“ಹೋಳಿ’ ಕೂಗಿತೋ…

ಉತ್ತರದ ಹೋಳಿ, ಕರುನಾಡಿಗೆ ಬಂದ ಬಗೆ

Team Udayavani, Mar 7, 2020, 6:13 AM IST

holi-kugito

ಹೋಳಿ! ಉತ್ತರ ಭಾರತದ ಸಾಂಸ್ಕೃತಿಕ ರಂಗು ತುಂಬಿಕೊಂಡಿರುವುದೇ ಈ ಹೋಳಿ ಹಬ್ಬದಲ್ಲಿ. ಅರರೆ! ಅದೇ ಹೋಳಿ,ಉತ್ತರದಿಂದ ನಮ್ಮ ಉತ್ತರ ಕರ್ನಾಟಕ್ಕೆ ವಲಸೆ ಬಂದಿದ್ದು ಹೇಗೆ? ಹುಬ್ಬಳ್ಳಿಯಿಂದ ಬೀದರ್‌ ವರೆಗೆ ಹೋಳಿಯ ಸಡಗರ ನೋಡಿದರೆ, ಈ ಹಬ್ಬ ಕರುನಾಡಿನಲ್ಲೇ ಹುಟ್ಟಿತ್ತೇ ಎಂಬ ಅನುಮಾನವೂ ಕಾಡುತ್ತದೆ. ಹೋಳಿ (ಮಾ.9) ಸಮೀಪಿಸುತ್ತಿರುವ ಈ ವೇಳೆ, ರಂಗಿನ ಹಬ್ಬದ ಜಾಡುಹಿಡಿದು ಹೊರಟಾಗ, ಕಂಡ ಬಣ್ಣ- ಭಾವಗಳು ಇವು…

ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಸರ್ಕಲ್‌ನ್ಯಾಗ ನಿಂತು ಬಣ್ಣಾ ಉಗ್ಗಿ ಹೋಳಿಹಬ್ಬದ ರಂಗಪಂಚಮಿ ಆಡೋದ್ರಾಗ ಇರು ಮಜಾ ಉತ್ತರ ಕರ್ನಾಟಕದ ಹುಡಗರಿಗೆ ಇನ್ನೆದರಾಗೂ ಇರಲಿಕ್ಕಿಲ್ಲ. ಗಂಡು ಮೆಟ್ಟಿದ ನಾಡು ಉತ್ತರ ಕರ್ನಾಟಕ ಭಾಗದಲ್ಲಿ ಹೋಳಿ ಹುಣ್ಣಿಮೆ ಆಚರಣೆ ಶತ ಶತಮಾನಗಳಿಂದಲೂ ನಡೆದು ಬಂದಿರುವಂಥದ್ದು. ಈ ಭಾಗದಲ್ಲಿನ ಪ್ರಾದೇಶಿಕ ವೈವಿಧ್ಯತೆಗೆ ತಕ್ಕಂತೆ, ಹೋಳಿಹಬ್ಬ ವಿಭಿನ್ನ ಸ್ವರೂಪದಲ್ಲಿ ಆಚರಿಸಲ್ಪಡುತ್ತದೆ. ಎಲ್ಲ ಭಾಗದಲ್ಲಿಯೂ ಜಾನಪದೀಯ ಅಂಶಗಳೇ ಹೆಚ್ಚು ಪ್ರಚಲಿತದಲ್ಲಿರುವುದು ವಿಶೇಷ.

ಧಾರವಾಡ ಭಾಗದಲ್ಲಿ ರತಿಕಾಮಣ್ಣರನ್ನ ಕೂರಿಸಿ ಪೂಜಿಸಿ, ದಹಿಸುವುದು ಹೋಳಿಹಬ್ಬದ ಪ್ರಧಾನ ಅಂಶವಾದರೆ, ಅರೆಮಲೆನಾಡು ಪ್ರದೇಶದಲ್ಲಿ ಹೋಳಿಗಣಿ, (ಮರದ ದಿಮ್ಮೆ) ತಂದು ನಿಲ್ಲಿಸುವ ಪದ್ಧತಿ ಇದೆ. ಇನ್ನು ಬಾಗಲಕೋಟೆ, ವಿಜಯಪುರ ಭಾಗದಲ್ಲಿ ಹೋಳಿಹುಣ್ಣಿಮೆಯಲ್ಲಿ ಹಲಗಿ ಬಾರಿಸುವ (ತಮಟೆ) ಸ್ಪರ್ಧೆಗಳು ಹೆಚ್ಚು ಪ್ರಚಲಿತದಲ್ಲಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಕಾಮದಹನದ ಜೊತೆ ಹೋಳಿ ಹಾಡುಗಳನ್ನು ಹಾಡುವ ಸಾಂಸ್ಕೃತಿಕ ಸೊಗಡಿನ ಪರಂಪರೆ ಇದೆ. ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿದ್ದ ಹೋಳಿಹಬ್ಬ ಅದು ಹೇಗೆ ಉತ್ತರ ಕರ್ನಾಟಕಕ್ಕೆ ಕಾಲಿಟ್ಟಿತು ಎನ್ನುವ ವಿಚಾರ ಕುತೂಹಲಕಾರಿಯಾಗಿದೆ.

ಆದರೆ, ಇದಕ್ಕೆ ನಿರ್ದಿಷ್ಟ ಸಾಕ್ಷ್ಯಾಧಾರಗಳೇನೂ ಇಲ್ಲದೇ ಹೋದರೂ, ಕಾಲಾಂತರಗಳಲ್ಲಿ ಗೋಚರಿಸಿದ ಸಾಂಸ್ಕೃತಿಕ ಕೊಡು-ಕೊಳ್ಳುವಿಕೆ ಮತ್ತು ಐತಿಹಾಸಿಕ ಘಟನಾವಳಿಗಳು ಓಕುಳಿಯಾಟವನ್ನು ಉತ್ತರ ಕರ್ನಾಟಕಕ್ಕೆ ಕರೆತಂದವು. ಕಲಕತ್ತಾ, ಮುಂಬೈನಂಥ ದೈತ್ಯ ನಗರಗಳ ಪ್ರಭಾವ, ಉತ್ತರ ಕರ್ನಾಟಕ ಭಾಗದ ಮೇಲೆ ಆಗಿದ್ದು ಅನೇಕ ಘಟನಾವಳಿಗಳಿಂದ ತಿಳಿಯುತ್ತದೆ. ಉತ್ತರ ಕರ್ನಾಟಕ ಪಾಳೇಗಾರರು, ನಾಡಗೌಡರು, ಬಿರಾದರ, ಇನಾಂದಾರ ಮತ್ತು ಪಾಟೀಲರ ಮನೆತನಗಳು ತಮ್ಮ ಸಂಭ್ರಮಕ್ಕೆ ಹೋಳಿ ಹಬ್ಬದ ರಂಗು ಹೆಚ್ಚಿಸಿದ್ದು, ಆಯಾ ಕಾಲಘಟ್ಟದಲ್ಲಿ ದಾಖಲಾಗಿದೆ.

ಉದಾಹರಣೆಗೆ, ಬಾಗಲಕೋಟೆಯ ಹೋಳಿಹಬ್ಬವನ್ನು ಇಲ್ಲಿನ ಗೌಡಕಿ ಮನೆತನಗಳು ಇಂದಿಗೂ ನಡೆಸಿಕೊಂಡು ಬರುತ್ತಿವೆ. ಹುಬ್ಬಳ್ಳಿಯ ರಂಗ ಪಂಚಮಿಯ ಮೆರುಗು ಹೆಚ್ಚಿಸಿದ್ದು, ಇಲ್ಲಿನ ಎಸ್‌ಎಸ್‌ಕೆ ಸಮಾಜ ಮತ್ತು ಉತ್ತರ ಭಾರತದಿಂದ ವಲಸೆ ಬಂದ ಮಾರ್ವಾಡಿ ಕುಟುಂಬಗಳು, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ವಿಜಯಪುರದಲ್ಲಿಯೂ ನಗರಕ್ಕೆ ಸೀಮಿತವಾಗಿಯೇ ಮೊದಲು ಓಕುಳಿಯಾಟ ಆರಂಭಗೊಂಡಿತು. ಜನಪದೀಯ ಸಂಸ್ಕೃತಿ ನೆಲೆಯಲ್ಲಿ ನಡೆಯುತ್ತಿದ್ದ ಹೋಳಿಹಬ್ಬಕ್ಕೆ ರಂಗು ತುಂಬಿದವರು ಹೊರಗಿನಿಂದ ಬಂದು ಇಲ್ಲಿ ನೆಲೆಸಿದ ಉತ್ತರ ಭಾರತೀಯ ಸಮುದಾಯಗಳು.

ಜಾನಪದೀಯ ಹೋಳಿ: ಕಾಮ ದಹನ ಅಥವಾ ಹೋಳಿ ಹುಣ್ಣಿಮೆ- ಇವೆರಡೂ ಕರ್ನಾಟಕಕ್ಕೆ ಅದರಲ್ಲೂ ಉತ್ತರ ಕರ್ನಾಟಕಕ್ಕೆ ತೀರಾ ಪುರಾತನ ಹಬ್ಬಗಳು. ರತಿ ಕಾಮಣ್ಣರ ಪರಿಕಲ್ಪನೆ, ಕಾಮ ದಹನದ ಹಿಂದಿರುವ ಶಿವನ ಕಥೆ, ಹೀಗೆ ಕಾಮನ ಹಬ್ಬಕ್ಕೆ ಈ ಭಾಗದಲ್ಲಿ ಶತಮಾನಗಳ ಇತಿಹಾಸವಿದೆ. ಆದರೆ, “ಕಾಮಣ್ಣನ ಹಬ್ಬ ಜಾನಪದ ಸ್ವರೂಪ ಪಡೆದುಕೊಂಡು ಈ ಭಾಗದ ಪ್ರತಿಹಳ್ಳಿ ಅಷ್ಟೇ ಏಕೆ, ಗಲ್ಲಿ ಗಲ್ಲಿಯಲ್ಲೊಬ್ಬ ಕಾಮಣ್ಣನ ದಹನ ಮಾಡುವ ಹಬ್ಬವಾಗಿ ಮೊದಲು ರೂಪುಗೊಂಡಿದ್ದು, ವಿಜಯನಗರ ಸಾಮ್ರಾಜ್ಯದ ಸಂದರ್ಭದಲ್ಲಿ’ ಎನ್ನುತ್ತಾರೆ ಇತಿಹಾಸಕಾರರು.

ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಗಣೇಶೋತ್ಸವ ಅಸ್ತ್ರವಾದಂತೆಯೇ ಯಾವುದೋ ಒಂದು ಸಾಮ್ರಾಜ್ಯದ ವಿಸ್ತರಣೆಯ ಪರಿಕಲ್ಪನೆ ನಡುವೆ ಕಾಮಣ್ಣನ ಹಬ್ಬ ವಿಸ್ತೃತ ಸ್ವರೂಪ ಪಡೆದುಕೊಂಡಿರಲೂಬಹುದು. ಆದರೆ, ಇದು ಮೊದಲು ಸೀಮಿತವಾಗಿದ್ದು ಬರೀ ಕಾಮದಹನ, ರತಿಯ ಹಾಡುಗಳು, ಹೋಳಿ ಹಾಡುಗಳಿಗೆ ಮಾತ್ರ.

ರತಿವಿಜ್ಞಾನದ ವೈಭವೀಕರಣ: ಪಡ್ಡೆ ಹುಡುಗರು ತಮ್ಮ ಮನೋ ಕಾಮನೆಗಳನ್ನು ಮನಬಂದಂತೆ ಹಾಡಿ, ಹೊಗಳುವ ರತಿ ವಿಜ್ಞಾನದ ವೈಭವೀಕರಣಕ್ಕೆ ಉತ್ತರ ಕರ್ನಾಟಕದ ಹೋಳಿಹಬ್ಬ ವೇದಿಕೆಯಾಗಿತ್ತು. ಇಂದಿಗೂ ಕೆಲವು ಹಳ್ಳಿಗಳಲ್ಲಿ ಹೋಳಿಹಬ್ಬದ ದಿನ ಬಣ್ಣ ಆಡುವುದಕ್ಕಿಂತಲೂ ಹೆಚ್ಚಿನ ಪ್ರಾಧಾನ್ಯತೆ ಇಲ್ಲಿ ಹೋಳಿ ಹಾಡುಗಳನ್ನು ಹಾಡುವುದಕ್ಕೆ, ತಮಟೆ, ಹಲಗೆ ಬಾರಿಸುವುದಕ್ಕೆ ಇದೆ. ಆ ದಿನ ಮನಬಂದಂತೆ ಕುಣಿದು, ಮನಸ್ಸು ಬಿಚ್ಚಿ ಹಾಡಿ, ಕುಣಿದು, ಪಾನೀಯಗಳನ್ನು ಕುಡಿದು ಸಂಭ್ರಮಿಸುವ ಅವಕಾಶ ಎಲ್ಲರಿಗೂ ಇರುತ್ತದೆ. ಆದರೆ, ಜಾನಪದ ಸಾಹಿತ್ಯದ ದೃಷ್ಟಿಯಿಂದ ನೋಡಿದಾಗ ಹೋಳಿ ಹಾಡುಗಳು ಎನ್ನುವ ಒಂದು ಸಾಹಿತ್ಯ ಪ್ರಕಾರವೇ ಹುಟ್ಟಿಕೊಳ್ಳಲು ಹೋಳಿಹಬ್ಬ ಕಾರಣವಾಗಿದ್ದೂ ಇದೆ.

ಗುಡ್ಡದ ವಾರ್ಯಾಗ ಕಡ್ಡ ಕೊಯ್ಯುವನಾರೋ
ಗಡ್ಡ ಚಿಗುರದ ಎಳೆ ಹುಡಗೋ/ ಕರಕೊಂಡು
ಗುದ್ದಾಡಿ ಬಳಿಯ ಒಡದಾವೋ…

ಹೋಳಿಗೆಗೆ ಹಂಚಿಟ್ಟು ಮ್ಯಾಳಿಗೆ ಏರ್ಯಾಳೊ..
ಯಾಕಿನ್ನು ಇನೀಯ ಬರಲಿಲ್ಲ/ ಮನಿಮೂಳ
ಉಂಡು ಮಲಗೇಳ್ಳೋ ನನಗಂಡ…

(ಹೊಯ್ಯಕೊಳ್ಳುವುದು ಅರ್ಥಾಥ್‌ ಬಾಯಿ ಬಡೆದುಕೊಳ್ಳುವುದು) ಇಂತಹ ಪರೋಕ್ಷ ಲೈಂಗಿಕ ಸಂಬಂಧಗಳ ಕುರಿತು ಪಡ್ಡೆ ಹುಡುಗರು ಹೋಳಿ ಹಾಡುಗಳಲ್ಲಿ ಕಟ್ಟಿಕೊಡುವ ಪ್ರಸಂಗಗಳೇ ಹೋಳಿಹಬ್ಬ ಸಂಭ್ರಮವನ್ನು ಉತ್ತುಂಗಕ್ಕೆ ಒಯ್ಯುತ್ತಿದ್ದವು. ಇನ್ನು ಕೆಲವು ಹಾಡುಗಳಲ್ಲಿ ಸಮಾಜದ ವಿಶೇಷಾಸಕ್ತಿಗಳು ಇರುತ್ತಿದ್ದವು.

ಮಂಗ ಮುಸಲರ ಹುಡಗಿ ಚೊಂಗ್ಯಾನ ಮಾಡ್ಯಾಳ್ಳೋ
ಲಿಂಗವಂತರ ಹುಡಗ ತಿನವಲ್ಲೋ/ ಆ ಚೊಂಗ್ಯಾ
ಅಂಗಳಕ ಚೆಲ್ಲಿ ಅಳತಾಳೊ…
ಇದರಲ್ಲಿ ಜಾತಿ, ನೀತಿ, ಕುಲವಾಧಾರಿತ ಲೈಂಗಿಕ ಸಂಬಂಧಗಳು, ಮೂದಲಿಸುವಿಕೆ ಕೂಡ ಇರುತ್ತಿತ್ತು.

ಬಯಲು ಸೀಮೆಗೆ ಹೋಳಿಹುಣ್ಣಿಮೆಯಲ್ಲಿ ನಶೆ ಪದಾರ್ಥಗಳ ಬಳಕೆ ಅತಿಯಾಗಿತ್ತು. ಕೆಲವು ಹಳ್ಳಿಗಳಲ್ಲಿ ಕಾಮಣ್ಣನಿಗೆ ಸಾರಾಯಿಯನ್ನೇ ನೈವೇದ್ಯ ಮಾಡುವ ಪದ್ಧತಿ ಇತ್ತು. ಈಗಲೂ ಅದು ಅಲ್ಲಲ್ಲಿ ಜೀವಂತವಾಗಿದೆ. ಮಲೆನಾಡಿನ ಹಳ್ಳಿಗರು ಕಾಮಣ್ಣನ ಗಣಿ (ಮರದ ದಿಮ್ಮಿ) ಹೊತ್ತು ಕಡೆದು ತಂದು ಅದನ್ನು ಊರ ಬಾಗಿಲಿಗೆ ನೆಟ್ಟು ಸಂಭ್ರಮಿಸುವ ಪದ್ಧತಿ ಧಾರವಾಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಯಲ್ಲಿದೆ.

ಇಂತಿಪ್ಪ ಹೋಳಿಹುಣ್ಣಿಮೆಯಲ್ಲಿ ಎಲ್ಲಿಯೂ ಓಕಳಿಯಾಟದ ಸದ್ದು ಆರಂಭದಲ್ಲಿ ಇರಲಿಲ್ಲ. “ಇದು ಉತ್ತರ ಭಾರತದ ಹೋಳಿ ಹುಣ್ಣಿಮೆ ಪ್ರಭಾವವೇ ಆಗಿದೆ’ ಎನ್ನುತ್ತಾರೆ ಇತಿಹಾಸ ತಜ್ಞರು ಮತ್ತು ಜಾನಪದ ವಿದ್ವಾಂಸರು. “ಐತಿಹಾಸಿಕವಾಗಿ ಪಾಳೆಗಾರರು ಮತ್ತು ಜಮೀನುದಾರರು ಇದನ್ನ ಪೋಷಿಸಿಕೊಂಡು ಬಂದರು’ ಎನ್ನುವುದು, ಹಿರಿಯ ಜಾನಪದ ತಜ್ಞ ಶ್ರೀಶೈಲ ಹುದ್ದಾರ ಅವರ ಅಭಿಪ್ರಾಯ.

“ಉತ್ತರ’ದಿಂದ ಬಂದ ಬಗೆ: ಹುಬ್ಬಳ್ಳಿಯಲ್ಲಿನ ಎಸ್‌ಎಸ್‌ಕೆ ಸಮಾಜ, ಉತ್ತರದಿಂದ ಬಂದ ಲಂಬಾಣಿಗರು, ಮಹಾರಾಷ್ಟ್ರದಿಂದ ವಲಸೆ ಬಂದ ಗೌಳಿಗರು, ಸೈನ್ಯದಲ್ಲಿದ್ದು ವಲಸೆ ಬಂದ ಉತ್ತರ ಭಾರತೀಯರು ಹಾಗೂ ಇತರೇ ಸಮುದಾಯಗಳು ಹೋಳಿಹಬ್ಬದಲ್ಲಿ ಬಣ್ಣದ ಓಕುಳಿಯಾಡುವ ಸಂಪ್ರದಾಯವನ್ನು ಜೀವಂತವಾಗಿಟ್ಟುಕೊಂಡಿದ್ದವು. ನಗರಗಳಲ್ಲಿ ವ್ಯಾಪಾರಕ್ಕಾಗಿ ಬಂದ ಉತ್ತರ ಭಾರತೀಯ ವ್ಯಾಪಾರಿಗಳು ಓಕುಳಿಯಾಟಕ್ಕೆ ಒತ್ತುಕೊಟ್ಟು ಆಚರಿಸಲಾರಂಭಿಸಿದರು.

ನಂತರ ಸಿನಿಮಾ, ಟಿ.ವಿ. ಮತ್ತು ಮೊಬೈಲ್‌ ಯುಗದಲ್ಲಿ ಓಕುಳಿ ಕೆಲವೇ ವರ್ಷಗಳಲ್ಲಿ ಎಲ್ಲಾ ಹಳ್ಳಿಹಳ್ಳಿಗಳನ್ನು ಆವರಿಸಿಬಿಟ್ಟಿತು. 1950ರ ದಶಕದಲ್ಲಿ ಉತ್ತರ ಕರ್ನಾಟಕದ ನಗರಗಳಾದ ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಬಾಲಕೋಟೆ, ವಿಜಯಪುರ, ಹಾವೇರಿ, ಗದಗ, ಕಲಬುರಗಿ, ಬಳ್ಳಾರಿಯಂಥ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಓಕುಳಿಯಾಟ 2000ನೇ ಇಸ್ವಿ ಅಷ್ಟೊತ್ತಿಗೆ ಹಳ್ಳಿಹಳ್ಳಿಗಳನ್ನು ವ್ಯಾಪಿಸಲು ಕಾರಣವಾಗಿದ್ದು, ಸಿನಿಮಾ, ಟಿ.ವಿ., ಒಟ್ಟಾರೆ ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಯಿಂದ ಓಕುಳಿ ಪಸರಿಸಿತು. ಇಷ್ಟಪಟ್ಟು ಇದನ್ನು ಎಲ್ಲರೂ ಆಚರಿಸಲಾರಂಭಿಸಿದರು.

ಮೊಳಗಿದ ಡಿಜೆಗಳ ಸದ್ದು: ಓಕುಳಿಯಾಟ ರಂಗಪಂಚಮಿಗೆ ಹಾಲು ಕುಡಿವ ಹಸುಗೂಸಿನಿಂದ ಹಿಡಿದು ಆಲ್ಕೋಹಾಲು ಕುಡಿವ ಯುವಕರವರೆಗೆ ಎಲ್ಲರೂ ಸಂಭ್ರಮದ ಗುಂಗಿನಲ್ಲಿರುತ್ತಾರೆ. ಬಣ್ಣ ಎರಚಾಡಿ ಆನಂದಿಸುವ ಮತ್ತು ಹಿರಿಯರೊಂದಿಗೂ ಸಂಕೋಚ ಮರೆತು ಬೆರೆಯುವ ಹಬ್ಬ ಹೋಳಿ. ಮೊದಲು ರತಿಮನ್ಮಥರ ಪದಗಳ ಜಾನಪದೀಯ ಕಲರವವಿತ್ತು. ಇದೀಗ ಡಿ.ಜೆ.ಗಳ ಸದ್ದಿಗೆ ಹೆಜ್ಜೆ ಹಾಕುವ ಯುವಕ- ಯುವತಿಯರ ಕುಣಿತದ ಜೋರಾಟಕ್ಕೆ ಇಡೀ ಉತ್ತರ ಕರ್ನಾಟಕವೇ ರಂಗೆದ್ದು ಹೋಗುತ್ತಿದೆ.

ಸಾಂಸ್ಕೃತಿಕ ಕೊಡು-ಕೊಳ್ಳುವಿಕೆ: ವಿಜಯನಗರ ಕಾಲದಿಂದ ಹಿಡಿದು ಈವರೆಗೂ ಉತ್ತರ ಕರ್ನಾಟಕ ಭಾಗ ಮೊಘಲರು, ಬಹಮನಿ ಸುಲ್ತಾನರು, ಹೈದ್ರಾಬಾದ್‌ ನಿಜಾಮರು, ಮರಾಠರು, ಬ್ರಿಟಿಷರು- ಹೀಗೆ ಅನೇಕ ಅರಸು ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದು, ಆಯಾ ರಾಜರ ಕಾಲಾವಧಿಯಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಬಂದ ಹೋಳಿ ಹಬ್ಬದಲ್ಲಿ ಬಣ್ಣ ಆಡುವ ಸಮುದಾಯಗಳು ಎರವಲು ತಂದಿವೆ ಎನ್ನುವ ವಾದವನ್ನು ಈ ಭಾಗದ ಹಿರಿಯ ಇತಿಹಾಸ ಸಂಶೋಧಕರು ಪ್ರತಿಪಾದಿಸುತ್ತಾರೆ.

* ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.