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಯೋಚಿಸಿ ದಾರಿ ಬದಲಿಸಿದರು.
ಈ ಹಂತದಲ್ಲಿ ಅನೇಕ ಸ್ನೇಹಿತರು ಸತೀಶ್ ಮತ್ತು ಗೆಳೆಯರ ಜೊತೆಯಾದರು, ಸರ್ಕಾರದ ಯಾವ ಸಹಾಯವನ್ನೂ ಪಡೆಯದೇ, ಹಿಂದುಳಿದ ಸರ್ಕಾರಿ ಕನ್ನಡ ಶಾಲೆಗಳನ್ನು ಜೀರ್ಣೋದ್ದಾರ ಮಾಡುವ ತೀರ್ಮಾನಕ್ಕೆ ಬಂದರು. ಆಗ ಶುರುವಾದದ್ದೇ ‘ಅವಿರತ ಪ್ರತಿಷ್ಠಾನ’.
ಕೆಲವೇ ದಿನಗಳಲ್ಲಿ ಈ ತಂಡವು ಸ್ನೇಹಿತರು ಮತ್ತು ಸಂಬಂಧಿಕರುಗಳಿಂದ ಅಗತ್ಯ ಧನಸಹಾಯ ಪಡೆದು ಸುತ್ತ ಮುತ್ತಲ ಶಾಲೆಗಳ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರುಗಳೊಂದಿಗೆ ಚರ್ಚಿಸಿ ಆ ಮಕ್ಕಳಿಗೆ ಪ್ರೋತ್ಸಾಹ ನೀಡುವ ಯೋಜನೆಯೊಂದನ್ನು ರೂಪಿಸಿತು. ಆ ಯೋಜನೆಯ ಫಲವೇ ಚನ್ನಪಟ್ಟಣ ಮತ್ತು ದೊಡ್ಡಾಲದ ಮರ ಸುತ್ತ ಮುತ್ತಲ 22 ಸರ್ಕಾರಿ ಕನ್ನಡ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಬುಕ್, ಪುಸ್ತಕಗಳು ಮತ್ತು ನ್ಪೋರ್ಟ್ಸ್ ಕಿಟ್‌ಗಳನ್ನು ವಿತರಿಸಿದ್ದು. ಆನಂತರದಲ್ಲಿ ಇಂತಹ ಮತ್ತಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತಾ ಮುಂದೆ ಸಾಗಿತು ಈ ತಂಡ.
2007 ರಲ್ಲಿ ಈ ತಂಡವು ‘ಅವಿರತ ಪ್ರತಿಷ್ಠಾನ’ ಎಂದು ಅಧಿಕೃತ ಸರ್ಕಾರೇತರ ಸಂಸ್ಥೆಯಾಗಿ ರೂಪುಗೊಂಡಿತು. 30 ಜನರಿಂದ ಪ್ರಾರಂಭವಾದ ಈ ಸಂಸ್ಥೆಯು ಇಂದು 350ಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದೆ. ಸರ್ಕಾರಿ ಉದ್ಯೋಗಿಗಳು, ಸಾಪ್ಟ್ವೇರ್ ಉದ್ಯೋಗಿಗಳು, ಶಿಕ್ಷಕರು, ವಕೀಲರು, ಪತ್ರಕರ್ತರು, ಕಲಾವಿದರು, ಸಾಹಿತಿಗಳು, ವೈದ್ಯರುಗಳೂ ಸೇರಿದಂತೆ ಹಲವರು ಈ ಸಂಸ್ಥೆಯಲ್ಲಿದ್ದಾರೆ.
ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಉದ್ದೇಶ ಹೊಂದಿದ್ದ ಈ ಸಂಸ್ಥೆಯು, ಮುಂದೆ ಶಾಲೆಗಳಿಗೆ ಕಂಪ್ಯೂಟರ್ ಒದಗಿಸುವ ಮತ್ತು ಕಂಪ್ಯೂಟರ್ ತರಬೇತಿ ನೀಡಲು ಮುಂದಾಯಿತು. ಇದರ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಿತು. ಕ್ರೀಡಾಸಕ್ತ ವಿದ್ಯಾರ್ಥಿಗಳಿಗೆ ನ್ಪೋರ್ಟ್ಸ್ ಕಿಟ್‌ಗಳನ್ನು ನೀಡಿ ಪ್ರೋತ್ಸಾಹಿಸಿತು.
ಕೆಲ ವರ್ಷಗಳ ನಂತರ ನಾವು ಕೇವಲ ಶೈಕ್ಷಣಿಕ ಕ್ಷೇತ್ರಕ್ಕೇ ಸೀಮಿತವಾಗಬಾರದು ಎಂದು ನಿರ್ಧರಿಸಿರುವ ಅವಿರತ ಪ್ರತಿಷ್ಠಾನ, ಒಂದಿಷ್ಟು ಸಾಮಾಜಿಕ ಕಾರ್ಯಗಳಿಗೆ ಸಂಬಂಧಿಸಿದ ಯೋಜನೆಗಳನ್ನೂ ಹಾಕಿಕೊಂಡಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕ ಸೇವಾ ವಲಯ ಮತ್ತು ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮುಖ್ಯವಾಗಿ ರಕ್ತದಾನ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು, ಮತ್ತು ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ವಿಷಯ ಕುರಿತಾದ ವಿಚಾರ ಸಂಕಿರಣಗಳು, ಗೋಷ್ಠಿಗಳನ್ನು ನಡೆಸಲಾಗಿದೆ.
ಪ್ರಸ್ತುತ ಈ ಸಂಸ್ಥೆಗೆ 10 ವರ್ಷ ತುಂಬಿದೆ. ವಾರ್ಷಿಕ 25 ರಿಂದ 30 ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇದರ ಕಾರ್ಯಗಳ ವ್ಯಾಪ್ತಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಆರಂಭವಾಗಿ, ಗಡಿ ಜಿಲ್ಲೆಗಳು, ಮಲೆನಾಡಿನ ಜಿಲ್ಲೆಗಳೂ ಸೇರಿದಂತೆ ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡವನ್ನೂ ತಲುಪಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಿಂದ ನನ್ನ ಶಾಲೆ – ನನ್ನ ಹೆಮ್ಮೆ ಎಂಬ ಚಿಂತನೆ ಅಡಿಯಲ್ಲಿ ಶಾಲೆ ಒಂದಕ್ಕೆ ಉಪ ತಂಡವನ್ನು ರಚಿಸಿ ಆ ಶಾಲೆಯ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗುತ್ತದೆ. ಈ ತಂಡವು ಶಾಲೆಗೆ ಅವಶ್ಯಕವಿರುವ ನೋಟ್ ಪುಸ್ತಕ ಮತ್ತು ಅಗತ್ಯ ತರಬೇತಿಯನ್ನು ನೋಡಿಕೊಳ್ಳುತ್ತದೆ. ಜೊತೆಗೆ ಆ ತಂಡಕ್ಕೆ ಶಾಲೆಯ ಜೊತೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ ಎಂದು ಹೇಳುತ್ತಾರೆ “ಅವಿರತ’ದ ಮುಖ್ಯ ಸದಸ್ಯರಲ್ಲಿ ಒಬ್ಬರಾದ ಸತೀಶ್ ಕೆ.ಟಿ.
ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಸದಸ್ಯರು ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮಗಳನ್ನು ಮಾಡುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಕನ್ನಡ ಪರಿಸರವನ್ನು ಬಲಿಷ್ಠಗೊಳಿಸುತ್ತಾ, ನಾಡಿನ ಸಮತೋಲನ ಅಭಿವೃದ್ಧಿಗೆ ಸಮಾಜಮುಖೀ ಸಂಸ್ಥೆಯಾಗಿ ಶ್ರಮಿಸುವ ಧ್ಯೇಯವನ್ನು ಹೊಂದಿದ್ದಾರೆ.
ಅವಿರತ ಸೇವೆಯ ಹಲವು ಮುಖಗಳು
ಸಾಪ್ಟ್ವೇರ್ ತರಬೇತಿಗಳು
ಪ್ರತೀ ವಾರದ ಕೊನೆಯ ದಿನಗಳಾದ ಶನಿವಾರ ಮತ್ತು ಭಾನುವಾರ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡುತ್ತಾರೆ. ಮುಖ್ಯವಾಗಿ ಸಿ, ಜಾವಾದಂತಹ ತಂತ್ರಾಂಶ ಕುರಿತಾದ ತರಗತಿಗಳು ಇಲ್ಲಿ ನಡೆಯುತ್ತವೆ. ಸಂಸ್ಥೆಯ ಪರಿಣಿತ ಸದಸ್ಯರೇ ಇಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವರು.
ವಿಜ್ಞಾನ ಕಾರ್ಯಾಗಾರಗಳು
ಸಂಸ್ಥೆಯ ವತಿಯಿಂದ ಮಕ್ಕಳಿಗೆ ವಿಜ್ಞಾನ ಕುರಿತಾದ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಕಾರ್ಯಗಾರದಲ್ಲಿ ರಾಸಾಯನಿಕ, ಭೌತ, ಖಗೋಳ, ಭೂಗೋಳದಂತಹ ವಿವಿಧ ವಿಜ್ಞಾನ ವಿಷಯಗಳ ಕುರಿತು ಬೋಧನೆ ಮಾಡಲಾಗುತ್ತದೆ. ಪರಿಣಿತರಿಂದ ವಿಜ್ಞಾನ ಪ್ರಯೋಗಗಳನ್ನು ಮಾಡಿಸಿ ಮಕ್ಕಳಿಗೆ ವಿಷಯವನ್ನು ಮನವರಿಕೆ ಮಾಡಿಕೊಡಲಾಗುವುದು.ವಾರ್ಷಿಕ ಎಂಟರಿಂದ ಹತ್ತು ವಿಜ್ಞಾನ ಪ್ರಯೋಗ ಕಾರ್ಯಾಗಾರಗಳನ್ನು ರಾಜ್ಯದ ನಾನಾ ಭಾಗಗಳಲ್ಲಿ ಆಯೋಜಿಸುತ್ತದೆ.
ಗ್ರಂಥಾಲಯ ವ್ಯವಸ್ಥೆ
ಹಿಂದುಳಿದ ಗ್ರಾಮಗಳ ಶಾಲೆಗಳಲ್ಲಿ ಮಕ್ಕಳಿಗೆ ಅವಶ್ಯ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯದ ವ್ಯವಸ್ಥೆ ಮಾಡುತ್ತದೆ. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ನಾಲ್ಕೈದು ಗ್ರಾಮಗಳ ಶಾಲೆಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡಿದೆ. ಇವುಗಳ ಜೊತೆಗೆ ಸಿನಿ ಕ್ಲಬ್‌ಗಳನ್ನೂ ಕೆಲವು ಗ್ರಾಮಗಳಲ್ಲಿ ಆರಂಭಿಸಿದ್ದಾರೆ.
ಪರೀಕ್ಷಾ ಕಾರ್ಯಗಾರ
ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಏನೋ ಭಯ! ಅಂಥವರಿಗೆಂದೇ ಪರೀಕ್ಷೆಗೆ ಸಿದ್ಧಗೊಳ್ಳುವುದು ಹೇಗೆ ಎಂಬ ವಿಷಯದ ಮೇಲೆ ಕಾರ್ಯಾಗಾರಗಳನ್ನು ಆಯೋಜಿಸುತ್ತಾರೆ.
ಸ್ಕಾಲರ್‌ಶಿಪ್ ವಿತರಣೆ
ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ಅಭ್ಯಾಸಕ್ಕೆ ನೆರವಾಗಲಿ ಎಂದು ಇತರೆ ಸಂಸ್ಥೆಗಳ ಸಹಯೋಗ ದೊಂದಿಗೆ ಸ್ಕಾಲರ್‌ಶಿಪ್ ನೀಡುತ್ತಿದ್ದಾರೆ.
ಕಂಪ್ಯೂಟರ್ ವಿತರಣೆ
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅವಶ್ಯಕವೆಂದು ತಿಳಿದು, ಚಾಮರಾಜ ನಗರ ಜಿಲ್ಲೆಯ ಆರು ಸರ್ಕಾರಿ ಕನ್ನಡ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸಿದೆ. ಇವುಗಳ ಜೊತೆಗೆ ಸಸಿ ನಡುವ ಕಾರ್ಯ ಕ್ರಮಗಳು, ಗೀತಗಾಯನ ಕಾರ್ಯಕ್ರಮಗಳು, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು, ಇಂಗ್ಲೀಷ್ ಕಲಿಕಾ ತರಗತಿಗಳು, ವೃದ್ಧರ ಆರೋಗ್ಯ ತಪಾಸಣಾ ಶಿಬಿರಗಳು ಮತ್ತು ವಿವಿಧ ವಿಷಯಗಳ ಕುರಿತಾದ ವಿಚಾರ ಸಂಕಿರಣಗಳಂತಹ ಅನೇಕ ಕಾರ್ಯಕ್ರಮಗಳನ್ನೂ ಅವಿರತ ಸಂಸ್ಥೆಯು ಆಯೋಜಿಸುತ್ತಿದೆ.
ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.