ರೋಚಕ-ಚುಂಬಕ ಟೆಸ್ಟ್ ಕ್ರಿಕೆಟ್
ಟೆಸ್ಟ್ ಕ್ರಿಕೆಟ್‌ನಲ್ಲೂ ಶುರುವಾಗಿದೆ 2 ವರ್ಷಗಳ ವಿಶ್ವ ಚಾಂಪಿಯನ್ ಶಿಪ್
Team Udayavani, Aug 3, 2019, 5:00 AM IST
ಕ್ರಿಕೆಟ್ ಶುರುವಾಗಿದ್ದರ ಹಿಂದೆ ಒಂದು ಕಥೆಯಿದೆ. ಇಂಗ್ಲೆಂಡ್‌ನಲ್ಲಿ ದನ ಕಾಯುತ್ತಿದ್ದ ಹುಡುಗರು ತಮ್ಮ ಬೇಸರ ಕಳೆಯಲು, ಚೆಂಡಿನಂತೆ ಇರುವ ಒಂದು ವಸ್ತುವನ್ನು ಎಸೆಯುವುದು, ಇನ್ನೊಬ್ಬ ಅದಕ್ಕೆ ಕೋಲಿನಿಂದ ಚಚ್ಚುವುದು ಮಾಡುತ್ತಿದ್ದರಂತೆ. ಕಡೆಗೆ ಅದೇ ಕ್ರಿಕೆಟ್ ಆಗಿ ಬದಲಾಯಿತು ಎಂದು ದಂತಕಥೆ ಹೇಳುತ್ತಾರೆ. ಇದು ಎಷ್ಟು ಸತ್ಯವೋ, ಸುಳ್ಳೋ ಗೊತ್ತಿಲ್ಲ. ಆದರೆ ಆ ಕ್ರಿಕೆಟನ್ನು ಬ್ರಿಟಿಷರು ಎಲ್ಲೆಲ್ಲಿ ಹೋದರೋ ಅಲ್ಲೆಲ್ಲ ಹಬ್ಬಿಸಿದರು. ಭಾರತ, ಆಸ್ಟ್ರೇಲಿಯ, ದ.ಆಫ್ರಿಕಾ ಹೀಗೆ ಕ್ರಿಕೆಟ್ ಬೆಳೆಯುತ್ತ ಹೋಯಿತು. ಯಾವ ದೇಶದಲ್ಲಿ ಕ್ರಿಕೆಟ್ ಇದೆಯೋ ಅಲ್ಲಿ, ಉಳಿದ ಕ್ರೀಡೆಗಳು ಅಷ್ಟು ಮಹತ್ವದ ಸ್ಥಾನ ಪಡೆದುಕೊಂಡಿಲ್ಲವೆನ್ನುವುದನ್ನೂ ಇಲ್ಲಿ ಗಮನಿಸಬೇಕು. ಇಂಗ್ಲೆಂಡ್ ಹೋದ ಕಡೆಯಲ್ಲೆಲ್ಲ ಕ್ರಿಕೆಟ್ ಆವರಿಸಿಕೊಂಡಿದೆ. ಮತ್ತೂಂದು ಗಮನಿಸಬೇಕಾದ ಸಂಗತಿ ಇಂಗ್ಲಿಷ್. ಆಂಗ್ಲ ಭಾಷೆ ಮತ್ತು ಕ್ರಿಕೆಟನ್ನು ಭಾರತದಂತೆ, ಇಂಗ್ಲೆಂಡ್‌ನ ಆಡಳಿತಕ್ಕೆ ಒಳಪಟ್ಟ ದೇಶಗಳೆಲ್ಲವೂ ಅಳವಡಿಸಿಕೊಂಡಿವೆ!
ಕ್ರಿಕೆಟಿನ ಮೊದಲ ರೂಪ ಟೆಸ್ಟ್. ಆರಂಭದಲ್ಲಿ ಇದಕ್ಕೆ ದಿನಗಳ ಮಿತಿಯಿರಲಿಲ್ಲ. ಸೋಲು ಗೆಲುವಿನ ಫಲಿತಾಂಶ ಬರುವವರೆಗೆ ಆಡಲಾಗುತ್ತಿತ್ತು. ಒಂದು ಹಂತದ ನಂತರ ಅದನ್ನು ಐದು ದಿನಕ್ಕೆ ಮಿತಿಗೊಳಿಸಲಾಯಿತು. ಫಲಿತಾಂಶ ಬರದಿದ್ದರೆ, ಅದನ್ನು ಡ್ರಾ ಎಂದು ಪರಿಗಣಿಸಲಾಯಿತು. ಈ ಮಾದರಿಯ ಕ್ರಿಕೆಟ್ ಒಂದೇ ಅಸ್ತಿತ್ವದಲ್ಲಿದ್ದರಿಂದ, ಆರಂಭದಲ್ಲಿ ಇದು ಬಹಳ ಜನಪ್ರಿಯವಾಗಿತ್ತು. ಜನ ಬಹಳ ಕುತೂಹಲದಿಂದ ನೋಡುತ್ತಿದ್ದರು. ಆದರೆ ಇದಕ್ಕಿದ್ದ ಸಮಸ್ಯೆಯೆಂದರೆ ಮಳೆ. ಇಂಗ್ಲೆಂಡ್, ಆಸ್ಟ್ರೇಲಿಯದಂತಹ ದೇಶಗಳಲ್ಲಿ ಮಳೆ ಜಾಸ್ತಿ. ಅದು ಬಂದರೆ ಕೆಲವೊಮ್ಮೆ ಪೂರ್ಣ ಟೆಸ್ಟ್ ಪಂದ್ಯವೇ ರದ್ದಾಗುತ್ತಿತ್ತು. ಅಭಿಮಾನಿಗಳು ನಿರಾಶರಾಗುತ್ತಿದ್ದರು. ಈ ಹಂತದಲ್ಲಿ ಅಭಿಮಾನಿಗಳಿಗೆ ನಿರಾಶೆ ತಪ್ಪಿಸುವುದು ಹೇಗೆ ಎಂದು ಯೋಚಿಸಿದಾಗ, ಹೊಳೆದಿದ್ದೇ ಏಕದಿನ ಕ್ರಿಕೆಟ್. 1971ರಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಮಳೆಗೆ ಸಿಕ್ಕಿ ರದ್ದಾಗುವ ಹಂತ ತಲುಪಿದಾಗ, ಒಂದು ದಿನದ ಕ್ರಿಕೆಟ್ ನಡೆಸಲಾಯಿತು. ಅಲ್ಲಿಂದ ಕ್ರಿಕೆಟ್‌ನ ಸ್ವರೂಪ ವೇಗಗೊಳ್ಳುತ್ತ ಹೋಯಿತು. ಎಷ್ಟು ವೇಗವೆಂದರೆ ಟಿ20 ಮಟ್ಟಕ್ಕೆ ಬರುವಷ್ಟು ವೇಗವಾಗಿದೆ. ಇದರಿಂದ ದೊಡ್ಡ ಏಟು ತಿಂದಿದ್ದು ಟೆಸ್ಟ್ ಕ್ರಿಕೆಟ್. ಅದು ದಿನದಿನಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತ ಸಾಗಿ, ಈಗಂತೂ ಇಂಗ್ಲೆಂಡ್-ಆಸ್ಟ್ರೇಲಿಯ ನಡುವಿನ ಪಂದ್ಯಗಳನ್ನು ಬಿಟ್ಟರೆ, ಉಳಿದ ತಂಡಗಳ ನಡುವೆ, ಉಳಿದ ದೇಶಗಳಲ್ಲಿ ನಡೆಯುವ ಪಂದ್ಯಗಳನ್ನು ನೋಡಲು ಜನರೇ ಇರುವುದಿಲ್ಲ! ಟೆಸ್ಟ್ ಕ್ರಿಕೆಟ್ ಇದ್ದಾಗ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕೊಡುವ ಮಟ್ಟಕ್ಕೆ ಪರಿಸ್ಥಿತಿ ಬದಲಾಗಿದೆ. ಹೀಗೆಯೇ ಬಿಟ್ಟರೆ ಟೆಸ್ಟ್ ಕ್ರಿಕೆಟನ್ನು ಸಂಪೂರ್ಣ ರದ್ದು ಮಾಡಬೇಕಾಗಬಹುದು ಎಂಬ ಆತಂಕಕ್ಕೆ ಎದುರಾಯಿತು.
ಆದ್ದರಿಂದ ಹಲವು ವರ್ಷಗಳಿಂದ ಟೆಸ್ಟ್‌ಗೂ ಒಂದು ಆಕರ್ಷಕ ರೂಪ ಕೊಡಬೇಕು. ತಂಡಗಳು ಶುದ್ಧ ಪೈಪೋಟಿಯನ್ನು ನಡೆಸಬೇಕಾದ ಮಾದರಿಯಲ್ಲಿ ಅದನ್ನು ಬದಲಾಯಿಸಬೇಕು ಎಂದು ಐಸಿಸಿ ಯೋಚಿಸಿತು. ಅದರ ಫಲವಾಗಿ ಹುಟ್ಟಿಕೊಂಡಿರುವುದು ಟೆಸ್ಟ್ ವಿಶ್ವಚಾಂಪಿಯನ್‌ಶಿಪ್. ಬಹಳ ವರ್ಷಗಳಿಂದ ಇದನ್ನು ಮಾಡಬೇಕು ಎಂದು ಹೇಳುತ್ತಲೇ ಬಂದಿದ್ದರೂ ಜಾರಿಯಾಗಿರಲಿಲ್ಲ. ಭಾರತದ ಶಶಾಂಕ್ ಮನೋಹರ್ ಐಸಿಸಿಗೆ ಮುಖ್ಯಸ್ಥರಾದ ಮೇಲೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡರು. ಅದರಲ್ಲಿ ಬಹಳ ಮುಖ್ಯವಾಗಿದ್ದು, ಬಿಸಿಸಿಐಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕಾಂಗಿಯಾಗಿಸಿದ್ದು. ಇನ್ನೊಂದು ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಜಾರಿ ಮಾಡಲು ಎಲ್ಲರನ್ನೂ ಒಪ್ಪಿಸಿದ್ದು. ವಿಶ್ವ ಕ್ರಿಕೆಟ್‌ನಲ್ಲಿ ಬಿಸಿಸಿಐಯನ್ನು ತುಸು ಶಕ್ತಿಹೀನ ಮಾಡಿದ ಕಾರಣದಿಂದಲೇ, ಇಂತಹ ಕೂಟವೊಂದು ಜಾರಿಯಾಗಲು ಸಾಧ್ಯವಾಯಿತು ಎಂದು ಹೇಳಬಹುದು.
ಏನಿದು ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್?
ಇದು ಟೆಸ್ಟ್ ಕ್ರಿಕೆಟ್‌ನ ವಿಶ್ವಕಪ್ ಇದ್ದಂತೆ. 2019ರಿಂದ 2021ರವರೆಗೆ ಎರಡು ವರ್ಷಗಳ ಕಾಲ ನಡೆಯುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರೋಚಕತೆಯನ್ನು ಹೆಚ್ಚಿಸಲು ಈ ಮಾದರಿ ಶುರು ಮಾಡಲಾಗಿದೆ.
ಎಲ್ಲಿಂದ ಎಲ್ಲಿಯವರೆಗೆ ನಡೆಯಲಿದೆ?
ಆ.1, 2019ರ ಇಂಗ್ಲೆಂಡ್-ಆಸ್ಟ್ರೇಲಿಯನ ನಡುವಿನ ಐದು ಟೆಸ್ಟ್‌ಗಳ ಆ್ಯಷಸ್ ಸರಣಿಯಿಂದ ಶುರುವಾಗಲಿದೆ. 2021, ಜೂನ್‌ನಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್ನಲ್ಲಿ ಅಂತಿಮ ಪಂದ್ಯ ನಡೆಯಲಿದೆ.
ಹೇಗಿರುತ್ತದೆ ಸ್ವರೂಪ?
ಎರಡು ವರ್ಷಗಳ ಕಾಲ ನಡೆಯುತ್ತದೆ. ಜಿಂಬಾಬ್ವೆ ನಿಷೇಧಕ್ಕೊಳಗಾಗಿರುವುದರಿಂದ ಒಟ್ಟು 9 ತಂಡಗಳು ಕೂಟದಲ್ಲಿ ಪಾಲ್ಗೊಳ್ಳುತ್ತವೆ. ತಂಡವೊಂದು ತಾನು ಆಯ್ಕೆ ಮಾಡಿಕೊಂಡ 6 ತಂಡಗಳ ವಿರುದ್ಧ ಮಾತ್ರ ಟೆಸ್ಟ್ ಸರಣಿ ಆಡಬೇಕು . ಕನಿಷ್ಠ 2, ಗರಿಷ್ಠ 5 ಪಂದ್ಯಗಳಿರುವ 6 ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಬೇಕು. ಈ ಪೈಕಿ 3 ಸರಣಿ ತನ್ನ ನೆಲದಲ್ಲಿ, ಇನ್ನು ಮೂರು ಸರಣಿಯನ್ನು ವಿದೇಶಿ ನೆಲದಲ್ಲಿ ಆಡಬೇಕು.
ಅಂಕ ಹಂಚಿಕೆ ಹೇಗೆ?
ಒಂದು ಸರಣಿಗೆ 120 ಅಂಕವಿರುತ್ತದೆ. ಈ ಅಂಕವನ್ನು ಸರಣಿಯೊಂದರಲ್ಲಿ ಒಟ್ಟು ಎಷ್ಟು ಟೆಸ್ಟ್ ನಡೆಯುತ್ತದೆ ಎಂಬ ಆಧಾರದಲ್ಲಿ ವಿಭಾಗಿಸಿ ಹಂಚಲಾಗುತ್ತದೆ. ಅಂದರೆ ಸರಣಿಯೊಂದರಲ್ಲಿ ಎರಡು ಟೆಸ್ಟ್ ಇದ್ದರೆ, ಒಂದು ಟೆಸ್ಟ್‌ಗೆ 60 ಅಂಕ ಸಿಗುತ್ತದೆ. 5 ಟೆಸ್ಟ್ ಇದ್ದರೆ, ಪಂದ್ಯವೊಂದಕ್ಕೆ 24 ಅಂಕ ಸಿಗುತ್ತದೆ. ಇದೇ ಆಧಾರದಲ್ಲಿ ಅಗ್ರ ತಂಡವನ್ನು ನಿರ್ಧರಿಸಲಾಗುತ್ತದೆ.
ಫಲಿತಾಂಶದ ಆಧಾರದಲ್ಲಿ ತಂಡ ಪಡೆಯುವ ಅಂಕ
ಪಂದ್ಯಗಳ ಸಂಖ್ಯೆ ಗೆದ್ದರೆ ಸೋತರೆ ಡ್ರಾ ಸಮ
2 60 0 20 30
3 40 0 13.3 20
4 30 0 10 15
5 24 0 8 12
ನಿರ್ಬಂಧಗಳೇನು?
ಒಂದು ತಂಡ 6 ತಂಡಗಳ ವಿರುದ್ಧ ಮಾತ್ರ ಆಡಬೇಕು. ಯಾವ ತಂಡದ ವಿರುದ್ಧ ಆಡಬೇಕು ಎನ್ನುವುದನ್ನು ತಂಡಗಳು ಮೊದಲೇ ಮಾತುಕಥೆ ನಡೆಸಿರುತ್ತವೆ. ಆ ಪ್ರಕಾರ ಐಸಿಸಿ ವೇಳಾಪಟ್ಟಿ ನಿರ್ಧರಿಸುತ್ತದೆ. ವಿಶ್ವ ಚಾಂಪಿಯನ್‌ಶಿಪ್ ಅನ್ನು ಹೊರತುಪಡಿಸಿ, ತಂಡಗಳು ಇದೇ ಅವಧಿಯಲ್ಲಿ ಬೇರೆ ಟೆಸ್ಟ್‌ಗಳನ್ನೂ ಆಡಬಹುದು.
ಕಣದಲ್ಲಿರುವ ತಂಡಗಳು ಯಾವುವು?
ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯ, ದ.ಆಫ್ರಿಕಾ, ಪಾಕಿಸ್ತಾನ, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ತಂಡಗಳು ಆಡಲಿವೆ. ಈ ಕೂಟದಲ್ಲಿ ಆಡುವ ಅರ್ಹತೆ ಹೊಂದಿದ್ದ ಜಿಂಬಾಬ್ವೆಯನ್ನು ಆಡಳಿತಾತ್ಮಕ ಗೊಂದಲದ ಕಾರಣ ಐಸಿಸಿ ನಿಷೇಧ ಮಾಡಿದೆ. ಇನ್ನು ಇತ್ತೀಚೆಗಷ್ಟೇ ಟೆಸ್ಟ್ ಮಾನ್ಯತೆ ಪಡೆದಿರುವ ಆಫ^ನಿಸ್ತಾನ, ಐರ್ಲೆಂಡ್‌ಗಳೂ ಭಾಗವಹಿಸುವುದಿಲ್ಲ.
ವಿಜೇತರ ನಿರ್ಧಾರ ಹೇಗೆ?
ಪ್ರತಿ ಟೆಸ್ಟ್‌ನಲ್ಲಿ ತಂಡವೊಂದು ಪಡೆಯುವ ಅಂಕಗಳನ್ನು ಪರಿಗಣಿಸಿ ಅಗ್ರ ಎರಡು ತಂಡಗಳನ್ನು ನಿರ್ಧರಿಸಲಾಗುತ್ತದೆ. ಈ ಎರಡು ತಂಡಗಳ ನಡುವೆ ಅಂತಿಮ ಪಂದ್ಯ ನಡೆಸಿ ವಿಶ್ವ ವಿಜೇತರ ನಿರ್ಧಾರ ಮಾಡಲಾಗುತ್ತದೆ.
ಭಾರತದ ವೇಳಾಪಟ್ಟಿ ಹೀಗಿದೆ…
ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತ ಇದೇ ತಿಂಗಳು ಆಗಸ್ಟ್‌ನಲ್ಲಿ 2 ಟೆಸ್ಟ್ ಆಡುತ್ತದೆ. ಇಲ್ಲಿಂದ ಭಾರತದ ವಿಶ್ವ ಚಾಂಪಿಯನ್‌ಶಿಪ್ ಹೋರಾಟ ಆರಂಭವಾಗುತ್ತದೆ. ತನ್ನ ನೆಲದಲ್ಲಿ 3, ವಿದೇಶಿ ನೆಲದಲ್ಲಿ 3 ಸರಣಿ ಆಡುತ್ತದೆ.
ಎದುರಾಳಿ ನೆಲ ಟೆಸ್ಟ್‌ಗಳು ವರ್ಷ
ವೆಸ್ಟ್ ಇಂಡೀಸ್ ವಿದೇಶ 2 ಆಗಸ್ಟ್ 2019
ದ.ಆಫ್ರಿಕಾ ಸ್ವದೇಶ 3 ಅಕ್ಟೋಬರ್, ನವೆಂಬರ್ 2019
ಬಾಂಗ್ಲಾದೇಶ ಸ್ವದೇಶ 2 ನವೆಂಬರ್ 2019
ನ್ಯೂಜಿಲೆಂಡ್ ವಿದೇಶ 2 ಫೆಬ್ರವರಿ 2020
ಆಸ್ಟ್ರೇಲಿಯ ವಿದೇಶ 4 ಡಿಸೆಂಬರ್ 2020
ಇಂಗ್ಲೆಂಡ್ ಸ್ವದೇಶ 5 ಜನವರಿ-ಫೆಬ್ರವರಿ 2021
ಕೂಟದಿಂದ ಲಾಭವೇನು?
1. ಕ್ರಿಕೆಟ್ ತಂಡಗಳು ಟೆಸ್ಟ್ ಕ್ರಿಕೆಟನ್ನು ಗಂಭೀರವಾಗಿ ಪರಿಗಣಿಸುತ್ತವೆ. ಐಸಿಸಿ ವೇಳಾಪಟ್ಟಿ ನಿಗದಿ ಮಾಡಿದೆಯೆಂಬ ಕಾರಣಕ್ಕೆ ಟೆಸ್ಟ್ ಆಡುವ ಕಾಟಾಚಾರ ಇಲ್ಲವಾಗುತ್ತದೆ.
2. ಗೆಲುವಿನ ಫಲಿತಾಂಶವನ್ನೇ ಪಡೆಯಲು ಕಡ್ಡಾಯವಾಗಿ ಯತ್ನಿಸುತ್ತವೆ. ಆಗ ನೀರಸ ಡ್ರಾಗಳ ಸಂಖ್ಯೆ ಕಡಿಮೆಯಾಗುತ್ತದೆ.
3. ಆಗ ಸಹಜವಾಗಿಯೇ ಟೆಸ್ಟ್‌ಗೆ ರೋಚಕತೆ ಬರುತ್ತದೆ. ಅಭಿಮಾನಿಗಳು ಮೈದಾನಕ್ಕೆ ಬರುತ್ತಾರೆ.
4. ಅಭಿಮಾನಿಗಳು ಬಂದರೆ ತನ್ನಿಂತಾನೇ ಟೆಸ್ಟ್ ಮಾದರಿ ಅಸ್ತಿತ್ವ ಉಳಿಸಿಕೊಳ್ಳುತ್ತದೆ.
-ನಿರೂಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.