ಗಾಮನೂ… ಹೊನ್ನಾವರದ ಕಡಲ್ಗಳ್ಳನೂ…
ವಾಸ್ಕೋ ಡ ಗಾಮನ ಹಡಗು ದೋಚಿದ ಥ್ರಿಲ್ಲಿಂಗ್ ಸ್ಟೋರಿ
Team Udayavani, Aug 3, 2019, 5:09 AM IST
ಬಹುಶಃ ಆಧುನಿಕ ಭಾರತದ ಇತಿಹಾಸದ ಅತ್ಯಂತ ಪ್ರಸಿದ್ಧ ಪ್ರಶ್ನೆ ಎಂದರೆ, “ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದವನಾರು?’. ವಾಸ್ಕೋ ಡ ಗಾಮ..! ನಿಜ, ಎಲ್ಲರೂ ನಂಬಿರುವ ಸಂಗತಿಯಿದು. ಅದು ಜಾಗತಿಕ ಇತಿಹಾಸದ ಒಂದು ನೋಟ ಆಯಿತು. ಅದೇ ವಾಸ್ಕೋ ಡ ಗಾಮನ ಜಲಮಾರ್ಗದ ಇತಿಹಾಸವನ್ನು ಸ್ಥಳೀಯ ಇತಿಹಾಸದ ನೆಲೆಯಲ್ಲಿ ನೋಡುತ್ತಾ ಹೋದರೆ, ನಮಗೆ ತಿಳಿಯದ ಇನ್ನೊಂದು ಆಯಾಮವೇ ತೆರೆದುಕೊಳ್ಳುತ್ತದೆ. ಸ್ವತಃ ವಾಸ್ಕೋ ಡ ಗಾಮನೇ ತನ್ನ ವರದಿಯಲ್ಲಿ, ತಾನು ಭಾರತದ ಚಂದನ್ ಎಂಬ ವ್ಯಾಪಾರಿಯ ಸಹಾಯದಿಂದ, ಅವನ ಹಡಗನ್ನು ಹಿಂಬಾಲಿಸಿ ಬರುವ ಮೂಲಕ ಕಲ್ಲಿಕೋಟೆ (ಕ್ಯಾಲಿಕಟ್) ತಲುಪಿದೆ , ಎಂದು ಬರೆದುಕೊಂಡಿ¨ªಾನೆ.
ಕನ್ನಡದ ಕಡಲ ತೀರಕ್ಕೆ ಬಂದಾಗ…
ಗಾಮನು ಮೊಟ್ಟ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದು, 1497ರಲ್ಲಿ. ಪೋರ್ಚುಗಲ್‌ನ ಲಿಸºನ್‌ದಿಂದ ಜುಲೈ 8ಕ್ಕೆ ತನ್ನ ನೌಕಾಯಾತ್ರೆಯನ್ನ ನಾಲ್ಕು ಹಡಗುಗಳ ಮೂಲಕ 170 ಜನರೊಡನೆ ಪ್ರಾರಂಭಿಸುತ್ತಾನೆ. ನಂತರ ಮೇ 20, 1498ರಂದು ಕ್ಯಾಲಿಕಟ್‌ಗೆ ಬಂದು ತಲುಪುತ್ತಾನೆ ( ಭಾರತೀಯ ವ್ಯಾಪಾರಿಯ ಸಹಾಯದಿಂದ) ಅಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿದ್ದ ರಾಜ ಜಾಮೋರಿನ್‌ನ ಸ್ವಾಗತ ಸಿಗುತ್ತದೆ. ಮೇ 29ರ ವರೆಗೆ ಅಲ್ಲಿಯೇ ಉಳಿದು, ಮತ್ತೆ ಮುಂದೆ ತನ್ನ ಪ್ರಯಾಣವನ್ನು ಗೋವಾದತ್ತ ಬೆಳೆಸಿದ. ಮಾರ್ಗ ಮಧ್ಯದಲ್ಲಿ ಕುಂದಾಪುರದಲ್ಲಿ (ಉಡುಪಿಯ ಸಮೀಪ) ಸ್ವಲ್ಪ ಕಾಲ ತಂಗಿದ. ಅಲ್ಲಿ ಒಂದು ದ್ವೀಪಕ್ಕೆ ಸೇಂಟ್ ಮೇರಿ ದ್ವೀಪ ಎಂದೂ ಹೆಸರಿಟ್ಟ. ಅಲ್ಲದೆ, ಸ್ಥಳೀಯ ಜನರ ಒಪ್ಪಿಗೆ ಪಡೆದು, ಒಂದು ಶಿಲುಬೆಯನ್ನೂ ಸ್ಥಾಪಿಸಿದ!
ಗಾಮನ ಹಡಗು ದೋಚಿದ ಪ್ರಸಂಗ…
ಸೇಂಟ್ ಮೇರಿ ದ್ವೀಪದ ವಾಸ್ತವ್ಯದ ಬಳಿಕ, ಗಾಮನು ತಲುಪಿದ್ದು ಕಾರವಾರದ ಅಂಜಿªàವ್ ದ್ವೀಪಕ್ಕೆ! ಇದು ಕಾರವಾರದ ಚಿತ್ತಾಕುಲದಿಂದ 5 ಕಿ.ಮೀ. ದೂರದಲ್ಲಿದೆ. ನಿಸರ್ಗದ ಸಹಜ ಸೌಂದರ್ಯವನ್ನೆಲ್ಲಾ ತನ್ನೊಳಗೆ ಹುದುಗಿಸಿಟ್ಟುಕೊಂಡ ಮನೋಹರ ತಾಣವಿದು. 9ನೇ ಶತಮಾನದ ಅರಬ್ ವ್ಯಾಪಾರಿಗಳ ನೆಚ್ಚಿನ ವಿಶ್ರಾಂತಿ ತಾಣವಿದು. ವಾಸ್ಕೋ ಡ ಗಾಮನೂ ಇದರ ಸೌಂದರ್ಯಕ್ಕೆ ಮಾರುಹೋದ. ಅಲ್ಲಿಯೇ ಕೆಲ ಕಾಲ ತಂಗಿದ. ಆ ಸಂದರ್ಭದಲ್ಲಿ ಗಾಮನಿಗೆ, ಚಿತ್ತಾಕುಲದ ಒಬ್ಬ ಮುಸ್ಲಿಂ ವ್ಯಕ್ತಿ, ಮೀನಿನ ಊಟವನ್ನು ಪೂರೈಕೆ ಮಾಡುತ್ತಿದ್ದ! ಹೀಗೆ, ಅಂಜಿವ್ ದ್ವೀಪದಲ್ಲಿ 170 ಪೋರ್ಚುಗೀಸರು ಬಂದು ಉಳಿದುಕೊಂಡ ವಿಚಾರ ಸುತ್ತಲಿನ ಪ್ರದೇಶಗಳಿಗೆಲ್ಲಾ ಪಸರಿಸಿತು. ಅತಿ ಮುಖ್ಯವಾಗಿ. ಈ ವಿಚಾರ ಅಲ್ಲಿನ ಪ್ರಸಿದ್ಧ ಕಡಲ್ಗಳ್ಳನಾದ ತಿಮ್ಮಯ್ಯನಿಗೆ (ತಿಮ್ಮೊಜಿ) ತಿಳಿಯಿತು. ಅವನು ತನ್ನ ಗುಂಪಿನೊಂದಿಗೆ ಅಂಜಿವ್‌ಗೆ ಬಂದು ವಾಸ್ಕೋ ಡ ಗಾಮನ ತಂಡದ ಮೇಲೆ ದಾಳಿ ಮಾಡಿದ. ಎರಡೂ ತಂಡದವರಿಗೂ ಭಾರಿ ಸಂಘರ್ಷವೇ ನಡೆಯಿತು. ಕೊನೆಗೆ ಗಾಮನು ತನ್ನ ಬಳಿ ಇದ್ದ 20 ಗನ್‌ಗಳ ನೆರವಿನೊಂದಿಗೆ ತಿಮ್ಮಯ್ಯನಿಂದ ಪಾರಾದ! ಆದರೆ, ಹೆದರಿ ಮರಳಿದ! ಈ ವೇಳೆ ತಿಮ್ಮಯ್ಯ ತಾನು ಲೂಟಿ ಮಾಡಿದ್ದರಲ್ಲಿ ಅರ್ಧ ಭಾಗವನ್ನು ಗೇರುಸೊಪ್ಪೆಯ ಅರಸನಿಗೆ ಕೊಟ್ಟ.
ಇಂಥ ಕಡಲ್ಗಳ್ಳ ಸಾಹಸದಿಂದಲೇ ತನ್ನನ್ನು ರಕ್ಷಿಸಿಕೊಳ್ಳುತ್ತಿದ್ದ ತಿಮ್ಮಯ್ಯನ ಚಾಣಾಕ್ಷತೆ ಬಗ್ಗೆ ಗಾಮ ತಿಳಿದುಕೊಂಡೇ ಪೋರ್ಚುಗಲ್‌ಗೆ ಹಿಂತಿರುಗಿದ್ದ. ತಿಮ್ಮಯ್ಯನ ದಾಳಿಯ ಕಾರಣಕ್ಕೆ, ಹಡಗಿನಲ್ಲಿ ಅಳಿದುಳಿದ ಸಂಪತ್ತಿನೊಂದಿಗೇ ಆತ ಹಿಂತಿರುಗಬೇಕಾಯಿತು.
ಹುಷಾರ್, ತಿಮ್ಮಯ್ಯ ಇದ್ದಾನೆ!
ಗಾಮನು, ಪೋರ್ಚುಗಲ್ ತಲುಪಿ, ಇಲ್ಲಿನ ಸಂಪತ್ತಿನ ಸಮೃದ್ಧತೆಯನ್ನು ಸಾರಿದ ಪರಿಣಾಮವೋ ಏನೋ, ನಂತರ ಭಾರತವನ್ನು ಕೊಳ್ಳೆ ಹೊಡೆಯಲು ಪೋರ್ಚುಗಲ್‌ನಿಂದ ನೌಕಾಯಾನದ ಸರಣಿಯೇ ಪ್ರಾರಂಭವಾಗಿಬಿಟ್ಟಿತು. ಉದಾಹರಣೆಗೆ, ಮಾರ್ಚ್ 9, 1500ರಲ್ಲಿ ಪೆಡ್ರೋ ಅಲ್ವರೀಸ್, 13 ಹಡಗುಗಳಲ್ಲಿ 1200 ಜನರೊಂದಿಗೆ ಬಂದ. ಹೀಗೆ ಬಂದವರೆಲ್ಲ ಎರಡು ವರ್ಷಗಳ ಕಾಲ ಉಳಿದಿದ್ದು, ಇದೇ ಅಂಜಿªàವ್ ದ್ವೀಪದಲ್ಲಿಯೇ! ಅವರಿಗೆಲ್ಲ ಆಹಾರ ಇನ್ನಿತರ ಸಾಮಾನುಗಳೆಲ್ಲ ಪೂರೈಕೆಯಾಗುತ್ತಿದ್ದುದೂ ಚಿತ್ತಾಕುಲದಿಂದಲೇ! ಇವರ ಮೇಲೂ ಅದೇ ಕಡಲ್ಗಳ್ಳ ತಿಮ್ಮಯ್ಯ ದಾಳಿ ಮಾಡಿ, ಅವರನ್ನೂ ಓಡಿಸಿದ್ದ!
ಗಾಮ ಎರಡನೇ ಸಲ ಬಂದಾಗ…
ವಾಸ್ಕೋ ಡ ಗಾಮ ಎರಡನೇ ಬಾರಿ ಅಂದರೆ, 1503ರಂದು ಭಾರತ ಯಾತ್ರೆ ಕೈಗೊಂಡ. ಈ ಬಾರಿ ಆತ ಒಂದು ಉಪಾಯ ಮಾಡಿಕೊಂಡೇ ಬಂದಿದ್ದ.ತಿಮ್ಮಯ್ಯನ ಬಗ್ಗೆ ಅಪಾರ ಮಾಹಿತಿ ಪಡೆದುಕೊಂಡಿದ್ದ. ತಾನು ಇಲ್ಲಿ ನಿರಾತಂಕವಾಗಿ ಇರಬೇಕೆಂದರೆ, ತಿಮ್ಮಯ್ಯನನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳಬೇಕೆಂದು ಯೋಚಿಸಿ, ತಿಮ್ಮಯ್ಯನ ಜೊತೆ ಒಪ್ಪಂದವನ್ನೂ ಮಾಡಿಕೊಂಡುಬಿಟ್ಟ. ನಂತರ ಗಾಮ ಇಲ್ಲಿ ಗಟ್ಟಿಯಾಗಿ ನೆಲೆನಿಂತು ಭಟ್ಕಳದ ಮೇಲೆ ದಾಳಿ ನಡೆಸಿದ. ಅಲ್ಲಿನ ಮುಸ್ಲಿಮರ ಹಡಗುಗಳನ್ನು ಧ್ವಂಸ ಮಾಡಿದ. ಅಲ್ಲಿನ ರಾಜನೂ ಇವನಿಗೆ ಶರಣಾದ. ಇದೆಲ್ಲದಕ್ಕೂ ಕಾರಣ, ಈ ತಿಮ್ಮಯ್ಯನೇ! ನಂತರ ಇದೇ ತಿಮ್ಮಯ್ಯನ ಸಹಾಯದಿಂದಲೇ ಚಿತ್ತಾಕುಲವನ್ನೂ ಗಾಮ ವಶಪಡಿಸಿಕೊಂಡ.
ನಾವು ಭಾರತದಲ್ಲಿ ಯುರೋಪಿಯನ್ನರ ಚರಿತ್ರೆಯನ್ನು ಕೇವಲ ಒಂದು ಮುಖದಲ್ಲಿ ಮಾತ್ರ ನೋಡುತ್ತಿದ್ದೇವೆ. ಆದರೆ, ಅದನ್ನು ಮೀರಿದ ಹಲವಾರು ಕೌತುಕಮಯ ಆಯಾಮಗಳು ಇದಕ್ಕೆ ಹೊಂದಿಕೊಂಡಿರುತ್ತವೆ. ಅದಕ್ಕೆ ಈ ಸಂಗತಿಯೇ ಒಂದು ಪುಟ್ಟ ನಿದರ್ಶನ. ಇದುವೇ ಸ್ಥಳೀಯ ಚರಿತ್ರೆಯ ವಿಶೇಷತೆ. ಈ ಸಂಗತಿಗಳೆಲ್ಲವನ್ನೂ ಸ್ವತಃ ವಾಸ್ಕೋ ಡ ಗಾಮ ದಾಖಲಿಸಿದ್ದು, ಬ್ರಿಟಿಷ್ ಲೈಬ್ರರಿಯಲ್ಲೂ ಇದಕ್ಕೆ ಪುರಾವೆಗಳು ಸಿಗುತ್ತವೆ. ಆದರೆ, ಇದು ಹೆಚ್ಚಿನವರ ಗಮನಕ್ಕೆ ಬಾರದೇ ಇರುವುದು ಮಾತ್ರ ದುರದೃಷ್ಟಕರ.
– ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸ ಸಂಶೋಧಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.