ಎವರ್‌ ಗ್ರೀನ್‌ ಸ್ಕೂಲ್‌


Team Udayavani, Jun 9, 2018, 1:44 PM IST

30.jpg

ಶಾಲೆ ಅಂದರೆ ಓದು, ಶಾಲೆ ಎಂದರೆ ಹೋಮ್‌ವರ್ಕ್‌, ಶಾಲೆ ಎಂದರೆ ಶಿಕ್ಷೆ…ಇಷ್ಟೇ ಅಲ್ಲ, ಶಾಲೆ ಅನ್ನೋದು ಬದುಕನ್ನು ಕಟ್ಟಿಕೊಡುವ ದೇಗುಲ ಅನ್ನಬಹುದು. ಇವತ್ತು ಶಾಲೆ ಅನ್ನೋದು ಕೆಲಸ ಕೊಡಿಸುವ ಯಂತ್ರದಂತಾಗಿದೆ. ಆದರೆ ಕೂಡ್ಲಿಗಿಯ  ಬಯಲು ತುಂಬರಗುದ್ದಿ ಗ್ರಾಮದ ಸರಕಾರಿ ಶಾಲೆ ಹೀಗಿಲ್ಲ. ಇಲ್ಲಿರುವ ಮಕ್ಕಳು ಕೈ ಕೆಸರು ಮಾಡಿಕೊಂಡು ಬೆಳೆ ತೆಗೆಯುತ್ತವೆ, ತೋಟ ಮಾಡುತ್ತವೆ. ಅದು ಹೇಗೆ ಎಂದರೆ….

“ಲೋ ರಮೇಶ, ಲೋ ದಾವಿದ್‌…ಬರ್ರೋ ಆಟ ಆಡಿದ್ದು ಸಾಕು. ಶಾಲೆ ಕಡೆಗೆ ಹೋಗಿ ಬರೋಣ’ ಅಂತ ದರ್ಶನ್‌ ಕರೆದಿದ್ದೇ ತಡ; ಹುಡುಗರೆಲ್ಲ ಆಟವನ್ನು ಅರ್ಧಕ್ಕೇ ಬಿಟ್ಟು ಕ್ಷಣಾರ್ಧದಲ್ಲಿ ಶಾಲೆಯ ಕಡೆ ಓಟ ಕಿತ್ತರು. ಇದನ್ನು ನೋಡಿ ಅರೆಕ್ಷಣ ಕಕ್ಕಾಬಿಕ್ಕಿ ಆಗಬಬೇಕಾಯಿತು. ಶಾಲಾ ದಿನಗಳಲ್ಲೇ ಮಕ್ಕಳು ಶಾಲೆಗೆ ಹೋಗುವುದು ಕಷ್ಟವಿರುವಾಗಲೇ ರಜೆಯ ದಿನಗಳಲ್ಲಿ ಶಾಲೆ ಕಡೆಗೆ ಮುಖ ಮಾಡುವುದೆಂದರೆ..!  ಅದೂ ಸ್ವಯಂ ಪ್ರೇರಣೆಯಿಂದ. ಕುತೂಹಲ ನೂರ್ಮಡಿ ಆಗಿತು. ಮಕ್ಕಳನ್ನು ಹಿಂಬಾಲಿಸಿದೆ. ಶಾಲೆಯ ಆವರಣದಲ್ಲಿ ಮಕ್ಕಳು ಕಾಣಲಿಲ್ಲ. ಓಡಿ ಬಂದ ಮಕ್ಕಳು ಎಲ್ಲಿ ಹೋದರು? ಎನ್ನುತ್ತಾ ಶಾಲೆಯ ಪ್ರದಕ್ಷಿಣೆ ಹಾಕಿದೆ. ಮಕ್ಕಳ ಸುಳಿವು ಸಿಗಲಿಲ್ಲ. ಆದರೆ ಮಹಡಿ ಕಟ್ಟಡಕ್ಕೆ ಪ್ರವೇಶಿಸುವ ಗೇಟ್‌ ಕೊಂಚ ತೆರೆದಿತ್ತು, ಗೇಟ್‌ ಹತ್ತಿರ ಹೋಗುತ್ತಿದ್ದಂತೆ “ರಮೇಶ ಆ ಗಿಡ ಎಷ್ಟು ಕಾಯಿ ಬಿಟ್ಟಿದೆ ನೋಡು, ಅದಕ್ಕೆ ನೀರು ಹಾಕು, ಈ ಗಿಡಕ್ಕೆ ಬೂದಿ ರೋಗ ಬಿದ್ದಿದೆ. ಔಷಧಿ ಸಿಂಪಡಿಸು’ ಇಂಥವೇ ಮಾತುಗಳು ಅಲೆ ಅಲೆಯಾಗಿ ತೇಲಿ ಬಂದವು. ಅರೆ ಇದೇನಿದು ನೆಲದ ಮೇಲೆಯೇ ಒಂದೂ ಗಿಡವಿಲ್ಲ ಇನ್ನು ಮಹಡಿ ಮೇಲೆಯೇ..? ಎನ್ನುತ್ತಾ ಹತ್ತಲು ಮೆಟ್ಟಿಲು ಬಳಸುತ್ತಿದ್ದಂತೆ ಮಹಡಿಯಲ್ಲಿ ಹಸಿರು ದಟ್ಟವಾಗಿದೆ ಎನ್ನುವ ಮುನ್ಸೂಚನೆ ಸಿಕ್ಕಿತು. ಮೆಟ್ಟಲುಗಳ ಇಕ್ಕೆಲಗಳಲ್ಲಿ ನೀರಿನ ಪ್ಲಾಸ್ಟಿಕ್‌ ಬಾಟಲ್‌ಗ‌ಳಲ್ಲಿದ್ದ ಹೂವಿನ ಗಿಡಗಳು ಮೇಲೊಂದು ಹಸಿರು ಕ್ರಾಂತಿ ನಡೆಯುತ್ತಿದೆ ಎನ್ನುವುದನ್ನು ಖಾತ್ರಿ ಪಡಿಸಿದವು. ಅಂದುಕೊಂಡಂತೆ ತಾರಸಿಯಲ್ಲಿ ಚಿಕ್ಕ-ಚೊಕ್ಕ ತೋಟ ನಳನಳಿಸುತ್ತಿತ್ತು. ಒಂದಿಷ್ಟು ಮಕ್ಕಳು ತೋಟದ ಆರೈಕೆಯಲ್ಲಿ ನಿರತರಾಗಿದ್ದರೆ, ಮತ್ತೂಂದಿಷ್ಟು ಮಕ್ಕಳು ತೋಟದ ನಡುವೆ ಯೋಗಾಭ್ಯಾಸ ಮಾಡುತ್ತಿದ್ದರು!. 

ಈ ಹೈಸ್ಕೂಲ್‌ “ಹಸಿರುವಾಸಿ..!
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹೊಸಹಳ್ಳಿ ಸಮೀಪದ ಬಯಲು ತುಂಬರಗುದ್ದಿ ಗ್ರಾಮದ ಸರಕಾರಿ ಹೈಸ್ಕೂಲ್‌ ಮತ್ತು ಅಲ್ಲಿನ ಮಕ್ಕಳು ಬಹುತೇಕ ಶಾಲೆಗಳಿಗಿಂತ ವಿಭಿನ್ನ. ಈ ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅಷ್ಟೇ ಆಸಕ್ತಿಯಿಂದ ಪಾಲ್ಗೊಳ್ಳುವುದು ಇದಕ್ಕೆ ಕಾರಣ. ಇದರ ಪರಿಣಾಮವೇ ಕೇವಲ 30 ಅಡಿ ಉದ್ದ 15 ಅಡಿ ಅಗಲದಲ್ಲಿ ಕಳೆದ ಎರಡು ವರ್ಷದಿಂದ ಬೆಳಸಿ, ನಿರ್ವಹಣೆ ಮಾಡಿರುವ ತಾರಸಿ ತೋಟ. ಅದು ಬಹುತೇಕ ಶೂನ್ಯ ಬಂಡವಾಳದಿಂದ ಆರಂಭವಾದದ್ದು. ಮಕ್ಕಳು ಇಲ್ಲಿ ಪಾಠದೊಂದಿಗೆ ನೈಜ ಬದುಕಿಗೆ ಬೇಕಾದ ಎಲ್ಲ ಬಗೆಯ ಅನುಭವ ಪಡೆಯುತ್ತಿರುವುದು ವಿಶೇಷ. ಇಂಥ ತಾರಸಿ ತೋಟದ ಕಲ್ಪನೆ ಟಿಸಿಲೊಡೆದಿದ್ದು ದೈಹಿಕ ಶಿಕ್ಷಕ ನಾಗರಾಜ್‌ ಬಂಜಾರ್‌ ರವರಲ್ಲಿ.

ಬಂಜಾರ್‌ನಿಂದ ಭರ್ಜರಿ ಸ್ಕೆಚ್‌..!
ಮಕ್ಕಳು ಪರಿಸರ, ಕೃಷಿಯ ನಂಟು ಇಟ್ಟುಕೊಂಡು ಓದಬೇಕೆಂಬ ಮಹದಾಸೆ ಬಂಜಾರ್‌ ಮೇಸ್ಟ್ರಿಗೆ ಇತ್ತು. ಶಾಲೆಗೆ ಸ್ವಂತಕ್ಕೆ ಬೋರ್‌ವೆಲ್‌ ಇದ್ದಿದ್ದು ಇವರ ಕನಸಿಗೆ ಬಲ ತುಂಬಿತು. ಈ ಶಾಲೆಯಲ್ಲಿ ಮೂರೂವರೆ ಎಕರೆಯಷ್ಟು ವಿಶಾಲ ಮೈದಾನವಿದೆ. ದುರಾದೃಷ್ಟಕ್ಕೆ ಅದರಲ್ಲಿ ಅರ್ಧ ಗರಸು ಮಣ್ಣು ತುಂಬಿತ್ತು.  ಉಳಿದ ಮಣ್ಣು ಸ್ವಲ್ಪ ಫ‌ಲವತ್ತಾಗಿತ್ತು.  ಫ‌ಲವತ್ತಾದ ಮಣ್ಣಲ್ಲಿ ತೋಟ ನಿರ್ಮಿಸಲಿಕ್ಕೆ ಕಾಂಪೌಂಡ್‌ ಸಮಸ್ಯೆ. ಈ ಕಾರಣಕ್ಕೆ ಅನ್ಯ ಸಾಧ್ಯತೆಗಳ ಬಗ್ಗೆ ಯೋಚಿಸಿದರು. ಅಲ್ಲಲ್ಲಿ ತಾರಸಿ ತೋಟ ಮಾಡಿದ ಬಗ್ಗೆ ಓದಿದ್ದ, ಕೇಳಿದ್ದ ಬಂಜಾರ್‌ ಈ ಪ್ರಯತ್ನವನ್ನು ಇಲ್ಲೇಕೆ ಮಾಡಬಾರದು ಎಂದು ನಿರ್ಧರಿಸಿ, ಮಕ್ಕಳಲ್ಲಿ ತಾರಸಿ ತೋಟದ ಕನಸಿನ ಬೀಜ ಬಿತ್ತಿದರು. ಸರಕಾರಿ ಶಾಲೆ, ಬಡ ಮಕ್ಕಳು ಬೇರೆ!  ಹೀಗಾಗಿ, ಶೂನ್ಯ ಬಂಡವಾಳದಲ್ಲಿ ತಾರಸಿ ತೋಟವನ್ನು ಬೆಳೆಸುವ ನಿಟ್ಟಿನತ್ತ ರೂಪರೇಷೆ ಸಿದ್ಧಪಡಿಸಿದರು. ಅದನ್ನು ಮಕ್ಕಳ ಮುಂದೆ ಬಿಚ್ಚಿಟ್ಟರು.

ತ್ಯಾಜ್ಯ ವಸ್ತುಗಳೇ ತಾರಸಿ ಸಾಧನಗಳು..!
 ಬಿಸಿ ಊಟಕ್ಕೆ ಸರಕಾರದಿಂದ ಪೂರೈಕೆ ಆಗುತ್ತಿದ್ದ ಹಾಲಿನ, ಎಣ್ಣೆಯ ನೀರಿನ ಪಾಕೆಟ್‌ಗಳು, ಗ್ರಾಮದಾಚೆ ಪವನ ವಿದ್ಯುತ್‌ ನಿರ್ಮಾಣದ ಫ್ಯಾನ್‌ಗಳಿಗೆ ಬಳಸಿ ಬಿಸಾಡಿದ ಗ್ರೀಸ್‌ ಡಬ್ಬಗಳು, ಒಡೆದು ಹೋದ ಕೊಡಪಾನ, ಚಂಬು, ಡ್ರಮ್‌ಗಳು, ಬಕೆಟ್‌ಗಳು, ನೀರಿನ ಬಾಟಲ್‌ಗ‌ಳು… ಹೀಗೆ ನಿರುಪಯುಕ್ತ ವಸ್ತುಗಳನ್ನೇ ತಾರಸಿ ತೋಟಕ್ಕೆ ಬಳಸಿಕೊಳ್ಳಲು ಮುಂದಾದರು.  ಮನೆ, ದಾರಿಯಲ್ಲಿ ಸಿಗುವ ಸಿಕ್ಕ ಇಂಥ ನಿರುಪಯುಕ್ತ ವಸ್ತುಗಳನ್ನು ಆಯ್ದು ತರುವಂತೆ ಮಕ್ಕಳಿಗೆ ಸೂಚಿಸಿದ್ದಲ್ಲದೇ, ಸ್ವತಃ ಇವರೇ ಅವುಗಳನ್ನು ಸಂಗ್ರಹಿಸುವತ್ತ ಗಮನಹರಿಸಿದರು. ಹೀಗಾಗಿ ಕೆಲವೇ ದಿನಗಳಲ್ಲಿ ತಾರಸಿ ತೋಟಕ್ಕೆ ಬೇಕಾದ ಸಲಕರಣೆಗಳು ಶೇಖರಣೆ ಆದವು.

ಪಾಠಿಚೀಲದೊಂದಿಗೆ ಮಣ್ಣು, ಗೊಬ್ಬರ ತಂದರು…!
 ಈ ಯೋಜನೆಗೆ ಚಾಲನೆ ಸಿಕ್ಕಿದ್ದೇ ತಡ, ಶಾಲೆಯಲ್ಲಿ ಓದುತ್ತಿದ್ದ ಒಟ್ಟು 110 ಮಕ್ಕಳ ದಿನಚರಿ ಬದಲಾಯಿತು. ಮನೆ ಬಿಡುವಾಗಲೇ ಸ್ಕೂಲ್‌ ಬ್ಯಾಗ್‌ನೊಂದಿಗೆ ಪ್ಲಾಸ್ಟಿಕ್‌ ಕವರ್‌ ಕೂಡ ಕೈಗೆ ಬಂತು. ಅದರಲ್ಲಿ ಹಾದಿಯಲ್ಲಿ ಬಿದ್ದ ದನಕರುಗಳ ಸಗಣಿ, ತಿಪ್ಪೆಗಳಿಂದ ಕೊಟ್ಟಿಗೆ, ಕುರಿ ಗೊಬ್ಬರ, ಫ‌ಲವತ್ತಾದ ಮಣ್ಣು ತಂದರು. ವಾರದಲ್ಲಿ ತಾರಸಿ ತೋಟಕ್ಕೆ ಭೂಮಿಕೆ ಸಿದ್ಧವಾಯಿತು. ಮಣ್ಣು ಮತ್ತು ಗೊಬ್ಬರವನ್ನು ಹಿತ ಮಿತವಾಗಿ ಮಿಶ್ರಣ ಮಾಡಿ ಪ್ಲಾಸ್ಟಿಕ್‌ ಸಾಧನಗಳಲ್ಲಿ ತುಂಬಿಸಿದರು. 

ಪ್ರತಿ ಮಕ್ಕಳು ತಾರಸಿ ತೋಟದ  ಅನುಭವ ಪಡೆಯಬೇಕು ಎನ್ನುವ ಕಾರಣಕ್ಕೆ ಮಕ್ಕಳನ್ನು ಕೆಲವು ಗುಂಪುಗಳಾಗಿ ವಿಂಗಡಿಸಿ, ತರಕಾರಿ ಮತ್ತು ಸೊಪ್ಪಿನ ಬೀಜಗಳನ್ನು ಹಂಚಿದರು. ಬೀಜ ಹಾಕುವ, ನೀರುಣಿಸುವ, ಗಿಡಗಳ ನಿರ್ವಹಣೆಯ ಬಗೆ ತಿಳಿಸಿ, ಕೃಷಿಯ ಅನುಭವ ಒದಗಿಸಿದರು. ಅಷ್ಟೇ ಅಲ್ಲ,  ಒಂದು ಗಿಡ ಅಥವಾ ಬಳ್ಳಿಯ ಹುಟ್ಟಿನಿಂದ ಹಿಡಿದು ಅವಸಾನದವರೆಗೆ ಅದರ ಬೆಳವಣಿಗೆ, ಫ‌ಲ ಕೊಡಲು ತೆಗೆದುಕೊಂಡ ದಿನಗಳು, ಭಾದಿಸಿದ ರೋಗಗಳು, ರೋಗ ನಿರ್ಮೂಲನೆಗೆ ತೆಗೆದುಕೊಂಡ ಕ್ರಮ, ನೀಡಿದ ಇಳುವರಿ, ಜೀವಿತಾವಧಿ.. ಹೀಗೆ ಗಿಡದ ಬಗ್ಗೆ ಸಂಪೂರ್ಣ ವಿವರವನ್ನು ಒಂದೆಡೆ ದಾಖಲಿಸುತ್ತಾ ಹೋದರು. ಇದರಿಂದ ಈಗ ಗುಂಪುಗಳ ನಡುವೆ ಜವಾಬ್ದಾರಿ ಮತ್ತು ತೋಟ ನಿರ್ವಹಣೆಯಲ್ಲಿ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ. ರಜೆ ದಿನಗಳಲ್ಲೂ ಈ ಗುಂಪುಗಳು ಸರದಿ ಪ್ರಕಾರ ತಾರಸಿ ತೋಟಕ್ಕೆ ನೀರು, ಗೊಬ್ಬರ ಉಣಿಸುತ್ತವೆ!  ಫ‌ಲವಾಗಿ ತಾರಸಿ ತೋಟ ಹಚ್ಚಹಸಿರಿನಿಂದ ನಳನಳಿಸುತ್ತದೆ. ಈಗ ಈ ತೋಟದ ಮಧ್ಯೆಯೇ ಮಕ್ಕಳ ಓದು, ಚರ್ಚೆ, ಮಾತು, ಮಂಥನ, ಯೋಗಾಭ್ಯಾಸ ನಡೆಯುತ್ತೆ.

ಸಾವಯವ ತಾರಸಿ ತೋಟ..! 
ಈ ತಾರಸಿ ತೋಟ ರಾಸಾಯನಿಕಮುಕ್ತ. ಆವರಣದಲ್ಲಿಯ ಹುಣಸೆ, ಬೇವಿನ ಮರಗಳ ಒಣ ಎಲೆ, ಬೇವಿನ ಬೀಜಗಳು, ಹಸಿ ಕಸ, ಬಿಸಿ ಊಟ ತಯಾರಿಸುವಾಗ್ಗೆ  ಸೃಷ್ಟಿಯಾದ ತ್ಯಾಜ್ಯ… ಎಲ್ಲವನ್ನೂ ಒಂದು ಗುಂಡಿಗೆ ಹಾಕಿ ಕೊಳೆಸುತ್ತಾರೆ. ಹೀಗೆ ಕೊಳೆತು ಗೊಬ್ಬರವಾದದ್ದನ್ನು ತಾರಸಿ ಗಿಡಗಳಿಗೆ ನೀಡುತ್ತಾ ಬರುತ್ತಾರೆ. ಜಿವಾಮೃತವನ್ನು ಮಕ್ಕಳೇ ತಯಾರಿಸಿ, ಗಿಡಗಳಿಗೆ ನಿಯಮಿತ ಪ್ರಮಾಣದಲ್ಲಿ ನೀಡುತ್ತಾರೆ. ಅಷ್ಟೇ ಅಲ್ಲದೆ ಬೂದಿ, ಚುಕ್ಕಿ ರೋಗ… ಇವುಗಳ ನಿಯಂತ್ರಣ ಮತ್ತು ಪರಿಹಾರಕ್ಕೆ ಗೋಮೂತ್ರ, ಸುಣ್ಣದ ನೀರು, ನೀರಿನಲ್ಲಿ ಕುದಿಸಿದ ಬೇವಿನ ಬೀಜದ ರಸವನ್ನು ಸಿಂಪಡಿಸುತ್ತಾರೆ!. ತಾರಸಿ ತೋಟದಲ್ಲಿ ಸಿಗುವ ತಾಜಾ ತರಕಾರಿ ಮತ್ತು ಸೊಪ್ಪುಗಳನ್ನು ಬಿಸಿ ಊಟಕ್ಕೆ ಬಳಸುತ್ತಾರೆ. 

ಬೆಂಡೆ, ಜವಳಿ, ಟಮೋಟೋ, ಮೆಣಸಿನಕಾಯಿ, ಕ್ಯಾರೆಟ್‌, ಬೀಟ್‌ರೋಟ್‌, ಬೀನ್ಸ್‌, ಮೂಲಂಗಿ, ಚಳ್ಳರಿಕಾಯಿ, ರಾಜಗಿರಿ, ಸಬ್ಬಸಿಗೆ, ಮೆಂತ್ಯ, ಪಾಲಕ್‌, ಕೊತ್ತಂಬರಿ, ಪುದಿನ.. ಹೀಗೆ ಸೊಪ್ಪು ಮತ್ತು ತರಕಾರಿ ಗಿಡಗಳ ಪಟ್ಟಿ ಬೆಳೆಯುತ್ತದೆ. ಕಮಲ ಸೇರಿದಂತೆ ಅನೇಕ ಹೂವಿನ ಗಿಡಗಳೂ ಇವೆ. ಶತಾವರಿ, ದೊಡ್ಡಪತ್ರೆ, ನಿಂಬೆ ಹುಲ್ಲು, ಅಮೃತಬಳ್ಳಿ, ಬಾಸುಮತಿ, ಕಾಡು ಬಸಳೆ, ಬಸಳೆ, ನೆಲನಲ್ಲಿ… ಹತ್ತಾರು ಆರ್ಯುವೇದ ಗಿಡಗಳೂ ಸ್ಥಾನ ಪಡೆದಿದ್ದು, ಅವುಗಳ ಉಪಯೋಗಗಳೂ ಮಕ್ಕಳಿಗೆ ಗೊತ್ತಿದೆೆ.  ನೂರಾರು ಪ್ಲಾಸ್ಟಿಕ್‌, ಪಾಟ್‌ಗಳಲ್ಲಿ ವೈವಿಧ್ಯಮಯ ಗಿಡ ಬಳ್ಳಿಗಳಿವೆ. ಅಲ್ಲದೆ ನೀರಿನ ಬಾಟಲ್‌ಗ‌ಳಿಗೆ ದೇಶದ ತ್ರಿವರ್ಣ ಧ್ವಜದ ಬಣ್ಣ ಹಚ್ಚಿದ್ದು, ಹೆಚ್ಚು ಆಕರ್ಷಕವಾಗಿವೆ.

ಮನೆ ಮನೆಯಲ್ಲೂ ಹಸಿರು ಜಪ..!
 ಶಾಲೆಗೆ ಕೇವಲ ಬಯಲು ತುಂಬರಗುದ್ದಿ ಗ್ರಾಮದ ಮಕ್ಕಳಲ್ಲದೇ ಸಮೀಪದ ಬೆಳಕಟ್ಟೆ, ಟಿ ಸೂರವ್ವನಹಳ್ಳಿ, ರಂಗನಾಥನಹಳ್ಳಿಯ ಮಕ್ಕಳು ಸಹ ಬರುತ್ತಾರೆ. ಇವರಿಗೆಲ್ಲಾ ಪ್ಲಾಸ್ಟಿಕ್‌ ತ್ಯಾಜ್ಯ ವಸ್ತುಗಳಲ್ಲಿ ಸೊಪ್ಪು ತರಕಾರಿಗಳನ್ನು ಬೆಳೆಸಬಹುದು ಎನ್ನುವ ಐಡಿಯಾ ಮತ್ತು ಪಟ್ಟು ಸಿಕ್ಕಿದ್ದೇ ತಡ ಮಕ್ಕಳು ಶಾಲೆಯಲ್ಲಿ ಮಾತ್ರವಲ್ಲದೇ ತಮ್ಮ ತಮ್ಮ ಮನೆಯಲ್ಲಿ ಇಂತದೊಂದು ಚಿಕ್ಕ ಪ್ರಯತ್ನ ಮತ್ತು ಪ್ರಯೋಗ ಮಾಡುತ್ತಿದ್ದಾರೆ!. ಹೀಗಾಗಿ ಈ ಗ್ರಾಮಗಳ ಬಹುತೇಕ ವಿದ್ಯಾರ್ಥಿ ಮತ್ತು ಅವರ ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ಅನುಪಯುಕ್ತ ಪ್ಲಾಸ್ಟಿಕ್‌ ವಸ್ತುಗಳಲ್ಲಿ ಸೊಪ್ಪು, ತರಕಾರಿಗಳನ್ನು ಬೆಳೆಯುವ ಪ್ರಯತ್ನಗಳು ನಡೆಯುತ್ತಿರುವುದು ವಿಶೇಷ. 

ಶಾಲೆಯ ತಾರಸಿ ತೋಟ ಎಷ್ಟು ಸದ್ದು ಮಾಡಿದೆ ಅಂದರೆ ನಿತ್ಯವೂ ಕನಿಷ್ಠ ಪಕ್ಷ 5-6 ಮಂದಿ ತೋಟವನ್ನು ನೋಡಲಿಕ್ಕೆ ಬರುತ್ತಾರೆ!. ಬಂದವರು, ಮಕ್ಕಳ ಶ್ರಮ ಮತ್ತು ಟ್ಯಾಲೆಂಟ್‌ ನೋಡಿ, ತಾರಸಿ ತೋಟದ ಅಭಿವೃದ್ಧಿಗಾಗಿ ತಮ್ಮ-ತಮ್ಮ 
ಶಕಾöನುಸಾರ ಪಾಟ್‌ಗಳನ್ನು ನೀಡುತ್ತಿದ್ದಾರೆ. ಅಷ್ಟೇಕೆ, ಸ್ವತಃ ಹಾಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳೇ ಹಣ ಕೂಡಿಸಿ, ಹಳೆಯ ವಿದ್ಯಾರ್ಥಿಗಳು, ಸ್ಥಿತಿವಂತರು ಪಾಟ್‌, ಬಕೆಟ್‌ಗಳನ್ನು ಕೊಡುಗೆ ಆಗಿ ನೀಡುತ್ತಿದ್ದಾರೆ. “ಮಕ್ಕಳಲ್ಲಿನ ಆಸಕ್ತಿ, ಪರಿಶ್ರಮ,  ಪೋಷಕರ ಸಹಕಾರ, ಶಾಲೆಯ ಬೋಧಕ ಮತ್ತು ಸಿಬ್ಬಂದಿ ವರ್ಗ, ಎಸ್‌.ಡಿ.ಎಂ.ಸಿ ಸಹಕಾರದಿಂದ ತಾರಸಿ ತೋಟ ದಿನಕ್ಕೊಂದು ಹೊಸ ರೂಪ ಪಡೆದುಕೊಂಡು ಸುತ್ತಮುತ್ತಲಿನಲ್ಲಿ ಹೆಸರುವಾಸಿ ಆಗುತ್ತಿದೆ ಎನ್ನುತ್ತಾರೆ ನಾಗರಾಜ್‌ ಬಂಜಾರ. ಮಾಹಿತಿಗೆ-  9741914079

ಯೋಗದಲ್ಲೂ ಮುಂದು..!
ನಾಗರಾಜ್‌ ಉತ್ತಮ ಯೋಗಪಟು. ಮಕ್ಕಳಿಗೆ ಕಡ್ಡಾಯವಾಗಿ ಯೋಗಾಭ್ಯಾಸ ಮಾಡಿಸುತ್ತಾರೆ. ಫ‌ಲವಾಗಿ ಮಕ್ಕಳಲ್ಲಿ ಯೋಗದ ಮಹತ್ವ ಮತ್ತು ಅದರ ಉಪಯೋಗಗಳ ಬಗ್ಗೆ ಜಾnನವಿದೆ.  ವೃಶ್ಚಿಕಾಸನ, ಪೂರ್ಣ ಚಕ್ರಾಸನ, ರಾಜಕಪೋತಾಸನ, ಪದ್ಮಮಯೂರಾಸನ… ಇಂತಹ ಹತ್ತಾರು ಕ್ಲಿಷ್ಟ ಆಸನಗಳನ್ನು ಸುಲಲಿತವಾಗಿ ಮಾಡುವಷ್ಟು ಮಕ್ಕಳು ಯೋಗದಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ತಾರಸಿ ತೋಟದ ನಡುವೆ ಮಕ್ಕಳ ಯೋಗಾಭ್ಯಾಸ ನಿತ್ಯ ಸಾಗಿರುತ್ತದೆ. ಯೋಗ ಸಾಧಕ ಮಕ್ಕಳು ಅನ್ಯ ಶಾಲೆ, ತಾಲ್ಲೂಕು, ಹೋಬಳಿಗಳಲ್ಲಿ ಯೋಗ ಪ್ರದರ್ಶನ ಮಾಡಿ, ಭೇಷ್‌ ಎನಿಸಿಕೊಂಡಿದ್ದಾರೆ!.

ನೈರ್ಮಲ್ಯ ಜಾಗೃತಿ ಕಡೆಗೂ ನಡೆ…!
  ಬಯಲು ಶೌಚಾಲಯ ಮುಕ್ತ ಸಮಾಜ ಮತ್ತು ಊರಿನ ಸ್ವತ್ಛತೆಗೆ ಸಂಬಂಧಿಸಿದಂತೆ ಬಂಜಾರ್‌ ಸಿದ್ಧಪಡಿಸಿದ ಬೀದಿ ನಾಟಕಗಳು, ಜಾಗೃತಿ ಗೀತೆಗಳನ್ನು ಶಾಲೆಯ ಮಕ್ಕಳ ತಂಡ ಬಯಲು ತುಂಬರಗುದ್ದಿ, ಬೆಳಕಟ್ಟೆ, ಟಿ ಸೂರವ್ವನಹಳ್ಳಿ, ರಂಗನಾಥನಹಳ್ಳಿ… ಸೇರಿದಂತೆ ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 08 ಗ್ರಾಮಗಳು, ಕೊಟ್ಟೂರು, ಹೊಸಹಳ್ಳಿ ಹೋಬಳಿ ಜನರ ಮತ್ತು ಶಾಲೆಗಳ ಅಹ್ವಾನದ ಮೇರೆಗೆ ಗರಿಷ್ಠ ಪ್ರದರ್ಶನ ನೀಡಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿ ಆಗಿದ್ದಾರೆ. 

ಸ್ವರೂಪಾನಂದ ಎಂ. ಕೊಟ್ಟೂರು 

ಟಾಪ್ ನ್ಯೂಸ್

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.