ಕರಿಘಟ್ಟದಲ್ಲಿ ಹಸಿರು ಕ್ರಾಂತಿ
Team Udayavani, Dec 2, 2017, 3:11 PM IST
ಬೋಳಾಗಿರುವ ಸ್ಥಳದಲ್ಲಿ ಹಸಿರು ಚಿಮ್ಮುವಂತೆ ಮಾಡಬೇಕೆಂಬ ಉದ್ದೇಶದಿಂದ ರಮೇಶ್ ಗಿಡಗಳನ್ನು ನೆಡುತ್ತಿದ್ದಾರೆ. ಆ ಗಿಡಗಳನ್ನು ಜೋಪಾನ ಮಾಡುವ, ಅವುಗಳಿಗೆ ತಪ್ಪದೇ ನೀರುಣಿಸುವ ಕೆಲಸವನ್ನು ಶ್ರದ್ದೇ, ಉತ್ಸಾಹದಿಂದ ಮಾಡುತ್ತಿದ್ದಾರೆ.
ಶ್ರೀರಂಗಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಕರಿಘಟ್ಟಕ್ಕೆ ಬಸ್ಸು, ಕಾರುಗಳ ಮೂಲಕ ಪ್ರಯಾಣಿಸಬಹುದು. ಬೆಟ್ಟವನ್ನು ಹತ್ತಲು ಸುಮಾರು 400 ಮೆಟ್ಟಿಲುಗಳಿವೆ. ಬೆಟ್ಟದಲ್ಲಿ ಸುಂದರವಾದ ಶ್ರೀನಿವಾಸ ದೇವಾಲಯವಿದೆ. ಇಲ್ಲಿನ ದೇವರ ಮೂರ್ತಿಯನ್ನು ಭೃಗು ಮಹರ್ಷಿಯು ಸ್ಥಾಪಿಸಿದರೆಂಬ ನಂಬಿಕೆಯಿದೆ. ಹನುಮಂತನು ಸಂಜೀವಿನಿ ಪರ್ವತವನ್ನು ಒಯ್ಯುತ್ತಿರುವಾಗ ಬೆಟ್ಟದ ಭಾಗವೊಂದು ಇಲ್ಲಿ ಬಿದ್ದ ಕಾರಣದಿಂದಲೇ ಕರಿಘಟ್ಟ ಸೃಷ್ಟಿಯಾಯಿತೆಂಬ ಪ್ರತೀತಿ ಇದೆ. ಇಲ್ಲಿ ಬಹಳಷ್ಟು ಔಷಧೀಯ ಸಸ್ಯಗಳಿವೆ ಎಂಬ ನಂಬಿಕೆಯೂ ಇದೆ. ಅನತಿ ದೂರದಲ್ಲಿ ಚಾರಣಾಸಕ್ತರಿಗಾಗಿ ಪುಟ್ಟ ಬೆಟ್ಟವೊಂದಿದೆ. ಅದನ್ನು ಏರಿದಾಗ ಕಾಣಸಿಗುವ ಸುತ್ತಮುತ್ತಲಿನ ದೃಶ್ಯಗಳು ಬಲು ಸೊಗಸು. ದೂರದಲ್ಲಿ ಕಾಣಿಸುವ ಕಾವೇರಿ ನದಿಯ ತಟದಿಂದ ಬೀಸಿ ಬರುವ ತಂಗಾಳಿ ಬೆಟ್ಟಹತ್ತಿ ಬಂದ ಆಯಾಸವನ್ನು ಪರಿಹರಿಸುತ್ತದೆ.
ಇಂತಿಪ್ಪ ಕರಿಘಟ್ಟದಲ್ಲಿ ಒಂದಷ್ಟು ಗಿಡಗಳು ಕಂಡರೆ ಹತ್ತಿರ ಹೋಗಿ ನೋಡಿ. ಅದರ ಬುಡದಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಇದ್ದರೆ ಕಿತ್ತೆಸೆಯಬೇಡಿ. ಅದು ಆ ಗಿಡಗಳಿಗೆ ನೀರುಣಿಸಲು ರಮೇಶ್ ಮಾಡಿರುವ ಪ್ಲಾನ್.
ಹೌದು, ಕರಿಘಟ್ಟದ ರಮೇಶ್ ಪರಿಸರ ಸಂರಕ್ಷಣೆಗೆ ಮಾಡಿರುವ ಉಪಾಯ ಇದು. ಗುಡ್ಡದ ಬೋಳು ಬೋಳಾದ ಸ್ಥಳದಲ್ಲಿ ಹಸಿರು ಚಿಗುರಿಸುವ ಪ್ರಯತ್ನ ಇದು. ಅವರು ಸ್ವಯಂಪ್ರೇರಿತರಾಗಿ ವರುಷಕ್ಕೆ ಇನ್ನೂರು ಗಿಡಗಳನ್ನು ನೆಡುತ್ತಿದ್ದಾರೆ. ಬರೀ ನೆಟ್ಟು ಮರೆತು ಹೋಗುವುದಿಲ್ಲ. ಅದನ್ನು ಪೋಷಿಸುವ ಜವಾಬ್ದಾರಿಯನ್ನೂ ಹೆಗಲ ಮೇಲೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಗಿಡ ನೆಟ್ಟಿದ್ದಾರೆ. ಎಲ್ಲವೂ ಮರವಾಗುವ ಪ್ರಕ್ರಿಯೆಯಲ್ಲಿವೆ.
ರಮೇಶ್ ಇಷ್ಟವಾಗುವುದು ಅವರು ಗಿಡ ನೆಟ್ಟು ಪೋಷಿಸುವ ಕಾರ್ಯವೈಖರಿಯಿಂದ. ಎಲ್ಲಾ ಗಿಡಗಳಿಗೂ ಖಾಲಿ ಬಾಟಲ್ ಗಳನ್ನು ಕಟ್ಟಿ ಹನಿ ನೀರಾವರಿಯ ವ್ಯವಸ್ಥೆ ಮಾಡಿದ್ದಾರೆ. ನೀರನ್ನು ತರುವುದು ಇವರೇ. ಕಾವೇರಿ ನದಿಯಿಂದ ಹೊತ್ತು ತಂದು ಬಾಟಲ್ ಗಳಿಗೆ ತುಂಬಿಸಿ ಗಿಡಗಳಿಗೆ ನೀರುಣಿಸುತ್ತಾರೆ. ಬೆಟ್ಟದ ಬುಡದಲ್ಲಿ ಔಷಧೀಯ ಗುಣಗಳುಳ್ಳ ಮೂಲಿಕಾಸಸ್ಯಗಳನ್ನೂ ನೆಟ್ಟಿದ್ದಾರೆ. ಕೆಲವು ಗಿಡಗಳ ರೆಂಬೆಗಳಿಗೆ ಮಣ್ಣಿನ ತಟ್ಟೆಗಳನ್ನು ಕಟ್ಟಿ ಅವುಗಳಲ್ಲಿ ಸಿರಿಧಾನ್ಯಗಳನ್ನಿಟ್ಟು ಪಕ್ಷಿಗಳಿಗೂ ಆಹಾರವಾಗುವಂತೆ ವ್ಯವಸ್ಥೆ ಮಾಡಿದ್ದಾರೆ. ಇನ್ನು ಕೆಲವು ಗಿಡಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಬರಹಗಳುಳ್ಳ ಫಲಕಗಳನ್ನೂ ಜೋಡಿಸಿರುವುದರಿಂದ ಗಿಡ ನೋಡುವವರಿಗೆ ಅದರ ಬಗ್ಗೆ ಮಾಹಿತಿ ಸಿಕ್ಕಂತೆ ಆಗುತ್ತದೆ. ಇವೆಲ್ಲದರ ಜೊತೆಗೆ, ಅಕ್ಕಪಕ್ಕದ ಗ್ರಾಮಗಳಲ್ಲಿ, ಬೆಟ್ಟಕ್ಕೆ ಬೆಂಕಿ ಬಿದ್ದಾಗ ಆಗುವ ಪರಿಸರ ಹಾನಿಯ ಬಗ್ಗೆ ಅರಿವು ಮೂಡಿಸಲು ಕರಪತ್ರಗಳನ್ನು ಹಂಚುತ್ತಾರೆ.
ರಮೇಶ್ ನಿರುಪಯುಕ್ತವಾದ ಖಾಲಿ ಬಾಟಲಿಗಳಿಗೆ ಪುಟ್ಟ ಪೈಪ್‌ಗ್ಳನ್ನು ಅಳವಡಿಸಿ ಗಿಡಗಳಿಗೆ ಹನಿ ನೀರಾವರಿ ಮಾಡುತ್ತಿರುವ ವಿಶಿಷ್ಟ ಶೈಲಿ ಅನುಕರಣೀಯ. ನೀರಿನ ಮಿತವ್ಯಯದ ಜೊತೆಗೆ ಪ್ಲಾಸ್ಟಿಸ್ ಕಸದ ಮರು ಉಪಯೋಗವೂ ಆಗುತ್ತದೆ.
ಪ್ರತಿ ಊರಿನಲ್ಲಿಯೂ ಬೆಟ್ಟ ಗುಡ್ಡ ಗಳಿರುತ್ತವೆ. ವೀಕೆಂಡ್ ಟ್ರಿಪ್ ಹೋಗುವವರು ಇಂಥ ಸಣ್ಣ ಬೆಟ್ಟವೊಂದಕ್ಕೆ ಚಾರಣ, ದೇವಾಲಯದ ಭೇಟಿ ಹಾಗೂ ಪ್ರಕೃತಿಯ ನಡುವೆ ಶ್ರಮದಾನ ಮಾಡುವ ಮೂಲಕ ವಾರಾಂತ್ಯವನ್ನು ಸಂಪನ್ನವಾಗಿಸಬೇಕೆ ?
ಅಲ್ಲಿ ಹೋಗಿ ಗಿಡಗಳನ್ನು ನೆಟ್ಟು ಪೋಷಿಸುವ ಹವ್ಯಾಸವನ್ನು ಬೆಳೆಸಿಕೊಂಡರೆ ವರ್ಷವಿಡೀ ವನಮಹೋತ್ಸವವಾಗಬಲ್ಲದು ಅನ್ನೋದಕ್ಕೆ ರಮೇಶ್ ಪ್ರಯತ್ನವೇ ಉದಾಹರಣೆ.
ಹೇಮಮಾಲಾ.ಬಿ.
ಆಸಕ್ತರು ರಮೇಶ್ (8123331332) ಅವರನ್ನು ಮುಂಚಿತವಾದ ಸಂಪರ್ಕಿಸಿ, ಅವರ ಮಾರ್ಗದರ್ಶನದಲ್ಲಿ ಸಸಿಗಳ ನೆಡುವಿಕೆ, ಪೋಷಣೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ‘ಶ್ರಮದಾನ’ ಮಾಡಬಹುದು..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.