ಕರಡಿ ಕದನ ವಿರಾಮ
ದರೋಜಿ ಕರಡಿ ಧಾಮಕ್ಕೆ 25 ವರ್ಷ
Team Udayavani, Dec 7, 2019, 5:52 AM IST
ಭಾರತದ ಮೊದಲನೇ ಕರಡಿ ಧಾಮದ ಖ್ಯಾತಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿ ಧಾಮದ್ದು. ಈ ಧಾಮಕ್ಕೀಗ ಭರ್ತಿ 25 ವರ್ಷ. ಕರಡಿ- ಮಾನವರ ಸಂಘರ್ಷ ತಡೆಯುವ ಉದ್ದೇಶದಿಂದ ಇಲ್ಲಿ ಧಾಮ ತಲೆಯೆತ್ತಿತ್ತು. ಈ ಕಾಲು ಶತಮಾನದಲ್ಲಿ ಸುತ್ತಲಿನ ಹಳ್ಳಿಯ ಜನ ಕರಡಿಗಳಿಂದ ಕಲಿತ ಪಾಠಗಳು ಹಲವು…
ಗೋಧೂಳಿ ಹೊತ್ತು. ಹೊಸಪೇಟೆ ತಾಲೂಕಿನ ನಲ್ಲಾಪುರದಲ್ಲಿ ನಡು ವಯಸ್ಸಿನ ಮಹಿಳೆ, ಮನೆ ಅಂಗಳದಲ್ಲಿ ಕಸ ಗುಡಿಸುತ್ತಾ, “ಮಗ ಬೇಗ ಹೊಂಡು. ಜೀವದಾನಗಳು ಬರುವ ಹೊತ್ತಾತು. ನಿನ್ನ ತಮ್ಮನ ಕರ್ಕೊಂಡು ಲಗೂನ ಹೊರಡ್ರಿ…’ ಎಂದು ಮೂಲೆಯಲ್ಲಿದ್ದ ಹಿಡಿಗಾತ್ರದ ಕೋಲು, ಒಣಗಿ ಹಾಕಿದ್ದ ದುಪ್ಪಡಿಯನ್ನೂ ಮಗನ ಕೈಗೆ ಇಡುತ್ತಾ “ಬೆಳೆ ಹೋದ್ರೂ ಚಿಂತಿಲ್ಲ. ನೀವು ಉಷಾರು…’ ಅಂದಳು. ಆ ಮಕ್ಕಳು ದೊಡ್ಡ ದೊಡ್ಡ ಹೆಜ್ಜೆ ಇಟ್ಟು ಹೊರಟರು. ನೋಡ ನೋಡುತ್ತಿದ್ದಂತೆ ಇಬ್ಬರು- ಮೂವರು ಸೇರಿ ಗುಂಪು ಗುಂಪಾಗಿ ಅಗತ್ಯ ವಸ್ತುಗಳನ್ನು ಹಿಡಿದು ತಮ್ಮ ತಮ್ಮ ಹೊಲಗಳ ಜಾಡು ಹಿಡಿದು ಕಣ್ಮರೆಯಾದರು.
ದರೋಜಿ ಕರಡಿಧಾಮದ ಪಕ್ಕದ ಊರಿನಲ್ಲಿ ಜೀವದಾನಿಗಳು ಎಂದರೆ, ವನ್ಯಪ್ರಾಣಿಗಳು. ದರೋಜಿಯಲ್ಲಿ ಕರಡಿ ಧಾಮ ಆಗಿ 25 ವರ್ಷ ಕಳೆದರೂ, ಇಲ್ಲಿನವರ ಬೆಳಗು- ಸಂಜೆಗಳಲ್ಲಿ ಕರಡಿಯ “ಕುಣಿತ’ ನಿಂತಿಲ್ಲ. ಕರಡಿಗಳು ಸುಮ್ಮನಾಗಿದ್ದರೂ, ಚಿರತೆ, ಮಿಕ, ನವಿಲುಗಳು ಒಂದಲ್ಲಾ ಒಂದು ರೀತಿಯಲ್ಲಿ ಕಾಡುತ್ತಲೇ ಇವೆ. ಊರೆಲ್ಲಾ ಸೋಸಿದರೂ ಇಲ್ಲಿ ಸಿಗುವುದು ಮುದುಕರು, ಮಹಿಳೆಯರು, ಸಣ್ಣ ಮಕ್ಕಳು. ಕೆಲ ಮನೆಗಳ ಬಾಗಿಲ ತೊಲೆಗೆ ಹಚ್ಚಿದ ವಿಭೂತಿ ಮಾಸಿ ಅದೆಷ್ಟೋ ದಿನಗಳಾಗಿವೆ. “ಅವರೆಲ್ಲಾ ಎಲ್ಲಿ?’ ಎಂದು ಕೇಳಿದರೆ, “ಇಲ್ಲಿ ಮೊದಲೇ ಮಳೆ ಕಮ್ಮಿ. ಒಂದು ಪಕ್ಷ ಟೈಮ್ ಸರ್ಯಾಗಿ ಮಳೆ ಬಂದ್ರೂ ಕಾಡುಪ್ರಾಣಿಗಳ ಕಾಟಕ್ಕೆ ಫಲ ಕೈಗೆ ಹತ್ತುತ್ತಿಲ್ಲ. ಹೀಗಾಗಿ, ಅವರೆಲ್ಲಾ ದುಡಿಯಕ್ಕೆ ದೇಶಾಂತರ ಹೋಗ್ಯಾರೆ…’ ಎಂಬ ಉತ್ತರ ಸಿಕ್ಕಿತು.
ಹಾಗೆಯೇ ಕರಡಿ ಧಾಮದತ್ತ ಹೊರಟೆ. ಹೊಲಗಳಲ್ಲಿ ನೆಲದಿಂದ 8-10 ಅಡಿ ಮೇಲೆ ಚಿಕ್ಕ- ಚಿಕ್ಕ ಗುಡಿಸಲುಗಳು ಕಂಡವು. ಬೆಳೆ ಕಾಯಲು ಮಾಡಿಕೊಂಡ ಗೋಪುರಗಳು ಅವು. ಕತ್ತಲು ಆವರಿಸಿತ್ತು. ಇದ್ದಕ್ಕಿದಂತೆ ಹೊಲಗಳಲ್ಲಿ ಜನರ ಕೇಕೆ. ಬಾಣ ಬಿಡುತ್ತಾ, ಢಮ್ ಢಮ್ ಸದ್ದು ಮಾಡುತ್ತಿದ್ದರು. ಬೆಳೆಯ ನಡುವೆ ಸ್ವಲ್ಪ ಸದ್ದಾದರೂ ಸಾಕು, ಬ್ಯಾಟರಿ ಬಿಟ್ಟು ದೃಷ್ಟಿ ಹಾಯಿಸುತ್ತಿದ್ದರು. ಇವೆಲ್ಲವೂ ಪೈರು ಕಾಪಾಡಲು ಮಾಡುವ ರಾತ್ರಿಯ ಸಾಹಸಗಳಂತೆ. ವರ್ಷದ ನಾಲ್ಕೈದು ತಿಂಗಳು ಹೀಗೆಯೇ ಇವರು “ಶಿವರಾತ್ರಿ ಜಾಗರಣೆ’ ಆಚರಿಸುತ್ತಾರೆ. ಇದು ಕೇವಲ ನಲ್ಲಾಪುರದವರ ಗೋಳಷ್ಟೇ ಅಲ್ಲ. ಧಾಮದ ಅಂಚಿನಲ್ಲಿರುವ ಹೊಸ ಚಿನ್ನಾಪುರ, ದರೋಜಿ, ಉಪ್ಪಾರಹಳ್ಳಿ, ಪಾಪಿನಾಯಕನಹಳ್ಳಿ… ಹೀಗೆ 10-12 ಹಳ್ಳಿಗಳಲ್ಲೂ ಇದೇ ವ್ಯಥೆ.
ಕರಡಿಗಳ ಮೇಲೆ ಸಿಟ್ಟಿಗೆದ್ದರು…
ಇಲ್ಲಿನ ನಿವಾಸಿಗಳು ಅನಾದಿ ಕಾಲದಿಂದಲೂ ಶಿಕಾರಿ ಪರಿಣತರು. ಮೊದಲೆಲ್ಲಾ ಯುಗಾದಿ, ಜಾತ್ರೆಯ ದಿನಗಳಲ್ಲಿ ಚಿರತೆ, ಹುಲಿ, ತೋಳ ಬೇಟೆಯಾಡಿ ಊರೆಲ್ಲಾ ಮೆರವಣಿಗೆ ಮಾಡಿ, ಪ್ರಶಂಸೆ ಗಳಿಸುತ್ತಿದ್ದರಂತೆ. ಆಗೆಲ್ಲ ಪ್ರಾಣಿ ಬೇಟೆ ಹೆಮ್ಮೆಯ ವಿಷಯವಾಗಿತ್ತು. ಜನಸಂಖ್ಯೆ ಹೆಚ್ಚಾದಂತೆ ಅರಣ್ಯ ಒತ್ತುವರಿ, ನಾಶದ ಕೆಲಸ ವ್ಯವಸ್ಥಿತವಾಗಿ ಆಯ್ತು. ಆಹಾರಕ್ಕಾಗಿ ವನ್ಯಜೀವಿಗಳು ಅದರಲ್ಲೂ ಮುಖ್ಯವಾಗಿ ಕರಡಿಗಳು ಹೊಲ-ಗದ್ದೆ, ಊರುಗಳಿಗೆ ಬಂದವು. ಬೆಳೆ, ಪ್ರಾಣಹಾನಿ ಮಾಡಿದವು. ಸಿಟ್ಟಿಗೆದ್ದ ಜನ ಕರಡಿಗಳನ್ನು ಟಾರ್ಗೆಟ್ ಮಾಡಿದರು. ಬೆಳೆಗಳ ಸುತ್ತಾ ಕರೆಂಟ್ ಕೊಟ್ಟರು. ವಿಷ ಹಾಕಿ, ಬೆನ್ನಟ್ಟಿ ಹೋಗಿ ಹೊಡೆದು ಕೊಂದ ಘಟನೆಗಳೂ ಇವೆ. ಕರಡಿಗಳೂ ಸುಮ್ಮನಿರಲಿಲ್ಲ; ಮನುಷ್ಯರ ಮೇಲೆ ಮುಗಿಬಿದ್ದವು. ಅಕ್ಷರಶಃ ಕರಡಿ- ಮಾನವನ ಸಂಘರ್ಷ ಇಲ್ಲಾಗಿತ್ತು.
ಕರಡಿಗಾಗಿ ಜನರೇ ಬದಲಾದರು…
ಕರಡಿ ಧಾಮದ ಹೆಸರಿನಲ್ಲಿ, ಅವುಗಳಿಗೇ ಒಂದು ಆಶ್ರಯತಾಣ ಸಿಕ್ಕಾದ ಮೇಲೆ, ಇಲ್ಲಿನವರು ನಿಟ್ಟುಸಿರುಬಿಟ್ಟರು. ಆದರೆ, ಧಾಮದ ಸುತ್ತಲಿನ ತಡೆಗೋಡೆ, ಕಂದಕಗಳನ್ನು ದಾಟಿಯೂ ಕರಡಿಗಳು ಹೊಲ, ಊರಿನ ಕಡೆ ಬರುವುದನ್ನು ನಿಲ್ಲಿಸಲಿಲ್ಲ. ಈಗಲೂ ನಿಲ್ಲಿಸಿಲ್ಲ! ಕರಡಿಯಂತೂ ಬದಲಾಗಲಿಲ್ಲ. ನಾವೇ ಬದಲಾಗಬೇಕು ಎಂದು ಜನರೇ ನಿರ್ಧರಿಸಿಬಿಟ್ಟರು. ಕೃಷಿಪದ್ಧತಿಯೂ ಬದಲಾಯಿತು. ಕಾನೂನಿನ ಭಯದಿಂದ ಕರಡಿಯನ್ನು ಬೇಟೆಯ ವಸ್ತುವಾಗಿ ನೋಡುವುದನ್ನೂ ನಿಲ್ಲಿಸಿಬಿಟ್ಟರು. ಜನರ ಜೀವನಶೈಲಿ, ಕೃಷಿ ಪದ್ಧತಿ ಬದಲಾದವು. ಕರಡಿ ತಿನ್ನುವ ಶೇಂಗಾ, ಮೆಕ್ಕೆಜೋಳ, ಕಬ್ಬುಗಳು ಆದಷ್ಟು ಕಡಿಮೆಯಾಗಿ, ಹತ್ತಿ, ಮೆಣಸಿನಕಾಯಿಗಳು ಹೊಲ ತುಂಬಿದವು. ಕರಡಿಗಳು ಕಂಡರೂ, ಮುಂಚಿನಂತೆ ಅವುಗಳನ್ನು ಬೆದರಿಸುವುದು, ಚೇಷ್ಟೆ ಮಾಡುವುದನ್ನು ಮಾಡುತ್ತಿಲ್ಲ. ಹೀಗಾಗಿ, ಈಗ ಪ್ರಾಣ ಹಾನಿ ಶೂನ್ಯಕ್ಕಿಳಿದಿದೆ. ಬೆಳೆ ಹಾನಿ ಮಾತ್ರ ಏರುತ್ತಲೇ ಇದೆ. ಕಮಲಾಪುರದ ವನ್ಯಜೀವಿ ವಲಯ ಕಛೇರಿಯ ಅಂಕಿ- ಅಂಶ ಹೇಳುವಂತೆ, ಕರಡಿ ದಾಳಿಯಿಂದ ಬೆಳೆ ನಷ್ಟದ ಬಗ್ಗೆ 2015-16ರಲ್ಲಿ 37, 2016-17ರಲ್ಲಿ 31, 2017-18ರಲ್ಲಿ 41 ಪ್ರಕರಣಗಳು ವರದಿ ಆಗಿವೆ.
ಮನುಷ್ಯರ ಧ್ವನಿ ಬಲ್ಲವು..
ಧಾಮದಲ್ಲಿ ನಿಸರ್ಗದತ್ತವಾಗಿ ಆಹಾರ, ನೀರು ಸಿಕ್ಕಿತು. ಜೊತೆಗೆ ಅರಣ್ಯ ಇಲಾಖೆ ನಿತ್ಯ ಬಾಳೆಹಣ್ಣು, ಬೆಲ್ಲ, ಎಣ್ಣೆ, ಮೆಕ್ಕೆಜೋಳ ಒದಗಿಸುತ್ತಿರುವುದರಿಂದ ಕರಡಿಗಳು ಆಹಾರವನ್ನು ಅರಸಿ ನಾಡಿನತ್ತ ಬರುವುದನ್ನು ಕಡಿಮೆ ಮಾಡಿವೆ. “ನಾವು ನಿತ್ಯ ಆಹಾರ ಹಾಕುತ್ತಿದ್ದೆವು. ಮೊದ ಮೊದಲು ದೂರದಿಂದಲೇ ಗಮನಿಸುತ್ತಿದ್ದ ಕರಡಿಗಳು ನಾವು ಅಲ್ಲಿಂದ ಹೋದ ಮೇಲೆ ಬಂದು ಆಹಾರ ತಿನ್ನುತ್ತಿದ್ದವು. ದಿನ ಕಳೆದಂತೆ ನಾವು ಆಹಾರ ನೀಡುವ ಸಮಯಕ್ಕೆ ಬಂದು ಅವು ಕಾಯುತ್ತಿದ್ದವು. ಸ್ವಲ್ಪ ಗದರಿಸಿದರೆ, ದೂರ ಹೋಗುತ್ತಿದ್ದವು. ಆಮೇಲೆ ಬಂದು ತಿನ್ನುತ್ತಿದ್ದವು. ಈಗ ಅವುಗಳಿಗೆ ಮನುಷ್ಯರ ಧ್ವನಿ ಪರಿಚಿತ. ಮನುಷ್ಯರು ನಮಗೆ ಅಪಾಯ ಮಾಡಲ್ಲ ಎನ್ನುವುದು ಗೊತ್ತಾಗಿದೆ. ಹೀಗಾಗಿ, ಅವು ಆಕ್ರಮಣವನ್ನು ನಿಲ್ಲಿಸಿವೆ’ ಎನ್ನುತ್ತಾರೆ ಧಾಮದ ಕಾವಲುಗಾರ ನಲ್ಲಾಪುರದ ಹನುಮಂತ.
“ಸಂಜೆ ಕರಗುತ್ತಿದ್ದಂತೆ, ಒಂದೆರೆಡು ಕರಡಿಗಳು ನಮ್ಮ ಊರಿನ ಆಂಜನೇಯ, ಬನ್ನಿ ಮಹಾಂಕಾಳಿ ಗುಡಿಗಳಿಗೆ ಬರುತ್ತವೆ. ಅಲ್ಲಿನ ದೀಪದಲ್ಲಿ ಉಳಿದ ಎಣ್ಣೆಯನ್ನು ಕುಡಿದು, ಮರಳುತ್ತವೆ. ನಮಗೇನೂ ಭಯವಿಲ್ಲ’ ಎನ್ನುತ್ತಾರೆ, ನಲ್ಲಾಪುರದ ಜಂಬಣ್ಣ. ಕರಡಿಗಳು ನಿಶಾಚಾರಿಗಳು. ಹಗಲು ಅವುಗಳಿಗೆ ಕಣ್ಣು ಮಂದವಾಗಿ ಕಾಣುವುದರಿಂದ, ದಾಳಿ ಮಾಡುತ್ತವೆ ಎಂಬ ವಿಜ್ಞಾನದ ಗುಟ್ಟು, ಇಲ್ಲಿನ ಪ್ರತಿ ಮಕ್ಕಳಿಗೂ ಕಂಠಪಾಠವಾಗಿದೆ.
ಚಿರತೆಗಳದ್ದೇ ಚಿಂತೆ…
ಕರಡಿಗಳ ಬಗ್ಗೆ ಇಲ್ಲಿನವರಿಗೆ ಮೊದಲಿನ ಆಕ್ರೋಶಗಳಿಲ್ಲ. ಅವು ಹೊಲಕ್ಕೆ ಬರುವುದೂ ಅಪರೂಪವೇ ಆಗಿದೆ. ಆದರೆ, ಈಗ ಇಲ್ಲಿನವರು ಚಿರತೆಯ ಹೆಸರು ಕೇಳಿದರೆ ಸಾಕು, ಕೆರಳುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈಗ್ಗೆ 8 ತಿಂಗಳ ಹಿಂದೆ, ಕುರಿಗಳನ್ನು ಕಾವಲು ಕಾಯುತ್ತಾ ಮಲಗಿದ್ದ ನಲ್ಲಾಪುರದ ಗಾದಿಲಿಂಗನ ಮೇಲೆ ಚಿರತೆ ದಾಳಿ ಮಾಡಿತ್ತು. ಕಳೆದ ವರ್ಷ ಮೂವರನ್ನು ಚಿರತೆ ಬಲಿ ತೆಗೆದುಕೊಂಡಿತ್ತು. ದಿನವೂ ಒಂದಲ್ಲ ಒಂದು ಕಡೆ ಆಡು, ಕುರಿ, ದನಕರುಗಳು ಚಿರತೆಯ ಬಾಯಿ ಸೇರುತ್ತಲೇ ಇವೆ. ಕರಡಿಗಿಂತ ಚಿರತೆಗಳೇ ಇಲ್ಲಿನವರನ್ನು ಚಿಂತೆಗೀಡು ಮಾಡಿವೆ.
ಉಳಿದಂತೆ, ಕಾಡು ಹಂದಿ ಮತ್ತು ನವಿಲುಗಳ ಉಪಟಳ. ಕರಡಿ ದಾಳಿಯಿಂದ ಪಾರಾಗಲು ಹತ್ತಿ, ಮೆಣಸಿನಕಾಯಿ ಬೆಳೆದರೆ, ಮಿಕಗಳು- ನವಿಲುಗಳೂ ನಾಜೂಕಾಗಿ ಅವನ್ನು ತಿಂದು ಹಾಕುತ್ತಿವೆ. ಒಮ್ಮೆಲೆ ಕನಿಷ್ಠ 30-40 ಮಿಕಗಳು ಗುಂಪಾಗಿ ಹತ್ತಿ ಹೊಲಕ್ಕೆ ದಾಳಿ ಮಾಡಿದರೆ, ಆ ಹೊಲ ಚೊಕ್ಕವಾದಂತೆಯೇ. “ನಾವು ಎಷ್ಟೇ ಹರಸಾಹಸಪಟ್ಟರೂ ಅವು ಹೆದರುವುದಿಲ್ಲ’ ಎನ್ನುತ್ತಾರೆ, ರೈತರು.
ಇಪ್ಪತ್ತೈದು ವರ್ಷಗಳ ಹಿಂದೆ…
ಕರಡಿ- ಮಾನವರ ಸಂಘರ್ಷ ತಡೆಯಲೆಂದೇ, ಅಂದಿನ ಸಂಡೂರು ಶಾಸಕ ಭೂಪತಿ ಮತ್ತು ಸಂಡೂರಿನ ರಾಜವಂಶಸ್ಥರಾದ ಎಂ.ವೈ. ಘೋರ್ಪಡೆ, ಈ ವಿಚಾರವನ್ನು ಸರ್ಕಾರಕ್ಕೆ ಮನದಟ್ಟು ಮಾಡಿದರು. ಪರಿಸರ ಪ್ರೇಮಿಗಳ ಧ್ವನಿಯೂ ಜತೆಯಾಗಿ, ಸತತ ಪ್ರಯತ್ನದಿಂದ 1994ರಲ್ಲಿ ಹೊಸಪೇಟೆ ಹಾಗೂ ಸಂಡೂರು ತಾಲೂಕಿನ ವ್ಯಾಪ್ತಿಯ ಬಿಳಿಕಲ್ಲು ಪೂರ್ವ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ “ದರೋಜಿ ಕರಡಿ ಧಾಮ’ ತಲೆಯೆತ್ತಿತು.
ಧಾಮ ಸ್ಥಾಪನೆ
1994, ಅಕ್ಟೋಬರ್ 17
ಒಟ್ಟು ವಿಸ್ತೀರ್ಣ
8,272,80 ಹೆಕ್ಟೇರ್
ಕರಡಿಗಳ ಸಂಖ್ಯೆ 110
ದಾಳಿ ಪ್ರಕರಣ (10 ವರ್ಷಗಳಲ್ಲಿ)
4 (ಗಾಯ), 0 (ಜೀವಹಾನಿ)
ಒಂದೆಡೆ ಕರಡಿಗಳಿಂದ ಮಾನವನ ಜೀವಹಾನಿ ನಿಂತಿರಬಹುದು. ಒಪ್ಪಿಕೊಳ್ಳೋಣ. ಆದರೆ, ಎಷ್ಟು ದಿನ ಇದೇ ಪರಿಸ್ಥಿತಿ ಇರುತ್ತೆ? ಈಗಾಗಲೇ ಅದೇ ಕರಡಿಗಳಿಂದ ಆ ಭಾಗದ ಬೆಳೆ ನಾಶದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ಎಲ್ಲ ಕಡೆ ಈ ಸಮಸ್ಯೆ ಶುರುವಾಗಿದೆ. ಇದಿನ್ನು ಮಾನವ- ವನ್ಯಜೀವಿ ಸಂಘರ್ಷದ ಆರಂಭದ ದಿನಗಳಷ್ಟೆ. ಆಯಾ ವಲಯದ ಜೀವ ಪರಿಸರದ ವ್ಯವಸ್ಥೆ ನಾಶವಾಗಿ, ವನ್ಯಜೀವಿಗಳು ತಮ್ಮ ಉಳಿವಿಗಾಗಿ ಈ ರೀತಿ ಆಕ್ರಮಣ ಮಾಡುತ್ತಲೇ ಹೋಗುತ್ತವೆ.
– ಕೃಪಾಕರ ಸೇನಾನಿ, ಖ್ಯಾತ ಪರಿಸರ ತಜ್ಞರು
ಕರಡಿ ಧಾಮದ ಅಂಚಿನ ಅನೇಕರು ಇಂದಿಗೂ ಕೃಷಿ, ಅರಣ್ಯದ ಮೇಲೆ ಹೆಚ್ಚು ಅವಲಂಬಿತರು. ಇಲ್ಲಿ ಸಾಕ್ಷರತೆ ಪ್ರಮಾಣವನ್ನು ಪ್ರಾಮಾಣಿಕವಾಗಿ ಹೆಚ್ಚಿಸಿ, ಉನ್ನತ ಶಿಕ್ಷಣ ನೀಡಬೇಕು. ಆಗ ಜನರು ಕಾಡನ್ನು ಪೂರ್ಣ ಅವಲಂಬಿಸದೇ ವಿವಿಧ ಉದ್ಯೋಗ ಹರಸಿ ಹೋಗುತ್ತಾರೆ. ಸಹಜವಾಗಿ ವನ್ಯಪ್ರಾಣಿಗಳ ಮೇಲೆ ಒತ್ತಡ ಕಡಿಮೆ ಆಗಿ ನಿರ್ಭಯವಾಗಿ ಬದುಕುತ್ತವೆ. ಜನರೂ ಸುರಕ್ಷಿತವಾಗಿರುತ್ತಾರೆ.
– ಡಾ. ಕೆ.ಎಂ. ಮೈತ್ರಿ, ಮುಖ್ಯಸ್ಥರು, ಬುಡಕಟ್ಟು ಅಧ್ಯಯನ ವಿಭಾಗ, ಹಂಪಿ ವಿ.ವಿ.
– ಸ್ವರೂಪಾನಂದ ಎಂ. ಕೊಟ್ಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.