ಕಣ್ಣೀರ ಕಡಲಲ್ಲಿ ಅರಳಿದ ಹೂವು
ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಎಂಬ ಫೀನಿಕ್ಸ್ ಪಕ್ಷಿ; ನಿಂದೆಗಳನ್ನೆಲ್ಲ ಮೀರಿನಿಂತ ಅಪೂರ್ವ ಕ್ರಿಕೆಟಿಗ
Team Udayavani, Dec 7, 2019, 5:04 AM IST
ಏಳುಬೀಳುಗಳು ಅಂದರೇನು? ಬದುಕಿನ ಕಾರ್ಪಣ್ಯಗಳನ್ನು ಮೀರಿ ಗೆದ್ದು ಬರುವುದೆಂದರೇನು? ಎಲ್ಲಕ್ಕಿಂತ ಹೆಚ್ಚಾಗಿ ಫೀನಿಕ್ಸ್‌ನಂತೆ ಎದ್ದು ಬರುವುದು ಅಂದರೇನು? ಇದಕ್ಕೆಲ್ಲ ಒಂದುಪದದ ಉತ್ತರ ಡೇವಿಡ್ ವಾರ್ನರ್. ಆಸ್ಟ್ರೇಲಿಯದ ಈ ಎಡಗೈ ಬ್ಯಾಟ್ಸ್‌ಮನ್ ತನ್ನ ಕಾಲಮೇಲೆ ತಾನೇ ಚಪ್ಪಡಿ ಹಾಕಿಕೊಂಡಾತ. ಕಡೆಗೆ ಆ ಚಪ್ಪಡಿಯನ್ನು ಸರಿಸಿ, ಅದನ್ನೇ ಮೆಟ್ಟಿಲು ಮಾಡಿಕೊಂಡು ಯಶಸ್ಸಿನ ಶಿಖರಕ್ಕೇರಿದ ಸಾಧಕ. ಎಲ್ಲ ಪ್ರತಿಭೆಯಿದ್ದೂ, ವೈಫಲ್ಯಗಳ ಸುಳಿಗೆ ಸಿಕ್ಕಿ ಜೀವನವನ್ನು ಹೈರಾಣ ಮಾಡಿಕೊಂಡು ಪಾಡು ಪಡುತ್ತಿರುವ ವ್ಯಕ್ತಿಗಳಿಗೆ ಈ ವ್ಯಕ್ತಿ ಸ್ಫೂರ್ತಿಯ ಸೆಲೆ.
33 ವರ್ಷದ ವಾರ್ನರ್ 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದರು. ಅವರ ಆಟ ಟಿ20 ಮಾದರಿಗೆ ಹೇಳಿ ಮಾಡಿಸಿದಂತಿತ್ತು. ಆದರೂ ಅವರು ಏಕದಿನ, ಟೆಸ್ಟ್‌ಗೂ ಅಷ್ಟೇ ಸಲೀಸಾಗಿ ಹೊಂದಿಕೊಂಡಿದ್ದಾರೆ. ಈಗ ಅವರು ಸಮಕಾಲೀನ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು! ಇತ್ತೀಚೆಗೆ ಅಡಿಲೇಡ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಹಗಲುರಾತ್ರಿ ಪಂದ್ಯದಲ್ಲಿ ಅವರು ಅಜೇಯ 335 ರನ್ ಬಾರಿಸಿದರು. ಇತ್ತೀಚೆಗೆ ದಾಖಲಾದ ಅಪರೂಪದ ತ್ರಿಶತಕವಿದು. ಅವರಿಗೆ 400 ರನ್ ಬಾರಿಸುವ ಅವಕಾಶವಿದ್ದರೂ, ಆಸ್ಟ್ರೇಲಿಯ ನಾಯಕ ಟಿಮ್ ಪೇನ್ ವ್ಯಕ್ತಿಗಿಂತ ತಂಡದ ಹಿತಾಸಕ್ತಿಗೆ ಬೆಲೆಕೊಟ್ಟರು. ಆದ್ದರಿಂದ ವಾರ್ನರ್ ಅಪರೂಪದ ಸಾಧನೆಯ ಅವಕಾಶ ಕಳೆದುಕೊಂಡರು. ಅದೇನೆ ಇರಲಿ ಈ ಇನಿಂಗ್ಸ್ ಮೂಲಕ ವಾರ್ನರ್ ವಿಶ್ವಕ್ರಿಕೆಟ್‌ಗೆ ತಾವೇನೆಂದು ಪುನಃ ಸಾಬೀತು ಮಾಡಿದ್ದಾರೆ. ತನ್ನನ್ನು ಟೀಕಿಸುವ ಸಣ್ಣ ಮನಸ್ಸಿನ ವ್ಯಕ್ತಿಗಳಿಗೆ ಬಲವಾದ ಸಂದೇಶ ನೀಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ತಾರೆಯಂತೆ ಮಿನುಗಿದ ಈ ಕ್ರಿಕೆಟಿಗ, ಟಿ20ಯಲ್ಲಿ 76 ಪಂದ್ಯವಾಡಿ, 2079 ರನ್, 1 ಶತಕ, 15 ಅರ್ಧಶತಕ ಗಳಿಸಿದ್ದಾರೆ. ಏಕದಿನದಲ್ಲಿ 116 ಪಂದ್ಯವಾಡಿ, 4490 ರನ್, 17 ಶತಕ, 20 ಅರ್ಧಶತಕ ಗಳಿಸಿದ್ದಾರೆ. 81 ಟೆಸ್ಟ್ ಪಂದ್ಯವಾಡಿ 6947 ರನ್ ಬಾರಿಸಿದ್ದಾರೆ. ಇದರಲ್ಲಿ 23 ಶತಕ, 30 ಅರ್ಧಶತಕಗಳಿವೆ. ಅಂಕಿಸಂಖ್ಯೆಗಳ ದೃಷ್ಟಿಯಲ್ಲಿ ಈ ಸಾಧನೆ ಬೃಹತ್ತಾಗಿ ಕಾಣುವುದಿಲ್ಲ. ಆದರೆ ಇದನ್ನು ಸೂಕ್ಷ್ಮವಾಗಿ ನಿರೀಕ್ಷಿಸಬೇಕು. ಇಲ್ಲಿ ಅವರ ರನ್ ಪ್ರಮಾಣ ಮಾತ್ರ ನೋಡಬಾರದು, ಅವರು ಆಡಿರುವ ಪಂದ್ಯಗಳು ಎಷ್ಟೆಂದು ನೋಡಬೇಕು. ಅಷ್ಟು ಕಡಿಮೆ ಪಂದ್ಯಗಳಲ್ಲಿ ವಾರ್ನರ್ ಅತ್ಯಂತ ಅಮೂಲ್ಯ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಅತ್ಯಂತ ಪ್ರಭಾವಿ ಬೌಲಿಂಗ್ ಪಡೆಯೆದುರು ಆಕ್ರಮಕ, ನಿರ್ಣಾಯಕ ಇನಿಂಗ್ಸ್‌ಗಳನ್ನು ಆಡಿ ತಂಡವನ್ನು ಗೆಲುವಿನ ದಡ ಹತ್ತಿಸಿದ್ದಾರೆ. ತಂಡದ ಮನೋಸ್ಥೈರ್ಯವನ್ನೇ ಬದಲಿಸಿದ್ದಾರೆ. 2018ರ ಮಾರ್ಚ್ 28ರಿಂದ ಅವರು 2019ರ ಮಾರ್ಚ್ 28ರವರೆಗೆ (1 ವರ್ಷ) ನಿಷೇಧಕ್ಕೊಳಗಾಗಿದ್ದರು. ಅವರು ಮತ್ತು ಸ್ಟೀವ್ ಸ್ಮಿತ್ ಅನುಪಸ್ಥಿತಿಯಲ್ಲಿ ತಂಡ ಸಂಪೂರ್ಣ ಕುಸಿದು ಹೋಗಿತ್ತು. ಅವರು ಒಮ್ಮೆ ತಿರುಗಿಬಂದ ನಂತರ ಇಡೀ ತಂಡದ ವಿಶ್ವಾಸ ದಿಢೀರನೇ ಏರಿ, ವಿಶ್ವಚಾಂಪಿಯನ್ನರಂತೆ ಆಡತೊಡಗಿತು. ಇದು ವಾರ್ನರ್ ಎಂಬ ಶಕ್ತಿಯ ತಾಕತ್ತು.
ಚೆಂಡು ವಿರೂಪವೆಂಬ ಪಾತಾಳ
ಎದುರಾಳಿ ಆಟಗಾರರನ್ನು ಕೆಣಕುವುದು, ಅಪಹಾಸ್ಯ ಮಾಡುವುದು ಇಷ್ಟರಿಂದಲೇ ವಾರ್ನರ್ ಒಂದಷ್ಟು ಅಪಖ್ಯಾತಿ ಸಂಪಾದಿಸಿದ್ದರು. ಆದರೆ ಇದು ವರ್ತಮಾನ ಕ್ರಿಕೆಟ್‌ನ ಅವಿಭಾಜ್ಯ ಅಂಗವಾಗಿರುವುದರಿಂದ, ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲದೇ ಅವರ ಬ್ಯಾಟಿಂಗಿನ ಚೆಲುವನ್ನು ನೋಡಿದಾಗ ಹಳೆಯ ವಿಷಯಗಳಾವುದೂ ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಅವರ ವೃತ್ತಿಜೀವನದಲ್ಲಿ ಅತ್ಯಂತ ದೊಡ್ಡ ಕಳಂಕವಾಗಿ ಮಾರ್ಪಟ್ಟಿದ್ದು 2018ರ ಮಾರ್ಚ್‌ನಲ್ಲಿ ನಡೆದ ಟೆಸ್ಟ್ ಸರಣಿ. ದ.ಆಫ್ರಿಕಾದಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಡೇವಿಡ್ ವಾರ್ನರ್ ಮಾರ್ಗದರ್ಶನದಲ್ಲಿ ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಚೆಂಡಿನ ಸ್ಥಿತಿಯನ್ನು ಹದಗೆಡಿಸಿದರು. ತಂಡದ ನಾಯಕ ಸ್ಟೀವ್ ಸ್ಮಿತ್ ಕೂಡ ಇದರಲ್ಲಿ ಸೇರಿಕೊಂಡಿದ್ದರು. ಮಾಮೂಲಿಯಾಗಿ ಇಂತಹ ತಪ್ಪುಗಳಿಗೆ ಕೆಲವು ಪಂದ್ಯಗಳ ನಿಷೇಧವಾಗುತ್ತದೆ. ಆದರೆ ಇಲ್ಲಿ ಪ್ರಕರಣ ಮಾಮೂಲಿಯಾಗಿರಲಿಲ್ಲ. ಬಹಳ ವ್ಯವಸ್ಥಿತವಾಗಿ ಚೆಂಡನ್ನು ಹದಗೆಡಿಸಲು ಯತ್ನಿಸಲಾಗಿತ್ತು. ಅದು ಜಗತ್ತಿನೆದುರು ಬೆತ್ತಲಾಯಿತು. ಇದರಿಂದ ಬಹಳ ಮುಜುಗರಕ್ಕೊಳಗಾದ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ವಾರ್ನರ್, ಸ್ಮಿತ್‌ಗೆ 1 ವರ್ಷ, ಬ್ಯಾನ್‌ಕ್ರಾಫ್ಟ್ಗೆ 9 ತಿಂಗಳು ನಿಷೇಧ ವಿಧಿಸಿತು. ಅಲ್ಲಿಯವರೆಗೆ ವಿಶ್ವದ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಸೇರಿದ್ದ ವಾರ್ನರ್, ಸ್ಮಿತ್ ಏಕಾಏಕಿ ಖಳನಾಯಕರ ಸಾಲಿಗೆ ಸೇರಿದರು. ಆ ಹಂತದಲ್ಲಿ ವಾರ್ನರ್ ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡ ಸ್ಥಿತಿಗೆ ತಲುಪಿ ಕಣ್ಣೀರು ಹಾಕಿದ್ದರು.
ವಿಶ್ವಕಪ್‌ನಲ್ಲಿ ವಿಶ್ವದೆತ್ತರಕ್ಕೆ
ವಿಶ್ವಕಪ್‌ಗೆ ಮುನ್ನವಷ್ಟೇ ಡೇವಿಡ್ ವಾರ್ನರ್ ನಿಷೇಧ ಮುಗಿದಿತ್ತು. ಆಗ ಅವರು ಐಪಿಎಲ್‌ನಲ್ಲಿ ಆಡಿ, ಅಬ್ಬರಿಸಿದರು. ತಾವಿನ್ನೂ ಕುಗ್ಗಿಲ್ಲ ಎಂದು ಸಾಬೀತುಪಡಿಸಿದರು. ಇದನ್ನು ಪರಿಗಣಿಸಿ ಆಸ್ಟ್ರೇಲಿಯ ಅವರನ್ನು ತನ್ನೊಳಗೆ ಬರಸೆಳೆಯಿತು. ನೇರವಾಗಿ ವಿಶ್ವಕಪ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮರುಪ್ರವೇಶಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ಹೇಗಿತ್ತೆಂದರೆ, ಆಡಿದ 10 ಇನಿಂಗ್ಸ್‌ಗಳಲ್ಲಿ 647 ರನ್ ಗಳಿಸಿದರು. ಇದರಲ್ಲಿ 3 ಶತಕ, 3 ಅರ್ಧಶತಕ ಸೇರಿದ್ದವು. ಇಡೀ ಕೂಟದಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಅವರಿಗೆ 2ನೇ ಸ್ಥಾನ. ಅಗ್ರಸ್ಥಾನ 1 ರನ್‌ಗಳಿಂದ ತಪ್ಪಿಹೋಯಿತು. ಅವರ ಶ್ರೇಷ್ಠ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯ ಸೆಮಿಫೈನಲ್‌ಗೇರಿತು. ಕೂಟಕ್ಕೂ ಮುನ್ನ ಆ ತಂಡ ಲೀಗ್‌ನಲ್ಲೇ ಸೋಲಬಹುದೆಂದು ನಿರೀಕ್ಷಿಸಲಾಗಿತ್ತು!
ಬಾಯಿಬಡುಕರು ಬಾಯಿ ಮುಚ್ಚಿಸಿದರು
ವಿಶ್ವಕಪ್‌ನಲ್ಲಿ ಮೆರೆದ ಸಂತಸ ಅವರಿಗೆ ಬಹಳ ಕಾಲ ಉಳಿಯಲಿಲ್ಲ. ಒಡನೆಯೇ ನಡೆದ ಆ್ಯಷಸ್ ಟೆಸ್ಟ್ ಸರಣಿಯ ಐದೂ ಪಂದ್ಯಗಳಲ್ಲಿ, ಹೀನಾಯ ವೈಫಲ್ಯ ಎದುರಿಸಿದರು. ಆಗ ವಾರ್ನರ್ ಸಾಮರ್ಥ್ಯದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ಇತ್ತೀಚೆಗಷ್ಟೇ ಪಾಕ್ ವಿರುದ್ಧ ಎರಡು ಟೆಸ್ಟ್ ಸರಣಿಯಲ್ಲಿ ಅದನ್ನು ತೊಳೆದು ಹಾಕಿದರು. ಮೊದಲ ಟೆಸ್ಟ್‌ನಲ್ಲಿ 154 ರನ್ ಬಾರಿಸಿದ ಅವರು, 2ನೇ ಪಂದ್ಯದಲ್ಲಿ ಅಜೇಯ 335 ರನ್ ಬಾರಿಸಿದರು. ಇಲ್ಲಿಯವರೆಗೆ ಬೈಯುತ್ತಿದ್ದ ಕ್ರಿಕೆಟ್ ವಲಯ ತನ್ನ ಧ್ವನಿ ಬದಲಿಸಿ ಹೊಗಳಲು ಶುರು ಮಾಡಿದೆ. ತನ್ನ ಸಾಮರ್ಥ್ಯದ ಮೂಲಕ ಟೀಕಾಕಾರರಿಗೆ ಎದಿರೇಟು ನೀಡಿದ ಅವರು, ಧ್ವನಿಯೆತ್ತಲು ಸಾಧ್ಯವಾಗದಂತೆ ಮಾಡಿಬಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.