ಜಗತ್ತು ಬೆಚ್ಚಿಬಿದ್ದು, ರೋಮಾಂಚಿತವಾಯ್ತು!
Team Udayavani, Jul 20, 2019, 5:00 AM IST
– ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಸಾಹಿತಿ
1969ರ ಹೊತ್ತಿಗೆ: ಚಿತ್ರಕೂಟದ ಮನೆಯಲ್ಲಿದ್ದರು.
ಜುಲೈ 20ನೇ ತಾರೀಖು, ನಾಲ್ಕು ಗಂಟೆ, ಹದಿನೇಳು ನಿಮಿಷ, 43ನೇ ಸೆಕೆಂಡ್… ಮನುಷ್ಯನ ಇತಿಹಾಸದಲ್ಲೇ ಅಸದೃಶವಾದ ಅಮೋಘ ಗಳಿಗೆ. ಭೂಮಿಯ ಮಾನವನೊಬ್ಬ ಎರಡೂವರೆ ಲಕ್ಷ ಮೈಲು ದೂರದಲ್ಲಿ ಚಂದ್ರಮಂಡಲದ ಮೇಲೆ ತನ್ನ ಮೊದಲ ಹೆಜ್ಜೆ ಇಟ್ಟಿದ್ದು, ನೀಲ್ ಆರ್ಮ್ಸ್ಟ್ರಾಂಗ್ ಮಾತುಗಳಲ್ಲೇ ಹೇಳುವುದಾದರೆ, “ನಾನಿಡುತ್ತಿರುವ ಈ ಸಣ್ಣ ಹೆಜ್ಜೆ, ಇಡೀ ಮನುಷ್ಯಕುಲ ಮಹಾಜಿಗಿತ ಜಿಗಿದು ಇಲ್ಲಿ ಇಡುತ್ತಿರುವ ಅಭೂತಪೂರ್ವ ಹೆಜ್ಜೆ’.
ಜಗತ್ತಿನಾದ್ಯಂತ ಚಂದ್ರನಿಂದಲೇ “ಲೈವ್ ಟೆಲಿಕಾಸ್ಟ್’ ಎಂದು ತಿಳಿಸಲಾಗಿತ್ತು. ಟೆಲಿವಿಷನ್ ಇರುವ ದೇಶಗಳಲ್ಲೆಲ್ಲ ಪ್ರತಿಯೊಬ್ಬರೂ ಕಾತರದಿಂದ ವೀಕ್ಷಿಸುತ್ತಿದ್ದರು. ಮನುಷ್ಯನ ಊಹೆಗೂ ನಿಲುಕದ ದೂರದ ಇನ್ನೊಂದು ಲೋಕದಲ್ಲಿ ಈ ಲೋಕದ ಮನುಷ್ಯನೊಬ್ಬನ ಹೆಜ್ಜೆ ಗುರುತು ಬೀಳುವುದನ್ನು. ಆರ್ಮ್ಸ್ಟ್ರಾಂಗ್ ಹತ್ತಿರವಿದ್ದ ಟೆಲಿವಿಷನ್ ಕ್ಯಾಮೆರಾ, ಚಂದ್ರವಾಹನದೊಳಗಿದ್ದ ಆಲ್ಡಿನ್ ಕ್ಯಾಮೆರಾ ಎರಡೂ ಚಿತ್ರ ತೆಗೆಯುತ್ತಾ, ಭೂಮಿಗೆ ನೇರ ಪ್ರಸಾರ ಮಾಡುತ್ತಿದ್ದವು. ಆರ್ಮ್ಸ್ಟ್ರಾಂಗ್, ಚಂದ್ರನ ಮೇಲೆ ನಡೆದಾಡುವುದಕ್ಕೇ ಮಾಡಿದ್ದ ವಿಶೇಷವಾದ ಬೂಡ್ಸುಗಳನ್ನು ಹಾಕಿಕೊಂಡು ನಿಧಾನವಾಗಿ ಚಂದ್ರವಾಹನದ ಏಣಿ ಮೆಟ್ಟಿಲುಗಳನ್ನು ಇಳಿದಿಳಿದು ಚಂದ್ರನ ಮೇಲೆ ತನ್ನ ಮೊದಲ ಹೆಜ್ಜೆಯನ್ನು ಊರಿದ. ಇಡೀ ಜಗತ್ತು ಬೆಚ್ಚಿಬಿದ್ದು ರೋಮಾಂಚಿತವಾಯ್ತು!
(ಲೇಖಕರ ಮಿಲೇನಿಯಂ ಸರಣಿಯ “ಚಂದ್ರನ ಚೂರು’ ಕೃತಿಯ ಆಯ್ದ ಭಾಗವಿದು. “ಪುಸ್ತಕ ಪ್ರಕಾಶನ’ದ ಪ್ರಕಟಣೆ)
ಆ ಸುದ್ದಿಯನ್ನು ಓದುವಾಗ…
– ಪುರುಷೋತ್ತಮ್
1969ರ ಹೊತ್ತಿಗೆ: ಆಕಾಶವಾಣಿ ಉದ್ಘೋಷಕ
ಆ ಸುದ್ದಿ ಓದುವಾಗ ಸ್ವತಃ ನಾನೇ ರೋಮಾಂಚಿತನಾಗಿದ್ದೆ. ಪಿಟಿಐ ಏಜೆನ್ಸಿಯಿಂದ ಟೆಲಿಪ್ರಿಂಟರ್‌ನಲ್ಲಿ ಸುದ್ದಿ ಸ್ವೀಕರಿಸುವಾಗಲೂ, ನಮ್ಮ ಸುದ್ದಿ ಮನೆಯಲ್ಲಿ ಚರ್ಚೆಗಳಾಗಿದ್ದವು. ಮನುಷ್ಯ ಭೂಮಿಯಿಂದ ಅಲ್ಲಿಗೆ ಹೋಗಿ, ನಾಲ್ಕು ಹೆಜ್ಜೆ ಇಡುವುದೆಂದರೇನು? ಅದ್ಭುತ ಸಾಹಸವೇ ಅಲ್ಲವೇ! ನಾಸಾದ ಚೊಚ್ಚಲ ಚಂದ್ರಯಾನದ ಸುದ್ದಿಯನ್ನು ಆಕಾಶವಾಣಿಯಲ್ಲಿ ನಿರಂತರ ಫಾಲೋಅಪ್ ಮಾಡಿದ್ದೆವು. ನೀಲ್ ಆರ್ಮ್ಸ್ಟ್ರಾಂಗ್, ಚಂದ್ರಕಾಯದ ಮೇಲೆ ಹೆಜ್ಜೆ ಇಟ್ಟ ಸುದ್ದಿಗೆ ಪ್ರದೇಶ ಸಮಾಚಾರದಲ್ಲಿ 3-4 ನಿಮಿಷದ ಪ್ರಾಮುಖ್ಯತೆ ನೀಡಿದ್ದೆವು. ಗಗನಯಾನಿಗಳ ಸಿದ್ಧತೆ ಹೇಗಿತ್ತು? ಅದಕ್ಕೆಷ್ಟು ವೆಚ್ಚವಾಗಿತ್ತು? ರಾಕೆಟ್ ಸಿದ್ಧಪಡಿಸಿದ್ದು ಹೇಗೆ?- ಎಂಬುದನ್ನೆಲ್ಲ ಪಾಯಿಂಟ್ಸ್ ರೂಪದಲ್ಲಿ ಮಾಡಿಕೊಂಡು, ನಾಡಿನ ಜನತೆಗೆ ಸುದ್ದಿ ಓದಿದ್ದೆ.
ಮೈಸೂರಿನ ಟೌನ್‌ಹಾಲ್ ಎದುರು, ನಾಡಿನ ಪಂಚಾಯ್ತಿ ಕಚೇರಿಗಳ ಮುಂದೆ, ಅರಳಿಕಟ್ಟೆಗಳ ಬುಡದಲ್ಲಿ ಜನ ಮರ್ಫಿ, ಫಿಲಿಪ್ಸ್, ಬುಶ್ ರೇಡಿಯೋಗಳನ್ನು ಹಿಡಿದು, ಆ ಸುದ್ದಿಯ ರೋಮಾಂಚನ ಅನುಭವಿಸಿದ್ದನ್ನು ನಾನು ಕೇಳಿದ್ದೆ. ಬಾಹ್ಯಾಕಾಶದ ಬಗ್ಗೆ ಕುತೂಹಲವಿದ್ದವರು, ಆಕಾಶವಾಣಿ ಕಚೇರಿಗೆ ಕರೆ ಮಾಡಿ, ವಿವರ ಕೇಳುತ್ತಿದ್ದರು. ಕೆಲವರು ಪತ್ರವನ್ನೂ ಬರೆದಿದ್ದರು.
ಕೆಲ ವರುಷಗಳ ಹಿಂದೆ ಅಮೆರಿಕದ ನನ್ನ ಮಗನ ಮನೆಗೆ ಹೋದಾಗ, ನನಗೆ ಅಲ್ಲಿ ಕಾಡಿದ್ದು ಅದೇ ಚಂದ್ರಯಾನದ ಸುದ್ದಿಯ ನೆನಪು. ನಾಸಾಕ್ಕೆ ಹೋಗಿಬರಬೇಕು, ಅದರ ನೆನಪಿನೊಂದಿಗೆ ಜಾರಬೇಕು ಅಂತ ಆಸೆಯಿತ್ತಾದರೂ, ಕಾರಣಾಂತರಗಳಿಂದ ಕೈಗೂಡಿರಲಿಲ್ಲ.
ಪ್ರತ್ಯಕ್ಷ ದೇವರ ಮೇಲೆ ನಡಿಗೆಯೇ?
– ಸುಧೀಂದ್ರ ಹಾಲ್ದೊಡ್ಡೇರಿ, ವಿಜ್ಞಾನಿ, ಲೇಖಕ
1969ರ ಹೊತ್ತಿಗೆ: 3ನೇ ತರಗತಿ
ಚಂದ್ರನ ಮೇಲೆ ಮನುಷ್ಯ ಕಾಲಿಟ್ಟ ಸುದ್ದಿ ರೇಡಿಯೊ ಮೂಲಕ ಬಿತ್ತರವಾಗುವ ಹೊತ್ತಿಗೆ ನಾನು ನಾನು ಮಾವಳ್ಳಿ ಸಮೀಪದ ಜರ್ನಲಿಸ್ಟ್ಸ್ ಕಾಲನಿ ರೆಸಿಡೆಂಟ್ಸ್ ಅಸೋಸಿಯೇಷನ್ ಸ್ಕೂಲ್‌ನಲ್ಲಿ 3ನೇ ತರಗತಿಯಲ್ಲಿದ್ದೆ. ಶಾಲೆಯಲ್ಲಿ ಹೆಡ್ ಮಿಸ್ಟ್ರೆಸ್ ಸೀತಾಲಕ್ಷ್ಮಿಯವರು ಪ್ರತಿ ತರಗತಿಗೆ ಬಂದು ಈ ಕುರಿತು ಅನೌನ್ಸ್ ಮಾಡಿದ್ದರ ಅಸ್ಪಷ್ಟ ನೆನಪಿದೆ. ಆದರೆ, ಅಂದು ಬೇಗ ಕಚೇರಿಗೆ ತೆರಳಿ ತಡವಾಗಿ ಮನೆಗೆ ಬಂದ ನನ್ನ ತಂದೆ (ಆಗ ಅವರು “ಸಂಯುಕ್ತ ಕರ್ನಾಟಕ’ದಲ್ಲಿ ಸುದ್ದಿ ಸಂಪಾದಕರು) ನನ್ನ ಅಜ್ಜಿ, ನನ್ನ ಅಮ್ಮ, ನನ್ನ ಅಕ್ಕ ಇವರೆಲ್ಲರಿಗೆ ಈ ಬಗ್ಗೆ ವಿವರಿಸುತ್ತಿದ್ದ ದೃಶ್ಯವೂ ನೆನಪಿನಲ್ಲಿದೆ. ನಾವೆಲ್ಲರೂ ಅವರ ವಿವರಣೆಯನ್ನು ನಂಬಿದ್ದರೂ, ನನ್ನ ಅಜ್ಜಿಗೆ ಮಾತ್ರ ಪ್ರತ್ಯಕ್ಷ ದೇವರಾದ ಸೂರ್ಯ, ಚಂದ್ರರ ಮೇಲೆ ಮನುಷ್ಯರು ನಡೆದಾಡುವುದು ಅಸಾಧ್ಯವೆನಿಸಿತ್ತು.
ಮರುದಿನದ ಪತ್ರಿಕೆಗಳಲ್ಲಿ (ಮನೆಗೆ 8 ಪತ್ರಿಕೆಗಳು ಬರುತ್ತಿದ್ದ ದಿನಗಳವು) ಭಾರಿಗಾತ್ರದ ಚಿತ್ರಗಳೊಡನೆ ಸುದ್ದಿಗಳು ಪ್ರಕಟವಾಗಿದ್ದವು. ಮುಖಪುಟದಿಂದ ಕೊನೆಯ ಪುಟದವರೆಗೆ ಎಲ್ಲ ಕನ್ನಡ ಪತ್ರಿಕೆಗಳನ್ನು ಓದುತ್ತಿದ್ದ ನನ್ನ ಅಜ್ಜಿ, ಆ ವಿಶೇಷ ಸುದ್ದಿಯನ್ನು ಗಟ್ಟಿಯಾಗಿ ನಮ್ಮೆಲ್ಲರ ಮುಂದೆ ಓದಿದ್ದರು. ನಾನು ಚಿತ್ರಗಳನ್ನಷ್ಟೇ ನೋಡಿದ್ದೆ. ನಂತರದ ದಿನಗಳಲ್ಲಿ ಅಮೆರಿಕದ ವಾರ್ತಾ ಇಲಾಖೆ ಪ್ರಕಟಿಸಿದ್ದ ವಿಶೇಷ ಸಂಚಿಕೆಯನ್ನು ತಂದೆಯವರು ನಮ್ಮೆಲ್ಲರಿಗೆ ತೋರಿಸಿದ್ದರು. ಚಂದ್ರನಿಂದ ಹೆಕ್ಕಿ ತಂದ ಶಿಲೆ, ಬೆಂಗಳೂರಿನಲ್ಲಿ ಪ್ರದರ್ಶನಕ್ಕಿಟ್ಟಾಗ ಅದರ ವಿವರಗಳನ್ನು ನನ್ನ ಅಜ್ಜಿಗೆ ತಿಳಿಸಿದ್ದರು. ನನ್ನ ಅಜ್ಜಿಗೆ ಕೊನೆಗೂ ಚಂದ್ರನ ಮೇಲೆ ಮನುಷ್ಯ ಕಾಲಿಟ್ಟ ಬಗ್ಗೆ ನಂಬಿಕೆ ಬಂದಿತ್ತು!
ಚಂದ್ರನ ಕೆನ್ನೆಯ ಮೇಲೆ
– ಎಚ್.ಎಸ್. ವೆಂಕಟೇಶ ಮೂರ್ತಿ, ಹಿರಿಯ ಕವಿ
1969ರ ಹೊತ್ತಿಗೆ: ಮಲ್ಲಾಡಿಹಳ್ಳಿಯಲ್ಲಿ ಹೈಸ್ಕೂಲ್ ಟೀಚರ್
ಚಂದ್ರನ ಕೆನ್ನೆಯ ಮೇಲೆ ಕಾಣುವುದು ಯಾವ ಕಲೆ?
ರೋಹಿಣಿ ಮುತ್ತಿನ ಗುರುತೆ?
ಆಲದ ಎಲೆಯ ಬಾಲಕ ಗೀಚಿದ ಪ್ರಥಮಾಕ್ಷರವೇ?
ಅಥವಾ ಮಾಯಾಮೃಗವೆ?
ಚಂದ್ರನ ಕೆನ್ನೆಯ ಮೇಲೆ ಕಾಣುವುದು ತಾರೆಯ
ಗಂಡನ ನಡುಗುವ ಬೆರಳೆ?
ಶಿವ ಪಾರ್ವತಿಯರ ರತಿಯ ರಭಸದಲ್ಲಿ
ಹಾರಿದ ಸೆರಗಿನ ನೆರಳೆ?
ಚಂದ್ರನ ಕೆನ್ನೆಯ ಮೇಲೆ ಕಾಣುವುದು ಯಾವ ಕಲೆ?
ಸಾವಿರ- ನವಶತ- ಅರವತ್ತೂಂಬತ್ತು
ಮೂನಿನ ಮೇಲೆ ಮಾನವನೂರಿದ ಹೆಜ್ಜೆಯ ಗುರುತೇ?
ಅಹುದಹುದೆನಿಸಿದೆ ಈವತ್ತು!
(ಅಲ್ಲಿಯ ತನಕ ಕಾವ್ಯ ವರ್ಣನೆಗೆ, ರೂಪಕದ ವಸ್ತುವಾಗಿದ್ದ ಚಂದ್ರನ ಕುರಿತು ಕವಿಯ ಬಣ್ಣನೆ)
ನನ್ನ ಕಾಲದ ಹೀರೋಗಳು!
– ಎಂ.ಆರ್. ಕಮಲ, ಹಿರಿಯ ಲೇಖಕಿ
1969ರ ಹೊತ್ತಿಗೆ: 4ನೇ ತರಗತಿ
ಆಗ ನಾನು ಹತ್ತು ವರ್ಷದ ಹುಡುಗಿ. ನಮ್ಮ ಊರಿನಲ್ಲಿ ಸುದ್ದಿಪತ್ರಿಕೆಗಳನ್ನು ತರಿಸುತ್ತಿದ್ದವರೇ ಕಡಿಮೆ. ಆದರೆ, ಅಣ್ಣ ಆ ಕಾಲದಲ್ಲೂ ಇಂಗ್ಲಿಷ್ ಮತ್ತು ಕನ್ನಡ ಸುದ್ದಿಪತ್ರಿಕೆಗಳನ್ನು ತರಿಸುತ್ತಿದ್ದರು. ದುಡ್ಡಿನ ಅನುಕೂಲವಿಲ್ಲದಿದ್ದರೂ ಮನೆಯಲ್ಲಿ ಮಾತ್ರ ಎಲ್ಲರೂ ಜ್ಞಾನದಾಹಿಗಳೇ! 1969ರ ಜುಲೈ 16ರಂದು ಚಂದ್ರನ ಮೇಲೆ ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಎಡ್ವಿನ್ ಆಲ್ಡಿ†ನ್ ಕಾಲಿಟ್ಟರು. ಒಂದು ವಾರ ಸತತವಾಗಿ ಸುದ್ದಿಪತ್ರಿಕೆಗಳನ್ನು ಒಂದೂ ಅಕ್ಷರ ಬಿಡದ ಹಾಗೆ ಓದಿ, ಕತ್ತರಿಸಿ ಇಟ್ಟುಕೊಂಡಿದ್ದು ನೆನಪಿದೆ.
ಚಂದ್ರನ ಬಳಿ ಹೋಗಿಯೂ, ನೌಕೆಯನ್ನು ನೋಡಿಕೊಳ್ಳುತ್ತಿದ್ದ ಕಾರಣದಿಂದ, ಕಾಲಿಡದೆ ಬಂದ ಮೈಕೆಲ್ ಕಾಲಿನ್ಸ್ ಬಗ್ಗೆ ತೀವ್ರ ನೋವಾಗುತ್ತಿತ್ತು. ಸಿಕ್ಕ ಮರಳ ಗುಡ್ಡೆಗಳನ್ನೆಲ್ಲ ಏರಿ “ನಾನು ನೀಲ್ ಆರ್ಮ್ಸ್ ಸ್ಟ್ರಾಂಗ್, ನಾನು ಎಡ್ವಿನ್ ಆಲ್ಡಿನ್’ ಎಂದು ಕಿರುಚಿಕೊಂಡು ಚಂದ್ರನ ಮೇಲೆ ಕಾಲಿಟ್ಟಂತೆ ನಟಿಸಿ, ಸ್ಲೋ ಮೋಷನ್ ಆಟಗಳನ್ನು ಆಡುತ್ತಿದ್ದೆವು. ಯಾವ ಗ್ರಹಣ ಬಂದರೂ ಎಲ್ಲರೂ ನಮ್ಮ ಪಾಡಿಗೆ ನಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದೆವು. ಈಗ ಕಾಲ ನಿಜಕ್ಕೂ ಹಿಂದಕ್ಕೆ ಚಲಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.