ಐಪಿಎಲ್ ನಡೆಯುತ್ತೋ, ಇಲ್ಲವೋ?: ಬಿಸಿಸಿಐಗೆ ಚಿಂತೆ
Team Udayavani, Mar 14, 2020, 6:05 AM IST
ಇಡೀ ವಿಶ್ವದಲ್ಲಿ ಎಲ್ಲಿ ನೋಡಿದರೂ, ಒಂದೇ ಮಾತು, ಒಂದೇ ವಿಷಯ. ಕೊರೊನಾ, ಕೊರೊನಾ. ಇದಕ್ಕೆ ಎಲ್ಲ ಕಡೆ ಕ್ರೀಡಾಕೂಟಗಳು ಬಲಿಯಾಗುತ್ತಿವೆ. ಸಾರ್ವಜನಿಕರು ಸೇರುವ ಎಲ್ಲವೂ ರದ್ದಾಗುತ್ತಿವೆ. ಈ ಪೈಕಿ ಭಾರತದಲ್ಲಿ ಅತಿಹೆಚ್ಚು ತಾಪತ್ರಯಕ್ಕೆ ಒಳಗಾಗಿರುವುದು ಐಪಿಎಲ್. ಪ್ರತೀವರ್ಷ ಒಂದಲ್ಲ ಒಂದು ರಗಳೆಗಳಿಗೆ ಒಳಗಾಗುತ್ತಿರುವ ಐಪಿಎಲ್‌ಗೆ, ಈ ಬಾರಿ ಇನ್ನೇನು ಶುರುವಾಗಬೇಕು ಎನ್ನುವ ಹಂತದಲ್ಲಿ ವಿಘ್ನ ಎದುರಾಗಿದೆ. ಅದರ ಹೆಸರು ಕೊರೊನಾ. ಕೊರೊನಾ ಇರುವುದರಿಂದ ಐಪಿಎಲ್ ಪಂದ್ಯಗಳನ್ನು ನಡೆಸುವುದು ಬಹಳ ಅಪಾಯ.
ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವುದರಿಂದ ಐಪಿಎಲ್ ಮುಂದೂಡಿ ಎಂದು ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದೆ. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಪಂದ್ಯ ನಡೆಸಲು ಅವಕಾಶ ನೀಡುವುದಿಲ್ಲವೆಂದು ಕರ್ನಾಟಕ ಸರ್ಕಾರ ಹೇಳಿದೆ. ಸದ್ಯ ಕೇಂದ್ರಸರ್ಕಾರ ಇನ್ನೂ ಏನೂ ಹೇಳಿಲ್ಲ. ಆದರೆ ರಾಜ್ಯಗಳ ಒತ್ತಡ ನಿಧಾನಕ್ಕೆ ಏರಬಹುದು. ಆಗ ಕೇಂದ್ರವೂ ಐಪಿಎಲ್ ರದ್ದು ಮಾಡಿ ಎಂಬ ನಿರ್ಧಾರಕ್ಕೆ ಬರಬಹುದು. ಇಂತಹ ಹೊತ್ತಿನಲ್ಲಿ ಬಿಸಿಸಿಐ ಎಂತಹ ಒತ್ತಡದಲ್ಲಿದೆಯೆಂದರೆ, ಒಂದು ಕಡೆ ನೂರಾರು ಕೋಟಿ ರೂ. ಲಾಭ ತರುವ ಐಪಿಎಲ್ ಅನ್ನು ರದ್ದು ಮಾಡುವ ಸ್ಥಿತಿಯಲ್ಲೂ ಇಲ್ಲ,
ನಡೆಸುತ್ತೇನೆಂದು ಹಠ ಮಾಡಲೂ ಸಾಧ್ಯವಿಲ್ಲ. ತಾನು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುತ್ತೇನೆ, ಕೊರೊನಾ ಪೀಡಿತರನ್ನು ಮೈದಾನದೊಳಕ್ಕೆ ಬಿಡುವುದಿಲ್ಲವೆಂದು ಹೇಳಿದ್ದರೂ, ನಿಧಾನಕ್ಕೆ ಅಪಾಯದ ಮಟ್ಟ ಏರುತ್ತಿದೆ. ಅದಕ್ಕೆ ಏನು ನಿರ್ಧಾರ ಮಾಡಬೇಕು ಎಂದು ಗೊತ್ತಾಗದೇ ಪರದಾಡುತ್ತಿದೆ. ಒಂದುವೇಳೆ ಐಪಿಎಲ್ ಬೇಡವೆಂದು ಕೇಂದ್ರ ಗಟ್ಟಿಯಾಗಿ ಹೇಳಿದರೆ, ಈ ವರ್ಷ ಬಿಸಿಸಿಐ ಮತ್ತು ಫ್ರಾಂಚೈಸಿಗಳಿಗೆ ಭಾರೀ ನಷ್ಟ ಖಚಿತ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.