ಬೇಕು ಬೇಡಗಳ ನಡುವೆ ಚಾಂಪಿಯನ್ಸ್ ಟ್ರೋಫಿ…
Team Udayavani, Jun 10, 2017, 3:55 AM IST
ಈಗ ವಿಪರೀತ ಕ್ರಿಕೆಟ್. ಐಪಿಎಲ್ ಹಾಗೂ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್‌ಗಳಲ್ಲಿಯೂ ಐಪಿಎಲ್ ಮಾದರಿಯ ಕ್ರಿಕೆಟ್ ನಡೆಯುತ್ತಿರುವುದರಿಂದ ಆಡುವವರಿಗೆ ವರ್ಷದುದ್ದಕ್ಕೂ ಕ್ರಿಕೆಟ್ ಋತು. ನೋಡುಗರಿಗೆ ಭರ್ತಿ ಲೈವ್ ಪ್ರಸಾರ! ಕ್ರೀಡಾ ಚಾನೆಲ್‌ಗಳ ವೃದ್ಧಿ ಮತ್ತು ಅವುಗಳು ನೂರಾರು ಕೋಟಿ ಲೈವ್ ಸರಕಿಗೆ ಪಾವತಿಸುವ ಪ್ರಸಾರದ ಹಕ್ಕಿನ ಮೊತ್ತ ಅಗತ್ಯಕ್ಕಿಂತ ಹೆಚ್ಚು ಕ್ರಿಕೆಟ್ ಆಡುವಂತೆ ಮಾಡುತ್ತದೆ. ಇದನ್ನೊಂದಿಷ್ಟು ವಿವರಿಸುವುದಾದರೆ, ಬಿಸಿಸಿಐ ಸೋನಿ ಜೊತೆ ನೇರ ಪ್ರಸಾರದ ಒಪ್ಪಂದ ಮಾಡಿಕೊಂಡಿದೆ. ಇದು ಐದು ವರ್ಷದ ಕರಾರು ಎಂದಿಟ್ಟುಕೊಳ್ಳಿ. ವರ್ಷಕ್ಕೆ 300 ಕೋಟಿ ರೂ. ಕೊಡುವ ಭರವಸೆ ನೀಡುವ ಸೋನಿ ಇದೇ ವೇಳೆ ನನಗೆ ವಾರ್ಷಿಕ 50 ದಿನಗಳ ನೇರ ಪ್ರಸಾರದ ಸರಕು ಕೊಡುವಂತೆ ಷರತ್ತು ಹಾಕಿರುತ್ತದೆ. ಆಗ ಬಿಸಿಸಿಐ ತನ್ನ ತಂಡದಿಂದ ಟೆಸ್ಟ್, ಏಕದಿನ ಟಿ20 ಸ್ಪರ್ಧೆ, ಟೂರ್ನಿ ಆಯೋಜಿಸಿ ಈ ನಿಯಮದನುಸಾರ ನಡೆದುಕೊಳ್ಳಲೇಬೇಕಾಗುತ್ತದೆ. ಇದು ಕ್ರಿಕೆಟ್ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಿ, ಕೊನೆಗೆ ಈಗ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ತರಹದ ಪಂದ್ಯಾವಳಿಗಳು ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತವೆ!
ಚಾಂಪಿಯನ್ಸ್ ಟ್ರೋಫಿ ಇತಿಹಾಸ ಹಲವರಿಗೆ ಗೊತ್ತು. 1998ರಲ್ಲಿ ಎರಡು ವರ್ಷಕ್ಕೊಮ್ಮೆ ಎಂಬ ಸೂತ್ರದಡಿ ಐಸಿಸಿ ನಾಕ್‌ಔಟ್ ಟೂರ್ನಮೆಂಟ್‌ನ್ನು ಖುದ್ದು ಐಸಿಸಿ ಆರಂಭಿಸಿತು. ಅದರ ಖಜಾನೆ ಭರ್ತಿಯಾಗಲು ಇದೊಂದು ಉದ್ಯಮವಾಗಿತ್ತು. ಮುಂದೆ ಇದೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯಾಗಿ ಮಾರ್ಪಾಡಾಯಿತು. 2004ರವರೆಗೆ ಐಸಿಸಿ ಸಹಸದಸ್ಯರು ಕೂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಂಡರು. 2009ರಿಂದ ಕೇವಲ ಟಾಪ್ 8 ತಂಡಗಳಿಗೆ ಮಾತ್ರ ಅವಕಾಶ ಎಂಬ ನಿಯಮ ಜಾರಿಗೆ ಬಂದಿತು. ಐಸಿಸಿ ರ್‍ಯಾಂಕಿಂಗ್‌ನಲ್ಲಿ ಟೂರ್ನಿಗೆ ಆರು ತಿಂಗಳ ಹಿಂದಿನ ರ್‍ಯಾಂಕಿಂಗ್ ಆಧಾರದಲ್ಲಿ ಟಾಪ್ 8 ತಂಡಗಳು ಮಾತ್ರ ಪಾಲ್ಗೊಳ್ಳಬಹುದು. ಹಾಗಾಗೇ ಈ ಬಾರಿ ಶ್ರೀಲಂಕಾ, ಬಾಂಗ್ಲಾ ಸ್ಪರ್ಧೆಯಲ್ಲಿ ಇದೆ. ವೆಸ್ಟ್‌ಇಂಡೀಸ್ ಔಟ್!
ಮತ್ತೆ ಕೊನೆಯ ವರ್ಷದ ಆತಂಕ!
ಚಾಂಪಿಯನ್ಸ್ ಟ್ರೋಫಿಗೆ 2013 ಕೊನೆಯ ವರ್ಷ ಎಂದು ಐಸಿಸಿ ಘೋಷಿಸಿತ್ತು. ಇದರ ಬದಲು ನಾನು ಟೆಸ್ಟ್ ಚಾಂಪಿಯನ್‌ಶಿಪ್ ಮಾಡುತ್ತೇನೆ ಎಂದು ಹೇಳಿಕೊಂಡಿತ್ತು. ಆದರೆ 2013ರಲ್ಲಿ ಭಾರತದ ಗೆಲುವಿನೊಂದಿಗೆ ಅದರ ಲೆಕ್ಕಾಚಾರ ಉಲ್ಟಾಪಲ್ಟಾ ಆಯಿತು. ಹಾಲಿ ಚಾಂಪಿಯನ್ ಭಾರತಕ್ಕೆ ಅದರ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಅವಕಾಶ ಕೊಡದಿದ್ದರೆ ಹೇಗೆ ಎಂಬ ವಾದದ ಮಂಡನೆಯಾಗಿದ್ದರೂ, ನಿಜ ಅರ್ಥದಲ್ಲಿ ಭಾರತೀಯ ವೀಕ್ಷಕರ ಬಾಹುಳ್ಯ, ಶಕ್ತಿಗೆ ಐಸಿಸಿ ಬೆವೆತಿದೆ. ಮೊನ್ನೆ ಮೊನ್ನೆ ಭಾರತದ ಇಂಗ್ಲೆಂಡ್‌ನಲ್ಲಿ ಅಭ್ಯಾಸದ ಪಂದ್ಯಗಳನ್ನು ಆಡಲು ಕಣಕ್ಕಿಳಿದರೂ ಸ್ಟೇಡಿಯಂನಲ್ಲಿ ಬರೋಬ್ಬರಿ ಜನ, ಟಿವಿ ಲೈವ್‌ಗೂ ಒಳ್ಳೆಯ ಟಿಆರ್‌ಪಿ. ಈ ಹಿನ್ನೆಲೆಯಲ್ಲಿ ಇಡೀ ಚಾಂಪಿಯನ್ಸ್ ಟ್ರೋಫಿಯ ಜುಟ್ಟು ಭಾರತದ ಕೈಯಲ್ಲಿದೆ. ಬಹುಶಃ ಈ ಬಾರಿ ಐಸಿಸಿ ಆದಾಯ ಹಂಚಿಕೆ ವಿವಾದದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದಿದ್ದರೆ ಅದರ ಭವಿಷ್ಯ ಕರಾಳವಾಗುತ್ತಿತ್ತು.
ಮತ್ತೂಮ್ಮೆ ಐಸಿಸಿ 2021ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯೇ ಕೊನೆಯದು, ಅದು ಭಾರತದಲ್ಲಿ ನಡೆಯಲಿದೆ. ಆ ನಂತರ ಐಸಿಸಿ ಏಕದಿನ ಲೀಗ್ ಮಾದರಿಯನ್ನು ಹಮ್ಮಿಕೊಳ್ಳುತ್ತದೆ ಎಂದು ಹೇಳಿಕೊಂಡಿದೆ. ಟೆಸ್ಟ್ ಕ್ರಿಕೆಟ್ ಮತ್ತು ಟಿ20 ಪಂದ್ಯ ಮಾದರಿಗಳ ನಡುವೆ ನಿಜವಾದ ಅವಸಾನ ಕಾಣುತ್ತಿರುವುದು ಒನ್‌ಡೇ ಕ್ರಿಕೆಟ್. ಐಸಿಸಿಗೆ ಕೆಲ ದಿನಗಳ ಹಿಂದೆ ಟೆಸ್ಟ್ ಚಾಂಪಿಯನ್‌ಶಿಪ್ ಕನಸಿತ್ತು. ಅದು ಅಸಾಧ್ಯ ಎಂದಾಗ ಏಕದಿನ ಕ್ರಿಕೆಟ್ ಲೀಗ್ ಎನ್ನುತ್ತದೆ. ಈ ಚಾಂಪಿಯನ್ಸ್ ಟ್ರೋಫಿಯ ಇತಿಹಾಸವನ್ನು ನೋಡಿದಾಗ ಅದಕ್ಕೊಂದು ಸ್ಪಷ್ಟ ಸ್ವರೂಪವನ್ನು ಕೊಡಲೇ ಐಸಿಸಿಗೆ ಈವರೆಗೆ ಸಾಧ್ಯವಾಗದಿರುವುದು ಗೊತ್ತಾಗುತ್ತದೆ. ಭಾರತದಲ್ಲಿ 2021ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮಾದರಿಯನ್ನು ನಾವು ಒನ್‌ಡೇ ಬದಲು ಟಿ20ಗೆ ಬದಲಿಸುತ್ತೇವೆ ಎಂದು ಐಸಿಸಿ ಘೋಷಿಸಿದರೆ ಯಾರೂ ಅಚ್ಚರಿಗೊಳಗಾಗಬೇಕಾದ್ದಿಲ್ಲ!
ಹೆಚ್ಚು ಸಂಭಾವನೆ ಮತ್ತು ಐಸಿಸಿ ಗೋಳು!
ಸಿನೆಮಾದಲ್ಲಿ ಪ್ರೇಕ್ಷಕರನ್ನು ಕರೆತರುವ ಹೀರೋ ಹೀರೋಯಿನ್, ಸಹನಟರಗಿಂತ ಹೆಚ್ಚಿನ ಸಂಭಾವನೆ ಪಡೆಯುವುದು ಸಹಜ. ಅದನ್ನು ಸಮ್ಮತಿಸುವ ವಿಶ್ಲೇಷಕರು ಭಾರತ ಕ್ರಿಕೆಟ್ ಸಂಸ್ಥೆ ಐಸಿಸಿಯಿಂದ ಹೆಚ್ಚಿನ ಆದಾಯದ ಪಾಲು ಕೇಳುವುದನ್ನು ಆಕ್ಷೇಪಿಸುವುದು ಸಮತೋಲಿತ ನಿಲುವು ಎನ್ನಿಸಿಕೊಳ್ಳುವುದಿಲ್ಲ. ಭಾರತ ಬರಲಿರುವ ವರ್ಷಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ್ನು ಇನ್ನಷ್ಟು ಬಲಪಡಿಸಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ವ್ಯವಸ್ಥೆಗೆ ಸಡ್ಡು ಹೊಡೆಯುವ ಎಲ್ಲ ಸಾಧ್ಯತೆಗಳಿವೆ.
ಇತ್ತ ಖುದ್ದು ಐಸಿಸಿ ತನ್ನ ಕಾಲ ಮೇಲೆ ಕಲ್ಲು ಹಾಕಿಕೊಳ್ಳುವ ಕೆಲಸ ಮಾಡುತ್ತದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಕಾಡುತ್ತಿರುವ ಮಳೆ ಒಂದು ರೀತಿಯಲ್ಲಿ ಅಪಶಕುನ. ಭಾರತ, ಶ್ರೀಲಂಕಾ, ಬಾಂಗ್ಲಾಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ನಡೆದ ಉಗ್ರರ ದಾಳಿ ನಡೆದಿದ್ದರೆ ಒಬ್ಟಾನೊಬ್ಬ ಇಂಗ್ಲೆಂಡ್ ಆಟಗಾರ ಭಾರತೀಯ ಉಪಖಂಡಕ್ಕೆ ಬರುತ್ತಿರಲಿಲ್ಲ. ಸುರಕ್ಷತೆಯ ಸಬೂಬು ಹೇಳಿ ತಪ್ಪಿಸಿಕೊಳ್ಳುವುದು ಸುಲಭವಿತ್ತು. ಇನ್ನೊಂದು ಉಗ್ರ ದಾಳಿ ನಡೆದರೆ ಅಲ್ಲೂ ಪರಿಸ್ಥಿತಿ ವಿಷಮಿಸುವುದು ಖಚಿತ. ಅದೇ ಐಪಿಎಲ್ ನಡೆಸಿ, ಪಕ್ಕದ ಹೋಟೆಲ್‌ನಲ್ಲಿ ಬಾಂಬ್ ಸಿಡಿದರೂ, ನಾನಂತೂ ಸೇಫ್, ಆಡಲು ಲಭ್ಯ ಎಂಬ ಸ್ಲೋಗನ್ ಕೇಳುತ್ತೇವೆ.
ಇಂತಹ ನಿಲುವುಗಳು ಬದಲಾಗಿ ಶ್ರೀಲಂಕಾ, ಬಾಂಗ್ಲಾ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್ ತರಹದ ದೇಶಗಳಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಬೇಕಿತ್ತು. ಐಸಿಸಿ ಸಹಸದಸ್ಯ ರಾಷ್ಟ್ರಗಳಲ್ಲಿ ಆಗಿದ್ದರೂ ಓಕೆ. ಕ್ರಿಕೆಟ್‌ನ ಜನಪ್ರಿಯತೆಯನ್ನು, ಆಡುವ ರಾಷ್ಟ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಕೆಲಸ ತನ್ನದು ಎಂಬುದನ್ನು ಐಸಿಸಿ ಅರ್ಥ ಮಾಡಿಕೊಳ್ಳುವವರೆಗೆ ಬದಲಾವಣೆ ಕಷ್ಟ ಕಷ್ಟ!
ಚಾಂಪಿಯನ್ಸ್ ಟ್ರೋಫಿ ಬೇಕು !
ಚಾಂಪಿಯನ್ಸ್ ಟ್ರೋಫಿ ಬೇಕು. ಏಕದಿನ ವಿಶ್ವಕಪ್ ಮಾದರಿ ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡುವವರಿಗೆ ಟ್ರೋಫಿ ಗೆಲ್ಲುವ ಅವಕಾಶ ಸೃಷ್ಟಿಸುತ್ತದೆ. ಚಾಂಪಿಯನ್ಸ್ ಟ್ರೋಫಿ ವಿಶ್ವಕಪ್‌ನಿಂದ ಭಿನ್ನವಾಗಿ ಅಲ್ಲಿ ಈವರೆಗೆ ಒಂದೂ ಕಪ್ ಗೆಲ್ಲದ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ಗೆ ಚಾಂಪಿಯನ್ ಪಟ್ಟ ಕಟ್ಟುತ್ತದೆ. ಭಾರತ, ಆಸ್ಟ್ರೇಲಿಯಾ ಎರಡೆರಡು ಕಪ್ ಗೆಲ್ಲುವುದು ವಿಶೇಷವಲ್ಲ. ಆದರೆ ಪುನರ್ನಿಮಾಣದ ತಂಡವಾಗಿ ವೆಸ್ಟ್ ಇಂಡೀಸ್, ಶ್ರೀಲಂಕಾ ತಂಡಗಳಿಗೆ ಪ್ರಶಸ್ತಿ ಸಿಕ್ಕುವುದು ಕ್ರಿಕೆಟ್‌ನ ಭವಿಷ್ಯ ದೃಷ್ಟಿಯಿಂದಲೇ ಹೆಚ್ಚು ಆರೋಗ್ಯಕರ.
ಕೇವಲ ಟಿ20 ಹಾಗೂ ಏಕದಿನ ವಿಶ್ವಕಪ್‌ಗ್ಳು ತಂಡಗಳ ಬೊಕ್ಕಸಕ್ಕೆ ದೊರಕುವ ಪ್ರತಿಷ್ಠಿತ ಐಸಿಸಿ ಟ್ರೋಫಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತದೆ. ಒಂದು ಚಾಂಪಿಯನ್ಸ್ ಟ್ರೋಫಿ ಆ ಕೊರತೆಗೆ ಒಂದು ಮಟ್ಟಿನ ಸಾಂತ್ವನ ನೀಡುತ್ತದೆ. ಟಾಪ್ 8 ನಡುವಿನ ಸ್ಪರ್ಧೆ ಎಂಬ ನಿಯಮ ಅಗ್ರ ತಂಡಗಳನ್ನು ಕೂಡ ತುಸುಮಟ್ಟಿಗೆ ತುದಿಗಾಲಿನ ಮೇಲೆ ನಿಲ್ಲಿಸುವಂತದು. ಈವರೆಗೆ 13 ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿವೆ. ಏಕದಿನ ಕ್ರಿಕೆಟ್ ಕ್ಯಾಲೆಂಡರ್‌ನ್ನು ವ್ಯವಸ್ಥಿತಗೊಳಿಸಿ ಟಾಪ್ 8ರ ಹೊರಗಿನ ತಂಡಗಳಿಗೂ ಹೆಚ್ಚು ಆಡುವ ಅವಕಾಶವನ್ನು ಸೃಷ್ಟಿಸಿದರೆ ಹೊಸ ಪೈಪೋಟಿ ಗುಣಮಟ್ಟ ಏರಿಕೆಗೆ ಪೂರಕವಾಗುತ್ತದೆ.
ಎರಡು ರಾಷ್ಟ್ರಗಳ ನಡುವೆ ನಡೆಯುವ ಟೆಸ್ಟ್ ಸರಣಿ ಮೂಡಿಸುವ ಆಸಕ್ತಿಯನ್ನು ದ್ವಿಪಕ್ಷೀಯ ಏಕದಿನ ಸರಣಿಗಳು ಹುಟ್ಟಿಸದಿರುವುದನ್ನು ಕ್ರಿಕೆಟ್ ಪಂಡಿತರು ಗಮನಿಸಿದ್ದಾರೆ. ಈ ಹಿಂದೆ ನಡೆಯುತ್ತಿದ್ದ ನಾಲ್ಕು ರಾಷ್ಟ್ರಗಳ ಚತುಷ್ಕೋನ ಸ್ಪರ್ಧೆಗಳಂತ ಟೂರ್ನಿಗಳಿಗೆ ಐಸಿಸಿ ಬ್ರೇಕ್ ಹಾಕಿದೆ. ಭಾರತ, ಆಸ್ಟ್ರೇಲಿಯಾ, ಬಾಂಗ್ಲಾ ಮೊದಲಾದ ಕ್ರಿಕೆಟ್ ಹುಚ್ಚಿನ ರಾಷ್ಟ್ರಗಳು ಟಿ20 ಲೀಗ್ ಹುಟ್ಟುಹಾಕಿ ಅದರಿಂದ ಭರಪೂರ ಲಾಭ ಪಡೆಯುತ್ತಿವೆ.
ಟಿ20ಗೆ ಬದಲಾದರೂ ಅಚ್ಚರಿಯಿಲ್ಲ!
ಐಸಿಸಿ 2021ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯೇ ಕೊನೆಯದು, ಅದು ಭಾರತದಲ್ಲಿ ನಡೆಯಲಿದೆ. ಆ ನಂತರ ಐಸಿಸಿ ಏಕದಿನ ಲೀಗ್ ಮಾದರಿಯನ್ನು ಹಮ್ಮಿಕೊಳ್ಳುತ್ತದೆ ಎಂದು ಹೇಳಿಕೊಂಡಿದೆ. ಟೆಸ್ಟ್ ಕ್ರಿಕೆಟ್ ಮತ್ತು ಟಿ20 ಪಂದ್ಯ ಮಾದರಿಗಳ ನಡುವೆ ನಿಜವಾದ ಅವಸಾನ ಕಾಣುತ್ತಿರುವುದು ಒನ್‌ಡೇ ಕ್ರಿಕೆಟ್. ಐಸಿಸಿಗೆ ಕೆಲ ದಿನಗಳ ಹಿಂದೆ ಟೆಸ್ಟ್ ಚಾಂಪಿಯನ್‌ಶಿಪ್ ಕನಸಿತ್ತು. ಅದು ಅಸಾಧ್ಯ ಎಂದಾಗ ಏಕದಿನ ಕ್ರಿಕೆಟ್ ಲೀಗ್ ಎನ್ನುತ್ತದೆ. ಈ ಚಾಂಪಿಯನ್ಸ್ ಟ್ರೋಫಿಯ ಇತಿಹಾಸವನ್ನು ನೋಡಿದಾಗ ಅದಕ್ಕೊಂದು ಸ್ಪಷ್ಟ ಸ್ವರೂಪವನ್ನು ಕೊಡಲೇ ಐಸಿಸಿಗೆ ಈವರೆಗೆ ಸಾಧ್ಯವಾಗದಿರುವುದು ಗೊತ್ತಾಗುತ್ತದೆ. ಭಾರತದಲ್ಲಿ 2021ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮಾದರಿಯನ್ನು ನಾವು ಒನ್‌ಡೇ ಬದಲು ಟಿ20ಗೆ ಬದಲಿಸುತ್ತೇವೆ ಎಂದು ಐಸಿಸಿ ಘೋಷಿಸಿದರೆ ಯಾರೂ ಅಚ್ಚರಿಗೊಳಗಾಗಬೇಕಾದ್ದಿಲ್ಲ!
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.