ಸೈಕಲ್ ಯಾತ್ರಿಕನ ಕನಸು
ಪಾಕ್ ನೋಡಿ ಬಂದವನ ಮಾತು ಕೇಳುತ್ತಾ...
Team Udayavani, Mar 14, 2020, 6:12 AM IST
ಈ ಸೈಕಲ್‌ವಾಲಾನ ಹೆಸರು, ಮನೋಹರ್ ಸಖಾರಾಮ್ ಕದಮ್. ವಯಸ್ಸು 70 ವರ್ಷ. ಮೂಲ ಮುಂಬೈ. ಕಳೆದ 10 ವರ್ಷಗಳಿಂದ ಸೈಕಲ್ಲಿನಲ್ಲಿ ಬರೋಬ್ಬರಿ 50 ಸಾವಿರ ಕಿ.ಮೀ. ಕ್ರಮಿಸಿದ್ದಾರೆ. ಈ ಪುಟ್ಟ ಸೈಕಲ್, 8 ದೇಶಗಳನ್ನು ಸುತ್ತಾಡಿ ಬಂದಿದೆ. ಪಾಕ್‌ನಲ್ಲೂ ಕೆಲ ದಿನಗಳನ್ನು ಕಳೆದು, ವಿಸ್ಮಯ ಹುಟ್ಟಿಸಿದ ಮನುಷ್ಯಗುಂಡ್ಲುಪೇಟೆಯ ಹಾದಿಯಲ್ಲಿ ಸಿಕ್ಕಿದ್ದ…
ಗಣರಾಜ್ಯೋತ್ಸವ ಆಗಿ ತಿಂಗಳ ಮೇಲಾಗಿದೆ. ಸ್ವಾತಂತ್ರ್ಯ ದಿನ ಬಹಳ ದೂರದಲ್ಲಿದೆ. ಇಂಥ ಎಡ ಹೊತ್ತಿನಲ್ಲಿ ಸೈಕಲ್ಲಿಗೆ ರಾಷ್ಟ್ರ ಧ್ವಜವನ್ನು ಕಟ್ಟಿಕೊಂಡು ಹೆದ್ದಾರಿಯಲ್ಲಿ ಪಯಣಿಸುತ್ತಿದ್ದ ವ್ಯಕ್ತಿಯನ್ನು ಕಂಡು ಅಚ್ಚರಿಯಾಯ್ತು. ಕುತೂಹಲದಿಂದ ಅವರನ್ನು ಅಡ್ಡ ಹಾಕಿ ಮಾತಿಗೆಳೆದೆ. ಮಾತು ಸಾಗುತ್ತಿದ್ದಂತೆ, ನಾನೊಬ್ಬ ವಿಸ್ಮಯಕಾರಿ ವ್ಯಕ್ತಿಯ ಎದುರು ನಿಂತಿದ್ದೇನೆ ಎಂಬುದು ಅರಿವಾಗುತ್ತಾ ಹೋಯ್ತು. ಈ ಸೈಕಲ್‌ವಾಲಾನ ಹೆಸರು, ಮನೋಹರ್ ಸಖಾರಾಮ್ ಕದಮ್. ವಯಸ್ಸು 70 ವರ್ಷ. ಮೂಲ ಮುಂಬೈ. ಕಳೆದ 10 ವರ್ಷಗಳಿಂದ ಸೈಕಲ್ಲಿನಲ್ಲಿ ಬರೋಬ್ಬರಿ 50 ಸಾವಿರ ಕಿ.ಮೀ. ಕ್ರಮಿಸಿದ್ದಾರೆ.
ಈ ಪುಟ್ಟ ಸೈಕಲ್, 8 ದೇಶಗಳನ್ನು ಸುತ್ತಾಡಿ ಬಂದಿದೆ. ಕದಮ್ ಅವರು ಗುಂಡ್ಲುಪೇಟೆಯಿಂದ ಬಂಡೀಪುರವನ್ನು ಹಾದು ಊಟಿಯಿಂದ, ಮುಂಬೈ ತಲುಪುವ ಯೋಜನೆಯಲ್ಲಿದ್ದರು. “ಇಷ್ಟು ಸುದೀರ್ಘ ಸೈಕಲ್ ಯಾನ ಹೇಗೆ ಶುರುವಾಯ್ತು? ಎಪ್ಪತ್ತಾಯ್ತು ಅಂತೀರಿ. ಈ ಇಳಿವಯಸ್ಸಿನಲ್ಲೂ ಇಂಥ ಹುಚ್ಚು ಸಾಹಸ ಬೇಕಾ?’ ಎಂದು ಕೇಳಿದೆ. “ದೇಶಕ್ಕಾಗಿ ಸಾರ್, ದೇಶಕ್ಕಾಗಿ’ ಎಂದರು. ಹಾಗೆ ಹೇಳುವಾಗ ಅವರ ಕಂಗಳ ಹೊಳಪನ್ನು ನೋಡಬೇಕಿತ್ತು. ಈಗ ಎಪ್ಪತ್ತೆಂದರೆ ನಾನಾ ರೋಗರುಜಿನಗಳು ತುಂಬಿಕೊಂಡು ಮನೆಯಿಂದ ಒಂದು ಫರ್ಲಾಂಗೂ ನಡೆಯಲಾಗದ ವಯಸ್ಸು.
ಅಂಥದ್ದರಲ್ಲಿ ಕದಮ್, ಉತ್ಸಾಹದ ಚಿಲುಮೆಯಂತೆ ಪುಟಿಯುತ್ತಿರುವುದನ್ನು ನೋಡಿ ನನಗೆ ಸೋಜಿಗವಾಯ್ತು. “ನೋಡಿ ಸಾರ್, ದೊಡ್ಡವ್ರನ್ನಂತೂ ತಿದ್ದೋಕಾಗಲ್ಲ. ಆದರೆ, ಮಕ್ಕಳನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಬಹುದು. ನಾನು ಪ್ರತಿ ಊರಿಗೆ ಹೋದಾಗ ಮಕ್ಕಳನ್ನು ಕೂರಿಸಿಕೊಂಡು ಮಾತಾಡ್ತೀನಿ. ಧೂಮಪಾನ, ಮದ್ಯಪಾನದಂಥ ದುಶ್ಚಟಗಳಿಂದ ದೂರ ಇರಲು ಹೇಳ್ತೀನಿ. ಮಕ್ಕಳಿಗೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದವರ ಕತೆಗಳನ್ನು ಹೇಳ್ತೀನಿ. ಇದು ನಮ್ಮೆಲ್ಲರ ಕರ್ತವ್ಯ ಸಾರ್’ ಎಂದರು, ಕದಮ್. ನಾನು ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಅವರ ಮಾತು ಕೇಳುತ್ತಲೇ ಇದ್ದೆ.
ಅವರು ಮಾತು ಮುಂದುವರಿಸುತ್ತಾ, “ಸ್ವಾತಂತ್ರ್ಯ ಬಂದ ನಂತರವೂ ದೇಶಕ್ಕಾಗಿ ಸಾವಿರಾರು ಸೈನಿಕರ ಬಲಿದಾನವಾಗಿದೆ. ಅವರೆಲ್ಲ ಮೇಲೆ ಕುಳಿತು, ನಮ್ಮನ್ನು ನೋಡ್ತಾ ಇದಾರೆ ಸಾರ್. ಅಂಥ ಹುತಾತ್ಮರ ಬಗ್ಗೆ ಒಂದೆರಡು ಮಾತಾಡಿದರೆ, ಭೂಮಿ ಮೇಲೆ ಯಾರೋ ಒಬ್ಬ ನಮ್ಮನ್ನು ನೆನಪಿಸಿಕೊಳ್ತಿದಾನೆ ಎಂದು ಅವರು ಖುಷಿಪಡ್ತಾರೆ. ಅಲ್ವಾ ಸಾರ್..?’ ಎನ್ನುವಾಗ ಅವರ ಕೆಂಪನೆಯ ಕಣ್ಣುಗಳು ಹನಿಗೂಡಿದವು. ನಾನು ಮನದಲ್ಲೇ ಮೆಚ್ಚಿ ಅಹುದಹುದೆಂದೆ. “ನಿಮ್ಮಂಥ ಮಹಾನುಭಾವಿಗಳು ಇರೋದ್ರಿಂದಲೇ ಇನ್ನೂ ಮಳೆಬೆಳೆಯಾಗ್ತಿರೋದು’ ಎಂಬ ಲೋಕಾರೂಢಿಯ ಮಾತು ನೆನಪಿಗೆ ಬಂತು.
ನೇಪಾಳದ ಹಿಮಕ್ಕೇ ಜಗ್ಗಲಿಲ್ಲ…: “ಊಟಿಗೆ ಹೋಗ್ತಾ ಇದೀನಿ ಅಂತೀರಾ? ಅಲ್ಲಿನ ಕಾಡುಮೇಡುಗಳಲ್ಲಿ ಸೈಕಲ್ ಹೊಡೆಯೋಕೆ ಕಷ್ಟ ಆಗಲ್ವಾ? ಆಕಸ್ಮಾತ್ ಕತ್ತಲೆಯಾದರೆ ಎಲ್ಲಿ ಇರ್ತೀರಿ?’, ಕೇಳಿದೆ. “ಅಯ್ಯೋ, ಇದ್ಯಾವ ಕಾಡು ಬಿಡಿ ಸಾರ್, ಹಿಮಾಚಲ ಪ್ರದೇಶದ ರೋಡುಗಳಲ್ಲೇ ಸಲೀಸಾಗಿ ಸೈಕಲ್ ಹೊಡಿದೀನಿ. ಎಲ್ಲಿ ಕತ್ತಲಾಗುತ್ತೋ ಅಲ್ಲೇ ಮಲಗ್ತಿನಿ. ನೇಪಾಳದ ಹಿಮಕ್ಕೇ ನಾನು ಜಗ್ಗಲಿಲ್ಲ ಸಾರ್… ವಾಸಕ್ಕೆ ಇಂಥದ್ದೇ ಜಾಗ ಅಂಥೇನಿಲ್ಲ. ಪಾಳು ಗುಡಿಯೋ, ಮುರುಕು ಚಾವಡಿಯೋ ಸಿಕ್ಕಿದರೂ ಸಾಕು. ಯಾರಾದರೂ ತುಂಡು ರೊಟ್ಟಿ ಕೊಟ್ಟರೆ, ಅದೇ ಪರಮಾನ್ನ.
ಅನುಕೂಲವನ್ನು ಬಯಸಿ ಹೊರಟರೆ ಏನನ್ನೂ ಸಾಧಿಸೋಕಾಗಲ್ಲ’ ಎನ್ನುವಾಗ, ಅವರೊಳಗೊಬ್ಬ ಯುವಕನಿದ್ದ. ಅವರ ಹಿಮ್ಮತ್ತಿನಲ್ಲಿ ನನಗೆ ಒಂದು ನೂಲು ದಕ್ಕಿದರೂ ಜನ್ಮ ಸಾರ್ಥಕವೆನಿಸಿತು. “ಇದ್ರೆ ಈ ಊರು, ಎದ್ರೆ ಮುಂದಿನ ಊರು’ ಎಂಬ ಗಾದೆ ನೆನಪಾಯಿತು. “ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು, ಯಾರು ಸ್ನೇಹದಿ ಬರುವರೋ ಅವರೇ ನಮ್ಮೊರು’ ಎಂಬ ಶಂಕರಣ್ಣನ ಅಮರಗೀತೆಯೂ ಕಣ್ಮುಂದೆ ಬಂತು.
ಚೀನಾ ಪತ್ರಿಕೆಯ ಪ್ರಶಂಸೆ: ಕದಮ್ ತಮ್ಮ ಕಿಟ್ ಬ್ಯಾಗ್‌ನಿಂದ ಒಂದು ಪುಸ್ತಕ ಹೊರತೆಗೆದರು. ಅದರಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳು, ಉನ್ನತ ಅಧಿಕಾರಿಗಳು ನೀಡಿರುವ ಪ್ರಶಂಸೆಯ ಪತ್ರಗಳು ತುಂಬಿದ್ದವು. ಚೀನಾದ ಪತ್ರಿಕೆಯೊಂದರಲ್ಲಿ ಅವರ ಪ್ರವಾಸದ ಸುದ್ದಿ ಪ್ರಕಟವಾಗಿರುವುದನ್ನು ನೋಡಿ ನಿಬ್ಬೆರಗಾದೆ. ಇನ್ನೊಂದು ಸುದ್ದಿಯಲ್ಲಿ, ಅವರು ಸೈಕಲ್ ಮೇಲೆ ಕುಳಿತಿದ್ದಾರೆ. ಮುಂದೆ ಭಾರತದ ಧ್ವಜ, ಹಿಂದೆ ಪಾಕಿಸ್ತಾನದ ಧ್ವಜ! ನನಗೆ ಮೈ ಜುಮ್ಮೆಂದಿತು. “ಇದೇನಿದು!?’ ಎಂದೆ, ಉದ್ವೇಗದಿಂದ.
“ಪಾಕಿಸ್ತಾನ ಪ್ರವಾಸದ್ದೂ ಸಾರ್!’ ಅಂದರು. ನನ್ನ ಕಿವಿಗಳು ನಿಮಿರಿದವು. “ಪಾಕಿಸ್ತಾನದವ್ರು ಒಳಗೆ ಬಿಟ್ಕೊಂಡ್ರಾ?!’ ಉದ್ವೇಗದಲ್ಲಿ ಪೆದ್ದ ಪ್ರಶ್ನೆ ಕೇಳಿದೆ. “ಯಾಕೆ ಬಿಡಲ್ಲ? ವೀಸಾ ಪಾನ್ಪೋರ್ಟ್ ಎಲ್ಲಾ ಇದೆ ಸಾರ್… ಅಂದು ಏನಾಯ್ತು ಅಂದ್ರೆ, ಅವರು ತಿರಂಗ ಬಿಚ್ಚು ಅಂದ್ರು, ಬಿಚ್ಚಲ್ಲ ಅಂದೆ. ಹಾಗಿದ್ರೆ ನಮªನ್ನೂ ಮುಂದಕ್ಕೆ ಕಟ್ಟು ಅಂದ್ರು, ಕಟ್ಟೋದಾದ್ರೆ ಹಿಂದಕ್ಕೆ ಕಟ್ತೀನಿ ಎಂದು ಹಠ ಹಿಡಿದೆ. ಮಣಿದರು. ನಾನು ನನ್ನ ದೇಶದ ಘನತೆಗೆ ಕುಂದು ತರೋದಕ್ಕೆ ಅವಕಾಶ ಕೊಡಲಿಲ್ಲ ಸಾರ್’ ಎಂದರು, ಕದಮ್. “ನೀನು ದೊಡ್ಡ ಮನುಷ್ಯ ಬಿಡಪ್ಪಾ’ ಎಂದು ತಲೆಬಾಗಿದೆ.
ಪೊಲೀಸ್ ಠಾಣೆಗಳ ಮೊಹರು: ಅವರ ಇನ್ನೊಂದು ಪುಸ್ತಕದಲ್ಲಿ, ಹಾದಿಯುದ್ದಕ್ಕೂ ಇರುವ ಪ್ರತಿಯೊಂದು ಪೊಲೀಸ್ ಠಾಣೆಯ ಅಧಿಕಾರಿಗಳ ಮೊಹರು ಸಹಿತ ಶುಭಸಂದೇಶಗಳು ಇದ್ದವು. “ಯಾಕೆ ಎಲ್ಲಾ ಸ್ಟೇಷನ್ನುಗಳಿಗೂ ಹೋಗ್ತಿರಾ?!’- ಪ್ರಶ್ನೆಯನ್ನು ಮುಂದಿಟ್ಟೆ. “ಅವರಿಗೆ ಮಾಹಿತಿ ತಿಳಿಸಿ ಸಹಿ ಪಡೆದೇ ನಾನು ಮುಂದೆ ಹೋಗೋದು. ಅವರೂ ಒಂದೆರಡು ಒಳ್ಳೆಯ ಮಾತುಗಳನ್ನಾಡಿ ಹಾರೈಸಿ, ಮುಂದಕ್ಕೆ ಕಳಿಸ್ತಾರೆ.
ಇಂಥ ದಾಖಲೆಗಳನ್ನು ಇಟ್ಟುಕೊಳ್ಳದಿದ್ರೆ, ಈತ ಬಸ್ಸಿನಲ್ಲಿ ಸೈಕಲ್ ಹೊಕ್ಕೊಂಡೂ ಪ್ರಯಾಣಿಸ್ತಾನೆ ಎಂದು ಯಾರಾದರೂ ಅನುಮಾನಿಸಲೂಬಹುದು. ಅಂಥ ಸಣ್ಣ ಸಂಶಯಗಳಿಗೂ ಅವಕಾಶ ಕೊಡಲಾರೆ’ ಎಂದು ಮಿಸ್ಟರ್ ಪಫೆಕ್ಟ್‌ನಂತೆ ಹೇಳಿದರು. “ನಿಮ್ಮನ್ನು ಅನುಮಾನಿಸುವಷ್ಟು ನೀಚ ಮಟ್ಟಕ್ಕೆ ಯಾರೂ ಕನಸು- ಮನಸಿನಲ್ಲಿಯೂ ಇಳಿಯದಿರಲಿ’ ಎಂದು ನನಗೆ ನಾನೇ ಹೇಳಿಕೊಂಡೆ. ವಿದಾಯದ ಘಳಿಗೆ ಬಂದಿತು. ಅವರನ್ನು ಒಂದಷ್ಟು ದೂರ ಮುಂದೆ ಹೋಗಲು ಬಿಟ್ಟು, ಮತ್ತೆ ಹಿಂಬಾಲಿಸಿ ಕೈ ಬೀಸಿ, ಮುಂದಕ್ಕೆ ಹೊರಟೆ.
ಪಾಕ್‌ನಲ್ಲಿ ಕೆಲವು ದಿನಗಳು: 2008ರ ನವೆಂಬರ್ ಅದು. ಅಟ್ಟಾರಿ ಗಡಿಯಿಂದ 89 ಕಿ.ಮೀ. ದೂರ ಕ್ರಮಿಸಿದ್ದೆ. ಲಾಹೋರ್ ಅನ್ನೂ ದಾಟಿ, “ನಂಕಾನ ಸಾಹಿಬ್’ ಎಂಬ ಜಿಲ್ಲೆಯ ಗ್ರಾಮಗಳಲ್ಲಿ ಸುತ್ತಾಡಿದ್ದೆ. ನಂಕಾನ ಸಾಹಿಬ್‌ನಲ್ಲಿ ಒಂದು ಗುರುದ್ವಾರವಿತ್ತು. ಅಲ್ಲಿ ಎರಡು ದಿನ ತಂಗಿದ್ದೆ. ಗುರುದ್ವಾರದವರು, “ತಿರಂಗ ಕಟ್ಟಿಕೊಂಡು ಹೀಗೆಲ್ಲ ಸುತ್ತಬೇಡಿ. ನಿಮ್ಮ ಜೀವಕ್ಕೆ ಅಪಾಯ ಎದುರಾದೀತು’ ಎಂದು ಹೇಳಿದ್ದರು.
ಅಷ್ಟರಲ್ಲಿ ಕಾಕತಾಳೀಯವೆಂಬಂತೆ, ಅಜ್ಮಲ್ ಕಸಬ್ ಮುಂತಾದ ಪಾಕ್ ಉಗ್ರರು ಮುಂಬೈನ ತಾಜ್ ಹೋಟೆಲಿನಲ್ಲಿ ದಾಳಿ ನಡೆಸಿದರು. ಆಗ ಭಾರತದ ಸೇನಾಧಿಕಾರಿಗಳು ಕರೆ ಮಾಡಿ, ತುರ್ತಾಗಿ ವಾಪಸು ಕರೆಸಿಕೊಂಡರು. ಪಾಕಿಸ್ತಾನಕ್ಕೆ ಹೋದಾಗ, ಅಲ್ಲಿನ ಜನ “ಏಕೆ ಬಂದಿದ್ದೀಯಾ?’ ಎಂದು ಕೇಳುತ್ತಿದ್ದರು. “ಶಾಂತಿ ಸಂದೇಶ ಹೊತ್ತು ಬಂದಿದ್ದೇನೆ’ ಎಂದಾಗ ತಣ್ಣಗಿನ ದನಿಯಲ್ಲಿ, “ಹೌದಾ? ಸರಿ ಸರಿ’ ಅಂದರು. ಅವರ ಮಾತುಗಳಲ್ಲಿ ಗೌರವ, ಕುತೂಹಲ ಏನೂ ಇರಲಿಲ್ಲ. ನಿರ್ಲಿಪ್ತರಂತೆ ನಡೆದುಕೊಂಡರು.
ಸುತ್ತಿದ ದೇಶಗಳು: ಪಾಕಿಸ್ತಾನ, ಶ್ರೀಲಂಕಾ, ನೇಪಾಳ , ಬಾಂಗ್ಲಾದೇಶ, ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ.
* ಡಾ. ಗವಿಸ್ವಾಮಿ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.