ಗೋರಿಕೆ ಪೀಚೆ ಕ್ಯಾಹೈ ?
Team Udayavani, Oct 14, 2017, 2:38 PM IST
“ಹೋಗು. ಎಲ್ಲಾ ಬಿಟ್ಟು ಹೋಗು. ನಮ್ಮನ್ನು ಮರೆಯಬೇಡ. ನಾಳೆ ನಾವೆಲ್ಲರೂ ನಿನ್ನವರಾಗುತ್ತೇವೆ’ ಎಂದು ತನ್ನ 13 ದಿನದ ಹಸುಳೆಯ ಬಗ್ಗೆ ತಂದೆ ಕೆತ್ತಿಸಿರುವ ಚರಮಗೀತೆಯ ಗೋರಿ, ಅದರ ಪಕ್ಕದಲ್ಲಿಯೇ ಆ ಮಗುವಿನ ತಾಯಿಯ ಗೋರಿ, ಅಲ್ಲೇ ಸಮೀಪದಲ್ಲಿ ನದಿಯ ದುರಂತದಲ್ಲಿ ಸಾವಿಗೀಡಾದ ಇಬ್ಬರು ಗೆಳೆಯರ ಒಂದೇ ಗೋರಿ, ಪಕ್ಕದಲ್ಲಿ ಕಾಲರಾ ಬೇನೆಗೆ ತುತ್ತಾದ ಯುವತಿಯೋರ್ವಳ ಗೋರಿ.
ಹೀಗೆ ಒಂದಲ್ಲಾ.. ಎರಡಲ್ಲಾ 64 ಗೋರಿಗಳ ಸಮೂಹದಲ್ಲಿರುವ ಗೋರಿಗಳ ಕಥೆ-ವ್ಯಥೆಗಳ ಸ್ಥಳವೊಂದು ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿದೆ. ಅಲ್ಲಿ ಕಾಲಿಟ್ಟರೆ ಅದ್ಯಾವುದೋ ಅರಿಯದ ನೋವು, ವಿಷಾಧ ಜೊತೆಯಾಗುತ್ತದೆ. ಅಂದಹಾಗೆ, ಇಲ್ಲಿ ಸಮಾಧಿಯಾದವರು ನಮ್ಮವರಲ್ಲ. ನಮ್ಮನ್ನಾಳಲು ಬಂದು ಇಲ್ಲಿಯ ಮಣ್ಣಲ್ಲಿ ಮಣ್ಣಾದ ಬ್ರಿಟೀಷ್ ಅಧಿಕಾರಿಗಳ, ಮತ್ತವರ ಪರಿವಾರದವರ ಗೋರಿಗಳಿರುವು.
ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ತಮ್ಮ ಸೈನ್ಯವನ್ನು ಕೇಂದ್ರೀಕರಿಸಲು 1820ರ ಸುಮಾರಿಗೆ ಕಲಾದಗಿಯನ್ನು ಆಯ್ಕೆಮಾಡಿಕೊಂಡರು ಬ್ರಿಟೀಷರು. ಆನಂತರ 1864 ರಿಂದ 1884 ರವರೆಗೆ ಇದನ್ನೇ ಜಿಲ್ಲಾ ಕೇಂದ್ರವನ್ನಾಗಿ ಮಾಡಿದರು. ಆ ದಿನಗಳಲ್ಲಿ ಇಲ್ಲಿ ನೆಲೆ ಊರಿದ ಸೈನ್ಯಾಧಿಕಾರಿಗಳ, ಮತ್ತವರ ಪರಿವಾರದವರ ಗೋರಿಗಳ ಸಮೂಹಗಳು ಕಲಾದಗಿಯಲ್ಲಿವೆ. ಅವುಗಳ ಎದುರಿಗೆ ನಿಂತರೆ ಒಂದೊಂದು ಗೋರಿಯಲ್ಲೂ ನಾನಾ ಕಥೆಗಳಿವೆ. ನೆನಪುಗಳಿವೆ.
ಇಲ್ಲಿನ ಅಂಬೇಡ್ಕರ್ ಸರ್ಕಲ್ ಬಳಿ ಮತ್ತು ಊರ ಬೈಪಾಸ್ ರಸ್ತೆಯ ಪಕ್ಕದಲ್ಲಿ ಬ್ರಿಟೀಷರ ಗೋರಿಗಳ ಸಮೂಹವಿದೆ. ಸ್ಥಳೀಯರಿಂದ ಫಿರಂಗಿಯರ ಗೋರಿಗಳು ಎಂದು ಕರೆಸಿಕೊಳ್ಳುವ ಇವುಗಳು ಇಂದು ದಯನೀಯ ಸ್ಥಿತಿಯಲ್ಲಿವೆ. ಅಂಬೇಡ್ಕರ್ ಸರ್ಕಲ್ ಬಳಿ ಹೋಟೆಲ್-ಮನೆಗಳ ಹಿಂಭಾಗದಲ್ಲಿ, ಕೊಳಚೆ ನೀರು, ಕಸ-ಕಡ್ಡಿ, ಗಿಡ-ಗಂಟೆಗಳಿಂದ ಆವೃತ್ತವಾಗಿರುವ ಗೋರಿಗಳ ಬಳಿ ಹೋಗಲು ಕಷ್ಟಕರ. ಆದರೆ ಹೊರ ರಸ್ತೆಯಲ್ಲಿ ತುಸು ಒಳಭಾಗದಲ್ಲಿರುವ ಗೋರಿಗಳ ಬಳಿ ಸಮೂಹದತ್ತ ಹೋಗಲು ಸಾಧ್ಯವಿದೆ. ಆದರೆ ಅವುಗಳು ಸಹ ಮುಳ್ಳು ಗಿಡಗಳಿಂದ ಭಾಗಶಃ ಮುಚ್ಚಿಹೋಗಿವೆ.
ಹಾಳು ಸ್ಥಿತಿಯಲ್ಲಿರುವ ಭಿನ್ನ ಗೋರಿಗಳು
ಎತ್ತರಕ್ಕೆ ನಿಂತ ಬೃಹತ್ ಗೋಡೆಗಳ ನಡುವೆ 64 ಗೋರಿಗಳಿವೆ. ಒಂದು ಗೋರಿಯಂತೆ ಮತ್ತೂಂದು ಇಲ್ಲದಿರುವುದು ಇವುಗಳ ವಿಶೇಷ. ಪ್ರತಿಗೋರಿಯ ಮೇಲೆಯೂ ಸತ್ತ ವ್ಯಕ್ತಿಗಳ ವಿವರಣೆಗಳಿವೆ. ಚರಮಗೀತೆಗಳನ್ನೂ ಕೆತ್ತಲಾಗಿದೆ. 1821 ರಿಂದ 1890ರ ವರೆಗಿನ ಕಾಲಾವಧಿಯಲ್ಲಿ ನಿರ್ಮಾಣವಾದ 64 ಗೋರಿಗಳನ್ನು ನಾವಿಲ್ಲಿ ಕಾಣಬಹುದು.
ಇಲ್ಲಿನ ಗೋರಿಗಳನ್ನು ನೋಡುವಾಗ ಮತ್ತು ಅವುಗಳ ಮೇಲೆ ಕೆತ್ತಿರುವ ಫಲಕಗಳನ್ನು ಓದುವಾಗ ಮನಸ್ಸು ಮೂಕವಾಗುತ್ತದೆ. ಕಾರಣ ಅವು ಹೇಳುವ ಸಾವಿನ ಕಥೆಗಳು. 1821 ರಲ್ಲಿ ಸಾವನ್ನಪ್ಪಿದ ಮೇರಿ ಆನ್ನೆ ಮತ್ತು ಕ್ಯಾಪ್ಟನ್ ಹೆನ್ರಿ ರೈಸ್ ರ 13 ತಿಂಗಳ ಮಗು ಪೌಲಿನನ ಗೋರಿಇದೆ. ಈ ಗೋರಿಯ ಮೇಲೆಯೇ ಪ್ರಾರಂಭದಲ್ಲಿ ಹೇಳಿದ ಮನಕಲುಕುವ ಮರಣ ಶಾಸನವಿರುವುದು. ಇಲ್ಲಿನ ಎತ್ತರದ ಮತ್ತೂಂದು ಗೋರಿಯಲ್ಲಿ ಒಬ್ಬರಲ್ಲ.
ಇಬ್ಬರೂ ಒಂದೇ ಕಡೆ ಮಣ್ಣಲ್ಲಿ ಮಣ್ಣಾಗಿದ್ದಾರೆ. ಊರದಂಡೆಯಲ್ಲಿ ಹರಿಯುತ್ತಿದ್ದ ಘಟಪ್ರಭೆಯಲ್ಲಿ ನೀರಿನಾಟವಾಡಲು ಹೋದ ಇಬ್ಬರು ಯುವ ಅಧಿಕಾರಿಗಳು ನೀರಿನಲ್ಲಿ ಸಾವನ್ನಪ್ಪುತ್ತಾರೆ. ಅವರಿಬ್ಬರನ್ನೂ ಒಂದೇ ಗೋರಿಯಲ್ಲಿ ಹೂಳಲಾಗಿದೆ. “ನಮ್ಮನ್ನು ಬಹು ದರ್ಪದಿಂದ ಆಳಲು ಬಂದ ಬ್ರಿಟೀಷರು ಕೂಡಾ ಸಾವು ಬಂದಾಗ ಕೇವಲ ಮನುಷ್ಯರು ಎಂಬುದನ್ನು ಇವು ಸೂಚಿಸುತ್ತವೆ.
ಸಾವಿನ ಸಮಾಜವಾದಕ್ಕೆ ಚರ್ಕವರ್ತಿ, ಮಗು, ಹೆಂಡತಿ, ಸೈನಿಕ, ದೊಡ್ಡವ, ಸಣ್ಣವ ಎಂಬ ಫರಕೆಲ್ಲಿಯದು ” ಎಂದು ಈ ಗೋರಿಗಳ ನಡುವೆ ನಿಂತು ವಿಷಾದದಿಂದ ಹೇಳುತ್ತಾರೆ ಖ್ಯಾತ ಬರಹಗಾರ ಡಾ.ರಹಮತ್ ತರೀಕೆರೆ. 1960ರ ವರೆಗೂ ಇದನ್ನು ಕ್ರಿಶ್ಚಿಯನ್ನರು ಸಂರಕ್ಷಿಸಿದ್ದರು, ಮಾಲಿಯೊಬ್ಬ ಇದನ್ನು ಕಾಯುತ್ತಿದ್ದ. ಇಲ್ಲೆಲ್ಲಾ ಹೂಗಿಡಗಳನ್ನು ಬೆಳೆಸಿದ್ದ ಎಂದು ನೆನಪಿಸಿಕೊಳ್ಳುತ್ತಾರೆ. ಬ್ರಿಟೀಷರೊಂದಿಗೆ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿದ್ದ ಇಲ್ಲಿನ 95 ವರ್ಷದ ರಿಯ ಭೀಮರಾವ್ ಕುಲಕರ್ಣಿ. ಆನಂತರ ಏನಾಯಿತೋ, ಇದು ಹಾಳಾಗಲಾರಂಭಿಸಿತು.
ನಿಧಿ ಆಸೆಗಾಗಿ ಗೋರಿಗಳನ್ನು ಅವುಗಳ ಮೇಲಿನ ಫಲಕವನ್ನು ಕಿತ್ತೆಸೆಯಲಾುತು. ತಮ್ಮ ಪೂರ್ವಜರ ಗೋರಿಗಳನ್ನು ನೋಡಿ ಅವುಗಳಿಗೆ ಗೌರಸಲು ದೇಶದಿಂದ ಅನೇಕರು ಇಲ್ಲಿಗೆ ಬರುತ್ತಿರುತ್ತಾರೆ ಎಂದು ಬರಹಗಾರ ದ.ರಾ.ಪುರೋತ್ ಹೇಳುತ್ತಾರೆ. ಇಲ್ಲಿಗೆ ಬರುವ ಗಣ್ಯರು, ಇತಿಹಾಸಕಾರರು, ಪಾದ್ರಿಗಳು, ಅಧಿಕಾರಿಗಳು ಇದರ ದುಃಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಅದೇಕೋ ಇನ್ನೂ ಕಾರ್ಯಗತವಾಗುತ್ತಿಲ್ಲ.
* ಪ್ರವೀಣರಾಜು ಎಸ್.ಸೊನ್ನದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.