ಹಾವುಗಳ ಸ್ವರ್ಗ, ಉರಗನಹಳ್ಳಿ!
ಉರಗಗಳ ಊರಿನಲ್ಲಿ ಸುತ್ತಾಡಿದ ಕತೆ
Team Udayavani, Aug 3, 2019, 5:00 AM IST
ಉರಗನಹಳ್ಳಿ! ಶಿವಮೊಗ್ಗ ಜಿಲ್ಲೆಯ ಸೊರಬದಿಂದ 9 ಕಿ.ಮೀ. ದೂರದ ಕುಗ್ರಾಮ. ಹಿಂದಿನ ಕಾಲದಲ್ಲಿ ಇಲ್ಲಿ ಅತಿಹೆಚ್ಚು ಹಾವುಗಳು ಕಾಣುತ್ತಿದ್ದವಾದ್ದರಿಂದ, ಊರಿನ ಹೆಸರು “ಉರಗನಹಳ್ಳಿ’ ಅಂತ ಆಯಿತಂತೆ. ಈಗ ಹಾವುಗಳ ಸಂಖ್ಯೆ ಮೊದಲಿನಷ್ಟಿಲ್ಲವಾದರೂ, ಹಾವುಗಳು ಕಾಣದಂಥ ದಿನ ಮಾತ್ರ ಇಲ್ಲಿ ಇಲ್ಲವೇ ಇಲ್ಲ…
ಹಾವನ್ನು ಕಂಡಾಗ, ಅದರ ದೃಶ್ಯವನ್ನು ಕಣ್ಣೆದುರು ನಿಲ್ಲಿಸಿ, ಕಲ್ಪಿಸಿಕೊಂಡಾಗ, ಎಲ್ಲರಿಗೂ ಝಲ್ ಎನ್ನುವ ಎದೆಗಂಪನ ಸಹಜ. ದೂರದಿಂದ ಅದರ ಬಾಲ ಕಂಡರೂ, ನಮ್ಮೊಳಗಿದ್ದ ಧೈರ್ಯ ದರದರನೆ ಉರುಳುತ್ತೆ. ಹೀಗೆಲ್ಲ ಧೃತಿಗೆಡುವ ಮಾನವಸಹಜ ಸ್ವಭಾವ “ಉರಗನಹಳ್ಳಿ’ಗೆ ಮಾತ್ರ ಅನ್ವಯಿಸದು. ಇಲ್ಲಿನ ಜನ, ಹಾವಿಗೆ ಹೌಹಾರುವವರಲ್ಲ. ಊರಿನ ಒಂದಲ್ಲಾ ಒಂದು ದಿಕ್ಕಿಗೆ ಹೊರಟರೆ, ಕಾಣ ಸಿಗುವ ಹಾವಿನ ಬಗ್ಗೆ ಇಲ್ಲಿನವರಿಗೆ ಯಾವುದೇ ಭಯವೂ ಇಲ್ಲ. ಹಾವುಗಳೊಟ್ಟಿಗೆ ಇಲ್ಲಿನ ಜನಸಂಸ್ಕೃತಿ ನಿತ್ಯದ ಬದುಕು ನಿರ್ಭೀತವಾಗಿ ಸಾಗುತ್ತಿದೆ. ಸ್ವತಃ ಮಕ್ಕಳೇ ಹಾವು ಹಿಡಿದು, ಸುರಕ್ಷಿತವಾಗಿ ಹೊರಗೆ ಬಿಟ್ಟು ಬರುವಷ್ಟು ದಿಟ್ಟತನ, ಈ ಊರಿಗೆ ವಿಸ್ಮಯದ ವರದಾನ.
ಉರಗನಹಳ್ಳಿ! ಶಿವಮೊಗ್ಗ ಜಿಲ್ಲೆಯ ಸೊರಬದಿಂದ 9 ಕಿ.ಮೀ. ದೂರದ ಕುಗ್ರಾಮ. ನನ್ನ ಊರಿನ ಪಕ್ಕವೇ ಇದ್ದ ಈ ಊರಿನ ಬಗ್ಗೆ ಸಾಕಷ್ಟು ಕತೆ ಕೇಳಿದ್ದೆನಾದರೂ, ಒಮ್ಮೆ ಭೇಟಿ ನೀಡಲೇಬೇಕೆಂದು ಹೊರಟಿದ್ದು ಮಾತ್ರ ಮೊನ್ನೆ ಮೊನ್ನೆ. ಹಿಂದಿನ ಕಾಲದಲ್ಲಿ ಇಲ್ಲಿ ಅತಿಹೆಚ್ಚು ಹಾವುಗಳು ಕಾಣುತ್ತಿದ್ದವಾದ್ದರಿಂದ, ಊರಿನ ಹೆಸರು “ಉರಗನಹಳ್ಳಿ’ ಅಂತ ಆಯಿತಂತೆ. ಈಗ ಹಾವುಗಳ ಸಂಖ್ಯೆ ಮೊದಲಿನಷ್ಟಿಲ್ಲವಾದರೂ, ಹಾವುಗಳು ಕಾಣದಂಥ ದಿನ ಮಾತ್ರ ಇಲ್ಲಿ ಇಲ್ಲವೇ ಇಲ್ಲ.
ಪ್ರಾರ್ಥಿಸಿದರೂ, ನಾಗನ ದರ್ಶನ!
ಇಲ್ಲಿ ಅತಿಹೆಚ್ಚು ಕಂಡುಬರುವುದು, ಶಿವಕಂಠ ಮಾಲೆಯಾದ ನಾಗರ ಹಾವು. ಇಲ್ಲಿನ ಕಾಳಿಂಗೇಶ್ವರನ ಮುಂದೆ ನಿಂತು, “ದೇವರೇ… ನನ್ನ ಕಣ್ಣಿಗೆ ಇಂದು ಹಾವು ಕಾಣಿಸು’ ಎಂದು ಭಕ್ತಿಯಿಂದ ಬೇಡಿಕೊಂಡ ಯಾತ್ರಾರ್ಥಿಗಳಿಗೆ ನಾಗನ ದರ್ಶನ ಸಿಕ್ಕಿದೆ ಎನ್ನುತ್ತಾರೆ, ಊರಿನ ಮುಖಂಡರು. ಹಾವಿನ ಮೇಲೆ ಇಲ್ಲಿನವರಿಗೆ ಏನೋ ಅತೀವ ಭಕ್ತಿ. ಹಾವು ಮನೆಯೊಳಗೆ ಇದ್ದರೂ, ಅದರ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲಿ ಅದು ಸಾಮಾನ್ಯ ದೃಶ್ಯ. ಮನೆಯೊಳಗೆ ಬಂದ ಹಾವುಗಳನ್ನು ಮಹಿಳೆಯರೋ, ಸಣ್ಣಮಕ್ಕಳ್ಳೋ ಧೈರ್ಯದಿಂದ ಹಿಡಿದು, ಎತ್ತಿ ಬಿಡುವ ದೃಶ್ಯವನ್ನು ನೋಡಿದರೇನೇ, ಮೈ ಜುಮ್ಮೆನ್ನುತ್ತೆ.
“ಇಡೀ ಉರಗನಹಳ್ಳಿಯೇ ನಾಗದೇವರ ಜಾಗ. ಹಾವಿನ ಜಾಗದಲ್ಲಿ ನಾವು ಮನೆಮಾಡಿಕೊಂಡಿದ್ದರೆ, ಅದು ಎಲ್ಲಿಗೆ ಹೋಗುತ್ತೆ? ಅದರ ಮನೆಯಲ್ಲಿ ಅದು ವಾಸಿಸುತ್ತೆ’- ಎನ್ನುತ್ತಾರೆ, ಈ ಊರಿನ ಜನ. ಅಷ್ಟಕ್ಕೂ ಇಲ್ಲಿನ ಹಾವುಗಳೆಲ್ಲ “ದೇವರ ಹಾವುಗಳು’ ಎನ್ನುವುದು ನಂಬಿಕೆ ಅವರದ್ದು. “ಇದುವರೆಗೂ ಇಲ್ಲಿ ಹಾವು ಕಚ್ಚಿ ಮರಣ ಹೊಂದಿದ ದಾಖಲೆಗಳೇ ಇಲ್ಲ. ಇದೆಲ್ಲ ಕಾಳಿಂಗೇಶ್ವರನ ಮಹಿಮೆ’ ಎನ್ನುತ್ತಾ, ಭಕ್ತಿ ಭಾವದಿಂದ ದೇಗುಲದತ್ತ ನೋಡುತ್ತಾರೆ, ಊರ ಹಿರೀಕರು.
ಊರನ್ನು ಕಾಪಾಡುವ ಕಾಳಿಂಗ!
ಇಲ್ಲಿ ಎಷ್ಟೇ ಹಾವಿದ್ದರೂ, ಜನರನ್ನು ಅವುಗಳಿಂದ ಕಾಪಾಡುತ್ತಿರುವುದು ಕಾಳಿಂಗೇಶ್ವರ ಎನ್ನುವ ನಂಬಿಕೆ ಊರಿನಲ್ಲಿದೆ. “ಕಾಳಿಂಗೇಶ್ವರ ದೇಗುಲವು ಯಾವಾಗ ಪ್ರತಿಷ್ಠಾಪಿಸಲ್ಪಟ್ಟಿತು ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಅಷ್ಟು ಹಳೆಯ ದೇಗುಲವಿದು’ ಎನ್ನುತ್ತಾರೆ, ದೇಗುಲದ ಪ್ರಧಾನ ಅರ್ಚಕ ಬಂಗಾರಸ್ವಾಮಿ. ಕಾಳಿಂಗೇಶ್ವರ ದೇಗುಲದಲ್ಲಿ ಪೂಜಿಸಿದರೆ, ಸಕಲ ಸರ್ಪದೋಷಗಳಿಂದಲೂ ಮುಕ್ತಿ ಸಿಗುತ್ತದೆಂಬ ನಂಬಿಕೆ ಜಿಲ್ಲೆಯಾದ್ಯಂತ ಭಕ್ತರಿಗಿದೆ. ದೇಗುಲದ ಆಗ್ನೇಯ ದಿಕ್ಕಿಗೊಂದು ನೀರಿನ ಕುಂಡವಿದೆ. ಇದರ ನೀರು ಪವಿತ್ರವೆಂದು ಹೇಳುತ್ತಾರೆ. ಈ ಕುಂಡದ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ನಿವಾರಣೆ ಆಗುತ್ತದೆಂಬ ನಂಬಿಕೆಯೂ ಇದೆ.
ಅಲ್ಲೊಂದು ಸಿಹಿ ಬೇವಿನ ಮರ!
ದೇವಸ್ಥಾನದ ಪ್ರಾಂಗಣದಲ್ಲಿ ತುಂಬಾ ಹಳೆಯ ಕಾಲದ ಬೇವಿನಮರವೊಂದಿದೆ. ಇದರ ಎಲೆ ತಿಂದರೆ, ಕಹಿಯ ಅನುಭವ ಆಗುವುದಿಲ್ಲ. ಬಾಯಿ ಸಿಹಿ ಆಗುತ್ತದೆ! ಇದು ಇಲ್ಲಿನ ಇನ್ನೊಂದು ವಿಶೇಷ. ಬೇವಿನ ಮರದ ಕೆಳಗೆಯೇ, ನಾಗನ ಆರಾಧನೆ ನಡೆಯುತ್ತದೆ. ಈ ಮಹಿಮೆಯ ಬಗ್ಗೆ ಅರ್ಚಕರು ಹೇಳುವುದು ಹೀಗೆ… “ಮಹಾತ್ಮರ ತಪಸ್ಸಿನ ಭೂಮಿ ಇದು. ಆ ತಪಸ್ವಿಗಳು ಎಷ್ಟು ಶಕ್ತಿಶಾಲಿಗಳೆಂದರೆ, ಇಲ್ಲಿನ ಜೀವಜಂತುಗಳಿಂದ ಹಿಡಿದು, ವಿಷಪೂರಿತ ಸಸ್ಯಗಳ ಗುಣವನ್ನೂ ಅವರು ಬದಲಾಯಿಸಿದ್ದಾರೆ. ಹಾಗಾಗಿಯೇ ಇಲ್ಲಿನ ಹಾವುಗಳೂ ವಿಷ ಕಾರುವುದಿಲ್ಲ. ಬೇವೂ ಸಿಹಿ ಆಗಿದೆ. ಬರುವ ಮನುಷ್ಯರೂ ಸಹೃದಯರೇ ಆಗಿರುತ್ತಾರೆ’.
ಮುಸ್ಲಿಮರಿಂದಲೂ ನಾಗಾರಾಧನೆ
ಉರಗನಹಳ್ಳಿಯ ಕಾಳಿಂಗೇಶ್ವರ ದೇಗುಲದಲ್ಲಿ ನಾಗರ ಪಂಚಮಿ ವಿಜೃಂಭಣೆಯಿಂದ ಸಾಗುತ್ತದೆ. ಹಿಂದೂ - ಮುಸ್ಲಿಮರು ಜೊತೆಗೂಡಿ ನಾಗದೇವತೆಗೆ ಹಾಲೆರೆಯುವ ಅಪರೂಪದ ದೃಶ್ಯವನ್ನು ಇಲ್ಲಿ ಕಾಣಬಹುದು. ಇಲ್ಲಿರುವ ಕಾಳಿಂಗೇಶ್ವರ ದೇವಸ್ಥಾನ ಹಾಗೂ ಇಬ್ರಾಹಿಂ ದರ್ಗಾ, ಜಮಾಲ್ ದರ್ಗಾಗಳಿಗೂ ಅವಿನಾಭಾವ ಸಂಬಂಧವಿದೆ. ಸ್ಥಳೀಯರು ಈ ದರ್ಗಾಗಳನ್ನು, ಇಬ್ರಾಹಿಂ ಸ್ವಾಮಿ ಮಠವೆಂದು ಹಾಗೂ ಜಮಾಲ್ ಸ್ವಾಮಿ ಮಠವೆಂದು ಕರೆಯುವುದರಲ್ಲಿಯೇ ಒಂದು ಭಕ್ತಿ ಕಾಣಬಹುದು. ಕಾಳಿಂಗೇಶ್ವರ ದೇಗುಲಕ್ಕೆ ಬಂದವರು ಈ ದರ್ಗಾಗಳಿಗೂ ಭೇಟಿ ನೀಡುವುದೂ ಇನ್ನೊಂದು ವಿಶೇಷ. ಹಾಗೆಯೇ ಮುಸ್ಲಿಮರೂ, ಕಾಳಿಂಗೇಶ್ವರನ ದರ್ಶನ ಪಡೆದು, ಪಾವನರಾಗುತ್ತಾರೆ. ಇದು ಈ ಊರಿನ ಭಾವೈಕ್ಯತೆಯ ಗುಟ್ಟು.
– ರಂಗನಾಥ ಹಾರೋಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.