ಪಟಾ ಪಟಾ ಗಾಳಿ ಪಟಾ…


Team Udayavani, Jan 13, 2018, 4:35 PM IST

2558888.jpg

ಡಿಸೆಂಬರ್‌ ಚಳಿ ಏರುತ್ತಿದೆ, ಹೊಸವರ್ಷದ ಜನವರಿಯಲ್ಲಿ ಚಳಿಯ ಜೊತೆಗೆ ಗಾಳಿಯೂ ಸೇರಿಕೊಂಡಿದೆ. ಇಡೀ ರಾಜ್ಯವನ್ನು ಆವರಿಸುತ್ತಿರುವ ದನುರ್‌ಮಾಸನದ ಅಂಚಿಗೆ ಎಷ್ಟೋ ಜನ ಆಕಾಶವನ್ನು ಜ್ಞಾಪಿಸಿಕೊಳ್ಳುತ್ತಾರೆ. ಏಕೆಂದರೆ, ಗಾಳಿಪಟ ಹಾರಿಸುವುದಕ್ಕೆ. ಈ ರೀತಿ ಗಾಳಿಪಟ ಏರಿಸುವುದು ಸಂಪ್ರದಾಯವೂ ಹೌದು. ಹೀಗೆ ನಮ್ಮಲ್ಲಿ ನಡೆಯುವ ಗಾಳಿಪಟದ ಸುತ್ತಾ ಒಂದು ರೌಂಡ್‌ ಹೊಡೆಯೋಣ….

ಬಣ್ಣದ ಕನಸುಗಳನ್ನು ಬಾನಿಗೇರಿಸುವ ಚಿಣ್ಣರ ಬಯಲುಗಳೆಲ್ಲ ಇಂದು ಮಾಲ್‌-ಮಹಲುಗಳಾದವು. ಆಗಸಕ್ಕೇ ಸೂತ್ರ ಕಟ್ಟಿದ ಮಕ್ಕಳು ಗಾಳಿಪಟ ಹಾರಿಸುವುದನ್ನು ಮರೆತು ಮೊಬೈಲ್‌ನ ಬಟಲ್‌ ಒತ್ತುವುದರಲ್ಲೇ ಮಗ್ನರಾಗಿಬಿಟ್ಟರು. ಸೂತ್ರದಾರಗಳು ಕಡಿದು ಗಾಳಿಪಟ ಮೂಲೆ ಸೇರಿ ಕನಸುಗಳು ಗೋತಾ ಹೊಡೆದವು. ಬಯಲಿನಲ್ಲಿ ಬಹಿರಂಗವಾಗಿದ್ದ ಮಕ್ಕಳ ಚಟುವಟಿಕೆಗಳು ಮೊಬೈಲ್‌, ಟಿ.ವಿಗೆ ಸೀಮಿತವಾಗಿ ನಾಲ್ಕು ಗೋಡೆಗಳ ನಡುವೆ ಅಂತರಂಗವಾಯಿತು. 

ಗಾಳಿಪಟವೆಂದರೆ, ಅದು ಬದುಕಿನ ಸಾಂಕೇತಿಕ ರೂಪ. ಸೂತ್ರ ಕಟ್ಟಿದ ಗಾಳಿಪಟ ಬಾನಿಗೇರಬಹುದು ಅಥವಾ ಗೋತಾ ಹೊಡೆದು ಧರೆಗುರುಳಬಹುದು. ನಮ್ಮ ಬದುಕಿನಲ್ಲಿಯೂ ಇದೇ ರೀತಿ, ಗೆಲುವಿರಬಹುದು, ಸೋಲೂ ಇರಬಹುದು. ಸೋತರೆ ಮತ್ತೆ ಸೂತ್ರ ಕಟ್ಟಿ ಗೆಲುವಿನ ಆಗಸಕ್ಕೆ ಏರುವುದೇ ಬದುಕಿನ ಆರೋಹಣ. ಮಕ್ಕಳು ವಿಶೇಷವಾಗಿ ಓದುವುದರಲ್ಲಿ ಅಥವಾ ಶಾಲಾ ಸ್ಪರ್ಧೆಗಳಲ್ಲಿ ಸೋತರೆ ಮತ್ತೆ ಗೆಲುವಿನ ಛಲದೊಂದಿಗೆ ಭರವಸೆಯ ಸೂತ್ರ ಕಟ್ಟಿ ಬಾನಿಗೇರುವ ಧ್ಯೇಯವಿರಬೇಕು. ಗಾಳಿಪಟಗಳ ಆರೋಹಣ-ಅವರೋಹಣವನ್ನು ಇದೇ ರೀತಿ ಮಕ್ಕಳು ತಮ್ಮ ಬದುಕಿನಲ್ಲೂ ಅಳವಡಿಸಬೇಕಾದ ಅನಿವಾರ್ಯತೆ ಇದೆ. 

  ಕ್ರಿಸ್ತಪೂರ್ವದಲ್ಲಿಯೇ ಗಾಳಿಪಟಗಳು ಬಳಕೆಯಲ್ಲಿದ್ದವು ಎಂದು ಚರಿತ್ರೆ ಹೇಳುತ್ತದೆ. ಮೂಲತಃ ಜಪಾನ್‌, ಚೈನಾ, ಕೊರಿಯಾ ದೇಶಗಳ ಇತಿಹಾಸವನ್ನು ತೆರೆದಾಗ ಅಲ್ಲಿ ಗಾಳಿಪಟಗಳ ಹಾರಾಟವನ್ನೇ ಸಾಮಾಜಿಕವಾಗಿ, ಧಾರ್ಮಿಕವಾಗಿ ಬಳಸಿಕೊಂಡುದಕ್ಕೆ ಪುರಾವೆಗಳಿವೆ. ಮಗು ಹುಟ್ಟಿದಾಗ ಆ ಮಗುವಿಗೆ ಯಾವುದೇ ವಿಘ್ನ ಬರದಂತೆ ಗಾಳಿಪಟಗಳನ್ನು ಹಾರಿಸುತ್ತಿದ್ದರು. ಯುದ್ಧದ ಸಂಕೇತವಾಗಿ, ಹವಾಮಾನದ ಏರುಪೇರುಗಳ ಸೂಚನೆಗಾಗಿ, ಹೊಸವರುಷದ ಆಚರಣೆಗಾಗಿ ಗಾಳಿಪಟಗಳನ್ನು ಹಾರಿಸುತ್ತಿದ್ದರು. ಕ್ರಮೇಣ ಗಾಳಿಪಟಗಳು ಕ್ರೀಡಾಕ್ಷೇತ್ರವಾಗಿ ಜಪಾನ್‌ನಲ್ಲಿ ಇದರ ಆವಿಷ್ಕಾರಗಳಾಗಿ ಸ್ಪರ್ಧೆಯ ಮೂಲಕ ಮನರಂಜನೆಯ ಕ್ಷೇತ್ರಕ್ಕೆ ಪರಿವರ್ತನೆಯಾದವು. ಹೀಗೆಯೇ ಮುಂದುವರಿದು ಗಾಳಿಪಟ ಸ್ಪರ್ಧೆ, ಉತ್ಸವಗಳು ಹೆಚ್ಚಾದಂತೆಯೇ ಗಾಳಿಪಟಗಳ ಪರಿಕರಗಳು, ತಂತ್ರಜ್ಞಾನಗಳು, ವಿನ್ಯಾಸಗಳು ಬದಲಾದವು. ಈ ಬದಲಾವಣೆಯಿಂದಾಗಿ ಯುರೋಪ್‌, ಆಸ್ಟ್ರೇಲಿಯಾ, ಅಮೆರಿಕಾ…ಹೀಗೆ ಜಗತ್ತಿನಾದ್ಯಂತ ಗಾಳಿಪಟಗಳು ಆಕಾಶವೇರಲಾರಂಭಿಸಿದವು. ಇಂದು ವಿಶ್ವಾದ್ಯಂತ ಗಾಳಿಪಟ ಉತ್ಸವಗಳು ಜರುಗುತ್ತಿದ್ದರೂ ಗಾಳಿಪಟಗಳ ಮೂಲ ಜಪಾನ್‌, ಚೈನಾ, ಕೊರಯಾ ದೇಶಗಳಿಂದ ಆರಂಭವಾಗಿರುತ್ತದೆ. 

ಭಾರತದಲ್ಲಿ ಗಾಳಿಪಟಕ್ಕೆ ದಕ್ಷಿಣ ಭಾರತಕ್ಕಿಂತ ಉತ್ತರಭಾರತದಲ್ಲಿ ಹೆಚ್ಚು ಪ್ರಾಧಾನ್ಯತೆ ಇದೆ. ಜನವರಿ 14ರಂದು ಉತ್ತರಾಯಣ (ಮಕರ ಸಂಕ್ರಮಣ) ಹಬ್ಬಕ್ಕೆ ಗುಜರಾತ್‌, ರಾಜಸ್ಥಾನ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿಗಳಲ್ಲಿ ಗಾಳಿಪಟ ಹಾರಿಸುವುದು ಧಾರ್ಮಿಕತೆಯ ಭಾಗ. ಬಾಲಂಗೋಚಿ ಇಲ್ಲದ ಮಾಂಜಾ ಗಾಳಿಪಟಗಳನ್ನು ಹಾರಿಸಿ ( ಮಾಂಜ ಪಟಕ್ಕೆ ಗಾಳಿಪಟದ ದಾರಕ್ಕೆ ಗಾಜಿನ ಪುಡಿ ಲೇಪಿಸಿರುತ್ತಾರೆ) ಇನ್ನೊಬ್ಬರ ಗಾಳಿಪಟವನ್ನೇ ಕೇವಲ ಹಗ್ಗಕ್ಕೆ ಹಗ್ಗೆ ತಾಗಿಸಿ ತುಂಡರಿಸುವುದೇ ಉತ್ತರಾಯಣದ ಈ ಹಬ್ಬದ ವಿಶೇಷತೆ. ಈ ಸ್ಪರ್ಧೆಗೆ ಕೋಟಿಗಟ್ಟಲೆ ಹಣವನ್ನು ಜೂಜು ಕಟ್ಟುವವರೂ ಇದ್ದಾರೆ. ಗುಜರಾತ್‌, ರಾಜಸ್ಥಾನಗಳಲ್ಲಿ ಗಾಳಿಪಟ ಮಾರಾಟ ಮಾಡಿಯೇ ಬದುಕು ಕಟ್ಟಿಕೊಂಡವರಿದ್ದಾರೆ. ಭಾರತೀಯ ಸಾಂಪ್ರದಾಯಿಕ ಗಾಳಿಪಟಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಜನವರಿ ತಿಂಗಳಿನಲ್ಲಿ ಉತ್ತರ ಭಾರತದ ಹಲವಾರು ಕಡೆ ಅಂತರ್‌ ರಾಷ್ಟ್ರೀಯ ಗಾಳಿಪಟ ಉತ್ಸವಗಳು ಜರಗುತ್ತಿದ್ದು ಭಾರತೀಯ ಗಾಳಿಪಟ ಉತ್ಸವಗಳನ್ನು ವೀಕ್ಷಿಸಲೆಂದೇ ಹಲವಾರು ದೇಶಗಳಿಂದ ಭಾರತಕ್ಕೆ ಬರುತ್ತಿದ್ದಾರೆ. 

 ದಕ್ಷಿಣ ಭಾರತದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಗಾಳಿಪಟ ಉತ್ಸವಗಳು ಸಂಘಟಿತವಾಗುತ್ತಿದೆ. ಗಾಳಿಪಟ ಸ್ಪರ್ಧೆಗಳು ಕೆಲವೆಡೆ ಜರುಗುತ್ತಿದ್ದರೂ ಉತ್ತರಭಾರತದ ಗಾಳಿಪಟ ಟ್ರೆಂಡ್‌ ದಕ್ಷಿಣದಲ್ಲಿಲ್ಲ. 

 ಮಂಗಳೂರಿನಲ್ಲಿ ಟೀಮ್‌ ಮಂಗಳೂರು ಎಂಬ ಹವ್ಯಾಸಿ ಗಾಳಿಪಟ ತಂಡವು 1994ರಲ್ಲಿ ಆರಂಭಗೊಂಡಿದ್ದು, ಇಂದು ಈ ತಂಡವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಮಂಗಳೂರಿನ ಅಶೋಕನಗರದ ಸರ್ವೇಶ್‌ರಾವ್‌ ಈ ತಂಡವನ್ನು ಆರಂಭಿಸಿದ್ದು ಇಂದು 24ಜನರ ತಂಡವು ಹಲವಾರು ಭಾರತೀಯ ಸಾಂಸ್ಕೃತಿಕ ಚಿತ್ತಾರ-ವಿನ್ಯಾಸಗಳ ಬೃಹತ್‌ ಗಾಳಿಪಟಗಳನ್ನು ರಚಿಸಿದ್ದು ಫ್ರಾನ್ಸ್‌ ( 8 ಬಾರಿ) ಇಂಗ್ಲೆಂಡ್‌, ಕೆನಡ, ಇಟಲಿ, ಹಾಂಕಾಂಗ್‌, ದಕ್ಷಿಣಕೊರಿಯಾ, ಥಾಯ್ಲೆಂಡ್‌, ಶ್ರೀಲಂಕ, ದುಬೈ, ಕತಾರ್‌ ಮುಂತಾದ ದೇಶಗಳಲ್ಲಿ ಜರುಗಿದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ  ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತದೆ. 

 ಕಥಕ್ಕಳಿ, ಯಕ್ಷಗಾನ, ಭರತನಾಟ್ಯ, ಗಜರಾಜ, ದುರ್ಗಾ, ಮಹಾರಾಜ, ಗರುಡ ಹೀಗೆ ಹಲವಾರು ವಿನ್ಯಾಸಗಳ ಗಾಳಿ ಪಟಗಳನ್ನು ರಚಿಸಿ ಭಾರತದ ಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಗಾಳಿಪಟಗಳ ಮೂಲಕ ಅಭಿವ್ಯಕ್ತಗೊಳಿಸಿದೆ. 2006ರಲ್ಲಿ ಟೀಮ್‌ ಮಂಗಳೂರು ತಂಡವು ರೂಪಿಸಿದ 36 ಅಡಿ ಎತ್ತರದ ಕಥಕ್ಕಳಿ ಗಾಳಿಪಟವು ಭಾರತದಲ್ಲೇ ಅತೀ ದೊಡ್ಡ ಗಾಳಿಪಟವೆಂದು ದಾಖಲೆಯಾಗಿದೆ. 2008ರಲ್ಲಿ ಇಂಗ್ಲೆàಂಡ್‌ನ‌ ಕ್ಲೀಥ್ರೋಟ್ಸ್‌ ಕೈಟ್‌ ಫೆಸ್ಟಿವಲ್‌ನಲ್ಲಿ “ಬೆಸ್ಟ್‌ ಟೀಮ್‌ ಅವಾರ್ಡ್‌’ ಲಭಿಸಿದೆ.  ಪಣಂಬೂರಿನಲ್ಲಿ ಐದು ಬಾರಿ ಗಾಳಿಪಟ ಉತ್ಸವಗಳನ್ನು ಆಯೋಜಿಸಿದೆ. ಒಂದಡಿ ಕಾಗದ, ಒಂದಡಿಯ 2 ಕಡ್ಡಿಗಳು, ಒಂದು ಉಂಟೆ ದಾರ… ಇವಿಷ್ಟಿದ್ದರೆ  ನೀವೂ ಬಣ್ಮದ ಕನಸುಗಳನ್ನು ಬಾನಿಗೇರಿಸಬಹುದು. ಸಂಪರ್ಕಿಸಿ www.indiankites.com 

ಗಾಳಿಪಟ ಹಾರಾಟಕ್ಕೆ ಎಚ್ಚರಿಕೆ ವಹಿಸಬೇಕಾದದ್ದು ಅಗತ್ಯ. ವಿದ್ಯುತ ತಂತಿಗಳಿರುವಲ್ಲಿ, ಕೆರೆ, ಬಾವಿಗಳಿರುವಡೆ ಆಳವಾದ ಕಂದರಗಳಿರುವಲ್ಲಿ, ರಸ್ತೆ ಬದಿಗಳಲ್ಲಿ ಗಾಳಿಪಟ ಹಾರಿಸುವಾಗ ಜಾಗರೂಕರಾಗಿರಬೇಕು. ಗಾಳಿಪಟ ಹಾರಾಟವೆಂದರೆ ನಮ್ಮ ಮತ್ತು ಪ್ರಕೃತಿಯ ನಡುವಿನ ಸಂಬಂಧ. ಗಾಳಿಪಟ ಹಾರಿಸುವಾಗ ಮಕ್ಕಳು ಆಕಾಶ ನೋಡುತ್ತಾರೆ. ಸುತ್ತಮುತ್ತ ಮರಗಿಡಗಳಿವೆಯೇ? ಗಾಳಿ ಇದೆಯೇ? ಎಂದು ಗಮನಿಸುತ್ತಾರೆ. ಗಾಳಿಪಟ ಹಾರಾಡುವಾಗ ಆಕಾಶದಲ್ಲಿ ಹಕ್ಕಿಹಾರಾಡುವಾಗ ಮಕ್ಕಳ ಗಮನ ಆ ಕಡೆ ಹೋಗುತ್ತಿದೆ. ಆದುದರಿಂದ ಗಾಳಿಪಟ ಹಾರಾಟದೊಂದಿಗೆ ನಿಸರ್ಗದೊಂದಿಗೆ ಒಡನಾಟವೂ ಆಗಬಹುದು. 

ದಿನೇಶ್‌ ಹೊಳ್ಳ

ಬೆಳಗಾವಿ ಆಕಾಶದ ತುಂಬಾ ಪಟಾ ಪಟಾ..
 ಸೂತ್ರದ ಹಿಡಿತದಿಂದ ಬಾನಂಗಳದಲ್ಲಿ ತೇಲಾಡುತ್ತ, ಒದ್ದಾಡುತ್ತ, ನಸು ನಗುತ್ತ, ಮನಸ್ಸಿಗೆ ಮುದ ನೀಡುತ್ತ, ಬಾನು-ಭುವಿಗಳನ್ನು ಅಪ್ಪಿಕೊಳ್ಳಲು ಹಾತೊರೆಯುವ ಗಾಳಿಪಟಗಳ ಚೆಲ್ಲಾಟವೇ ಅದ್ಭುತ. ಕಣ್ಣೆತ್ತಿ ನೋಡುವುದಕ್ಕಿಂತ ಕತ್ತು ಎತ್ತರಿಸಿ ಬಾನಂಗಳದಲ್ಲಿ ಕಣ್ಣು ಪಿಳುಕಿಸುತ್ತ, ಅತ್ತಿಂದಿತ್ತ ಕಣ್ಣೋಟ ಹಾಯಿಸುತ್ತ ಆಕಾಶದಗಲ ಸೂರ್ಯನೆದುರಿಸಿ ಗಾಳಿಪಟಗಳನ್ನು ನೋಡುವುದೇ ಒಂದು ಹೊಸ ಲೋಕದಲ್ಲಿ ವಿರಮಿಸಿದಷ್ಟು ಖುಷಿ ನೀಡುವ ಅನುಭವ. 

ಗಾಳಿಪಟ ಎಂದರೆ ಚಿಕ್ಕ ಮಕ್ಕಳಿಗಂತೂ ಪಂಚಪ್ರಾಣ. ನೋಡುಗರಿಗೆ ನಯನಮನೋಹರ ದೃಶ್ಯ ನೀಡುವ ಗಾಳಿಪಟಕ್ಕೆ ಎಲ್ಲ ವಯೋಮಾನದವರನ್ನು ಆಕರ್ಷಿಸುವ ತಾಕತ್ತು ಇದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾರಿಸುವ ಗಾಳಿಪಟಗಳನ್ನು ಬಿಟ್ಟರೆ ಇನ್ನುಳಿದಂತೆ ಎಲ್ಲಿಯೂ ಕಂಡು ಬರುವುದೇ ಇಲ್ಲ.  ಈ ಕೊರತೆ ನೀಗಿಸಲು ಎಂಬಂತೆ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜನೆಯಾಗಿದೆ. ಆ ಮೂಲಕ ಗಾಳಿಪಟ ಪ್ರೇಮಿಗಳಿಗೆ ಹೊಸ ಉತ್ಸಾಹ ನೀಡಿದೆ.

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇದುವರೆಗೂ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಮಾತ್ರ ನಡೆಯುತ್ತಿತ್ತು.  ಅದೇ ಕಾರಣದಿಂದ ಈ ಉತ್ಸವ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ನಗರದ ಹೊರ ವಲಯದ ಸಾವಗಾಂವ ರಸ್ತೆಯ ಅಂಗಡಿ ಎಂಜಿನಿಯರಿಂಗ್‌ ಕಾಲೇಜಿನ ವಿಶಾಲ ಮೈದಾನದಲ್ಲಿ ಈ ಉತ್ಸವ ಏರ್ಪಡಿಸುವ ಮೂಲಕ, ಗಾಳಿಪಟದ ಉತ್ಸವವೂ ನಡೆಯತ್ತದೆ ಎಂದು ತೋರಿಸಿ ಕೆಟ್ಟವರು ಬೆಳಗಾವಿಯ ಮಾಜಿ ಶಾಸಕ ಅಭಯ ಪಾಟೀಲ. 

 ಪಾಟೀಲರು, ಕಳೆದ ಎಂಟು ವರ್ಷಗಳಿಂದ ಕೈಟ್‌ ಫೆಸ್ಟಿವಲ್‌(ಗಾಳಿಪಟ ಉತ್ಸವ) ಆಚರಿಸುತ್ತ ಜನರ ಮನಸ್ಸು ಗೆದ್ದಿದ್ದಾರೆ.  ಕುಟುಂಬ ಸಮೇತರಾಗಿ ಎಲ್ಲ ವಯೋಮಾನದವರೂ ಈ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಈ ಬಾರಿ ಜನವರಿ 20ರಿಂದ 23ರ ವರೆಗೆ ಗಾಳಿಪಟ ಹಬ್ಬ ನಡೆಯಲಿದೆ. 

  ಎಂಟು ವರ್ಷಗಳ ಹಿಂದೆ ಅಭಯ ಪಾಟೀಲ ಅವರ ತಂಡ ಅಹ್ಮದಾಬಾದ್‌ಗೆ ಹೋಗಿ, ಅಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳೊಂದಿಗೆ ಚರ್ಚಿಸಿತು. ನಂತರ ಅಲ್ಲಿಂದ ಬಂದು ಉತ್ಸವ ನಡೆಸಲು ಮುಂದಾಯಿತು. ಮೊದಲನೇ ವರ್ಷ 9 ದೇಶದ ಸ್ಪರ್ಧಾಳುಗಳು ಭಾಗಿಯಾಗಿದ್ದರು. ನಂತರದಲ್ಲಿ ಸ್ಪರ್ಧಿಗಳು ಸಂಖ್ಯೆ ಹೆಚ್ಚುತ್ತಾ ಹೋಯಿತು. 

ರಂಗುರಂಗಿನ ವಿವಿಧ ಕಲ್ಪನೆಗಳಲ್ಲಿ ಸಾಕಾರಗೊಂಡ, ಪಕ್ಷಿ, ಪ್ರಾಣಿಗಳ ಗಾಳಿಪಟಗಳು ಆಕಾಶದಲ್ಲಿ ಹಾರಿ ಹೊಂಗನಸು ಸೃಷ್ಟಿಸುತ್ತವೆ. ಚಿತ್ತಾರದ ಮೂಲಕ ಮಾಯಾಂಗನೆಯಂತೆ ಕಣ್ಮುಂದೆ ಹಾಯ್ದುಹೋಗುತ್ತವೆ. ಬಣ್ಣಬಣ್ಣದ ಹಕ್ಕಿಗಳು ಸಾಲಾಗಿ ಹೋಗುವಂತೆ ಕಂಡು ಬರುವ ದೃಶ್ಯಾವಳಿ ಪುಳಕಗೊಳಿಸುತ್ತದೆ. ಹಾವು, ರೈಲು, ಹುಲಿ ಸೇರಿದಂತೆ ವಿವಿಧ ಪ್ರಾಣಿಗಳ ಚಿತ್ರಗಳನ್ನು ಹೊಂದಿದ ಗಾಳಿ ಪಟಗಳು ಆಕಾಶದಲ್ಲಿ ಸುದ್ದು ಮಾಡುತ್ತವೆ. 

ಗಾಳಿಪಟ ಹಾರಿಸಲು ದಾರವನ್ನೇ ಬಳಸಲಾಗುತ್ತದೆ. ಮಾಂಜಾ ದಾರವನ್ನು ಯಾವುದೇ ಕಾರಣಕ್ಕೂ ಬಳಸುವುದಿಲ್ಲ. ಮಾಂಜಾ ಬಳಸುವುದರಿಂದ ಪಕ್ಷಿಗಳು ಸಿಕ್ಕಿ ಹಾಕಿಕೊಂಡರೆ ಅವುಗಳ ಪ್ರಾಣಕ್ಕೆ ಅಪಾಯವಿದೆ. ಹೀಗಾಗಿ ಕಡ್ಡಾಯವಾಗಿ ಮಾಂಜಾ ನಿಷೇಧಿಸಲಾಗಿದೆ. ವಿದೇಶಿಗರು ಕೂಡ ದಾರದ ಸಹಾಯದಿಂದಲೇ ಗಾಳಿಪಟ ಹಾರಿಸುತ್ತಾರೆ. 

ಎರಡೂವರೆ ಲಕ್ಷ ಜನ ಬರ್ತಾರೆ
ನಾಲ್ಕು ದಿನಗಳ ಕಾಲ ನಡೆಯುವ ಗಾಳಿಪಟ ಉತ್ಸವಕ್ಕೆ ಏನಿಲ್ಲವೆಂದರೂ 2.50 ಲಕ್ಷ ಜನ ಭೇಟಿ ನೀಡುತ್ತಾರೆ. ಬೆಳಗಾವಿ ಸೇರಿದಂತೆ ಗೋವಾ, ಪಶ್ಚಿಮ ಮಹಾರಾಷ್ಟ್ರದ ಜನ ಈ ಉತ್ಸವ ನೋಡಲು ಬರುತ್ತಾರೆ.  ನಾಲ್ಕು ದಿನಗಳ ಈ ಉತ್ಸವದಲ್ಲಿ ಎರಡು ದಿನ ಶಾಲಾ ಮಕ್ಕಳಿಗಾಗಿ ಸ್ಪರ್ಧೆ ಆಯೋಜಿಸಲಾಗುತ್ತದೆ. 5 ಸಾವಿರ ಗಾಳಿಪಟಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಇನ್ನುಳಿದಂತೆ ಶನಿವಾರ ಹಾಗೂ ರವಿವಾರ ದೇಶ-ವಿದೇಶದ ಬೇರೆ ಬೇರೆ ಭಾಗಗಳಿಂದ ಆಗಮಿಸುವ ಸ್ಪರ್ಧಾಳುಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ.

ಮನಸೆಳೆಯುವ ವಿದೇಶಿಯರ ಗಾಳಿಪಟಗಳು
ಬೆಳಗಾವಿಯಲ್ಲಿ ನಡೆಯುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ರಷ್ಯಾ, ಅಮೆರಿಕ, ಮಲೇಷಿಯಾ, ಇಂಗ್ಲೆಂಡ್‌, ಥೈಲ್ಯಾಂಡ್‌, ಬ್ರೆಜಿಲ್‌, ಸಿಂಗಾಪುರ, ಫ್ರಾನ್ಸ್‌, ಜರ್ಮನಿ, ಉಕ್ರೇನ್‌ ಸೇರಿದಂತೆ ಅನೇಕ ದೇಶಗಳ ಸ್ಪರ್ಧಾಳುಗಳು ಆಗಮಿಸಿ ಜನರನ್ನು ರಂಜಿಸುತ್ತಾರೆ. ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸುವ ಮೂಲಕ ಎಲ್ಲರನ್ನು ಮೋಡಿ ಮಾಡುತ್ತಾರೆ. 40 ಜನ ಭಾರತದ ವಿವಿಧ ಕಡೆಗಳಿಂದ ಬಂದರೆ, 25 ಜನ ವಿದೇಶಿ ಸ್ಪರ್ಧಾಳುಗಳು ಭಾಗವಹಿಸುತ್ತಾರೆ. ಸ್ಪರ್ಧಾಳುಗಳಿಗೆ ಟಿಕೆಟ್‌ ವೆಚ್ಚ, ಊಟ, ವಸತಿ ಹಾಗೂ ಸಂಭಾವನೆ ನೀಡಲಾಗುತ್ತದೆ. 

ವಿವಿಧ ವಿನ್ಯಾಸದ ಗಾಳಿಪಟಗಳು ಬಾನಲ್ಲಿ ಜುಗಲ್‌ ಬಂದಿ ನಡೆಸುತ್ತವೆ. ಈ ಮೈದಾನ ಬಹುವಿನ್ಯಾಸಗಳ ಗಾಳಿಪಟಗಳ ಉಡ್ಡಯನ ಭರಿಸುವ ಅಂಗಣವಾಗಿ ಮಾರ್ಪಡುತ್ತದೆ. ಶುಭ್ರ ನೀಲಿ ಬಾನಂಗಳದಲ್ಲಿ ಬಿಳಿ ಮೋಡಗಳ ಮಗ್ಗುಲಲ್ಲಿ ಬಹುವರ್ಣ, ವೈವಿಧ್ಯಮಯ ಆಕಾರದ ಕಲರ್‌, ಕಲರ್‌  ಗಾಳಿಪಟಗಳು ಸ್ವತ್ಛಂದವಾಗಿ ವಿಹರಿಸಿ ವೀಕ್ಷಕರ ಮನಸೂರೆಗೊಳಿಸುತ್ತವೆ.  ಸುಂದರ ಚಿಟ್ಟೆಗಳಂತೆ ರೂಪುಗೊಂಡ ಗಾಳಿಪಟಗಳು, ಮುಗಿಲಲ್ಲಿ ರೆಕ್ಕೆ ಬೀಸುತ್ತಾ ನರ್ತಿಸುವಂತೆ ಕಾಣುತ್ತದೆ.  ರಾತ್ರಿ ಹೊತ್ತಿನಲ್ಲಿ ಎಲ್‌ಇಡಿ ಲೈಟ್‌ ಬಳಸಿ ಹಾರುವ ಪಟಗಳೂ ಗಮನ ಸೆಳೆಯುತ್ತವೆ.

ಭೈರೋಬಾ ಕಾಂಬಳೆ

ದುರ್ಗದ ನೆತ್ತಿಯ ಮೇಲೆ ಗಾಳಿ ಹಕ್ಕಿ…

ಚಿತ್ರದುರ್ಗದ ಗಾಳಿಗೂ ಗಾಳಿಪಟಕ್ಕೂ ವಿಶೇಷ ನಂಟಿದೆ. 
 ಇಡೀ ಏಷ್ಯಾಖಂಡದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಅಂದರೆ ಈ ದುರ್ಗ. ಹೀಗಾಗಿ ಇಲ್ಲಿ ಗಾಳಿಪಟ ಹಾರಿಸುವುದು ದೊಡ್ಡ ಹಬ್ಬ, ವಿಶಿಷ್ಟ ಆಚರಣೆ ಕೂಡ. 

 ಕಣ್ಣಿಗೆ ಕಾಣದ ಕೇವಲ ಒಂದು ಎಳೆಯ ದಾರದೊಂದಿಗೆ ಆಗಸ (ಮುಗಿಲೆತ್ತರ)ಕ್ಕೆ ಹಾರಿದ ಸೂತ್ರದ ಹಿಡಿತದಲ್ಲಿ ಗಾಳಿಪಟ ಮಕ್ಕಳು, ಮಹಿಳೆಯರು, ಪೋಷಕರನ್ನು ಹಿಡಿದಿಡುವ ಕೆಲಸ ಮಾಡುತ್ತದೆ. ಕೇವಲ ಮನೋರಂಜನೆಗಾಗಿ ಗಾಳಿಪಟ ಹಾರಿಸುವ ಸ್ಪರ್ಧೆಗೆ ಸೀಮಿತವಾಗಿರದೆ ಜೀವನದ ಸೂತ್ರಕ್ಕೆ ಹೋಲಿಕೆ ಮಾಡಿ ಆಚರಣೆ ಮಾಡಲಾಗುತ್ತದೆ. 

ಮಕ್ಕಳಿಗೆ ಗಾಳಿಪಟ ಹಾರಿಸಿ ಆಟವಾಡುವುದು  ಒಂದು ಸಂಭ್ರಮ.  ಏಕೆಂದರೆ ಅತಿ ಹೆಚ್ಚು ಗಾಳಿ ಬೀಸುವ ತಿಂಗಳಿನಲ್ಲಿ ಗಾಳಿಪಟ ಹಬ್ಬ ಆಚರಿಸುವುದು ವಾಡಿಕೆ.   ಚಿತ್ರದುರ್ಗದ ಜಾ¡ನ ಭಾರತಿ ಶಾಲೆಯಲ್ಲಿ ಗಾಳಿಪಟದ ಹಬ್ಬ ಎಂದೇ ಆಚರಿಸುತ್ತಾರೆ.  ಶಾಲೆಯ ಎಲ್ಲಾ ಮಕ್ಕಳಿಗೆ ಗಾಳಿಪಟದ ಬಗ್ಗೆ ವಾರಗಳ ಕಾಲ ಸೂಕ್ತ ತರಬೇತಿ ನೀಡುವ ಮೂಲಕ ಮಕ್ಕಳೇ ಗಾಳಿಪಟ ತಯಾರು ಮಾಡಿ ಗಾಳಿಪಟ ಸ್ವರ್ಧೆಗೆ ಭಾಗವಹಿಸುತ್ತಾರೆ. 

 ಪ್ರತಿ ವರ್ಷ ಆಷಾಡ ಮಾಸವಲ್ಲದೆ ಅತಿ ವೇಗವಾಗಿ ಹೆಚ್ಚಿನ ಗಾಳಿ ಬೀಸುವ ಇತರೆ ಸಂದರ್ಭಗಳಲ್ಲಿ ಗಾಳಿಪಟ ಹಾರಿಸುವ ಕಾರ್ಯವನ್ನು ಶಾಲಾ, ಕಾಲೇಜ್‌ ಗಳ ಮಕ್ಕಳು, ವಿವಿಧ ಸಂಘ ಸಂಸ್ಥೆಗಳು ಭಾಗವಹಿಸುತ್ತವೆ. 

  ವಿದ್ಯಾರ್ಥಿಗಳು, ಪೋಷಕರು ಒಟ್ಟಿಗೆ ಸೇರಿ ವಿಭಿನ್ನ ರೀತಿಯಲ್ಲಿ ಫೈಬರ್‌ ಕಡ್ಡಿ, ಫ್ಲಾಸ್ಟಿಕ್‌, ಬಟ್ಟೆ, ಬಣ್ಣ, ಬಣ್ಣದ ಕಾಗದ, ತೆಳು ಪ್ಲಾಸ್ಟಿಕ್‌ ಹಾಳೆ, ಬಿದಿರಿನ ಕಡ್ಡಿಗಳನ್ನು ಬಳಸಿ ಆಗಸಕ್ಕೆ ಹಾರಲು ಅಗತ್ಯವಿರುವ ಸೂತ್ರ(ದಾರ) ಬಳಸಿ ಬಂಧಿಸಿ ಗಾಳಿಪಟ ತಯಾರಿಸುತ್ತಾರೆ. ಆಗಸದೆತ್ತರೆತ್ತರಕ್ಕೆ ಹೋಗಲು ತಯಾರಿಸಿದ ಗಾಳಿಪಟದ ಕೊನೆಗೆ ಉದ್ದನೆಯ ದಾರ ಕಟ್ಟಿ ಗಾಳಿ ಜಾಸ್ತಿ ಇರುವ ಪ್ರದೇಶಕ್ಕೆ ಒಯ್ದು ಎತ್ತರದ ಪ್ರದೇಶದಿಂದ ಹಾರಿಸಲಿದ್ದಾರೆ.

ಗಾಳಿಪಟ ಆಕರ್ಷಣೆಗಾಗಿ ಪಟದ ತಳಕ್ಕೆ ಅಲಂಕಾರಿಕ ಉದ್ದನೆಯ ಬಾಲಂಗೋಚಿಯಂತಹ ಪಟ್ಟಿ ಕಟ್ಟುತ್ತಾರೆ. ಗಾಳಿಪಟ ಚೌಕಾಕಾರದಲ್ಲಿದ್ದರೂ ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ತಯಾರು ಮಾಡುತ್ತಾರೆ.  ಗಾಳಿಪಟ ಹಬ್ಬ ಸಂಭ್ರಮದಿಂದ ಆಚರಣೆ ಮಾಡಲು ಗಾಳಿಪಟ ತಜ್ಞರನ್ನು ಆಹ್ವಾನಿಸಿ ಗಾಳಿಪಟ ತಯಾರಿಕೆಗೆ ತರಬೇತಿ ನೀಡಲಾಗುತ್ತದೆ.  ವಿದ್ಯಾರ್ಥಿಗಳು ಸಿದ್ಧಪಡಿಸುವ ಬಣ್ಣಬಣ್ಣದ ವಿವಿಧ ಆಕಾರದ ಗಾಳಿಪಟಗಳನ್ನು ಬಾನಂಗಳದಿ ಹಾರಾಡಿಸುವ ಮೂಲಕ ಸಂಭ್ರಮಪಡುತ್ತಾರೆ.   ಆಕಾರಗಳು-ಸ್ಥಳೀಯವಾಗಿ ದೊರೆಯುವ ಪರಿಕರಗಳನ್ನು ಬಳಸಿ ನಕ್ಷತ್ರಾಕಾರ, ಗೊಂಬೆ ಚಿತ್ರವಿರುವ, ಕೇಸರಿ, ಬಳಿ, ಹಸಿರು ಬಣ್ಣದ ಹಾಗೂ ಗೋಲಾಕಾರದ ಗಾಳಿಪಟ, ನವಿಲು, ಹಾವು, ಸಿಂಹ, ಹುಲಿ ಚಿತ್ರಗಳು ಸೇರಿದಂತೆ ತರಹೇವಾರಿ ಬಣ್ಣ, ಬಣ್ಣದ, ವಿಶೇಷ ಗಾತ್ರ, ಚಿತ್ರ, ವಿನ್ಯಾಸದ ಗಾಳಿಪಟಗಳ ಆಕಾರದಲ್ಲಿ ತಯಾರಿಸಿ ಆಗಸದಲ್ಲಿ ಹಾರಿಸುತ್ತಾ ಸಂಭ್ರಮಿಸುತ್ತಾರೆ. 

ಬದುಕೂ ಗಾಳಿಪಟ

  ನಗರದ ಚಂದ್ರವಳ್ಳಿ ರಸ್ತೆ ಸಮೀಪದ ಗುಡ್ಡ, ಬೆಟ್ಟಗಳ ಸಾಲಿನ ಮೇಲೆ  ನೋಡಿದರೆ ಬರೀ ಆಕಾಶದಲ್ಲಿ ನಕ್ಷತ್ರಗಳ ರೀತಿ ಗಾಳಿ ಪಟಗಳು ಹಾರಾಡುತ್ತವೆ.   ಅತಿ ಮುಖ್ಯವಾಗಿ ಮಕ್ಕಳಲ್ಲಿ ಸ್ಪರ್ಧಾಭಾವನೆ ಏರ್ಪಡಲಿ, ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಆಟೋಟ ಸ್ಪರ್ಧೆ ಮೂಲಕ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೆಚ್ಚಲಿ ಎನ್ನುವ ಉದ್ದೇಶವಿದೆ. ಗಾಳಿಪಟ ಎಷ್ಟೇ ಎತ್ತರಕ್ಕೆ ಹಾರಿದರು ಅದರ ದಾರ ಗಾಳಿಪಟವನ್ನು ಹಾರಿಸುವ ಕೈಯಲ್ಲಿರುತ್ತದೆ. ಅದೇ ರೀತಿ ಸೂತ್ರ ಇಲ್ಲದ ಗಾಳಿಪಟ ಯಾವ ದಿಕ್ಕುದೆಸೆಯಿಲ್ಲದೇ ಬೀಸುವ ಬಿರುಗಾಳಿಯ ರಭಸಕ್ಕೆ ಸಿಲುಕುತ್ತದೆ. ಗಾಳಿಪಟದ ಈ ನೀತಿಪಾಠವನ್ನು ವಿದ್ಯಾರ್ಥಿಗಳು ಅರಿತು ಸೂತ್ರ ಇಲ್ಲದ ಗಾಳಿಪಟದಂತಾಗದೆ ಬಾನಂಗಳದಿ ಎತ್ತರವಾಗಿ ಹಾರುವ ಗಾಳಿಪಟದಂತೆ ತಮ್ಮ ಬದುಕನ್ನು ರೂಪಿಸಿಕೊಂಡು ವಿದ್ಯಾಭ್ಯಾಸ ಮಾಡಿದ ಶಾಲಾ-ಕಾಲೇಜು ಹಾಗೂ ಪೋಷಕರಿಗೆ ಕೀರ್ತಿ ತರುವ ಉದ್ದೇಶವಿದೆ. 

ಮಕ್ಕಳ ದೈಹಿಕ ಸಾಮರ್ಥಯ ವೃದ್ಧಿ, ಗಾಳಿಪಟ, ಚಿನ್ನಿ ದಾಂಡು, ಬುಗುರಿ, ಲಗೋರಿ ಮೊದಲಾದ ಹೊರಾಂಗಣ ಆಟಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳ ದೈಹಿಕ ಸಾಮರ್ಥಯ ಹೆಚ್ಚಿ ಬುದ್ಧಿಯೂ ಚುರುಕಾಗುತ್ತದೆ ಎನ್ನುವ ಭಾವನೆ ಕೂಡಾ ಇದೆ. ಗಾಳಿಪಟ ಹಬ್ಬ ಅಪ್ಪಟ ಗ್ರಾಮೀಣ ಕ್ರೀಡೆಯಾಗಿದ್ದು ಈ ಕ್ರೀಡಾ ಸಂಸ್ಕತಿ ಉಳಿಸುವತ್ತ ಉದ್ದೇಶವು ಅಡಗಿದೆ. 

   ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ಗಾಳಿಯ ದಿಕ್ಕನ್ನು ನೋಡಿಕೊಂಡು ಈ ಸ್ಪರ್ಧೆ ನಡೆಯಲಿರುವುದರಿಂದ ಮಕ್ಕಳಿಗೆ ದಿಕ್ಕುಗಳ ಪರಿಚಯ ಕೂಡಾ ಆಗಲಿದೆ.  ಅಲ್ಲದೆ ಗಾಳಿಪಟ ಸ್ವರ್ಧೆ ಏರ್ಪಡಿಸುವುದರಿಂದ ಮಕ್ಕಳ ಮನಸ್ಸಿಗೆ ಉಲ್ಲಾಸ ಮೂಡಿಸುವುದು ಒಂದು ಕಡೆಯಾದರೆ, ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸವು ಏಕಕಾಲದಲ್ಲಿ ಆಗುತ್ತದೆ ಎನ್ನುವ  ಉದ್ದೇಶದಿಂದ ಗಾಳಿಪಟ ಹಾರಾಟ ಹಬ್ಬವಾಗಿದೆ.  ಗಾಳಿಪಟ ಹಾರಿಸುವುದರಲ್ಲಿ ಜೀವನದ ಪಾಠವಿದೆ.  ಏಕಾಏಕಿ ಗಾಳಿಪಟ ಹಾರಿಸಲು ಸಾಧ್ಯವಿಲ್ಲ. ಜೀವನದಲ್ಲಿ ಒಳ್ಳೆಯ ಕಾಲಕ್ಕೆ ಕಾಯುವಂತೆ ಗಾಳಿ ಬೀಸುವವರೆಗೆ ತಾಳ್ಮೆಯಿಂದ ಕಾಯಬೇಕು. ಪಟಗಳು ಒಮ್ಮೆ ಏರುತ್ತವೆ, ಬೀಳುತ್ತವೆ, ಗೋತಾ ಹೊಡೆಯುತ್ತವೆ. ಜೀವನದಲ್ಲಿಯೂ ಇದೇ ರೀತಿ ಏರಿಳಿತಗಳಿವೆ. ಈ ಸೃಜನಶೀಲ ಕಾರ್ಯದಲ್ಲಿ ಮಕ್ಕಳನ್ನು ತೊಡಗಿಸಬೇಕು. ಇದರಿಂದ ಕ್ರಮೇಣ ಅವರಿಗೆ ಜೀವನದ ಸತ್ಯದ ಅರಿವಾಗಲಿದೆ. 

ಬೆಲೆ ಎಷ್ಟು?

 ಬಹುತೇಕ ಅಂಗಡಿಗಳಲ್ಲಿ ಗಾಳಿಪಟಗಳನ್ನು ಮಾರಾಟ  ಮಾಡಲಾಗುತ್ತದೆ. 300, 500 ಹಾಗೂ 700 ರೂ. ನಿಂದ 5 
ಸಾವಿರ ರೂ.ತನಕ  ಬೆಲೆ ಇದೆ. ಇನ್ನೂ ಕೆಲವರು ಸ್ಥಳೀಯವಾಗಿ ದೊರೆಯುವ ಪರಿಕರಗಳ ಬಳಕೆ ಮಾಡಿ ತಾವೇ  ಗಾಳಿಪಟ ತಯಾರು ಮಾಡಿದರೆ, ಕೆಲವರು ಗಾಳಿಪಟ ತಜ್ಞರು, ಶಾಲೆಯ ಗುರುಗಳು, ಪೋಷಕರು ನೀಡುವ ಸಲಹೆ ಸೂಚನೆಗಳನ್ನು ಪಡೆದು ಗಾಳಿಪಟ ತಯಾರಿಸಲಿದ್ದಾರೆ. ಒಮ್ಮೊಮ್ಮೆ ಸಾವಿರಾರು ಸಂಖ್ಯೆಯ ಗಾಳಿಪಟಗಳು ಸೂಕ್ತ ಬೆಲೆಗೆ ಮಾರಾಟವಾಗಲಿವೆ. ಮಕ್ಕಳ ಗಾಳಿಪಟ ಹಬ್ಬ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ಪೋಷಕರು, ಸಾರ್ವಜನಿಕರು ಕಾರು, ಬೈಕ್‌ನಲ್ಲಿ ಕುಟುಂಬ ಸಮೇತ ಬಂದು ಗಾಳಿಯಲ್ಲಿ ಗಂಟೆಗಟ್ಟಲೇ ತೇಲುವ ಪಟಗಳನ್ನು ನೋಡುತ್ತ  ಪರಮಾನಂದ ಪಡುತ್ತಾರೆ. 

ಜಾಗೃತಿ-ಕೇವಲ ಮನೋರಂಜನೆಗಾಗಿ ಗಾಳಿಪಟ ಹಾರಿಸುವ ಕೆಲಸ ಆಗುತ್ತಿಲ್ಲ. ಆಯಾಯ ಕಾಲಘಟ್ಟದಲ್ಲಿ ಸಂಭವಿಸುವ ಅವಘಡಗಳ ಬಗ್ಗೆ ಜನ ಸಾಮಾನ್ಯರಲ್ಲಿ, ಶಾಲಾ, ಕಾಲೇಜ್‌ ಗಳ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೂ ಗಾಳಿಪಟ ಹಾರಿಸುವ ಕಾರ್ಯ ಮಾಡಲಾಗುತ್ತಿದೆ. 

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮರಳಿ ಕರೆ ತರುವುದು, ಅತ್ಯಾಚಾರ ತಡೆ, ಮಹಿಳೆಯರ ಬಗ್ಗೆ ಪೂಜ್ಯ ಭಾವನೆ ಮೂಡಿಸಿ ಗೌರವಿಸುವುದು, ಚಾಲನೆಯ ಜಾಗೃತಿ, ಸಮಾಜದ ಕ್ರೌರ್ಯ, ಸೌಹಾರ್ದತೆ, ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡೆಗಳಲ್ಲೂ ಸಂದೇಶ ಸಾರುವ ದೊಡ್ಡ ದೊಡ್ಡ ಗಾಳಿಪಟಗಳು ಬಾನೆತ್ತರದಲ್ಲಿ ಹಾರಾಡುತ್ತಿರುತ್ತದೆ. 

ಹರಿಯಬ್ಬೆ ಹೆಂಜಾರಪ್ಪ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.