ರಂಗ ದೊರೆ
Team Udayavani, Nov 3, 2018, 4:05 AM IST
ನಮ್ಮ ಸುತ್ತಮುತ್ತಲ ಕಾಡಿನಲ್ಲಿ ಆನೆಗಳಿವೆ. ಆಗಾಗ ನಾಡಲ್ಲೂ ದರ್ಶನ ಕೊಡುತ್ತಿರುತ್ತವೆ. ಆದರೆ ಆ ಯಾವ ಒಂಟಿಸಲಗಗಳೂ ಮೊನ್ನ ನಿಧನನಾದ ರಂಗನಷ್ಟು ಜನರ ಪ್ರೀತಿಗೆ , ಮೆಚ್ಚುಗೆಗೆ ಪಾತ್ರವಾಗಲಿಲ್ಲ. ನಮ್ಮ ಜೆಂಟಲ್ ರಂಗ ಮಾತ್ರ ಇದ್ದಷ್ಟು ದಿನ ಜನಮಾನಸದಲ್ಲಿ ಹೀರೋ ಆಗಿದ್ದ, ರಂಗ ಆನೆಯ ಹೆಸರು ಕೇಳಿದರೆ ಪ್ರೀತಿ, ಅಭಿಮಾನ, ಸಲುಗೆಯ ಜೊತೆಗೆ ಮನದ ಮೂಲೆಯೊಲ್ಲೊಂದು ಪ್ರೀತಿ ಭಯ ದಿಗ್ಗೆನ್ನುತ್ತಿತ್ತು.
ಕೆಲವರು ಪುಂಡಾನೆ , ಮತ್ತೆ ಕೆಲವರು ರೌಡಿ, ಒಂದಷ್ಟು ಮಂದಿ ಸಾಧು ಆನೆ ಎಂದರೂ ಆದರೆ ರಂಗನನ್ನು ಅತಿ ಹತ್ತಿರದಿಂದ ಕಂಡವರು ಮಾತ್ರ, ರಂಗನನ್ನು “ಜೆಂಟಲ್ ಎಲಿಫೆಂಟ್’ ಅಂದರು. ಕೊನೆವರೆಗೂ ರಂಗ, ಜೆಂಟಲ್ ಆಗಿಯೇ ಬದುಕಿದ್ದ. ಇವನ ದುರಂತ ಸಾವಿನ ಸುದ್ದಿ ಕೇಳಿದ ಅಭಿಮಾನಿಗಳು ಮಮ್ಮಲ ಮರುಗಿದರು. ಬನ್ನೇರುಘಟ್ಟದಿಂದ ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ನಡೆಯುತ್ತಿದ್ದ ರಂಗನ ಸಂಸ್ಕಾರಕ್ಕೆ ಹೋಗಿ ಬಂದರು. ರಂಗನ ಪೋಟೊ ಇಟ್ಟು ಶ್ರದ್ದಾಂಜಲಿ ಅರ್ಪಿಸಿದರು. ಅಷ್ಟೇ ಅಲ್ಲ, ಮಹಾಲಯ ಅಮಾವಾಸ್ಯೆಯ ಹಬ್ಬದಲ್ಲಿ ರಂಗನ ಪೋಟೊ ಇಟ್ಟು ನಮಸ್ಕರಿಸಿದವರೂ ಇದ್ದಾರೆ.
ರಂಗ- ಮಾನವ ಸಂಬಂಧ ಬೆಳೆದಿದ್ದು ಹೇಗೆ?
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮೂಲ ನಿವಾಸಿ ರಂಗ. ತನ್ನ ಶಿಷ್ಠ ನಡುವಳಿಕೆಯಿಂದ ತನ್ನ ವ್ಯಾಪ್ತಿಯನ್ನು ಇತರೆ ಆನೆಗಳಿಗಿಂತ ಹೆಚ್ಚು ವಿಸ್ತರಿಸಿಕೊಂಡಿದ್ದ. ರಂಗ, ಹೆಚ್ಚು ಪ್ರವರ್ಧಮಾನಕ್ಕೆ ಬರಲು, ಹೆಚ್ಚು ಸುದ್ದಿಯಾಗಲು ಇದೇ ಮುಖ್ಯ ಕಾರಣವಾಯಿತು.
1999 ರಲ್ಲಿ ರಂಗನಿಗೆ ಇನ್ನು ಚಿಕ್ಕವಯಸ್ಸು. ಬೇರೊಂದು ಆನೆಯ ಹಿಂಬಾಲಕನಾಗಿ ತುಮಕೂರು ಹೊರ ಭಾಗದ ಹಳ್ಳಿಗಳಲ್ಲಿ ಸಂಚರಿಸುತ್ತಿದ್ದ. ಎರಡು ವರ್ಷಗಳಲ್ಲಿ ರಂಗ ವಯೋಸಹಜವಾಗಿ ಗುಂಪಿನಿಂದ ಬೇರ್ಪಟ್ಟು, ತಾನೊಬ್ಬನೇ ಓಡಾಡುವುದನ್ನು ಕಲಿತ. ವರ್ಷಗಳು ಉರುಳಿದಂತೆ, ತಾನು ಒಂದು ತಂಡದ ನಾಯಕನಾಗಿ ಓಡಾಡ ತೊಡಗಿದ. ಇದೇ ಆತ ದಿನಗಳಲ್ಲಿ ಅತಿ ಹೆಚ್ಚು ಜನರಿಗೆ ಪರಿಚಯವಾಗಿದ್ದು, ರಂಗ ಅಂತ ಹೆಸರು ಬರುವಂತೆ ನಡೆದು ಕೊಂಡಿದ್ದು.
ರಂಗ ಹುಟ್ಟಿದ್ದು ಎಲ್ಲಿ ಎಂಬುದು ನಿಖರವಾಗಿ ತಿಳಿದಿಲ್ಲವಾದರೂ, ಬನ್ನೇರುಘಟ್ಟ ಅರಣ್ಯವೇ ಅವನ ಮೂಲ ಸ್ಥಾನ ಅನ್ನಬಹುದು. ಏಕೆಂದರೆ ಅವನು ಇದ್ದಷ್ಟು ದಿನ ಹೆಚ್ಚು ಸಮಯ ಕಳೆದಿದ್ದು ಇದೇ ಅರಣ್ಯದಲ್ಲಿ . ರಂಗ ಬಾಲ್ಯದಿಂದಲೂ ಕನಕಪುರದ ಕೋಡಿ ಹಳ್ಳಿಯಿಂದ ಹಾರೋಹಳ್ಳಿ, ಆನೇಕಲ್, ಬನ್ನೇರುಘಟ್ಟ, ಕಗ್ಗಲಿಪುರ, ಸಾವನದುರ್ಗ, ಮಾಗಡಿ, ನೆಲಮಂಗಲ, ತುಮಕೂರು ಈ ವ್ಯಾಪ್ತಿಯಲ್ಲಿ ಓಡಾಡಿಕೊಂಡಿದ್ದ. ಗಮನಾರ್ಹ ಸಂಗತಿ ಎಂದರೆ, ಬನ್ನೇರುಘಟ್ಟ ಬಿಟ್ಟು ಹೊರ ಹೋದನೆಂದರೆ ಆನಂತರದಲ್ಲಿ ಹೆಚ್ಚಾಗಿ ಮಾನವ ಆಶ್ರಿತ ಪ್ರದೇಶದಲ್ಲೇ ಓಡಾಡುತ್ತಿದ್ದ. ಇಲ್ಲಿನ ಮಾನವರ ಜೊತೆ ಬೆರೆಯುವುದನ್ನು ಕಲಿತ, ರೈತರ ಬೆಳೆಯನ್ನು ಆಹಾರವಾಗಿಸಿಕೊಂಡ, ಅವರು ಬೆನ್ನತ್ತಿದರೆ ಓಡಿಹೋಗಿ ಅವಿತು ಕೊಳ್ಳುವುದು ಕಲಿತ. ಬನ್ನೇರುಘಟ್ಟ ದಿಂದ ತುಮಕೂರು ಭಾಗಕ್ಕೆ ಹೋಗಬೇಕಾದರೆ ಕನಕಪುರ ಮುಖ್ಯ ರಸ್ತೆ, ಮೈಸೂರು ಹೆದ್ದಾರಿ, ಮಾಗಡಿ ರಸ್ತೆ , ನೆಲಮಂಗಲ ರಸ್ತೆ- ಅತಿ ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳನ್ನು ಸುಲಭವಾಗಿ ದಾಟುವುದನ್ನು ಕಲಿಯುತ್ತಿದ್ದಂತೆ, ಮಾನವರ ಬದುಕಿನೊಂದಿಗೆ ತೀರಾ ಹತ್ತಿರುವಾಗುತ್ತ ಬಂದ . ವರ್ಷಗಳು ಉರುಳಿದಂತೆ ವಾಹನ ಸಂಚರಿಸುವ ರಸ್ತೆಗಳನ್ನು ಸೋಲಾರ್ ವಿದ್ಯುತ್ ತಂತಿ ಬೇಲಿ, ಮುಳ್ಳು ತಂತಿ ಬೇಲಿ, ರೈಲ್ವೆ ಹಳಿ ದಾಟುವುದು ಹೇಗೆಂದು ಕರಗತ ಮಾಡಿ ಕೊಂಡ , ತನಗೆ ಬೇಕಾದಾಗ ಹೋಗಿ ರೈತರ ಬೆಳೆಯನ್ನು ತಿಂದು ಬರುವುದನ್ನು , ಜನ ದಾಳಿ ಮಾಡಿದಾಗ ತಪ್ಪಿಸಿ ಕೊಳ್ಳುವುದನ್ನು ಕರಗತ ಮಾಡಿಕೊಂಡು ಇದನ್ನೇ ಮುಂದುವರೆಸುತ್ತ ಬಂದ. ಹಾಗಾಗಿ ರಂಗ ಆನೆ ಮತ್ತು ಮಾನವರು ಆಗಿಂದಾಗ್ಗೆ ಮುಖಾಮುಖೀ ಆಗುತ್ತಿದ್ದರು.ರಂಗ ಎಂಬ ಆನೆ, ಜೆಂಟಲ್ ಎಲಿಫೆಂಟ್ ಎಂಬ ಹೆಸರು ಪಡೆದು ಎಲ್ಲರ ಮನದಲ್ಲೂ ಉಳಿಯಲು ಸಾಧ್ಯವಾದದ್ದು ಇಂಥ ಕಾರಣಗಳಿಂದಲೇ.
ರಂಗ ಖಳನಾಗಿದ್ದು ಹೇಗೆ?
ವಯಸ್ಸು ಏರುತ್ತಿದ್ದಂತೆ ರಂಗ ನಾಯಕನ ಗುಣಗಳನ್ನು ಮೈಗೂಡಿಸಿಕೊಂಡ. ಇದರಿಂದ ಚಿಕ್ಕ ಚಿಕ್ಕ ಆನೆಗಳು ರಂಗನ ಹಿಂಬಾಲಕರಾದವು. ಹೇಳಿ ಕೇಳಿ ಹಳ್ಳಿಗರ ಬೆಳೆಯನ್ನೇ ಹೆಚ್ಚು ಸೇವಿಸುತ್ತಿದ್ದರಿಂದ ಅವನೊಂದಿಗೆ ಒಮ್ಮೆ ಬರುವ ಚಿಕ್ಕಾನೆಗಳು ರಂಗನೊಂದಿಗೆ ಖಾಯಂ ಆಗಿರಲು ಮುಂದಾದವು. ಈ ಕಾಡಿನ ಹೀರೋ, ಸುಮಾರು 8 ಆನೆಗಳನ್ನು ತನ್ನೊಡನೆ ಇಟ್ಟು ಕೊಂಡು ಮೆರೆಯುತ್ತಿದ್ದ. ರಂಗನ ಅರ್ಭಟ ತಡೆಯಲಾಗದೆ ಹಳ್ಳಿಗರ ಆಕ್ರೋಶ ಹೆಚಾಯಿತು. ಜನ ಪ್ರತಿನಿದಿಗಳು ಕಾಡಾನೆಗಳ ಹಾವಳಿ ತಡೆಯಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ರಂಗನನ್ನು ಹಿಡಿದು ಹಾಕಲು ನೋಡನೋಡುತ್ತಲೇ ಒಪ್ಪಿಗೆ ಸಿಕ್ಕಿಬಿಟ್ಟಿತು.
ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭವಾದಾಗ ಎಲ್ಲರಿಗೂ ಆತಂಕ. ಹೇಳಿ ಕೇಳಿ ಅದು ರೌಡಿ ಆನೆ. ಈಗಾಗಲೇ ಹಲವರನ್ನು ಕೊಂದಿದೆ. ಹೀಗಿರುವಾಗ ಅದನ್ನು ಹಿಡಿದು ಸಾಗಿಸುವುದು ಹೇಗೆ, ಎಲ್ಲರೂ ಎಚ್ಚರಿಕೆಯಿಂದಿರಿ ಎಂದು ಚರ್ಚಿಸಿದ್ದರೂ ಆದರೆ , ರಂಗ ನಿಗೆ ಅರಿವಳಿಕೆ ಔಷಧ ನೀಡಿ ಕಾಲಿಗೆ ಹಗ್ಗ ಕಟ್ಟಿ ಮಂಪರು ಬರುವಂತೆ ಚುಚ್ಚು ಮದ್ದು ನೀಡಿ ಎಬ್ಬಿಸಿದರು ಆ ರಂಗ ಅಂದ್ರೆ ಹೀಗಾ ಎಂದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಮಂಪರಿನಿಂದ ಎದ್ದವನು ಆತಂಕ ಪಟ್ಟಿದ್ದ, ಬಂಧನದಿಂದ ಬಿಡಿಸಿಕೊಳ್ಳಲು ಮುಂದಾದ , ಆಗದು ಎಂದು ತಿಳಿದು ಮೌನ ಪ್ರತಿಭಟನೆಗೆ ಇಳಿದಿದ್ದ , ನಾನು ನಿಮ್ಮೊಂದಿಗೆ ಬರಲಾರೆ ಎಂದಷ್ಟೇ ಪ್ರತಿಭಟಿಸಿದ್ದ. ಇದನ್ನೆಲ್ಲಾ ಕಂಡವರು ಪಾಪ, ಇವನನ್ನು ರೌಡಿ ಅಂದಿದ್ದು ಏಕೆ? ನಿಜವಾಗಲೂ ಜನರನ್ನು ಕೊಂದನೇ ಎಂಬ ಕನಿಕರದ ಪ್ರಶ್ನೆ ಕೇಳಿದ್ದರು.
ರಂಗನನ್ನು ನೋಡಲು ಜನ ಸಾಗರ
2016 ಡಿಸೆಂಬರ್ 24 ರಂದು ರಂಗನ್ನು ಸೆರೆ ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಿರ್ಮಾಣವಾಗಿದ್ದ ಎಲಿಫೆಂಟ್ ಕ್ರಾಲ್‌ನಲ್ಲಿ ಕೂಡಿ ಹಾಕಿದರು. ರಂಗನ ಅಭಿಮಾನಿಗಳು ಅಂದು ಮಾಗಡಿ ಬಳಿ ಅರಣ್ಯದಲ್ಲಿ ಸೆರೆ ಹಿಡಿಯುವ ಸಮಯದಲ್ಲಿ ಹಾಜರಾಗಿ ಅವನ್ನು ಕೂಡಿ ಹಾಕಿದ ಕ್ರಾಲ್ ಬಳಿ ವರೆಗೂ ಬಂದರು. ಹೀಗೆ ಬಂದವರು ಅದೆಷ್ಟು ದಿನಗಳ ರಂಗನ್ನು ದಿನ ಬೆಳಗಾದರೆ ಬಂದು ನೋಡಿ ಕೊಂಡು ಹೋಗುತ್ತಿದ್ದರು. ಸುದ್ದಿ ತಿಳಿದ ಬನ್ನೇರುಘಟ್ಟ ಸುತ್ತ ಮುತ್ತಲಿನ ಹಳ್ಳಿಗರೂ ರಂಗನ ದರ್ಶನಕ್ಕೆ ಬಂದು ಹೋದರು. ಇದು ರಂಗ ಮತ್ತು ಜನರ ಪ್ರೀತಿ ಬಂಧನಕ್ಕೆ ಸಾಕ್ಷಿ$ಯಾಯಿತು. ರಂಗ ಇದ್ದಷ್ಟು ದಿನ ಅವರೆಲ್ಲ ಬೆಲ್ಲ, ಕಬ್ಬು ಕೊಟ್ಟರು. ಹುಲ್ಲು ಕೊಟ್ಟರು. ಕೆಲ ಅಭಿಮಾನಿಗಳು ತಾವೇ ಹಲ್ಲು , ಬೆಲ್ಲ ತಿನ್ನಿಸಿ ತಮ್ಮ ಪ್ರೀತಿ ತೋರಿ ಕೊಂಡರು.
ದೂರಕ್ಕೆ ಹೊದರೂ ಅಭಿಮಾನ ನಿಲ್ಲಲಿಲ್ಲ
ಬಂಧಿಯಾಗಿ ಇದ್ದಷ್ಟು ದಿನ ಬನ್ನೇರುಘಟ್ಟದ ಐದಾರು ಮಂದಿ ಅಭಿಮಾನಿಗಳಿಗೆ ರಂಗ ತನ್ನ ಕುಟುಂಬದ ಸದಸ್ಯನಂತಾಗಿ ಬಿಟ್ಟಿದ್ದ , ಹೆಂಡತಿ ಮಕ್ಕಳು ಕೂಡ ರಂಗನನ್ನು ಪ್ರೀತಿಸುವಷ್ಟು ಇಡೀ ಕುಟುಂಬ ಅಭಿಮಾನ ಪರಾಕಾಷ್ಠೆಯಲ್ಲಿದ್ದರು. 9 ತಿಂಗಳು ಬನ್ನೇರುಘಟ್ಟದಲ್ಲಿ ಇದ್ದ. ಆ ಬಳಿಕ ನಾಗರಹೊಳೆ, ಮತ್ತಿಗೋಡು ಆನೆ ಶಿಬಿರಕ್ಕೆ ಕರೆದೊಯ್ಯದರು. ಇಷ್ಟಕ್ಕೇ ಸಮಾದಾನ ಗೊಳ್ಳದ ಬೈರಪ್ಪನಹಳ್ಳಿ ಹರೀಶ್, ಜೆಪಿ ನಗರದ ಜಯಣ್ಣ, ಆಗಿಂದಾಗ್ಗೆ ರಂಗನನ್ನು ನೋಡಿಕೊಂಡು ಬರುತ್ತಿದ್ದರಂತೆ. ಇನ್ನೇನು ರಂಗನ ದುರಂತ ಸಾವಿಗೂ ಕೆಲ ದಿನಗಳ ಹಿಂದೆಯಷ್ಟೇ ರಂಗನನ್ನು ಮುಟ್ಟಿ, ಮುತ್ತು ಕೊಟ್ಟು, ಮೈ ತೊಳೆದು ಊಟ ಕೊಟ್ಟು, ಮತ್ತೆ ಸಿಗುವೆ ಪ್ರೀತಿ ರಂಗ ಎಂದು ಹೇಳಿ ಬಂದಿದ್ದರು. ಇದು ರಂಗನ ಮೇಲಿದ್ದ ಹುಚ್ಚು ಪ್ರೀತಿಯೋ ಅವಿನಾಭಾವ ಸಂಬಂಧವೋ? ಅಂತೂ ಇಂತಹ ಅಭಿಮಾನಿಗಳನ್ನು ಕಾಡಿನ ಸಲಗ ರಂಗ ಪಡೆದಿದ್ದ.
ಜೆಂಟಲ್ ರಂಗ ಪ್ರಶಸ್ತಿ
ಬನ್ನೇರುಘಟ್ಟ ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾಸಮಿತಿ( ಎನ್ ಡಬ್ಲ್ಯು ಸಿ ಸಿ ) ಇನ್ನು ಮುಂದೆ ಜೆಂಟಲ್ ರಂಗನ ಹೆಸರಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿದೆ ಎನ್ನುತ್ತಾರೆ ಪರಿಸರ ಮತ್ತು ವನ್ಯಜೀವಿ ತರಕ್ಷಣಾ ಸಮಿ ತಿ ವ್ಯವಸ್ಥಾಪಕ ನಿರ್ದೇಶಕಿ ನಳಿನಿ ಬಿ ಗೌಡ.
ಮಂಜುನಾಥ್ ಎನ್.ಬನ್ನೇರುಘಟ್ಟ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.