ಅಂಜನದಲ್ಲಿ ಕಂಡ ಚಂದ್ರಲೋಕ

ಅಮೆರಿಕಕ್ಕೆ ಮೊದಲೇ ನಮ್ಮವರ ಚಂದ್ರಯಾನ?

Team Udayavani, Jul 20, 2019, 5:00 AM IST

p-10

ಅದು 1959ರ ಜುಲೈ ಮಾಸ. ಅತ್ತ ಅಮೆರಿಕವು ಚಂದ್ರನೆಡೆಗೆ ಮಾನವನನ್ನು ಕಳುಹಿಸುವ ಪ್ರಯತ್ನದಲ್ಲಿದ್ದಾಗ, ಇತ್ತ ಪುತ್ತೂರಿನಲ್ಲಿ ಒಂದು ಪ್ರಯೋಗ ನಡೆದಿತ್ತು. ಗಾಯಕ ಭೀಮಸೇನ ಜೋಷಿ ಅವರ ಗೆಳೆಯರೂ ಆಗಿದ್ದ, ಬೊಳುವಾರು ಮಾಧವ ನಾಯಕ್‌ ಅವರು, ಅಂಜನದಲ್ಲಿ ಚಂದ್ರಲೋಕ ಕಾಣುವ ಪ್ರಯತ್ನಕ್ಕೆ ಕೈಹಾಕಿದ್ದರು. ಹಾಗೆ ಕಂಡ ಚಂದ್ರಲೋಕ ಹೇಗಿತ್ತು ಎಂಬುದನ್ನು ಆ ಹೊತ್ತಿಗೆ ಭವ್ಯವಾಣಿ ಪತ್ರಿಕೆಯಲ್ಲಿ ದಾಖಲಿಸಿದ್ದರು. ಆ ಲೇಖನದ ಯಥಾವತ್ತು ಮುದ್ರಣ ನಿಮ್ಮ ಮುಂದಿದೆ… ಇದರೊಟ್ಟಿಗೆ ಆ ಹೊತ್ತಿನಲ್ಲಿ ಚಂದ್ರಯಾನ ಯಾರ್ಯಾರ ಕಣ್ಣಿಗೆ ಹೇಗೆ ಕಂಡಿತ್ತೆಂಬುದರ ಆಪ್ತಚಿತ್ರಣವನ್ನೂ ಇಲ್ಲಿ ಜತೆಗಿಟ್ಟಿದ್ದೇವೆ…

ಖಗೋಳ ವಿಜ್ಞಾನದಲ್ಲಿ ಮತ್ತು ಆಕಾಶಕಾಯಗಳಲ್ಲಿ ನನಗೆ ಅತೀವ ಆಸಕ್ತಿ. ಎಳವೆಯಿಂದಲೇ ಚಂದ್ರ, ಗುರು, ಶನಿ, ಮತ್ತು ಇನ್ನಿತರ ಗ್ರಹಗಳ ಬಗ್ಗೆ ತಿಳಿಯಬೇಕೆಂಬ ಆಸಕ್ತಿ ಬೆಳೆಸಿಕೊಂಡಿದ್ದೆ. ದೂರದರ್ಶಕದಿಂದ ಆಕಾಶವನ್ನು ವೀಕ್ಷಿಸಿ ಪಡೆಯುವ ಅನುಭವ ಒಂದು ತೆರ. ಪ್ರತ್ಯಕ್ಷವಾಗಿ ಆ ಲೋಕ ಸುತ್ತಿ ಬಂದರೆ, ಅದು ಇನ್ನೊಂದು ಅದ್ಭುತ ಅನುಭವ. ಈ ವೇಳೆಗಾಗಲೇ ವೈಜ್ಞಾನಿಕ ಪ್ರಗತಿ ಸಾಕಷ್ಟಾಗಿದ್ದು, ಅಲ್ಲಿಗೆ ಗಗನಯಾತ್ರಿಗಳನ್ನು ಕಳುಹಿಸುವ, ಛಾಯಾಚಿತ್ರ ತೆಗೆಯುವ ಪ್ರಯತ್ನಗಳು ಸಾಕಷ್ಟು ನಡೆದಿವೆ. ಇವೆಲ್ಲ ನನ್ನಲ್ಲಿ ಬೆರಗು ಹುಟ್ಟಿಸಿವೆ. ಅತೀಂದ್ರಿಯ ಪ್ರಯೋಗದ ಮೂಲಕ ವಿಜ್ಞಾನಿಗಳಿಗಿಂತ ಕೆಲವು ವರ್ಷ ಮೊದಲೇ ಚಂದ್ರನಲ್ಲಿ ಏನಿರಬಹುದೆಂದು ನಾನು ಹುಡುಕುವ ಪ್ರಯತ್ನ ಮಾಡಿದೆ.

ಅದೊಂದು ದಿನ ನಾನು ಶ್ರೀರಾಮಪೇಟೆಯಲ್ಲಿರುವ ನಮ್ಮ ಮರದ ಕಾರ್ಖಾನೆಗೆ ಹೋದಾಗ ನಮ್ಮೂರಿನ ಹನುಮಂತ ಮಲ್ಯರು ನನ್ನ ಅಣ್ಣನೊಡನೆ ಅಂಜನದ ವಿಚಾರ ಮಾತನಾಡುತ್ತಿದ್ದರು. ಮಲ್ಯರು, ಜ್ಯೋತಿಷ್ಯ, ಅತೀಂದ್ರಿಯ ಶಕ್ತಿಗಳು ಮೊದಲಾದುವುಗಳ ವಿಷಯ ತುಂಬಾ ತಿಳಿದವರು. ಕೆಲವು ವರ್ಷಗಳ ಹಿಂದೆ ಯಾರೋ ಸಮರ್ಥ ಮಾಂತ್ರಿಕರು ಅಂಜನ ಹಾಕಿ ಕಳ್ಳನನ್ನು ಪತ್ತೆ ಮಾಡಿಕೊಟ್ಟಿದ್ದರ ವಿವರ ಹೇಳುತ್ತಿದ್ದರು. ಇದು ನನ್ನ ಕಿವಿಗೆ ಬಿದ್ದಾಗ ನನಗೆ ಪ್ರಿಯವಾದ ಸಮಸ್ಯೆಯೊಂದನ್ನು ಅಂಜನದ ಮೂಲಕ ಯಾಕೆ ಬಿಡಿಸಬಾರದು ಎಂದು ಯೋಚಿಸಿ, “ಯಾರಾದರೂ ಅಂಜನ ಹಾಕುವ ಸಮರ್ಥರು ಇರುವರೆ?’ ಎಂದು ಕೇಳಿದೆ. ಅಂಜನ ಹಾಕುವ ಸಮರ್ಥರೊಬ್ಬರು ಕನ್ಯಾನದಲ್ಲಿ ಇರುವರೆಂದೂ, ಅಗತ್ಯವಿದ್ದರೆ ಕರೆಸಬಹುದೆಂದೂ ತಿಳಿಸಿದರು. “ಆದರೆ, ಅಂಜನ ಏಕಾಗಿ?’ ಎಂದು ಕೇಳಿದರು. “ಈಗ ವೈಜ್ಞಾನಿಕ ಯಂತ್ರೋಪಕರಣಗಳ ಸಹಾಯದಿಂದ ವಿಜ್ಞಾನಿಗಳು ಗಗನಯಾತ್ರಿಗಳನ್ನು ಚಂದ್ರಲೋಕಕ್ಕೆ ಕಳಿಸುವ ಯತ್ನದಲ್ಲಿರುವರು. ನಾವು ಅವರಿಗಿಂತ ಮೊದಲೇ ಏಕೆ ಅಲ್ಲಿನ ವಿಷಯಗಳನ್ನು ತಿಳಿಯಬಾರದು?’ ಎಂದೆ. ನನ್ನ ಮಾತು ಅವರಿಗೆ ತಮಾಷೆಯಾಗಿ ಕಂಡಿರಬೇಕು. “ಇದು ಹಾಸ್ಯಕ್ಕೆಂದು ಹೇಳಿದ್ದಲ್ಲ. ಅಂಜನದಲ್ಲಿ ಬೇರೆ ಲೋಕವನ್ನು ನೋಡಬಹುದಾದರೆ ನೀವು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದೆ. ಇದು ತಮಾಷೆಯ ಮಾತಲ್ಲವೆಂದು ಅವರಿಗೆ ಖಚಿತವಾಯಿತು. “ಅಂಜನದಲ್ಲಿ ವಿಶ್ವದ ಯಾವ ಮೂಲೆಗೂ ಹೋಗಲು ಸಾಧ್ಯ. ಖಂಡಿತವಾಗಿ ಆ ಮಂತ್ರವಾದಿಯನ್ನು ಕರೆಸೋಣ’ ಎಂದರು. ಅಂಜನದ ಪೂರ್ವಾಪರವನ್ನೆಲ್ಲ ಬಲ್ಲ ಮಲ್ಯರಿಗೂ ಚಂದ್ರಲೋಕದ ಬಗ್ಗೆ ಆಸಕ್ತಿ ಹುಟ್ಟಿರಬೇಕು. ಒಂದು ಹುಣ್ಣಿಮೆಯ ರಾತ್ರಿ ಅವರನ್ನು ಕರೆಸುವ ವ್ಯವಸ್ಥೆ ಮಾಡಿದೆವು.

ಅಂಜನ ಎಂದರೇನು? ಮಾಂತ್ರಿಕ ತಯಾರಿಸಿದ ಕಪ್ಪು ವರ್ಣದ (ಮುಲಾಮು) ಅಂಜನವನ್ನು ಒಂದು ವೀಳ್ಯದೆಲೆಯ ನಡುವೆ ಉರುಟಾಗಿ ಸುಮಾರು ಒಂದು ಇಂಚು ಹಚ್ಚಿ ಆ ಎಲೆಯನ್ನು ನಮ್ಮ ಮುಂದೆ ಒಂದು ಪೀಠದ ಮೇಲಿಡುವರು. ಪಕ್ಕದಲ್ಲಿ ಒಂದು ಕಾಲುದೀಪ ಹಚ್ಚಿಡುವರು. ಅದರ ಜ್ಯೋತಿ ಅಂಜನದ ಹಚ್ಚಿದಲ್ಲಿ ಕಾಣಬೇಕು. ಎಲೆಯಲ್ಲಿನ ಅಂಜನ ನೋಡುತ್ತ ಕುಳಿತಿದ್ದ ವ್ಯಕ್ತಿಗೆ ಮಾಂತ್ರಿಕ ಮೇಲಿಂದ ಮೇಲೆ ಪ್ರಶ್ನೆ ಕೇಳುವನು. ಪ್ರಾರಂಭದಲ್ಲಿ ಅಂಜನದಲ್ಲಿ ದೀಪಶಿಖೆ ಕಾಣುವುದೇ ಎಂದು ಕೇಳಲಾಗುವುದು. “ಒಂದಿದ್ದುದು, ಎರಡಾಗಲಿ’ ಎಂದಾಗ ಎರಡು ಜ್ಯೋತಿಗಳು ಕಾಣುತ್ತವೆ. ಅನಂತರ ಮೂರಾಗಿ, ಇದಕ್ಕಿಂತ ಹೆಚ್ಚಾಗಿ ಕೊನೆಗೆ ಅವೆಲ್ಲ ಒಂದಾಗುವುದು. ಅನಂತರ ಮಾಂತ್ರಿಕನ ಇಷ್ಟದೇವತೆ ಹನುಮಂತ ಅಥವಾ ಇತರ ಶಕ್ತಿಗಳು ಕಂಡುಬರುವುದೇ ಎಂದು ಪ್ರಶ್ನಿಸುವನು. ಹೀಗೆ ಕಂಡುಬಂದಲ್ಲಿ ಆ ವ್ಯಕ್ತಿಗೆ ಅಂಜನ ತಾಗುತ್ತದೆಂದು ನಿರ್ಣಯಿಸುವನು. ಅಂಜನ ಪ್ರಯೋಗ ಸರಿರಾತ್ರಿಯಲ್ಲಿ ನಡೆಯುವುದು. ಪ್ರಯೋಗದಲ್ಲಿ ಭಾಗಿಯಾದ ವ್ಯಕ್ತಿಯನ್ನು ಯಾವುದೋ ಮನೆಗೆ ಹೋಗುವಂತೆ, ಅಲ್ಲಿನ ವಸ್ತುಗಳ ವಿವರ ಹೇಳುವಂತೆ ಮಂತ್ರವಾದಿ ಪ್ರಶ್ನಿಸುವನು. ಖಚಿತ ಉತ್ತರ ಬಂದರೆ ಅನಂತರ ನಮ್ಮ ಸಮಸ್ಯೆಗೆ ಉತ್ತರ ಬಿಡಿಸತೊಡಗುವನು.

ಅಂದು ಹುಣ್ಣಿಮೆ. ನನ್ನೊಂದಿಗೆ ಆತ್ಮೀಯರಾದ ಶ್ರೀ ರಾಮ ಪ್ರಭು ಮತ್ತು ಅಮೀನ ಗಣೇಶರಾಯರಿದ್ದರು. 10 ಗಂಟೆಗೆ ಹನುಮಂತ ಮಲ್ಯರು ಮಂತ್ರವಾದಿಯೊಂದಿಗೆ ಬಂದರು. ನಾವು ನಮ್ಮ ಮಿಲ್ಲಿನ ವಠಾರದಿಂದ ತುಸು ದೂರದಲ್ಲಿದ್ದ ಹನುಮಂತ ಮಲ್ಯರ ಸ್ವಾಧೀನವಿದ್ದ ಒಕ್ಕಲಿಲ್ಲದ ಮನೆಯೊಂದಕ್ಕೆ ಹೋದೆವು. ಎಲ್ಲೆಲ್ಲೂ ನೀರವತೆ; ನಿಶ್ಶಬ್ದ.

ಮೊದಲು ಅಂಜನ ನೋಡಲು ನಾನು ಸಿದ್ಧನಾದೆ. ನನಗೆ ಬೇಕಾದ ವಿವರವನ್ನು ನಾನೇ ಕಣ್ಣಾರೆ ಕಾಣಬಹುದಲ್ಲ ಎಂಬ ಉತ್ಸಾಹ. ಸುಮಾರು ಅರ್ಧ ಗಂಟೆಯಷ್ಟು ದಿಟ್ಟಿಸಿದರೂ ಅಂಜನದಲ್ಲಿ ನನಗೆ ಏನೇನೂ ಕಾಣದು. ಹೀಗಾಗಿ ರಾಮ ಪ್ರಭು, ಗಣೇಶರಾಯರು, ಮಲ್ಯರು ಕ್ರಮವಾಗಿ ಈ ಪ್ರಯೋಗದಲ್ಲಿ ಸೋತರು. ಅಂಜನ ಯಾರಿಗೂ ತಾಗದು. ಇಷ್ಟಾಗುವಾಗ ಸಮಯ ರಾತ್ರಿ 12.30 ಕಳೆದಿತ್ತು. ನಮಗಾದ ನಿರಾಶೆಗೆ ಮಿತಿಯಿಲ್ಲ.

ಆಗ ನಾನು ಜಲಬಾಧೆ ತೀರಿಸಲೆಂದು ಹೊರ ಬಂದಾಗ ಜಗುಲಿಯಲ್ಲಿ ಯಾರೋ ಮಲಗಿದ್ದರು! ಅಂಗಳದಲ್ಲಿ ಎತ್ತಿನ ಬಂಡಿಯೊಂದಿತ್ತು. ಎತ್ತುಗಳು ತಿಂದ ಹುಲ್ಲನ್ನು ಮೆಲುಕಾಡುತ್ತಿದ್ದವು. ನಾನು ಒಳಗಿದ್ದವರಿಗೆ ಜಗುಲಿಯಲ್ಲಿ ಮಲಗಿದ್ದವನ ವಿಚಾರ ತಿಳಿಸಿದೆ. “ಅವನಿಗೆ ಅಂಜನ ತಾಗಬಹುದೆ?’ ಎಂಬ ವಿಚಾರ ಬಂತು. ಆತನನ್ನು ಸ್ವಲ್ಪ ಕಷ್ಟದಿಂದಲೇ ಎಬ್ಬಿಸಿ, ಪ್ರಯಾಸದಿಂದ ಒಪ್ಪಿಸಿದೆವು. ಹಣದ ಆಮಿಷಕ್ಕೆ ಒಪ್ಪಿದ.

ಮುಖಮಾರ್ಜನ ಮಾಡಿಬಂದ ಅವನನ್ನು ಅಂಜನದ ಮುಂದೆ ಕೂರಿಸಿದೆವು. ಅಂಜನವನ್ನು ತದೇಕಚಿತ್ತದಿಂದ ವೀಕ್ಷಿಸುವಂತೆ ಸೂಚಿಸಿದೆವು. ಏಕಾಗ್ರತೆಯಿಂದ ಅಂಜನವನ್ನು ನೋಡಿದ. ಜ್ಯೋತಿ ಕಂಡಿತು. ಎರಡು, ಮೂರು ಹಲವಾಗಿ ಒಂದಾಯಿತು. ಆತನಿಗೆ ಅಂಜನ ಹತ್ತಿತ್ತೆಂದು ತಿಳಿದು ನೆಮ್ಮದಿಯ ಉಸಿರುಬಿಟ್ಟೆವು. ಆದರೂ ಅವನನ್ನು ಪರೀಕ್ಷಿಸಬೇಡವೇ?

ನನ್ನ ನಿರ್ದೇಶನದಂತೆ ಮಂತ್ರವಾದಿ ಅವನಿಗೆ ಪ್ರಶ್ನೆ ಹಾಕಿದ. ನಾವಿದ್ದಲ್ಲಿಂದ ಮುಂದೆ ಹೋದರೆ ಬಲಬದಿಗೆ ಏನಿದೆ? ಎಂದಾಗ “ಮರ ಸಿಗಿಯುವ ಮಿಲ್ಲು ಇದೆ’ ಎಂದ. ಇದು ಪುತ್ತೂರು- ಮಂಗಳೂರು ಹೆದ್ದಾರಿಯಲ್ಲಿದೆ. ಅಲ್ಲಿಂದ ಆತ ನಮ್ಮ ಮನೆ ಮುಂದೆ ಬಂದಾಗ ಮನೆಯ ಒಳಗೆ ಹೋಗುವಂತೆ ಹೇಳಿಸಿದೆ. ಆತ ಮನೆಯೊಳಗೆ ಬಂದಿದ್ದ.

“ಎಡಬದಿಗೆ ಏನು ಕಾಣುತ್ತದೆ?’ ನಮ್ಮ ಪ್ರಶ್ನೆ.
“ಒಂದು ಕೋಣೆ ಇದೆ’- ಅವನ ಉತ್ತರ.
ಮುಂದೆ ಅವನನ್ನು ಕೋಣೆಯೊಳಗೆ ಹೋಗುವಂತೆ ಹೇಳಿ, ಅಲ್ಲಿ ಏನು ಕಾಣುತ್ತದೆಂದಾಗ “ಕೆಲವರು ಮಲಗಿದ್ದಾರೆ’ ಎಂದನು. “ಎಡಬದಿಯಲ್ಲಿ ಏನಿದೆ?’ ಎಂದಾಗ, “ಮಾಳಿಗೆಗೆ ಹೋಗುವ ಮೆಟ್ಟಿಲಿದೆ. ಇಲ್ಲಿಂದ ಮೇಲೆ ಹತ್ತಿ ಹೋದರೆ, ಜಗುಲಿ ಇದೆ. ಅಲ್ಲಿಂದ ಒಳಗೆ ಹೋದರೆ, ವಿಶಾಲ ಹಜಾರವಿದೆ. ಅದರ ಮುಂದಿನ ಬಾಗಿಲಿನಿಂದ ಒಳಗೆ ಹೋದರೆ, ಕೋಣೆಯಲ್ಲಿ ಹೆಂಗಸೊಬ್ಬಳು ಮಗುವಿನೊಂದಿಗೆ ಮಲಗಿದ್ದಾಳೆ’ ಎಂದನು (ಅಲ್ಲಿ ನಿದ್ರಿಸಿದವರು ನನ್ನ ಹೆಂಡತಿ ಮತ್ತು ನನ್ನ ಎರಡು ವರ್ಷದ ಮಗು). ಮುಂದಿನ ಪ್ರಶ್ನೆ, “ಬಲಬದಿಯಲ್ಲೇನಿದೆ?’, “ಒಂದು ಕಪಾಟಿದೆ’ ಎಂದವನ ಉತ್ತರ. “ಬಾಗಿಲು ತೆಗೆ’ ಎಂದಾಗ “ತೆಗೆದೆ’ ಎಂದ. “ಅದರ ಮೇಲಿನ ಅರೆಯಲ್ಲಿ ಒಂದು ಸಣ್ಣ ಕರಡಿಗೆ ಇದೆ. ಅದರಲ್ಲೇನಿದೆ?’ ಎಂದು ಕೇಳಲು, “ಅದರಲ್ಲಿ ನೀಲಿ ಬಣ್ಣದ ಹುಡಿಯಿದೆ’ ಎಂದನು (ಅದು ಮೈಲುತುತ್ತಿನ ಹುಡಿ). ಮುಂದೆ “ಕೋಣೆಯ ಮುಚ್ಚಿಗೆಯಲ್ಲಿ ಏನಾದರೂ ಕಾಣುತ್ತದೆಯೇ?’ ಎಂದರೆ, “ಹೌದು. ಬುಡದಲ್ಲಿ ದೊಡ್ಡ ಬುರುಡೆಯಿರುವ ವಸ್ತ್ರದ ಹೊದಿಕೆಯುಳ್ಳ ಒಂದು ಉದ್ದವಾದ ವಸ್ತುವಿದೆ’ ಎಂದನು (ಅದು ನಾನು ಬಳಸುತ್ತಿದ್ದ ಗೌಸು ಹಾಕಿದ ತಾನ್‌ಪುರ). ಈ ಪ್ರಶ್ನೋತ್ತರದಿಂದ ಗಾಡಿಯವನಿಗೆ ಅಂಜನ ತಾಗಿದೆಯೆಂದು ಖಚಿತವಾಯಿತು. ನನ್ನ ಮನೆಯಲ್ಲಿದ್ದ ಅವನನ್ನು ಪ್ರಶ್ನೆ ಮೂಲಕ ನಾವಿರುವ ಮನೆಯ ಅಂಗಳಕ್ಕೆ ಕರೆಸಿದೆವು. ಈ ಕೆಳಗಿನ ಪ್ರಶ್ನೆಗಳಿಗೆ ತೊಡಗಿದೆವು.

ಪ್ರ: ನಿನಗೆ ಮೇಲೆ ಆಕಾಶದಲ್ಲಿ ಏನು ಕಾಣುತ್ತದೆ?
ಉ: ಚಂದ್ರ ಮತ್ತು ನಕ್ಷತ್ರ.
ಪ್ರ: ಈಗ ನೀನು ಚಂದ್ರನಲ್ಲಿಗೆ ಹೋಗಬೇಕು.
ಉ: ಅದು ನನ್ನಿಂದ ಸಾಧ್ಯವಾಗದಲ್ಲಾ!
ಪ್ರ: ಹಾಗಾದರೆ, ನಿನ್ನ ಜೊತೆಗಿರುವ ಆಂಜನೇಯನನ್ನು ಅಲ್ಲಿಗೆ ಕೊಂಡು ಹೋಗುವಂತೆ ವಿನಂತಿಸು.
ಉ: ವಿನಂತಿಸಿದೆ.
ಪ್ರ: ಈಗ ನಿನಗೆ ಏನನ್ನಿಸುತ್ತಿದೆ?
ಉ: ನಾನು ಗಾಳಿಯಲ್ಲಿ ಮೇಲೇರುತ್ತಿದ್ದೇನೆ.
ಪ್ರ: ಚಂದ್ರನನ್ನು ಮುಟ್ಟಿದೆಯಾ?
ಉ: ಹೌದು.
ಪ್ರ: ಈಗ ನೀನು ಎಲ್ಲಿದ್ದಿ? ನಿನಗೆ ಎಂಥ ಅನುಭವವಾಗುತ್ತಿದೆ?
ಉ: ನಾನೊಂದು ಎತ್ತರವಾದ ಪರ್ವತದ ಮೇಲಿದ್ದೇನೆ? ಬಲವಾದ ಗಾಳಿ ಬೀಸುತ್ತಿದೆ. ನನಗೆ ಬಹಳ ಚಳಿಯಾಗುತ್ತಿದೆ.
ಪ್ರ: ಅಲ್ಲಿಂದ ಕೆಳಗೆ ನೋಡಿದಾಗ ಏನು ಕಾಣಿಸುತ್ತಿದೆ?
ಉ: ದೊಡ್ಡ ದೊಡ್ಡ ಹೊಂಡಗಳು ಕಾಣುತ್ತಿವೆ. ನೆಲವೆಲ್ಲ ಧೂಳಿನಿಂದ ತುಂಬಿದೆ.
ಪ್ರ : ಸರಿ. ಬೆಟ್ಟದಿಂದ ಕೆಳಗಿಳಿ.
ಉ: ಇಳಿದೆ.
ಪ್ರ: ಎಲ್ಲಿಯಾದರೂ ಹಾದಿ ಕಾಣುತ್ತಿದೆಯೇ?
ಉ: ಹತ್ತಿರದಲ್ಲಿಲ್ಲ. ಬಹಳ ದೂರದಲ್ಲಿ ಒಂದು ಹಾದಿ ಕಾಣುತ್ತಿದೆ.
ಪ್ರ: ಆ ಹಾದಿಯಲ್ಲಿ ಮುಂದುವರಿದು ಹೋಗು.
ಉ: ಹೋಗುತ್ತಿದ್ದೇನೆ. ನಾನು ತುಂಬಾ ಹಗುರವಾದಂತಹ ಅನುಭವವಾಗುತ್ತಿದೆ. ನಡೆಯಲು ಬಹಳ ಸುಲಭವಾಗುತ್ತಿದೆ. ಎಷ್ಟು ನಡೆದರೂ ಆಯಾಸವಿಲ್ಲ. ಆದರೆ, ಉಸಿರಾಡಲು ಸ್ವಲ್ಪ ಕಷ್ಟವಾಗುತ್ತಿದೆ. ದಮ್ಮು ಕಟ್ಟಿದ ಅನುಭವ.
ಪ್ರ: ಈಗ ಏನು ಕಾಣಿಸುತ್ತಿದೆ?
ಉ: ಕೆಲವು ಗುಡಿಸಲುಗಳು ಕಾಣಿಸುತ್ತಿವೆ. (ನನಗೆ ಆಶ್ಚರ್ಯ, ಆನಂದ ಸ್ವರ್ಗಕ್ಕೆ ಎರಡೇ ಗೇಣು!)
ಪ್ರ: ಗುಡಿಸಲುಗಳನ್ನು ಯಾವುದರಿಂದ ಕಟ್ಟಿದ್ದಾರೆ?
ಉ: ಅಡ್ಡಾದಿಡ್ಡಿಯಾದ ಕಲ್ಲುಗಳನ್ನು ಪೇರಿಸಿ ಕಟ್ಟಿದ್ದಾರೆ.
ಪ್ರ: ಗುಡಿಸಲು ಮಾಡಿಗೆ ಹೊದಿಕೆ ಇದೆಯೇ?
ಉ: ಹೊದಿಕೆ ಇದೆ. ಬೆಟ್ಟದಡಿಯಲ್ಲಿ ಅಗೆದಾಗ ಸಿಕ್ಕುವ ಕಲ್ಲಿನ ಚಪ್ಪಡಿ ಹೊದಿಸಿರುವರು.
ಪ್ರ: ಅಲ್ಲಿ ಜನರಿದ್ದಾರೆಯೇ? ಇದ್ದರೆ ಅವರು ಹೇಗಿದ್ದಾರೆ?
ಉ: ಇಲ್ಲಿ ಜನರಿದ್ದಾರೆ. ಅವರೆಲ್ಲ ಅಜಾನುಬಾಹುಗಳು, ದೃಢಕಾಯರು, ಅವರಿಗೆ ಮೈ ತುಂಬಾ ರೋಮವಿದ್ದು ತಲೆಯ ಹತ್ತಿರ ಅಗಲವಿದ್ದು, ಗದ್ದದ ಹತ್ತಿರ ಚೂಪಾಗಿದ್ದು ತ್ರಿ ಕೋನಾಕಾರದ ಮುಖದವರು, ತಲೆಗೂದಲು ಹುಬ್ಬಿನಿಂದಲೇ ಪ್ರಾರಂಭವಾಗುವುದು, ಕಣ್ಣಗುಡ್ಡೆ ಸ್ವಲ್ಪಹೊರ ಚಾಚಿದಂತಿವೆ. ಬಣ್ಣದಲ್ಲಿ ಅವು ಸ್ವಲ್ಪ ಕೆಂಪಾಗಿವೆ, ಉದ್ದ ಮೂಗು, ಸ್ವಲ್ಪ ಅಗಲ ಕಿವಿ.
ಪ್ರ: ಸ್ತ್ರೀಯರಿರುವರೆ?
ಉ: ಇದ್ದಾರೆ. ಅವರಿಗೆ ಸ್ತನಗಳಿದ್ದರೂ ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ಪದ್ಧತಿಯಿಲ್ಲ. ಅವರು ಬೆಳೆಸುವ ಜೋಳದ ವಸ್ತುವಿನ ರಸ ಕುಡಿಸುವರು. ಜನರು ಸಹ ಈ ಧಾನ್ಯವನ್ನೇ ತಿನ್ನುವರು. ಅಲ್ಲದೆ, ಬಾಳೆಹಣ್ಣಿನಂತಹ ಬೆಳೆಯನ್ನು ಬೆಳೆಸುವರಾದರೂ ಅವು ನಮ್ಮಲ್ಲಿನ ಹಣ್ಣಿನಂತಿಲ್ಲ. ಬುಡದಲ್ಲಿ ಸಪೂರವಾಗಿ ತುದಿಯಲ್ಲಿ ತೋರವಾಗಿವೆ.
ಪ್ರ: ಅವರು ನಗ್ನರಾಗಿರುವರೇ?
ಉ: ಇಲ್ಲ, ಸೊಂಟಕ್ಕೆ ಏನನ್ನೋ ಸುತ್ತಿಕೊಂಡಿದ್ದಾರೆ.
ಪ್ರ: ಏನದು?
ಉ: ಅದು ಸಹ ಗುಡ್ಡದ ಕೆಳಗೆ ದೊರೆಯುವ ತೆಳ್ಳಗಿನ ತಗಡಿನಂಥ ವಸ್ತ್ರŒ. ಇದನ್ನು ಬರೆಯಲೂ ಉಪಯೋಗಿಸುವರು. ಅದರಲ್ಲಿ ಒತ್ತಿ ಬರೆಯಲು ಗಿಡಗಳ ತುಂಡನ್ನು ಬಳಸುವರು. ಅಕ್ಷರಗಳು ಅಡಾದಿಡ್ಡಿಯಾಗಿವೆ. (ಓದು ಬರಹ ಬಾರದ ಅವನು ಅದನ್ನು ವರ್ಣಿಸುವುದಾದರೂ ಹೇಗೆ?)
ಪ್ರ: ಅವರ ಲೈಂಗಿಕ ಕ್ರಿಯೆಯ ಬಗ್ಗೆ ಏನು ತಿಳಿಯುವುದು?
ಉ: ಅದು ಇಲ್ಲಿನಂತೆಯೇ ಇದೆ. ಆದರೆ, ಯಾವ ದಂಪತಿಗೂ ಎರಡು ಅಥವಾ ಮೂರಕ್ಕಿಂತ ಹೆಚ್ಚು ಮಕ್ಕಳಿಲ್ಲ.
ಪ್ರ: ಅಲ್ಲಿ ದೇವಾಲಯಗಳಿವೆಯೇ?
ಉ: ಇಲ್ಲ. ಜನರೆಲ್ಲ ಬಯಲಲ್ಲಿ ಒಂದು ಕಡೆ ಸೇರಿ ಪ್ರಾರ್ಥಿಸುವರು. ಆದರೆ, ಮೂರ್ತಿಗಳಾವುದೂ ಇಲ್ಲ.
ಪ್ರ : ಅಲ್ಲಿ ಬಾವಿಗಳಿವೆಯೇ?
ಉ: ಇಲ್ಲ. ಜನರು ಬಾಯಾರಿಕೆಯಾದಾಗ ನಿರ್ದಿಷ್ಟ ಸ್ಥಳದಲ್ಲಿ ನೆಲವನ್ನು ಕೊರೆದು ಅಲ್ಲಿ ಸಿಕ್ಕಿದ ಕಲ್ಲುಗಳು ಬಾಯಿಗೆ ಹಾಕಿಕೊಳ್ಳುತ್ತಾರೆ. ಅದರಿಂದಲೇ ಅವರ ದಾಹ ತಣಿಯುತ್ತದೆ. ಜೋಳದಂಥ ಧಾನ್ಯ ಮತ್ತು ಬಾಳೆಹಣ್ಣಿನಂಥ ಹಣ್ಣುಗಳನ್ನು ಅವರು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಬೆಳೆಸುತ್ತಾರೆ.
ಪ್ರ: ಮೇಲೆ ನೋಡಿದಾಗ ಏನು ಕಾಣುತ್ತದೆ?
ಉ: ನಕ್ಷತ್ರಗಳು ಮತ್ತು ಆಕಾಶ. ವಿಶೇಷವೆಂದರೆ ನಕ್ಷತ್ರಗಳು, ಚಂದ್ರ ಎಲ್ಲವೂ ನಮ್ಮಲ್ಲಿಗಿಂತ ಬಹಳ ದೊಡ್ಡದಾಗಿ ಕಾಣುತ್ತಿದೆ. ಆಕಾಶದ ಬಣ್ಣ ನಮ್ಮಲ್ಲಿ ತೋರುವಂತೆ ನೀಲಿಯಲ್ಲ. ಹಳದಿ!
ಪ್ರ: ಆ ಜನರಿಗೆ ರೋಗರುಜಿನಗಳಿವೆಯೇ?
ಉ: ಇಲ್ಲ. ಇಲ್ಲಿ ಪೂರ್ಣಾಯುಷ್ಯ ತುಂಬದೆ ಯಾರೂ ಸಾಯುವುದಿಲ್ಲ. ಸತ್ತವರನ್ನು ಗುಳಿತೋಡಿ ಹುಗಿಯುತ್ತಾರೆ.
ಪ್ರ: ಬೆಂಕಿ ಇದೆಯೇ?
ಉ: ಇಲ್ಲ. ಎಲ್ಲವನ್ನೂ ಅವರು ಹಸಿಯಾಗಿಯೇ ತಿನ್ನುತ್ತಾರೆ.
ಪ್ರ: ರಾತ್ರಿ ಬೆಳಕಿಗೆ ಏನು ಮಾಡುವರು?
ಉ: ಗುಡ್ಡದ ಕೆಳಗೆ ನಿರ್ದಿಷ್ಟ ಸ್ಥಳದಲ್ಲಿ ಅಗೆದಾಗ ಅವರಿಗೆ ಒಂದು ತರದ ಬೆಳಕು ಬೀರುವ ಕಲ್ಲು ಸಿಗುವುದು. ಅದನ್ನೇ ರಾತ್ರಿ ಬೆಳಕಿಗೆಂದು ಬಳಸುವರು.
ಪ್ರ: ಬೇರೆ ಪ್ರಾಣಿಗಳಿವೆಯೇ?
ಉ: ನಾಯಿಯಂತಿರುವ ಕೆಲವು ಪ್ರಾಣಿಗಳು ಮಾತ್ರ ಇವೆ.
ಪ್ರ: ಭೂಮಿಗೂ ಅವರಿಗೂ ಏನಾದರೂ ಸಂಪರ್ಕವಿತ್ತೇ?
ಉ: ಬಹಳ ಹಿಂದೆ ಸಂಪರ್ಕ ಮಾತ್ರವಲ್ಲ. ಬಂದು ಹೋಗುವುದೂ ಇತ್ತಂತೆ. ಈಗ ಅವೆಲ್ಲ ಭೂತಕಾಲದ ವಿಚಾರಗಳು. ಪ್ರಕೃತಿ ವಿಕೋಪದಿಂದ ಎಲ್ಲವೂ ನಾಶವಾಗಿದೆಯಂತೆ.
ಪ್ರ: ಅಲ್ಲಿ ಸಾಧಾರಣ ಎಷ್ಟು ಜನರಿರಬಹುದು?
ಉ: ಸುಮಾರು 300-400 ಜನರಿದ್ದಾರೆ. ಇವರಲ್ಲಿ ವೈಮನಸ್ಯವಿಲ್ಲ. ಇಡೀ ಸಮೂಹದ ಹಿರಿಯನೊಬ್ಬನ ಆದೇಶದಂತೆ ಎಲ್ಲವೂ ನಡೆಯುವುದು. ಎಲ್ಲರೂ ಒಂದಾಗಿ ಬೆಳೆ ಬೆಳೆಯುತ್ತಾರೆ ಮತ್ತು ಹಂಚಿ ಉಣ್ಣುತ್ತಾರೆ.

ಇಷ್ಟಾಗುವ ವೇಳೆಗೆ ಬೆಳಗ್ಗೆ 4.30 ಗಂಟೆಯಾಗಿರಬಹುದು. ಅಂಜನ ಕಾರ್ಯಕ್ರಮ ಮುಕ್ತಾಯವಾಯಿತು. ಗಾಡಿಯವನನ್ನು ಪುರಸ್ಕರಿಸಿ ಕಳಿಸಿದೆವು. ನಮ್ಮ ಬಳಿ ಈಗ ಉಳಿದಿರುವುದು ಅವನು ಕಂಡ ಲೋಕದ ವಿಚಾರ ಮಾತ್ರ. ಅದು ಚಂದ್ರ ಲೋಕ ಅಥವಾ ಬೇರಾವುದೇ ಲೋಕವಾಗಿರಲೂ ಸಾಕು. ನಮಗಂತೂ ತಿಳಿಯದು. ನಾಗರಿಕತೆಯೊಂದು ನಾಶವಾಗಿ ಅದರಲ್ಲಿ (ಅವಶೇಷ ಇದ್ದೂ ಇಲ್ಲದಂತೆ) ಉಳಿದ ಜೀವ ಜಗತ್ತು ಹೇಗೆ ಬಾಳಬಹುದು ಎನ್ನಲು ಇದೊಂದು ಉದಾಹರಣೆಯೇ ಅಥವಾ ಚಂದ್ರನಿಗಿಂತ ಆಚೆಯ ಯಾವುದಾದರೂ ಚಿಕ್ಕ ಗ್ರಹದಲ್ಲಿ ಈ ಜನವಸತಿ ಇರಬಹುದೇ? ಅವರ ಜೀವನ ಕ್ರಮ, ಪರಿಸರ, ವಾತಾವರಣ, ಭೌಗೋಳಿಕ ಪರಿಸ್ಥಿತಿಗೆ ಸರಿಯಾಗಿ ಅವರ ದೇಹದಲ್ಲಿ ಮಾರ್ಪಾಡಾಗಿರಬಹುದೇ? ಅವರು ಹಿಂಸಾಪ್ರವೃತ್ತಿಯ ಅನಾಗರಿಕರಂತಿರಲಿಲ್ಲ. ವ್ಯವಸಾಯ, ಓದು, ಬರಹ, ದೈವಭಕ್ತಿಯುಳ್ಳ ಸಾಧು ಜನ. ಸರಳ ಆಹಾರ, ಉಡುಗೆಯುಳ್ಳ ನಿಸರ್ಗದ ಮಕ್ಕಳು. ಬಹುಶಃ ನಾಗರಿಕತೆಯ ತುತ್ತ ತುದಿಗೇರಿ ಮಾನವ ಮತ್ತೆ ಕೆಳಗಿಳಿದ ಅವಸ್ಥೆಯೂ ಇರಬಹುದು. ಅಂತೂ ನಾವು ಅಂಜನದಲ್ಲಿ ಚಂದ್ರಲೋಕದ (?) ಪತ್ತೆ ಹಚ್ಚಿದೆವು. ಒಂದು ಸಂಸ್ಕೃತಿ, ಜನಪದ ಎಲ್ಲಿಯದೇ ಇರಲಿ. ಚಂದ್ರಲೋಕದ ಅಲೌಕಿಕ ಜೀವಿಗಳೆಂದು ಅವರನ್ನು ಕರೆಯಬಹುದು. ಈ ಜೀವಿಗಳ ಬಗ್ಗೆ ಅಂಜನದಿಂದ ದೊರಕಿದ ಮಾಹಿತಿ ಮಾತ್ರ ಸತ್ಯವೆಂದೇ ನನ್ನ ತಿಳಿವಳಿಕೆ.
ಎಲ್ಲಾ ಮುಗಿದು ಹೊರ ಬಂದಾಗ ಬಾನಿನಲ್ಲಿ ಪೂರ್ಣಚಂದ್ರ ಶೋಭಿಸುತ್ತಿದ್ದ. ವಿಜ್ಞಾನದ ಈ ಯುಗದಲ್ಲಿ ಚಂದ್ರನ ರಹಸ್ಯ ಇನ್ನು ಬಹಳ ಸಮಯ ಉಳಿಯಲಾರದು ಎಂದು ನನ್ನ ಮನದಲ್ಲಿಯೇ ಅಂದುಕೊಂಡೆ.

ಪಿ. ಮಾಧವನಾಯಕ್‌, ಬೊಳುವಾರು
ಸಮನ್ವಯ: ರಮಾನಂದ ನಾಯಕ್‌, 

ಟಾಪ್ ನ್ಯೂಸ್

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್‌ ಮುಂಡಾಡಿ

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದವರು ಯಾರು?

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Yuva Rajkumar: ʼಎಕ್ಕʼ ಇದು ಯುವ ಹೊಸ ಲೆಕ್ಕ

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ!

Tirupati: ಮೂರು ವರ್ಷದ ಬಾಲಕಿ ಮೇಲೆ ಸಂಬಂಧಿಯಿಂದಲೇ ಅತ್ಯಾ*ಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

abhimanyu kashinath next movie suri loves sandhya

Abhimanyu Kashinath; ಸೂರಿ ಲವ್‌ ಗೆ ಉಪ್ಪಿ ಮೆಚ್ಚುಗೆ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

arrested

Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್

1-a-shaina

Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.