ಹರೇ ಕೃಷ್ಣನ ಅಕ್ಷಯ ಪಾತ್ರೆ
ದೇವರ ಪಾಕಶಾಲೆ- ಇಸ್ಕಾನ್, ಬೆಂಗಳೂರು
Team Udayavani, Aug 24, 2019, 5:18 AM IST
ರಾಜಧಾನಿ ಬೆಂಗಳೂರಿಗೆ ಬಂದವರೆಲ್ಲರೂ ಭೇಟಿ ನೀಡುವ ದೇವಸ್ಥಾನ, ಶ್ರೀ ರಾಧಾಕೃಷ್ಣ ಮಂದಿರ ಅಥವಾ ಇಸ್ಕಾನ್. ರಾಜಾಜಿನಗರದ ಹರೇ ಕೃಷ್ಣ ಬೆಟ್ಟದ ಮೇಲಿರುವ ಈ ದೇಗುಲ, ಜಗತ್ತಿನಾದ್ಯಂತ ಇರುವ ಇಸ್ಕಾನ್ (ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್) ದೇವಾಲಯಗಳಲ್ಲಿ ಅತಿ ದೊಡ್ಡದು. ಅಕ್ಷಯ ಪಾತ್ರೆಯೆಂಬ ಯೋಜನೆಯಿಂದ ಹಸಿದವರಿಗೆ ಅನ್ನ ನೀಡುವ ಈ ಪುಣ್ಯಧಾಮದ ಅಡುಗೆ ಮನೆ ಕತೆಯೂ ಅಷ್ಟೇ ಆಸಕ್ತಿದಾಯಕ…
ನಿತ್ಯ ಎಷ್ಟು ಮಂದಿಗೆ ಊಟ?
ಪ್ರತಿನಿತ್ಯ ಇಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸವಿಯುತ್ತಾರೆ. ಶನಿವಾರ- ಭಾನುವಾರ ಸೇರಿದಂತೆ ಇತರೆ ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ 3 ಸಾವಿರವನ್ನು ದಾಟುತ್ತದೆ. ಕೃಷ್ಣ ಜನ್ಮಾಷ್ಟಮಿ ಮತ್ತು ಹಬ್ಬ-ಹರಿದಿನಗಳ ವೇಳೆ ಭಕ್ತರ ಸಂಖ್ಯೆ ಹೆಚ್ಚುತ್ತದೆ. ಒಟ್ಟಿಗೆ 300 ಜನರು ಕುಳಿತುಕೊಳ್ಳಬಹುದಾದ ಊಟದ ಹಾಲ್‌ನಲ್ಲಿ ಟೇಬಲ್-ಖುರ್ಚಿ ಮತ್ತು ಸೆಮಿ ಎಸಿ ವ್ಯವಸ್ಥೆ ಇದೆ.
ಒಂದು ಹೊತ್ತು ದಾಸೋಹ
ವರ್ಷದ 365 ದಿನವೂ, ದೇವಸ್ಥಾನಕ್ಕೆ ಬಂದ ಭಕ್ತರಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆ ಇದೆ.
ಬೆಳಗ್ಗೆ: 11.30-2.30 ದಾಸೋಹದ ಸಮಯ.
ದಾಸೋಹದ ಹಿಂದಿನ ಕೈಗಳು
ಪಾಕಶಾಲೆಯಲ್ಲಿ ಪ್ರತಿನಿತ್ಯ 24 ಜನ ಬಾಣಸಿಗರು ಹಾಗೂ 20 ಜನ ಸಹಾಯಕರು ಕೆಲಸ ಮಾಡುತ್ತಾರೆ. ವಾರಾಂತ್ಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ, ಅಡುಗೆ ಮತ್ತು ಬಡಿಸುವ ಕೆಲಸದಲ್ಲಿ ಸ್ವಯಂ ಸೇವಕರು ಕೈ ಜೋಡಿಸುತ್ತಾರೆ. ಸ್ವಯಂ ಸೇವಕರಲ್ಲಿ, ಮೆಡಿಕಲ್ ವಿದ್ಯಾರ್ಥಿಗಳು, ಐಟಿ ಉದ್ಯೋಗಸ್ಥರೇ ಹೆಚ್ಚಿರುತ್ತಾರೆ.
ಭಕ್ಷ್ಯ ವಿಚಾರ
ಭೋಜನಕ್ಕೆ ಅನ್ನ- ಸಾಂಬಾರು, ಪಲ್ಯ, ಒಂದು ಬಗೆಯ ಸಿಹಿ ತಿಂಡಿ (ಸಿಹಿ ಪೊಂಗಲ್, ಪಾಯಸ ಇತ್ಯಾದಿ) ಮಜ್ಜಿಗೆಯನ್ನು ವಿತರಿಸಲಾಗುತ್ತದೆ.
ಭೋಜನಶಾಲೆ ಹೇಗಿದೆ?
12 ಚದರ ಅಡಿ ಇರುವ ಸುಸಜ್ಜಿತ ಅಡುಗೆಮನೆಯಲ್ಲಿ ಬಯೋಗ್ಯಾಸ್ ಮತ್ತು ಸ್ಟೀಮ್ ಬಾಯ್ಲರ್‌ಗಳನ್ನು ಬಳಸಿ ಅಡುಗೆ ತಯಾರಿಸಲಾಗುತ್ತದೆ. ಸಾವಿರ ಜನಕ್ಕೆ ಅಡುಗೆ ಮಾಡುವ ಸಾಮರ್ಥ್ಯದ ಒಟ್ಟು 8 ಪಾತ್ರೆಗಳು ಇಲ್ಲಿವೆ.
ಪ್ರತಿನಿತ್ಯ ಅಂದಾಜು 3 ಕ್ವಿಂಟಲ್ ಅಕ್ಕಿ, 1 ಕ್ವಿಂಟಲ್ ಬೇಳೆ, 100 ತೆಂಗಿನಕಾಯಿ, 2 ಕ್ವಿಂಟಲ್ ತರಕಾರಿ ಅವಶ್ಯ. (ತಿಂಗಳಿಗೆ ಸುಮಾರು 10-12 ಲಕ್ಷ ರೂಪಾಯಿ ದಾಸೋಹಕ್ಕೆ ಖರ್ಚಾಗುತ್ತದೆ) ಬೆಳ್ಳುಳ್ಳಿ, ಈರುಳ್ಳಿ ಬಳಸುವುದಿಲ್ಲ.
ಸ್ವಚ್ಛತೆಗೆ ಆದ್ಯತೆ
ಅಡುಗೆ ಮನೆ, ಅಡುಗೆ ಪದಾರ್ಥಗಳ ಸ್ವತ್ಛತೆಯ ಜೊತೆಗೆ, ಅಡುಗೆ ಕೆಲಸದಲ್ಲಿ ತೊಡಗಿರುವವರೆಲ್ಲರೂ ಕೈಗೆ ಗ್ಲೌಸ್, ಬಾಯಿಗೆ ಮಾಸ್ಕ್, ತಲೆಗೂದಲು ಉದುರದಂತೆ ಕ್ಯಾಪ್ ಧರಿಸುವುದು ಕಡ್ಡಾಯ.
ಸಂಖ್ಯಾ ಸೋಜಿಗ
8- ಬಾಯ್ಲರ್‌ಗಳಲ್ಲಿ ನಿತ್ಯ ಅಡುಗೆ
24- ಬಾಣಸಿಗರಿಂದ ಅಡುಗೆ
20- ಸಹಾಯಕ ಸಿಬ್ಬಂದಿ
300- ಕೆ.ಜಿ. ಅಕ್ಕಿ ನಿತ್ಯ ಅವಶ್ಯ
2,000- ಭಕ್ತರಿಗೆ ನಿತ್ಯ ದಾಸೋಹ
12,00,000- ರೂ., ಮಾಸಿಕ ದಾಸೋಹದ ವೆಚ್ಚ
– ಪ್ರಿಯಾಂಕ ಎನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.