ಹಾರುವ ಹಕ್ಕಿಗೆ ಇಲ್ಲಿ ಮನೆ…
Team Udayavani, Oct 7, 2017, 7:00 AM IST
ಈ ಚುಕ್ಕೆ ಹಕ್ಕಿಗೆ ಕ್ರೀಪರ್ ಎಂಬ ಹೆಸರಿದೆ. ನಟ್ ಹಚ್ ಎಂಬ ಪ್ರಬೇಧದ ಹಕ್ಕಿಗಳಿಗೂ ಇದಕ್ಕೂ ಆಕಾರದಲ್ಲಿ ಹೋಲಿಕೆ ಇರುವುದರಿಂದ ಇವೆರಡನ್ನೂ ಒಂದೇ ಗುಂಪಿಗೆ ಸೇರಿಸಿರಬಹುದು. ಆದರೆ ಇದರ ವಂಶಾವಳಿಗಳ ಅಧ್ಯಯನದಿಂದ ಇವೆರಡರಲ್ಲೂ ಅನೇಕ ಭಿನ್ನತೆ ಇರುವುದು ತಿಳಿದು, ಆಮೇಲೆ ಇದನ್ನು ಕರ್ತಿಡಿಯಾ ಕುಟುಂಬಕ್ಕೆ ಸೇರಿಸಲಾಯಿತು. 13-18 ಸೆಂಮೀ. ಗಾತ್ರದ ಚಿಕ್ಕ ಹಕ್ಕಿ ಇದು. ಕಂದುಗಪ್ಪು ಬಣ್ಣದ ಮೇಲೆ ಬಿಳಿಯ ಚುಕ್ಕೆ ಮತ್ತು ಪಟ್ಟಿಗಳಿವೆ.
ಇದು ಅತಿ ಸುಂದರ ಚಿತ್ತಾರದ ಹಕ್ಕಿ ಎಂದರೂ ತಪ್ಪಾಗಲಾರದು. ಸೂರಹಕ್ಕಿಯ ಚುಂಚನ್ನು ಹೋಲುವ ಉದ್ದ ಮತ್ತು ಕೆಳಮುಖವಾಗಿ ಬಾಗಿರುವ ಚೂಪಾದ ಚುಂಚು ಇದಕ್ಕಿದೆ. ತಲೆ ಕಂದುಬಣ್ಣ ಇದ್ದು , ಕಣ್ಣಿನ ಮೇಲೆ ಬಿಳಿ ಹುಬ್ಬಿದೆ. ರೆಕ್ಕೆಯಲ್ಲಿ ಬಿಳಿ ಬಣ್ಣದ ಚುಕ್ಕೆ, ಗೆರೆ ಬಂದಂತೆ ಸ್ವಲ್ಪ ಉದ್ದ ಬಿಳಿ ಗೆರೆ-ರೆಕ್ಕೆಯ ತುದಿಯಲ್ಲಿ ಉದ್ದ ಮತ್ತು ವಕ್ರವಾದ ಗೆರೆ ಇದೆ. ಇದರಿಂದ ಪಕ್ಷಿಯ ಚೆಲುವು ಹೆಚ್ಚಿದೆ. ಬಾಲದಲ್ಲಿ ಉದ್ದದಗರಿಗಳಿವೆ. ಇದರ ಪುಕ್ಕದ ಅಡಿಯಲ್ಲಿ ಮೂರು ನಾಲ್ಕು ಸಾಲು ಉದ್ದಗೆರೆಗಳು ಸಮಾನಾಂತರವಾಗಿವೆ.
ದಪ್ಪ ತೊಗಟೆಯ ಮರಗಳಾದ ಅಕೇಶಿಯಾ, ಮಾವು, ಮತ್ತು ಕಂದು ಬಣ್ಣ ಇರುವ ಬಂದಳಕ -ಬೆಳೆಯುವ ಮರಗಳೇ ಇದರ ವಾಸಸ್ಥಳ. ಕ್ರೀಪರ್ ಸ್ವಲ್ಪ ಚಿಕ್ಕದಿದ್ದರೂ ಭಾರತದ ಹೆಣ್ಣು ಕೋಗಿಲೆಯ ಮೈಬಣ್ಣ ಮತ್ತು ಅದರ ಮೇಲಿರುವ ಬಿಳಿ ಚುಕ್ಕೆ -ಇಲ್ಲವೇ ಬಿಳಿ ಗೆರೆಗಳಿಗಿರುವ ಸಾಮ್ಯತೆಯನ್ನು ತಿಳಿದು ಈ ಹಕ್ಕಿಯ ಇರುವನ್ನು ತಿಳಿಬಹುದು. ಇದರ ಉದ್ದ ಮತ್ತು ಚೂಪಾದ ಚುಂಚಿನ ಸಹಾಯದಿಂದ ಮರದ ತೊಗಟೆಗಳನ್ನು ಎಬ್ಬಿಸಿ, ಅದರ ಅಡಿಯಲ್ಲಿರುವ ಚಿಕ್ಕ ಹುಳಗಳನ್ನು ಹಿಡಿದು ತಿನ್ನುತ್ತದೆ.
ಹೀಗೆ ಬೇಟೆಯಾಡುವಾಗ ಮೇಲಿನಿಂದ ಕೆಳಗೆ ಮತ್ತು ಭೂಮಿಗೆ ಸಮಾನಾಂತರವಾಗಿ ಇರುವ ಟೊಂಗೆಗಳ ಭಾಗದಲ್ಲೂ ಸಂಚರಿಸುವ ನೈಪುಣ್ಯತೆ ಇದಕ್ಕಿದೆ. ಇದರ ಬಾಲದಲ್ಲಿ 12 ಗರಿಗಳಿದೆ. ಗಂಡು ಹೆಣ್ಣಿನಲ್ಲಿ ಬಹಳ ವ್ಯತ್ಯಾಸ ಕಾಣುವುದಿಲ್ಲ. ಉತ್ತರ ಹಾಗೂ ಮಧ್ಯ ಭಾರತದಲ್ಲಿ ಈ ಪಕ್ಷಿ ಹೆಚ್ಚಾಗಿ ಕಾಣಸಿಗುತ್ತದೆ. ಇದರ ಪ್ರಬೇಧಗಳು ಪಶ್ಚಿಮ ಘಟ್ಟದಲ್ಲೂ ಇವೆ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ದಪ್ಪ ತೊಗಟೆಯ ಮರದ ಗಂಟಿನಲ್ಲಿ ಕುಳಿತಾಗ ಇದು ಇರುವುದೇ ತಿಳಿಯುವುದಿಲ್ಲ.
ಕೆಲವೊಮ್ಮೆ ಮರದ ಗಂಟಿನ ಒಟ್ಟೆಯನ್ನೇ ತನ್ನ ಗೂಡನ್ನಾಗಿ ಮಾಡಿಕೊಳ್ಳುತ್ತದೆ. ಗೋದಾವರಿ ನದಿ ತೀರದ ದಕ್ಷಿಣ ಭಾಗದಲ್ಲಿ ಏಕಾಂಗಿಯಾಗಿ ಇಲ್ಲವೇ, ಜೋಡಿಯಾಗಿ ಅಥವಾ ಕೆಲವೊಮ್ಮ ಸಣ್ಣ ಗುಂಪಿನಲ್ಲೂ ಮಧ್ಯಮ ವರ್ಗದ ಮರಗಳಿರುವ ಕಾಡಿನಲ್ಲಿ ಇದು ಇರುತ್ತದೆ. ಬಯಲು ಪ್ರದೇಶ, ಪರ್ವತಗಳ ಸಮತಟ್ಟು ಜಾಗದಲ್ಲಿ ಜೇಡರ ಹುಳಗಳನ್ನು ಅರಸಿ ತಿನ್ನುತ್ತಿರುತ್ತದೆ. ಇದು ಮರಿಮಾಡುವ ಸಮಯದಲ್ಲಿ ಸುಂದರ ಸಿಳ್ಳಿನ ಹಾಡನ್ನು ಹಾಡುತ್ತದೆ.
ಇದರ ಹಾಡಿನ ಕೂಗಿಗೆ ಮತ್ತು ಸೂರಕ್ಕಿ ಕೂಗಿಗೆ ತುಂಬಾ ಹೋಲಿಕೆ ಇದೆ. ತನ್ನ ಸಂಗಾತಿಯನ್ನು ಕರೆಯುವಾಗ, ಗೂಡಿನ ನಿರ್ಮಾಣಕ್ಕೆ, ಒಳ್ಳೆ ಸಾಮಗ್ರಿ ದೊರೆತಾಗ, ಅವಘಡಗಳು ಉಂಟಾದಾಗ- ತನ್ನ ಸಂಗಾತಿಗೆ ,ಇಲ್ಲವೇ ಮರಿಗಳಿಗೆ ಸೂಚನೆ ನೀಡುವಾಗ- ಸೂಕ್ಷ್ಮವಾದ ದನಿ ಹೊರಡಿಸುತ್ತದೆ. ಗಂಡು-ಹೆಣ್ಣು ಇಂತಹ ಸಿಳ್ಳೆಯ ಮೂಲಕ ಪರಸ್ಪರ ಸಂಭಾಷಿಸುತ್ತಾ ಒಂದಕ್ಕೊಂದು ಸಂಪರ್ಕವನ್ನು ಉಳಿಸಿಕೊಂಡಿರುತ್ತವೆ.
ಮಾರ್ಚ್‌ನಿಂದ ಮೇ, ಇದು ಮರಿಮಾಡುವ ತಿಂಗಳು. ಮರದ ದಿಮ್ಮಿ ಮತ್ತು ಭೂಮಿಗೆ ಸಮಾನಾಂತರವಾಗಿರುವ ಟೊಂಗೆಯ ದಿಮ್ಮಿ ಬುಡದ ಭಾಗದಲ್ಲಿ ತನ್ನ ಗೂಡನ್ನು ನಿರ್ಮಿಸುತ್ತದೆ. ಗಂಡು- ಹೆಣ್ಣು ಸೇರಿ ಮರಿಗೆ ಗುಟುಕು ನೀಡುತ್ತವೆ. ರಕ್ಷಣೆ, ಆರೈಕೆ ಮಾಡುತ್ತದೆ. ಇದರ ಕಾಲುಗಳು ಮರಕುಟುಕದ ಕಾಲನ್ನು ತುಂಬಾ ಹೋಲುತ್ತವೆ.
* ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.