ನಮ್ ಡಾಕ್ಟ್ರೇ ನಮ್ ದೇವ್ರು
ಈ ವೈದ್ಯರ ಶುಲ್ಕ,ನಿಮ್ಮಕಾಫಿ ಬಿಲ್‌ಗೂ ಕಮ್ಮಿ!
Team Udayavani, Jun 29, 2019, 12:44 PM IST
ಜುಲೈ 1, ರಾಷ್ಟ್ರೀಯ ವೈದ್ಯರ ದಿನ. “ಓಹ್, ಡಾಕ್ಟ್ರ ಸಮಾಚಾರನಾ? ಅವರಿಗೇನು ಕಮ್ಮಿ. ಭರ್ಜರಿ ಶುಲ್ಕ ಕೀಳ್ತಾರೆ’ ಅಂತ ಹೇಳ್ಬೇಡಿ. ಯಾಕೆ ಗೊತ್ತಾ? ನೀವು ಕುಡಿವ ಕಾಫಿ- ಚಹಾಗಳ ಬಿಲ್‌ನಷ್ಟೂ ಇಲ್ಲ,ಇಲ್ಲಿನ ಕೆಲವು ವೈದ್ಯರ ಶುಲ್ಕ. ಮತ್ತೆ ಕೆಲವರಂತೂ, ಬಡವರಿಂದ ಹಣವನ್ನೇ ಪಡೆಯುವುದಿಲ್ಲ. ಪ್ರಚಾರಕ್ಕೆ ಬಾರದೆ, ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿರುವ, ಜನತೆಯ ಕ್ಷೇಮ ಕಾಪಾಡುತ್ತಿರುವ ಅಂಥ ಡಾಕುóಗಳ ಕತೆ, ವೈದ್ಯರ ದಿನದ ವಿಶೇಷ…
1
ಹುಟ್ಟೂರಿನ ಸೇವೆಗೆ ಅಮೆರಿಕ ಬಿಟ್ಟರು!
ವೈದ್ಯ- ಡಾ| ಅಶೋಕ ಸೊನ್ನದ
ಫೀ- 0
ಇವರು 40 ವರ್ಷ ಅಮೆರಿಕದಲ್ಲಿದ್ದ ಡಾಕ್ಟರ್. ಅಲ್ಲಿ ಐದಾರು ರೋಗಿಗಳ ಎದೆಗೆ ಸ್ಟೆಥೋಸ್ಕೋಪ್ ಇಟ್ಟರೆ, ಕೈ ತುಂಬಾ ಸಂಬಳ ಬರುತ್ತಿತ್ತು. ಇಂದಿಗೂ ಇವರ ಇಡೀ ಕುಟುಂಬ ಅಲ್ಲೇ ನೆಲೆಸಿದ್ದರೂ ಇವರು ಮಾತ್ರ ಹುಟ್ಟೂರಿಗೆ ಓಡೋಡಿ ಬಂದಿದ್ದು, ಬಡರೋಗಿಗಳ ಕಲ್ಯಾಣಕ್ಕೆ. ರೋಗಿಗಳಿಂದ ಬಿಡಿಗಾಸನ್ನೂ ಪಡೆಯದೇ, ಕಳೆದ 10 ವರ್ಷಗಳಿಂದ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ, ಡಾ| ಅಶೋಕ ಸೊನ್ನದ.
ಅದು ಬಾಗಲಕೋಟೆ ನಗರದ ಸೊನ್ನದ ಕ್ಲಿನಿಕ್. ಅಲ್ಲಿ ಯಾರೇ ಬಡವರು ಚಿಕಿತ್ಸೆಗೆ ಬಂದರೂ, ನಗು ನಗುತ್ತಾ, ಅವರ ಕ್ಷೇಮ ವಿಚಾರಿಸುವ ಡಾ. ಅಶೋಕ ಅವರಿಗೆ 78 ವರುಷ. ಉಚಿತ ಚಿಕಿತ್ಸೆಯ ದುರುಪಯೋಗ ತಪ್ಪಿಸಲು ಇವರು ಕೆಲವು ನಿಯಮತ ರೂಢಿಸಿಕೊಂಡಿದ್ದಾರೆ. ನಿತ್ಯ ಇವರು ನೋಡುವುದು, 10 ರೋಗಿಗಳನ್ನು ಮಾತ್ರ. ಬಡ ರೋಗಿಗಳು ಬಂದರೆ, ಅವರಿಗೆ ಔಷಧಕ್ಕಾಗಿ ತಮ್ಮ ಸ್ವಂತ ಹಣ ನೀಡುವ ಉದಾರಿ.
ಹಣ ಕೊಡಲು ಹೋದರೆ ಇವರು ಪಡೆಯುವುದಿಲ್ಲ. ಹೀಗಾಗಿ ಕೆಲವರು, ಸ್ವಯಂ ಪ್ರೇರಣೆಯಿಂದ ಇವರ ಆಸ್ಪತ್ರೆಯಲ್ಲೊಂದು ಹುಂಡಿ ಸ್ಥಾಪಿಸಿದ್ದಾರೆ. ಚಿಕಿತ್ಸೆ ಪಡೆದವರು, ತಮ್ಮ ಕೈಲಾದಷ್ಟು ಹಣವನ್ನು ಆ ಹುಂಡಿಯಲ್ಲಿ ಹಾಕಿ ಹೋಗುತ್ತಾರೆ. ಆ ಹುಂಡಿ ಹಣವನ್ನೂ ಡಾ| ಅಶೋಕ ಅವರು, ತಮ್ಮಲ್ಲಿಗೆ ಬರುವ ಬಡ ರೋಗಿಗಳ ಔಷಧ ಹಾಗೂ ಹಳ್ಳಿಯಿಂದ ಬರುವ ರೋಗಿಗಳ ಪ್ರಯಾಣಕ್ಕಾಗಿ ಮರಳಿ ಕೊಡುತ್ತಾರೆ!
“ನನಗೆ ದೇವರು ಸಾಕಷ್ಟು ಕೊಟ್ಟಿದ್ದಾನೆ. 40 ವರ್ಷ ಅಮೆರಿಕದಲ್ಲಿ ವೈದ್ಯನಾಗಿ ಹಣ ಗಳಿಸಿದ್ದೇನೆ. ಹುಟ್ಟೂರಲ್ಲಿ ಸಾಕಷ್ಟು ಭೂಮಿ ಇದೆ’ ಎನ್ನುವ ಇವರು, ವಿಜಯಪುರ, ಬಾಗಲಕೋಟೆ ಜಿಲ್ಲಾದ್ಯಂತ ನೂರಾರು ಶಿಬಿರ ನಡೆಸಿ, 15 ಸಾವಿರಕ್ಕೂ ಅಧಿಕ ಮಂದಿಯ ಆರೋಗ್ಯೋಪಚಾರ ನಡೆಸಿದ್ದಾರೆ.
ಸ್ಫೂರ್ತಿ ಏನು?
ಬಡವರು ಅನಾರೋಗ್ಯದಿಂದ ನರಳುವುದನ್ನು ನೋಡಿದಾಗ, ಅಯ್ಯೋ ಅಂತನ್ನಿಸುವ ಇವರ ಮಾನವೀಯ ಹೃದಯ.
– ಶ್ರೀಶೈಲ ಕೆ. ಬಿರಾದಾರ
ಫೋಟೋಗಳು- ಸೊನ್ನದ್ 1 ಸಿರೀಸ್
2
ಕುಗ್ರಾಮದ ಬಡವರಿಗೆ “ಪಡಸಾಲೆ’ಯ ಅಭಯ
ವೈದ್ಯ- ಡಾ. ಅನಿಲ್ ಆನಂದ್
ಫೀ- 0 ರೂ.
ಡಾ. ಅನಿಲ್ ಆನಂದ್ ಬರುತ್ತಾರೆಂದರೆ, ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬಡವರ ಮುಖ ಅರಳುತ್ತೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಹಳ್ಳಿ ಜನರ ಆರೋಗ್ಯ ರಕ್ಷಣೆಯನ್ನೇ ಜೀವನಮಂತ್ರವಾಗಿಸಿಕೊಂಡ ಈ ಯುವ ವೈದ್ಯ, ಚಿಕಿತ್ಸೆ ನೀಡಲೆಂದೇ, ಕಳೆದ 5 ವರ್ಷಗಳಿಂದ ಕುಗ್ರಾಮಗಳನ್ನು ಹುಡುಕಿಕೊಂಡು ಹೋಗುತ್ತಿರುವ ಉತ್ಸಾಹಿ.
ವೈದ್ಯರ ಫೀಸು ದುಬಾರಿ ಎಂದು ಕಡುಬಡ ರೈತರು ಮನೆಯಲ್ಲಿ ಕುಳಿತುಕೊಂಡು, ವೇದನೆ ಅನುಭವಿಸುತ್ತಿರುತ್ತಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಡಾ. ಅನಿಲ್ ಆನಂದ್, ತಿಂಗಳಲ್ಲಿ ಒಂದೊಂದು ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು “ಮಂಡ್ಯ ಯೂತ್ ಗ್ರೂಪ್’ ವತಿಯಿಂದ ನಡೆಸುತ್ತಿದ್ದಾರೆ. ಈ ಯೋಜನೆಯ ಹೆಸರು, “ಪಡಸಾಲೆ’.
ಸ್ನೇಹಶೀಲ ವ್ಯಕ್ತಿತ್ವ ಇವರ ಇನ್ನೊಂದು ಪ್ಲಸ್‌ಪಾಯಿಂಟ್. ಪ್ರತಿ ಶಿಬಿರದಲ್ಲೂ ಲಕ್ಷಾಂತರ ರೂ. ಮೌಲ್ಯದ ಔಷಧಗಳನ್ನು ಉಚಿತವಾಗಿ ವಿತರಿಸುತ್ತಿರುವ ಉದಾರಿ. ಫಿಸಿಯೋಥೆರಪಿ, ರಕ್ತ ತಪಾಸಣೆ ಮಾತ್ರವಲ್ಲದೆ ಮಧುಮೇಹ, ರಕ್ತದ ಒತ್ತಡ, ಪಾರ್ಶ್ವವಾಯು, ಬೆನ್ನು ನೋವು, ನರರೋಗ ಸೇರಿದಂತೆ ಹಲವು ಮಾದರಿಯ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.
ಸಂಜೆ 6ರಿಂದ ಮಧ್ಯರಾತ್ರಿಯವರೆಗೂ ಕನಿಷ್ಠ 500 ರಿಂದ 700 ಜನರನ್ನು ತಪಾಸಣೆ ಮಾಡುವ ಇವರ ಸೇವೆಗೆ ನಿಜಕ್ಕೂ ಹ್ಯಾಟ್ಸಾಫ್.
ಸ್ಫೂರ್ತಿ ಏನು?
ಹಳ್ಳಿ ಜನರೆಂದರೆ, ಇವರಿಗೆ ಪ್ರೀತಿ. ಅವರಿಗೇನಾದರೂ ಉಪಕಾರ ಮಾಡಬೇಕೆಂಬ ಕನಸು ಮೊದಲಿನಿಂದಲೂ ಇವರಿಗೆ ಇತ್ತು. ಅದೇ ಈ ಕೆಲಸಕ್ಕೆ ಪ್ರೇರಣೆ ನೀಡಿದೆ.
– ಮಂಡ್ಯ ಮಂಜುನಾಥ್
3
ಸೈನಿಕರಿಗೆ ಮಿಡಿವ ವೈದ್ಯ
ವೈದ್ಯ- ಡಾ| ರಾಮಚಂದ್ರ ಕಾರಟಗಿ
ಫೀ- 0 ರೂ.
ಈ ಡಾಕ್ಟ್ರಿಗೆ ಸೈನಿಕರೆಂದರೆ ಅತೀವ ಪ್ರೀತಿ. ಕಳೆದ 20 ವರ್ಷಗಳಿಂದ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಸೇವೆ ನೀಡುತ್ತಾ, ದೇಶಪ್ರೇಮ ಮೆರೆಯುತ್ತಿದ್ದಾರೆ!
ಯೋಧರ ಬಗ್ಗೆ ಅಪಾರ ಕಾಳಜಿ ತೋರುವ ಡಾ| ರಾಮಚಂದ್ರ ಕಾರಟಗಿ, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಇಲ್ಲಿನ ರಾಜಧಾನಿ ಕಾಲನಿಯ, ಕಾರಟಗಿ ಹಾಸ್ಪಿಟಲ್‌ಗೆ ಸಂಜೆ 5ರ ನಂತರ ಹೋದರೆ, ಅಲ್ಲಿ ಕಾಣಸಿಗುವುದು ಸೈನಿಕ ಕುಟುಂಬದವರೇ ಹೆಚ್ಚು ಮಂದಿ. ಇವರ ಈ ಸಮಾಜಸೇವೆಗೆ ಪತ್ನಿ ಡಾ| ವೀಣಾ ಕಾರಟಗಿ, ಮತ್ತಿತರ ವೈದ್ಯರ ಬೆಂಬಲವೂ ಇದೆ. ತಪಾಸಣೆಗೆ ಬರುವ ಸೈನಿಕರು ಮತ್ತು ಅವರ ಕುಟುಂಬದವರು, ತಮ್ಮ ಗುರುತಿನ ಪತ್ರ ತೋರಿಸಿದರೆ ಸಾಕಷ್ಟೇ. ಇವರು ನಡೆಸುವ ತಪಾಸಣಾ ಶಿಬಿರದ ಪ್ರಯೋಜನ, ವರ್ಷವೊಂದಕ್ಕೆ ಕನಿಷ್ಠ 500- 1000 ಮಂದಿ ಸೈನಿಕ ಕುಟುಂಬದವರನ್ನು ತಲುಪುತ್ತದೆ. ಮಕ್ಕಳ ಸೇವಾಶ್ರಮಗಳು, ಮದರ್ ಥೆರೇಸಾ ಫೌಂಡೇಶನ್ ಮುಂತಾದ ಸಂಸ್ಥೆಗಳಲ್ಲೂ ಶಿಬಿರ ನಡೆಸಿದ ಹೆಗ್ಗಳಿಕೆ ಇವರದ್ದು. ಇದುವರೆಗೂ ಇಂಥ 532 ಉಚಿತ ತಪಾಸಣಾ ಶಿಬಿರಗಳನ್ನು ನಡೆಸಿದ್ದಾರೆ. ಕೊಡಗು- ಕೇರಳದಲ್ಲಿ ನಡೆದ ದುರಂತದ ಸಂದರ್ಭದಲ್ಲೂ ಇವರು ತಮ್ಮ ತಂಡದೊಂದಿಗೆ ತೆರಳಿ ಸೇವೆ ಸಲ್ಲಿಸಿದ್ದಾರೆ. “ದೇಶ ಕಾಯುವ ಸೈನಿಕರ ಮತ್ತು ಅವರ ಕುಟುಂಬದವರಿಗೆ ಸೇವೆ ಸಲ್ಲಿಸುವ ಕೆಲಸದಲ್ಲಿ ಹಬ್ಬದ ಸಂಭ್ರಮವನ್ನು ಕಾಣುತ್ತೇನೆ’ ಎನ್ನುತ್ತಾರೆ, ಕಾರಟಗಿ.
ಸ್ಫೂರ್ತಿ ಏನು?
ಬಾಲ್ಯದಲ್ಲಿ ಕಾರಟಗಿ ಅವರಿಗೆ ಸೈನಿಕನಾಗುವ ಆಸೆ ಇತ್ತಂತೆ. ವೈದ್ಯಕೀಯ ಶಿಕ್ಷಣ ಪಡೆದ ಮೇಲೆ ಆರ್ಮಿ ಕ್ಯಾಪ್ಟನ್ ಆಗಲು ಯತ್ನಿಸಿದರೂ, ಅದು ಕೈಗೂಡಲಿಲ್ಲ. ತಾಯಿ ಹೇಳಿಕೊಟ್ಟ ದೇಶಭಕ್ತಿಯ ಮಾತುಗಳು; ನೇತಾಜಿ, ಭಗತ್, ಆಜಾದ್‌ರಂಥ ಅಪ್ರತಿಮ ಹೋರಾಟಗಾರರ ಬದುಕು ಇವರಿಗೆ ಈ ಸೇವೆಗೆ ಪ್ರೇರಣೆ ನೀಡುತ್ತಿದೆ.
ಫೋಟೋ- ಕಾರಟಗಿ
– ವಿಕ್ರಂ ಕಾಶಿ
4
ಜೀರೆ ಎಂಬ ಜನಮಾನಸದ ಹೀರೋ
ವೈದ್ಯ- ಡಾ| ಆರ್.ಎಸ್. ಜೀರೆ
ಫೀ- 5 ರೂ.
ಬಡ ರೋಗಿಗಳ ಪಾಲಿನ ಜೀವದಾತ, ಚಿಕಿತ್ಸೆ ಪಡೆಯಲು ಹಣವಿಲ್ಲ ಎಂದು ಕೊರಗುವ ಮಂದಿಗೆ ಧನದಾತ. “5 ರೂ. ಡಾಕ್ಟರ್’ ಅಂತಲೇ ಖ್ಯಾತಿ ಪಡೆದ, ಡಾ| ಆರ್.ಎಸ್. ಜೀರೆ ಅವರನ್ನು, ಅವರ ಹೆಸರಿನಿಂದ ಯಾರೂ ಕರೆಯುವುದೇ ಇಲ್ಲ!
ಗಜೇಂದ್ರಗಡದಲ್ಲಿ ಸುಶೃಷಾ ಕ್ಲಿನಿಕ್‌ನ ಮೂಲಕ, 2 ದಶಕಗಳಿಂದ ಜನರಿಗೆ ಅತ್ಯಂತ ಕಡಿಮೆ ಬೆಲೆ ಅಂದರೆ 5 ರೂ.ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಲಕ್ಷಾಂತರ ರೂ. ಬಿಲ್ ಮಾಡುವ ವೈದ್ಯರ ನಡುವೆ ಇವರು ಭಿನ್ನವಾಗಿ ನಿಲ್ಲುತ್ತಾರೆ. ಅಂದಹಾಗೆ, ಇವರದ್ದು ವಂಶಪಾರಂಪರ್ಯವಾಗಿ ವೈದ್ಯ ವೃತ್ತಿ. ಇವರ ಅಜ್ಜ ಗಣೇಶ ಭಟ್, ಆಯುರ್ವೇದ ಪಂಡಿತರು; ತಂದೆ ಶಂಕರ ಶಾಸ್ತ್ರೀ ಅವರೂ ಸರಕಾರಿ ಆಸ್ಪತ್ರೆಯ ವೈದ್ಯರಾಗಿದ್ದರಂತೆ.
ಇವರ ಸಹೋದರ ಡಾ| ಜಿ.ಎಸ್. ಜೀರೆ ಮತ್ತು ಪತ್ನಿ ಡಾ. ಉಮಾ ಜೀರೆ ಅವರೂ ಕೇವಲ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡುವುದಲ್ಲದೇ ತಮ್ಮ ಮನೆಯನ್ನೇ ಕ್ಲಿನಿಕ್ ಅನ್ನಾಗಿ ಮಾಡಿಕೊಂಡು, ಮಧ್ಯರಾತ್ರಿ ಬರುವ ರೋಗಿಗಳಿಗೂ ಚಿಕಿತ್ಸೆ ನೀಡುವ ಮೂಲಕ ವೃತ್ತಿಯ ಪಾವಿತ್ರÂ ಕಾಪಾಡಿಕೊಂಡು ಬಂದಿದ್ದಾರೆ.
ಪ್ರಸ್ತುತ 5 ರೂ. ಶುಲ್ಕ ಪಡೆದು ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಜೀರೆ ಅವರಿಗೆ, ಮುಂದೆ ಉಚಿತ ಚಿಕಿತ್ಸೆ ನೀಡುವ ಕನಸಿದೆ.
ಸ್ಫೂರ್ತಿ ಏನು?
ಡಾ| ಆರ್.ಎಸ್. ಜೀರೆ ಅವರ ತಂದೆ ಕೇವಲ 1 ರೂ.ನಲ್ಲಿ ಚಿಕಿತ್ಸೆ ನೀಡುತ್ತಿದ್ದರಂತೆ. ಅದೇ ಹಾದಿಯಲ್ಲಿಯೇ ಇವರೂ ನಡೆಯುತ್ತಿದ್ದಾರೆ.
-ಡಿ.ಜಿ. ಮೋಮಿನ್, ಫೋಟೋ- ಜೀರೆ
5
ರೋಗಿಗಳ ಪಾಲಿಗೆ ಸಂಜೀವಿನಿ
ವೈದ್ಯ- ಡಾ| ವಿ.ಎಸ್. ಕೃಷ್ಣಮೂರ್ತಿ
ಫೀ- 5- 10 ರೂ.
ಇಂದು ಐದ್ಹತ್ತು ರೂಪಾಯಿಗೆ ಟೀ- ಕಾಫಿಯೂ ಬರೋದಿಲ್ಲ. ಅಂಥದ್ದರಲ್ಲಿ, ಕೋಲಾರದ ಈ ವೈದ್ಯರು ಕೇವಲ ಐದು ರೂ.ಗೆ ವೈದ್ಯಕೀಯ ಚಿಕಿತ್ಸೆ ನೀಡುವುದರ ಜೊತೆಗೆ ಮಾತ್ರೆಗಳನ್ನೂ ಕೊಟ್ಟು, ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದಾರೆ.
ಕೋಲಾರ ಬ್ರಾಹ್ಮಣರ ಬೀದಿಯಲ್ಲಿ “ಸಂಜೀವಿನೀ ಚಿಕಿತ್ಸಾಲಯ’ದ ಮೂಲಕ 45 ವರ್ಷಗಳಿಂದಲೂ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ವಿ.ಎಸ್. ಕೃಷ್ಣಮೂರ್ತಿ ಬಡ ರೋಗಿಗಳ ಪಾಲಿನ ವೈದ್ಯೋ ನಾರಾಯಣ ಹರಿ. ಇಂಜೆಕ್ಷನ್ (ಚುಚ್ಚುಮದ್ದು) ಮತ್ತು ಇನ್ಸ್‌ಪೆಕ್ಷನ್ (ಆಧುನಿಕ ವೈದ್ಯೋಪಕರಣಗಳ ತಪಾಸಣೆ) ಇಲ್ಲದೆ ಕೇವಲ ದೇಹದ ಉಷ್ಣಾಂಶ, ರೋಗದ ಲಕ್ಷಣಗಳು ಹಾಗೂ ಸ್ಟೆಥೋಸ್ಕೋಪ್ ಆಧಾರದ ಮೇಲೆ ಚಿಕಿತ್ಸೆ ನೀಡುವುದನ್ನು ಕರಗತ ಮಾಡಿಕೊಂಡಿದ್ದಾರೆ.
ಐದ್ಹತ್ತು ರೂ. ಗಿಂತ ಜಾಸ್ತಿ ಕೊಟ್ಟರೆ, ಇವರು ಮುಟ್ಟಿಯೂ ನೋಡುವುದಿಲ್ಲ. ಕೊಡಲು ಹಣವಿಲ್ಲದಿದ್ದರೆ, ಅದಕ್ಕೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ವಯೋವೃದ್ಧರಿಗೆ ಸಂಪೂರ್ಣ ಉಚಿತ ಚಿಕಿತ್ಸೆಯ ಸೌಲಭ್ಯವೂ ಇವರ ಬಳಿ ಲಭ್ಯ. “ಡಾ.ವಿ.ಎಸ್. ಕೃಷ್ಣಮೂರ್ತಿ ಅವರು ಚಿಕಿತ್ಸೆ ನೀಡಿದರಷ್ಟೇ ತಮ್ಮ ರೋಗ ವಾಸಿಯಾಗುವುದು’ ಎನ್ನುವ ಬಲವಾದ ನಂಬಿಕೆ, ಇಲ್ಲಿನ ನೂರಾರು ಕುಟುಂಬಗಳಲ್ಲಿ ಮನೆಮಾಡಿದೆ.
ಸ್ಫೂರ್ತಿ ಏನು?
“ಜೀವನದಲ್ಲಿ ವೈದ್ಯನಾಗುವ ಅದೃಷ್ಟ ನಿನಗೆ ಒಲಿದಿದೆ. ಜೀವನದಲ್ಲಿ ಯಾರನ್ನೂ ದುಡ್ಡಿಲ್ಲವೆಂದು ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಬೇಡ, ಇದಕ್ಕಿಂತಲೂ ಪಾಪದ ಕೆಲಸ ಮತ್ತೂಂದಿಲ್ಲ’ ಎಂದು ಇವರ ತಂದೆ ಸೀತಾರಾಮ ಪಂಡಿತರು ಹೇಳಿದ್ದರಂತೆ. ಆ ಮಾತೇ ಇವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಬೇರೂರಿದೆ. ಇದರೊಂದಿಗೆ ಗುರುಗಳಾದ ಡಾ.ಎಸ್.ಎನ್. ಕೌಲಗುಡ್ ಅವರ ಪ್ರೀತಿಪೂರ್ವಕ ವೈದ್ಯ ಸೇವೆ, ಮೈಸೂರು ಅರಮನೆ ವೈದ್ಯರಾಗಿದ್ದ ಡಾ.ಕೆ.ಜಿ. ದಾಸ್‌ರ ವೃತ್ತಿಬದ್ಧತೆ ಇವರನ್ನು ಪ್ರಭಾವಿಸಿರುವ ಅಂಶಗಳು.
– ಕೆ.ಎಸ್. ಗಣೇಶ್
ಫೋಟೋ- ವಿಎಸ್ ಕೃಷ್ಣಮೂರ್ತಿ
6
ಸಕ್ಕರೆ ಮಕ್ಕಳ ದತ್ತು ಪಡೆವ ಡಾಕ್ಟ್ರು
ವೈದ್ಯ- ಡಾ| ಬಾಬು ರಾಜೇಂದ್ರ ನಾಯಕ, ಡಾ| ಶೀತಲ ನಾಯಕ
ಫೀ- 0
ಸಕ್ಕರೆ ಕಾಯಿಲೆಯ ಮಕ್ಕಳನ್ನು ಚಿಕಿತ್ಸೆಗಾಗಿ ದತ್ತು ಪಡೆವ ವೈದ್ಯ ದಂಪತಿ ಇವರು. ಉಚಿತ ಇನ್ಸುಲಿನ್ ಅಲ್ಲದೇ, ಸ್ಕೂಲ್ ಬ್ಯಾಗ್, ನೋಟ್ ಬುಕ್, ಪೆನ್ಸಿಲ್- ಹೀಗೆ ಚಿಕಿತ್ಸೆಯ ಜತೆಗೆ ಕಲಿಕಾ ಸಾಮಗ್ರಿಯನ್ನೂ ನೀಡಿ, ಅವರಿಗೆ ಬದುಕುವ ಹಾದಿ ತೋರಿಸುತ್ತಾರಿವರು.
ಬಾಗಲಕೋಟೆಯ ತುಳಸಿಗಿರೀಶ ಪ್ರತಿಷ್ಠಾನ ಹಾಗೂ ತುಳಸಿಗಿರೀಶ ಮಧುಮೇಹ ಚಿಕಿತ್ಸೆ ಹಾಗೂ ಸಂಶೋಧನೆ ಕೇಂದ್ರದ ವೈದ್ಯ ಡಾ| ಬಾಬುರಾಜೇಂದ್ರ ನಾಯಕ ಹಾಗೂ ಡಾ|ಶೀತಲ ನಾಯಕ ಅವರು ಕಳೆದ 11 ವರ್ಷಗಳಿಂದ ಈ ವಿಶಿಷ್ಟ ಸೇವೆಯಲ್ಲಿ ನಿರತರು. ಬಾಗಲಕೋಟೆ ಆಸ್ಪತ್ರೆಯಲ್ಲಿ 48 ಮಕ್ಕಳನ್ನು ಹಾಗೂ ವಿಜಯಪುರ ಆಸ್ಪತ್ರೆಯಲ್ಲಿ 8 ಕಂದಮ್ಮಗಳನ್ನು ಚಿಕಿತ್ಸೆಗಾಗಿ ದತ್ತು ಪಡೆದಿದ್ದಾರೆ. ದತ್ತು ಪಡೆದ ಮಕ್ಕಳಿಗೆ ಪ್ರತಿ ತಿಂಗಳು ಚಿಕಿತ್ಸೆ, ಗುಕ್ಲೋಮಿಟರ್, ಇನ್ಸುಲಿನ್, ತಿಂಗಳಿಗೆ ಆಗುವಷ್ಟು ಅಗತ್ಯ ಔಷಧ ಕೊಡುತ್ತಾರೆ. ಒಂದು ಮಗುವಿಗೆ ವಾರ್ಷಿಕ 20ರಿಂದ 25 ಸಾವಿರ ರೂ. ವೆಚ್ಚವನ್ನು ತಮ್ಮ ಪ್ರತಿಷ್ಠಾನದಿಂದ ಭರಿಸುತ್ತಾರೆ.
ಸ್ಫೂರ್ತಿ ಏನು?
ಡಾ| ನಾಯಕ ಅವರು, ತಮ್ಮ ವೈದ್ಯ ವೃತ್ತಿಯ ಆರಂಭದಲ್ಲಿ ಮುಧೋಳದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ, ಗೋಗಿ ಎಂಬ 12 ವರ್ಷದ ಬಾಲಕ, ತನ್ನ ತಂದೆಯೊಂದಿಗೆ ಗೌಡರ ಹೊಲದಲ್ಲಿ ಜೀತಕ್ಕಿದ್ದ. ಆತನಿಗೆ ಸಕ್ಕರೆ ಕಾಯಿಲೆ ಇತ್ತು. ತಂದೆಯೊಂದಿಗೆ ಪ್ರತಿ ತಿಂಗಳು ಇವರ ಬಳಿ ಚಿಕಿತ್ಸೆ ಪಡೆಯುತ್ತಿದ್ದ. ಈ ಮಧ್ಯೆ 4-5 ತಿಂಗಳಿಂದ ಆ ಬಾಲಕ, ಚಿಕಿತ್ಸೆಗೆ ಬರಲೇ ಇಲ್ಲ. ಮೂಢನಂಬಿಕೆಗೆ ಒಳಗಾಗಿದ್ದ ಬಾಲಕನ ಕುಟುಂಬದವರು, ಚಿಕಿತ್ಸೆ ಕೊಡಿಸದೇ ದರ್ಗಾವೊಂದರಲ್ಲಿ ಬಿಟ್ಟು, ಮಗ ವಾಸಿಯಾಗಲೆಂದು ಬೇಡಿಕೊಂಡಿದ್ದರಂತೆ. ಕೆಲವೇ ದಿನಗಳಲ್ಲಿ ಆ ಬಾಲಕ ಮೃತಪಟ್ಟಿದ್ದ. ಆ ಘಟನೆಯೇ ಇವರ ವೈದ್ಯಕೀಯ ಸೇವೆಗೆ ಟರ್ನಿಂಗ್ ಪಾಯಿಂಟ್ ನೀಡಿತು.
– ಶ್ರೀಶೈಲ
ಫೋಟೋ- ಬಾಬು ಸಿರೀಸ್
7
ಮಾನವೀಯತೆ ಕಲಿಸಿದ ಬಡತನ
ವೈದ್ಯ- ಡಾ| ಯಲ್ಲಪ್ಪ ರಾಮಪ್ಪ ಕದಂ, ಹುಬ್ಬಳ್ಳಿ
ಫೀ- 20 ರೂ.
ಅವರು ಹುಬ್ಬಳ್ಳಿಯ ಡಾ| ಯಲ್ಲಪ್ಪ ರಾಮಪ್ಪ ಕದಂ. ಸ್ಟೇಷನ್ ರಸ್ತೆಯಲ್ಲಿ ಇವರ ಹೆಸರು ಎಲ್ಲರಿಗೂ ಪರಿಚಿತ. ಕಡುಬಡವರಿಗೆ ಪ್ರೀತಿಯಿಂದ ಚಿಕಿತ್ಸೆ ನೀಡಿ, ಅವರಿಂದ ತೆಗೆದುಕೊಳ್ಳುವ ಶುಲ್ಕ ಕೇವಲ 20 ರೂ.! ಅಂದಹಾಗೆ, ಆರಂಭದಲ್ಲಿ ಇವರು ತೆಗೆದುಕೊಳ್ಳುತ್ತಿದ್ದ ಫೀಸು, 2 ರೂ.!
ಬಡವರ ನೋವನ್ನು ಬಲ್ಲ ಇವರು ಕೂಡ ಬಡತನದಿಂದಲೇ ಮೇಲೆ ಬಂದವರು. ಓದುವ ದಿನಗಳಲ್ಲಿ ತಂದೆಯ ಜತೆಗೆ ಕೆಲಸಕ್ಕೆ ಹೋಗುತ್ತಿದ್ದರಂತೆ. ರಾತ್ರಿ ವೇಳೆ ಫಾತಿಮಾ ಶಾಲೆಯಲ್ಲಿ ಶಿಕ್ಷಣ ಕಲಿಯುತ್ತಿದ್ದರಂತೆ.
ಸ್ಫೂರ್ತಿ ಏನು?
ಎಂಬಿಬಿಎಸ್ ಓದುವಾಗ ಇವರಿಗೆ ಆರ್ಥಿಕ ಸಂಕಷ್ಟವಿತ್ತು. 200 ರೂ. ಶುಲ್ಕ ಕಟ್ಟಲೂ ಸಮಸ್ಯೆ ಇತ್ತು. ಹೇಗೋ ಅಷ್ಟು ಹಣವನ್ನು ಹೊಂದಿಸಿದರಂತೆ. ಆದರೆ, ಇವರ ಬಡತನ ಕಂಡು, 200 ರೂ.ಗಳ ಶುಲ್ಕವನ್ನು ಕಾಲೇಜಿನವರೇ ಮರಳಿ ಕೊಟ್ಟರಂತೆ. ಇದೇ ಇವರ ಸೇವೆಗೆ ಸ್ಫೂರ್ತಿ.
ಫೋ- ಯಲ್ಲಪ್ಪ
– ಬಸವರಾಜ ಹೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.