ರೋಮಾಂಚಕ ಕೆಸರುಗದ್ದೆ ಆಟ ಉಳಿಸಲು ಹೋರಾಟ
Team Udayavani, Sep 22, 2018, 3:17 PM IST
ಕಾಲು ಹೂತು ಹೋಗುತ್ತಿದ್ದರೂ ಹೆಣಗಾಡಿ ಗೆಲ್ಲುವ ಆಟಗಳು ಉಳಿದಿವೆ ಇನ್ನೂ ಕಣ್ಮರೆಯಾಗುತ್ತಿರುವ ಕ್ರೀಡೆಗಳ ಜೀವಂತಿಕೆಗಾಗಿ ಸಂಘಸಂಸ್ಥೆಗಳಿಂದ ಯತ್ನ
ಆಧುನಿಕ ಜಗತ್ತು ಜನರನ್ನು ಹೆಚ್ಚೆಚ್ಚು ಆವರಿಸಿಕೊಳ್ಳುತ್ತಿದ್ದಂತೆ ಒಳಿತು, ಕೆಡುಕುಗಳನ್ನದೆ ಹಳುತಗಳೆಲ್ಲ ಮಾಯವಾಗುತ್ತಿವೆ. ಒಂದುಕಾಲದಲ್ಲಿ ಜನರ ಜೀವನಾಡಿಯಾಗಿದ್ದ ಸಂಸ್ಕೃತಿ ಹಾಗೆಯೇ ತೊಳೆದುಕೊಂಡು ಹೋಗುತ್ತಿದೆ. ಗ್ರಾಮೀಣ ಭಾಗವನ್ನೇ ಗಮನಿಸಿದರೆ, ಗ್ರಾಮೀಣ ಸಂಸ್ಕೃತಿಯ ಒಂದು ಭಾಗವೇ ಆಗಿರುವ ಲಗೋರಿ, ಬುಗುರಿ, ಚಿನ್ನಿದಾಂಡು, ಕೊಕೊ ಆಟಗಳು ಬಹುತೇಕ ಕಣ್ಮರೆಯಾಗಿವೆ. ಆ ಜಾಗವನ್ನು ಕ್ರಿಕೆಟ್ ಆವರಿಸಿಕೊಂಡಿದೆ. ಆದರೂ ಕೆಲವು ಆಟಗಳನ್ನು ಉಳಿಸಲು ವಿವಿಧ ಗ್ರಾಮೀಣ ಸಂಘಸಂಸ್ಥೆಗಳು ಶ್ರಮಿಸುತ್ತಿವೆ. ಒಂದು ಕಾಲದಲ್ಲಿ ಗ್ರಾಮೀಣ ಜೀವನದ ಒಂದು ಭಾಗವೇ ಆಗಿದ್ದ ಕೆಸರುಗದ್ದೆ ಆಟಗಳೂ ಇವುಗಳಲ್ಲೊಂದು. ಗ್ರಾಮೀಣರ ಪಾಲಿಗೆ ಈ ಆಟಗಳು ಈಗಲೂ ರೋಮಾಂಚಕವಾಗಿವೆ. ಉತ್ಸಾಹ ಬರಿಸುತ್ತವೆ.
ಕೆಸರುಗದ್ದೆ ಆಟ ಎಂದಾಕ್ಷಣ ನಮಗೆ ನೆನಪಾಗುವುದು ಕರಾವಳಿ ಮತ್ತು ಮಲೆನಾಡು. ಈ ಪ್ರದೇಶದ ಮಣ್ಣಿನ ಮಕ್ಕಳೆಲ್ಲರೂ ಒಂದಾಗಿ ಪಾಲ್ಗೊಳ್ಳುವ ಈ ಕೆಸರುಗದ್ದೆ ಆಟ ಗ್ರಾಮೀಣ ಜನರ ನೆಚ್ಚಿನ ಕ್ರೀಡೆಯಾಗಿದೆ. ಇಡೀ ವರ್ಷ ಕ್ರೀಡಾಕೂಟಗಳು ನಡೆದರೂ, ಮಳೆಗಾಲದಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟ ಜನಪ್ರಿಯ. ಬಿರುಸಿನ ಕೃಷಿ ಕಾರ್ಯದ ನಡುವೆಯೂ ಕ್ರೀಡಾಪಟುಗಳು ಕೆಸರುಗದ್ದೆ ಆಟದ ಜನರಿಗೆ ಮೂಲಕ ಮನರಂಜನೆ ನೀಡುತ್ತಾರೆ. ಈ ಆಟ ಔಷಧೀಯ ಗುಣ ಹೊಂದಿರುವುದು ಇನ್ನೊಂದು ವಿಶೇಷ. ಹಸಿ ಮಣ್ಣಿನ ಸ್ಪರ್ಶದಿಂದ ಚರ್ಮ ಸುಕ್ಕುಗಟ್ಟುವುದು, ಗಾಯಗಳು, ಅಲರ್ಜಿಗಳು ಶಮನವಾಗುವ ಮೂಲಕ ಚರ್ಮರೋಗಗಳಿಗೆ ಔಷಧಿಯಾಗಿದೆ.
ಕೆಸರುಗದ್ದೆ ಆಟ ಇಂದು ನಿನ್ನೆಯದ್ದಲ್ಲ. ರಾಜರ ಕಾಲದಿಂದ ನಡೆದುಕೊಂಡು ಬಂದಿದೆ. ಮುಂಗಾರಿನ ಕೃಷಿ ಚಟುವಟಿಕೆ ವೇಳೆ ರಾಜರು ಭತ್ತದ ಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರಂತೆ. ಅಂದಿನಿಂದ ನಮ್ಮ ಹಿರಿಯರು ಕೆಸರುಗದ್ದೆಯಲ್ಲಿ ಕ್ರೀಡಾಕೂಟವನ್ನು ನಡೆಸುವ ಸಂಪ್ರದಾಯವನ್ನು ಕಾರ್ಯರೂಪಕ್ಕೆ ತಂದರು. ಪ್ರತಿ ಗ್ರಾಮಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಸಂಪ್ರದಾಯಿಕವಾಗಿ ಆಚರಣೆ ಮಾಡುತ್ತಿದ್ದರು. ಗ್ರಾಮೀಣ ಭಾಗದಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಗಳಲ್ಲಿ ಜನರು ಭಾಗವಹಿಸಿ ಕುಣಿದು ಕುಪ್ಪಳಿಸಿ ಮನರಂಜನೆ ಪಡೆಯುತ್ತಿದ್ದರು. ಇಲ್ಲಿನ ಸ್ಪರ್ಧಿಗಳ ನಡುವೆ ಯಾವುದೇ ಪೈಪೋಟಿ ಇರದೆ, ಮನೋರಂಜನೆಯಷ್ಟೇ ಮುಖ್ಯವಾಗಿರುತ್ತಿತ್ತು. ಆದರೂ ಕ್ರೀಡಾ ವಿಜೇತರಿಗೆ ನಗದು, ಬಾಳೆಗೊನೆ, ತೆಂಗಿನ ಕಾಯಿ, ಎಲೆ-ಅಡಿಕೆ ನೀಡಿ ಪ್ರೋತ್ಸಾಹಿಸುತ್ತಿದ್ದರು. ಇಂದು ಗ್ರಾಮ ಗ್ರಾಮಗಳಲ್ಲಿ ನಡೆಯದಿದ್ದರೂ, ಕರಾವಳಿ ಮತ್ತು ಮಲೆನಾಡು ಪ್ರದೇಶದ ಹಲವು ಭಾಗಗಳಲ್ಲಿ ಸಾರ್ವಜನಿಕ ಕ್ರೀಡಾಕೂಟವಾಗಿ ನಡೆಯುತ್ತಿದೆ.
ಒಂದೆರಡಲ್ಲ ಹತ್ತಾರು ಆಟ: ಬಿಡುವಿಲ್ಲದ ಕೃಷಿ ಕೆಲಸದ ನಡುವೆಯೂ ಮನೋರಂಜನೆಗಾಗಿ ಏರ್ಪಡಿಸುವ ಕೆಸರುಗದ್ದೆ ಆಟ ನಗರ ಪ್ರದೇಶದ ಜನರಿಗೆ ತಿಳಿದಿಲ್ಲ. ತುಂತುರು ಮಳೆಯ ನಡುವೆ ಭತ್ತದ ಗದ್ದೆಯ ಆ ಕೆಸರಿನಲ್ಲಿ ಆಟವಾಡುವುದು ಎಂದರೆ ಒಂಥರಾ ಖುಷಿ, ಮಕ್ಕಳಿಗಿದು ನಿಜಕ್ಕೂ ಸಂಭ್ರಮ. ಕೆಸರು ಗದ್ದೆಯಲ್ಲಿಯೇ ನಿಂಬೆ ಹಣ್ಣು ಚಮಚ ಓಟ, ನೀರು ತುಂಬಿದ ಬಿಂದಿಗೆ ಹೊತ್ತು ಓಡುವುದು, ಹಿಮ್ಮುಖ ಓಟ, ಮೂರು ಕಾಲಿನ ಓಟ, ಮಡಕೆ ಒಡೆಯುವುದು, ಜಾನಪದ ನೃತ್ಯ ಮಾಡುವುದು, ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ ಮುಂತಾದ ಕ್ರೀಡಾ ಸ್ಪರ್ಧೆಗಳು ನಡೆಯುತ್ತವೆ. ಇದರಲ್ಲಿ ಜನರನ್ನು ಹೆಚ್ಚು ಆಕರ್ಷಿಸುವುದು ಹಗ್ಗಜಗ್ಗಾಟ ಮತ್ತು ವಾಲಿಬಾಲ್.
ಸುರಿಯುವ ತುಂತುರು ಮಳೆಯಲ್ಲಿ ಮೊಣಕಾಲುದ್ದದ ಕೆಸರಿನಲ್ಲಿ ಬಲಿಷ್ಠ ತಂಡಗಳು ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸೆಣಸಾಟದ ದೃಶ್ಯ ರೋಮಾಂಚನವನ್ನುಂಟು ಮಾಡುತ್ತದೆ. ಇನ್ನೂ ಕೆಸರಿನಲ್ಲಿ ಕಾಲೂರಲಾರದೇ ಚಿಮ್ಮಿ ಬಂದ ವಾಲಿಬಾಲನ್ನು ಒದ್ದು ಬಿದ್ದು ಗೆಲುವಿಗಾಗಿ ನಡೆಸುವ ಕಸರತ್ತು ನೋಡುಗರಿಗೆ ಖುಷಿ ನೀಡುತ್ತದೆ. ಈ ವೇಳೆ ಸ್ಪರ್ಧಾಳುಗಳು ಜಯ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಅದಕ್ಕೆ ಪ್ರೇಕ್ಷಕರು ಮತ್ತು ಕ್ರೀಡಾ ಪ್ರೇಮಿಗಳು ಚಪ್ಪಾಳೆ, ಶಿಳ್ಳೆಯ ಮೂಲಕ ಮತ್ತಷ್ಟು ಪುಷ್ಟಿ ನೀಡುತ್ತಾರೆ. ಒಬ್ಬರಿಗೊಬ್ಬರು ಕೆಸರೆರಚಿಕೊಂಡು, ಮೈಗೆಲ್ಲಾ ಮಣ್ಣು ಮೆತ್ತಿಕೊಂಡು ಇಡೀ ದಿನ ಕೆಸರಿನೊಳಗೆ ಗೆಲುವಿಗಾಗಿ ನಡೆಯುವ ಕಸರತ್ತು, ಉತ್ಸಾಹ, ಹುಮ್ಮಸ್ಸುಗಳೆಲ್ಲವೂ ಗ್ರಾಮೀಣ ಕ್ರೀಡೆಗಳ ಗತವೈಭವವನ್ನು ಸಾರುತ್ತದೆ. ಅಲ್ಲದೆ ಜೀವನದ ಜಂಜಾಟವನ್ನು ಮರೆತು ನಿಸರ್ಗದ ರಮಣೀಯ ತಾಣದ ಕೆಸರುಗದ್ದೆಯಲ್ಲಿ ನಡೆಯುವ ಕ್ರೀಡೆಗಳು ಪ್ರೇಕ್ಷಕರು ಹಾಗೂ ಕ್ರೀಡಾಪಟುಗಳಿಗೆ ಆನಂದವನ್ನುಂಟು ಮಾಡುತ್ತದೆ.
ಯೋಗೀಶ್ ತೀರ್ಥಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.