ಮೋಟಾರ್ ಬೈಕ್ ಏರಿ ಕನ್ನಡಿಗನ ಪ್ರಚಂಡ ಸಾಹಸ
Team Udayavani, Apr 1, 2017, 4:00 AM IST
ಜೀವದ ಮೇಲೆ ಎಳ್ಳಷ್ಟು ಆಸೆಯಿಲ್ಲ. ಭಯ ಅಂದರೆ ಏನು ಎನ್ನುವುದು ಇವರಿಗೆ ಗೊತ್ತೇ ಇಲ್ಲ. ಕಡಿದಾದ ಬೆಟ್ಟ ಗುಡ್ಡಗಳನ್ನು ಲೆಕ್ಕಿಸದೆ ಮೋಟಾರ್ ಬೈಕ್‌ನಲ್ಲಿ ಸಾಹಸ ಮಾಡುವುದು ಇವರ ವೃತ್ತಿ.
ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಇಲ್ಲಿ ಏಕಾಗ್ರತೆ, ಶಿಸ್ತು, ಗೆಲ್ಲಲೇಬೇಕು ಎನ್ನುವ ದೃಢವಾದ ಸಂಕಲ್ಪ ಇರಲೇಬೇಕು. ಒಂದು ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಏಕಾಗ್ರತೆ ತಪ್ಪಿದರೆ ಪ್ರಾಣಕ್ಕೆ ಅಪಾಯವಾಗಬಹುದು. ಶಿಸ್ತು ಇಲ್ಲದಿದ್ದರೆ ಪಂದ್ಯವನ್ನು ಗೆಲ್ಲುವುದೇ ಅಸಾಧ್ಯವಾಗಬಹುದು. ಛಲ ಇಲ್ಲದಿದ್ದರೆ ರೇಸ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಕ್ಕಿಲ್ಲ. ಇಂತಹ ಎಲ್ಲ ಸವಾಲನ್ನು ಮೆಟ್ಟಿ ನಿಂತು. ಇತ್ತೀಚೆಗೆ ಡಕಾರ್ ರ್ಯಾಲಿನಲ್ಲಿ ಪೂರ್ಣಗೊಳಿಸಿ, ಒಟ್ಟಾರೆ 47ನೇ ಸ್ಥಾನ ಪಡೆದ ಸಾಹಸಿ ಕನ್ನಡಿಗ ಬೈಕ್ ಚಾಲಕನೊಬ್ಬನ ಕಥೆಯನ್ನು ಇಲ್ಲಿ ವಿವರಿಸಿದ್ದೇವೆ. ಹೆಸರು ಸಿ.ಎಸ್.ಸಂತೋಷ್. ಬೆಂಗಳೂರಿನವರು. ಕೋಲಾರದಲ್ಲಿ ಸಣ್ಣ ಅಕಾಡೆಮಿಯನ್ನು ಸ್ಥಾಪಿಸಿ ಉತ್ಸಾಹಿಗಳಿಗೆ ಒಂದಿಷ್ಟು ತರಬೇತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಸಂತೋಷ್‌ರಿಗೆ ಹುಚ್ಚು ಹಿಡಿದಿದೆ. ಕೆಲಸ ಕಾರ್ಯ ಬಿಟ್ಟು ಬೈಕ್ ರೇಸ್ ಅಂತೆಲ್ಲ ತೆಲೆ ಕೆಡಿಸಿಕೊಂಡಿದ್ದಾನೆ. ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂದೆಲ್ಲ ಟೀಕೆ ಮಾಡುತ್ತಾರೆ. ಆದರೆ ಸಂತೋಷ್ ಅದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ತನ್ನ ಪ್ರಯತ್ನವನ್ನು ಬಿಡಲಿಲ್ಲ. ಬೆಂಗಳೂರು, ಕೋಲಾರದಲ್ಲಿ ಹೆಚ್ಚಿನ ಅಭ್ಯಾಸ ನಡೆಸಿದರು. ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡರು. ಸದ್ಯ ವಿಶ್ವದ ಅತ್ಯಂತ ಪ್ರತಿಷ್ಠಿತ ರ್ಯಾಲಿಗಳಲ್ಲಿ ಒಂದಾಗಿರುವ ಡಕಾರ್ ರ್ಯಾಲಿ ಮುಗಿಸಿ ಬಂದಿದ್ದಾರೆ. ಅವರೊಂದಿಗೆ ಉದಯವಾಣಿ ಸಂದರ್ಶನ ನಡೆಸಿತು. ಈ ವೇಳೆ ಅವರ ವೃತ್ತಿ ಬದುಕಿನ ಹಲವು ರೋಚಕ ಕಥೆಗಳು ತೆರೆದುಕೊಂಡವು. ಬದುಕಿನ ದಾರಿ, ಕಷ್ಟನಷ್ಟಗಳು, ಅಪಾಯದ ರೇಸ್, ಗೆದ್ದ ಹಲವು ಪ್ರಶಸ್ತಿಗಳು, ಮನೆಯವರ ಪೋ›ತ್ಸಾಹ. ಇದೆಲ್ಲದರ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಸಂದರ್ಶನದ ಪೂರ್ಣ ವಿವರ ಇಲ್ಲಿದೆ ನೋಡಿ.
ಸಾವು ಗೆದ್ದಿದ್ದ ಸಂತೋಷ್
ಸಂತೋಷ್ ಕಾಲೇಜು ದಿನಗಳಲ್ಲೇ ಬೈಕ್ ರೇಸ್‌ನತ್ತ ಆಕರ್ಷಿತರಾಗಿದ್ದರು. ಇವರ ಬೈಕ್ ಪ್ರೀತಿ ಕಂಡು ಸ್ವತಃ ತಂದೆ ಸಿ.ಆರ್.ಶಿವಶಂಕರ್ ಒಂದು ಬೈಕ್ ಅನ್ನು ತಂದುಕೊಟ್ಟರು, ಸಂತೋಷ್ ಅದನ್ನು ರೇಸ್ ಬೈಕ್‌ನಂತೆ ವಿನ್ಯಾಸಗೊಳಿಸಿದರು. ಕ್ರೀಡಾ ಹಿನ್ನಲೆಯಿಂದ ಬಂದವರಲ್ಲದಿದ್ದರೂ ಹಲವು ಕೂಟದಲ್ಲಿ ಭಾಗವಹಿಸಿದರು. ರಾಜ್ಯ ಮಟ್ಟದಲ್ಲಿ ಮಿಂಚಿದರು. ಸಾಕಷ್ಟು ಹೆಸರು ಮಾಡಿದರು. 2013ರಲ್ಲಿ ವಿಶ್ವ ಕ್ರಾಸ್‌ಕಂಟ್ರಿ ರ್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಇದು ಅವರ ಮೊದಲ ರಾಷ್ಟ್ರೀಯ ರೇಸ್ ಆಗಿತ್ತು. ದುರಾದೃಷ್ಟವೆಂದರೆ ಸಂತೋಷ್‌ಗೆ ರೇಸ್ ವೇಳೆ ಅಪಘಾತವೊಂದು ಸಂಭವಿಸಿತು. ರೇಸ್‌ನ 2 ಹಂತವನ್ನು ಪೂರೈಸಿದ್ದ ಸಂತೋಷ್ 3ನೇ ಹಂತದಲ್ಲಿ ಪಾಲ್ಗೊಂಡಿದ್ದಾಗ 47 ಡಿಗ್ರಿ ಬಿಸಿಲಿನ ತಾಪಕ್ಕೆ ಇವರ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹತ್ತಿಕೊಂಡಿತ್ತು. ನೋಡು ನೋಡುತ್ತಲೇ ಬೈಕ್ ಸುಟ್ಟು ಕರಕಲಾಗಿತ್ತು. ಸಂತೋಷ್ ಕತ್ತಿಗೆ ಗಂಭೀರ ಗಾಯವಾಗಿತ್ತು. ಆನಂತರ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕುತ್ತಿಗೆ ಭಾಗ ಭಾಗಶಃ ಸುಟ್ಟು ಹೋಗಿದ್ದರಿಂದ ತೊಡೆ ಭಾಗದಿಂದ ಮಾಂಸವನ್ನು ತೆಗೆದು ವೈದ್ಯರು ಸರ್ಜರಿ ನಡೆಸಿದರು. ಈಗಲೂ ಅವರ ಕತ್ತಿನ ಸುತ್ತ ಗಾಯದ ಗುರುತನ್ನು ಕಾಣಬಹುದು. ಅಪಾಯದಿಂದ ಪಾರಾದ ಅಂದಿನ ನೆನಪನ್ನು ಸಂತೋಷ್ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಹಲವು ಪ್ರಶಸ್ತಿಗಳ ಸರದಾರ
ಸೂಪರ್ ಕ್ರಾಸ್ ಮತ್ತ ಮೋಟಾರ್ ಕ್ರಾಸ್‌ನಲ್ಲಿ ಸಂತೋಷ್ ಹಲವು ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಎಂಆರ್‌ಎಫ್ ಸೂಪರ್‌ಕ್ರಾಸ್ ಚಾಂಪಿಯನ್‌ಶಿಪ್, ಗಲ್ಫ್ ನ್ಯಾಷನಲ್ ಡರ್ಟ್ ಟ್ರ್ಯಾಕ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಂತೋಷ್ ಖ್ಯಾತಿ ಪಡೆದಿದ್ದಾರೆ ಎನ್ನುವುದು ವಿಶೇಷ. 2009ರಲ್ಲಿ ಮಹರಾಗಮ ಮೋಟಾರ್‌ಕ್ರಾಸ್, 2010ರಲ್ಲಿ ನೂರ್ ಇಲಿಯಾ ಮೋಟಾರ್‌ಕ್ರಾಸ್, ಫಾಕ್ಸ್‌ಹಿಲ್ ಸೂಪರ್‌ಕ್ರಾಸ್, ವಿಜಯಬಾಹು ಮೋಟಾರ್‌ಕ್ರಾಸ್, ಗನ್ನರ್ ಸೂಪರ್ ಕ್ರಾಸ್, ಗಜಬಾ ಸೂಪರ್‌ಕ್ರಾಸ್, ನಳಂದಾ ಮೋಟಾರ್‌ಕ್ರಾಸ್, ಏಷ್ಯನ್ ಮೋಟಾರ್‌ಕ್ರಾಸ್ ಚಾಂಪಿಯನ್‌ಶಿಪ್ ಗೆದ್ದರು. 2011ರಲ್ಲಿ ಸಿಗಿರಿ ರ್ಯಾಲಿ ಸೂಪರ್‌ಕ್ರಾಸ್, 2ನೇ ಫಾಕ್ಸ್‌ಹಿಲ್ ಸೂಪರ್‌ಕ್ರಾಸ್‌ನಲ್ಲಿ ಪ್ರಶಸ್ತಿ ಗೆದ್ದರು. 2012ರಲ್ಲಿ 2ನೇ ದು ಕಾವಲ್‌ರಿ ಸೂಪರ್‌ಕ್ರಾಸ್ ರೇಸ್‌ನಲ್ಲೂ ಪ್ರಶಸ್ತಿ ಗೆದ್ದರು.
ಸಂತೋಷ್ ರ್ಯಾಲಿ ವಿಭಾಗದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. 2012ರಲ್ಲಿ ಮಾರುತಿ ಸುಜುಕಿ ರೈಡ್ ಡಿ ಹಿಮಾಲಯದಲ್ಲಿ ಮೊದಲ ಸ್ಥಾನ, 2014, 15 ಹಾಗೂ 16ರಲ್ಲಿ ಮಾರುತಿ ಸುಜುಕಿ ಡೆಸಾರ್ಟ್ ಸ್ಟೋರ್ಮ್ಕೂಟವನ್ನು ಗೆದ್ದರು. 2014ರಲ್ಲಿ ವಿಶ್ವ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ 9ನೇ ಸ್ಥಾನ ಪಡೆದರು. ಸದ್ಯ ಸಂತೋಷ್ ಮುಂದಿನ ಡಕಾರ್ ರ್ಯಾಲಿನತ್ತ ಚಿತ್ತ ನೆಟ್ಟು ಅಭ್ಯಾಸ ನಡೆಸಿದ್ದಾರೆ.
ಅಪ್ಪ-ಅಮ್ಮನಿಗೆ ಇಷ್ಟವಿಲ್ಲದ ರೇಸ್
ಅಪಾಯದ ರೇಸ್‌ನಲ್ಲಿ ಮಗ ಜೀವ ಪಣಕ್ಕಿಟ್ಟು ಭಾಗವಹಿಸುವುದು ಸಂತೋಷ್ ತಂದೆ ಶಿವಶಂಕರ್ ಹಾಗೂ ತಾಯಿ ಚಂದ್ರಕಲಾಗೆ ಸ್ವಲ್ಪವೂ ಇಷ್ಟ ಇರಲಿಲ್ಲ. ಸಂತೋಷ್ ತಮ್ಮ ಮನೆಯವರನ್ನು ಮನವೊಲಿಸಿ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿಂದೆ ಅಪಘಾತ ನಡೆದಾಗಲಂತೂ ತಾಯಿ ಹೆಚ್ಚು ಭಯಪಟ್ಟಿದ್ದರು. ಈಗಲೂ ರೇಸ್ ಬೇಡ ಎನ್ನುತ್ತಾರಂತೆ. ಸ್ವತಃ ಸಂತೋಷ್ ಇದನ್ನು ಸಂದರ್ಶನದಲ್ಲಿ ಹೇಳಿದರು.
ರೇಸರ್ ಆಗಲು ಹೆಚ್ಚು ದುಡ್ಡು ಬೇಡ
ಇದು ಸಂತೋಷ್ ಮಾತು. ಬೈಕ್ ರೇಸರ್ ಆಗಲು, ನಿಮ್ಮ ಕನಸನ್ನು ಸಾಕಾರಗೊಳಿಸಲು ಒಂದು ಬೈಕ್ ಇದ್ದರೆ ಸಾಕು. ನಿಮ್ಮಲ್ಲಿ ಸ್ವಲ್ಪ ಧೈರ್ಯ ಇರಬೇಕು. ಒಂದೊಂದೇ ಹಂತವನ್ನು ಗೆಲ್ಲುತ್ತಾ ಮುಂದೆ ಹೋದ ಹಾಗೆ ನಿಮಗೆ ಅವಕಾಶಗಳು ತನ್ನಿಂದ ತಾನೆ ಬರುತ್ತದೆ. ಹಣದಿಂದ ಎಲ್ಲ ಆಗುತ್ತದೆ ಎನ್ನುವುದು ತಪ್ಪು ಕಲ್ಪನೆ ಎನ್ನುವುದು ಸಂತೋಷ್ ಅಭಿಪ್ರಾಯ.
ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.