ವಿಶ್ವಕಪ್‌ನಲ್ಲಿ ರೋಹಿಟ್ ಶತಕ
Team Udayavani, Jul 6, 2019, 11:22 AM IST
ಕಲ್ಪನೆ, ವ್ಯಾಖ್ಯಾನಗಳಿಗೆ ನಿಲುಕಿದ ವಿಶಿಷ್ಟ ಕ್ರಿಕೆಟಿಗ , ಅದ್ಭುತ ಸಲೀಸಾಗಿ ಸಾಧಿಸಬಲ್ಲ ಬ್ಯಾಟ್ಸ್‌ಮನ್
ಕೆಲವು ಕ್ರಿಕೆಟಿಗರನ್ನು ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ. ಅವರನ್ನು ಹೇಗೆ ಭಾವಿಸಬೇಕು, ಊಹಿಸಬೇಕು ಎಂದು ಗೊತ್ತಾಗುವುದಿಲ್ಲ. ಇವರು ಆಡಲು ಸಾಧ್ಯವೇ ಇಲ್ಲ, ಅದರಲ್ಲೂ ಇಂತಹ ತಂಡದೆದುರು, ಇಂತಹ ಅಂಕಣದಲ್ಲಂತೂ ಸಾಧ್ಯವೇ ಇಲ್ಲ ಎಂದು ತಜ್ಞರು ಹೇಳಿ ಮುಗಿಸುವಷ್ಟರಲ್ಲೇ ವಿಶ್ವದಾಖಲೆಗಳ ಮೇಲೆ ವಿಶ್ವದಾಖಲೆ ನಿರ್ಮಿಸುತ್ತಾರೆ. ಇವರಂತಹ ದೈತ್ಯ ಆಟಗಾರರು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ ಎಂಬ ಅನುಮಾನ ಹುಟ್ಟಿಸುತ್ತಾರೆ. ಆಗ ನೀವವರನ್ನು ನಂಬುತ್ತೀರಿ. ಅನಿವಾರ್ಯ ಸಂದರ್ಭದಲ್ಲಿ ಸಂಪೂರ್ಣ ಭರವಸೆಯಿಡುತ್ತೀರಿ. ಅಲ್ಲಿ ಇವರು ಕೈಕೊಡುತ್ತಾರೆ, ನಿಮ್ಮ ಭರವಸೆಗಳನ್ನು ಇನ್ನಿಲ್ಲದಂತೆ ನೆಲಸಮ ಮಾಡುತ್ತಾರೆ.
ಇಂತಹ ಆಟಗಾರರ ಸಾಲಿನಲ್ಲಿ ಬರುವುದು ರೋಹಿತ್ ಶರ್ಮ. ನಿಮ್ಮ ವರ್ಣನೆ, ವ್ಯಾಖ್ಯಾನಗಳಿಗೆ ನಿಲುಕದ ಆಟಗಾರ. ನೀವು ಇವರ ಬಗ್ಗೆ ತೀರ್ಮಾನವನ್ನೇ ಕೈಗೊಳ್ಳಲು ಸಾಧ್ಯವಾಗದ ದಾಂಡಿಗ. ಈ ಆಟಗಾರನ ಬಗ್ಗೆ ಒಂದು ನಂಬಿಕೆಯ ಚೌಕಟ್ಟನ್ನು ನಿರ್ಮಿಸಿಕೊಂಡರೆ, ಅದರಲ್ಲಿ ನೀವು ಸೋತಿರೆಂದೇ ಅರ್ಥ.
ಪ್ರಸ್ತುತ ವಿಶ್ವಕಪ್‌ಗೆ ಬರುವುದಕ್ಕೆ ಮುಂಚೆ ಭಾರತ ತನ್ನದೇ ನೆಲದಲ್ಲಿ ಆಸ್ಟ್ರೇಲಿಯ ವಿರುದ್ಧ 3 ಟಿ20 ಮತ್ತು 5 ಏಕದಿನ ಪಂದ್ಯಗಳನ್ನಾಡಿತ್ತು. ಅದರಲ್ಲಿ ಕ್ರಮವಾಗಿ ರೋಹಿತ್ ಸಾಧನೆ ಹೀಗಿದೆ ನೋಡಿ: 5, 37 (ಟಿ20), 37,0, 14, 95, 56 (ಏಕದಿನ). ಈ ಸರಣಿಯ ಅಂಕಿಗಳೇ ರೋಹಿತ್ ಸಾಧನೆಯನ್ನು ಹೇಳುತ್ತವೆ. ಕೊನೆಯೆರಡು ಪಂದ್ಯಗಳನ್ನು ಹೊರತುಪಡಿಸಿ, ಅವರ ಸಾಧನೆ ಸಂಪೂರ್ಣ ಶೂನ್ಯ. ಇದರ ನಂತರ ರೋಹಿತ್ ಐಪಿಎಲ್‌ನಲ್ಲಿ ಆಡಿದರು. ಅವರ ತಂಡವೇ ಪ್ರಶಸ್ತಿ ಗೆದ್ದರೂ, ರೋಹಿತ್ ಸಾಧನೆ ಹೇಳಿಕೊಳ್ಳುವ ಮಟ್ಟಕ್ಕೆ ಬರಲೇ ಇಲ್ಲ. ಒಂದು ರೀತಿಯಲ್ಲಿ ವಿಫಲ ಬ್ಯಾಟ್ಸ್‌ಮನ್, ಯಶಸ್ವಿ ನಾಯಕ ಎಂದು ಕರೆಯಬಹುದು. ಇನ್ನೂ ವಿಶೇಷವೆಂದರೆ ಪ್ರಶಸ್ತಿ ಗೆದ್ದ ಲೆಕ್ಕಾಚಾರದಲ್ಲಿ ರೋಹಿತ್ ಶರ್ಮ ಐಪಿಎಲ್‌ನ ಸರ್ವಶ್ರೇಷ್ಠ ನಾಯಕ, ಆದರೆ ವಿಫಲ ಬ್ಯಾಟ್ಸ್‌ಮನ್.
ಇಂತಹ ರೋಹಿತ್ ಶರ್ಮ ಅವರನ್ನಿಟ್ಟುಕೊಂಡ ಭಾರತ ತಂಡ ವಿಶ್ವಕಪ್‌ಗೆ ಬಂದಾಗ ರೋಹಿತ್ ಅವರ ಮೇಲೆ ನಂಬಿಕೆಯಿಡಲೇಬೇಕಾದ ಅನಿವಾರ್ಯತೆ ಹೊಂದಿತ್ತು. ವಿಶ್ವಕಪ್ ಆದ್ದರಿಂದ ಎಲ್ಲ ಆಟಗಾರರೂ ಮಿಂಚಿದರೆ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ರೋಹಿತ್ ಮೇಲೆ ನಿರೀಕ್ಷೆಯಿದ್ದರೂ, ಅವರು ಮಿಂಚುತ್ತಾರೆಂಬ ನಂಬಿಕೆ ಮಾತ್ರ ಬಹುತೇಕರಲ್ಲಿ ಇರಲೇ ಇಲ್ಲ. ಜನರ ನಂಬಿಕೆಯಿದ್ದಿದ್ದು ಎಂದಿನಂತೆ ನಾಯಕ ವಿರಾಟ್ ಕೊಹ್ಲಿ ಮೇಲೆ. ಹಾಗೆ ಹೇಳುವುದಾದರೆ ಭಾರತದ ಪ್ರದರ್ಶನದ ಬಗ್ಗೆಯೂ ಅನುಮಾನಗಳಿದ್ದವು. ಏನಾದರೂ ಮಾಡಬಹುದೆಂದು ನಿರೀಕ್ಷೆಯಿದ್ದಿದ್ದು ಕೊಹ್ಲಿ, ಬುಮ್ರಾರಂತಹ ಕೆಲವೇ ಆಟಗಾರರ ಮೇಲೆ. ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತ ದ.ಆಫ್ರಿಕಾವನ್ನು ಎದುರಿಸುತ್ತಿದ್ದಂತೆ, ಎಲ್ಲ ಲೆಕ್ಕಾಚಾರಗಳೂ ಬದಲಾದವು. ಅದನ್ನು ಸಾಧಿಸಿದ್ದು ರೋಹಿತ್ ಶರ್ಮ. ಅಚ್ಚರಿಯೆಂದರೆ ನಾಯಕ ಕೊಹ್ಲಿಗೆ ಬಹುತೇಕ ಕೆಲಸವೇ ಇಲ್ಲದಂತೆ ರೋಹಿತ್ ಮಾಡಿದರು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕೊಹ್ಲಿ ಮಿಂಚುವುದಕ್ಕೆ ರೋಹಿತ್ ಅವಕಾಶವನ್ನೇ ನೀಡಲಿಲ್ಲ!
ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮ ಅದ್ಭುತ ಶತಕ ಬಾರಿಸಿದರು. ಭಾರತ ಸುಲಭವಾಗಿ ಗೆಲುವು ಸಾಧಿಸಿತು. ಮುಂದೆ ಆಸ್ಟ್ರೇಲಿಯ ವಿರುದ್ಧ ಅರ್ಧಶತಕ, ಮತ್ತೆ ಪಾಕಿಸ್ತಾನದ ವಿರುದ್ಧ ಶತಕ ಚಚ್ಚಿದರು. ಆಫ^ನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ವಿಫಲವಾದಾಗ ಟೀಕಾಕಾರರು ಬಾಯೆ¤ರೆದು ಕುಳಿತಿದ್ದರು. ಅದರ ನಂತರ ನಡೆದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ರೋಹಿತ್ ತಿರುಗಿಬಿದ್ದರು. ಒಂದರ ಹಿಂದೊಂದರಂತೆ ಶತಕ ಬಾರಿಸಿದರು. ಅಷ್ಟು ಮಾತ್ರವಲ್ಲ ಸಾಲುಸಾಲು ದಾಖಲೆಗಳನ್ನು ರೋಹಿತ್ ನಿರ್ಮಿಸಿದರು. ಕೊಹ್ಲಿ ಹೇಗೆ ಆಡಿದ ಪಂದ್ಯಗಳಲ್ಲೆಲ್ಲ ಒಂದು ವಿಶ್ವದಾಖಲೆ ನಿರ್ಮಿಸುವ ತಾಕತ್ತು ಹೊಂದಿದ್ದಾರೊ ಹಾಗೆಯೇ ರೋಹಿತ್ ಕೂಡ ಅಂತಹದ್ದೇ ಒಂದು ಅಸದೃಶ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಏಕದಿನದಲ್ಲಿ ಗರಿಷ್ಠ ಶತಕ ಗಳಿಸಿದ ಆಟಗಾರರ ಪೈಕಿ ರೋಹಿತ್ ಈಗ 6ನೇ ಸ್ಥಾನದಲ್ಲಿದ್ದಾರೆ (ಜು.3ರಷ್ಟೊತ್ತಿಗೆ). ಸದ್ಯ ಅವರ ಶತಕಗಳ ಸಂಖ್ಯೆ 26. ಈಗ ಏಕದಿನದಲ್ಲಿ ಗರಿಷ್ಠ ಶತಕ ಗಳಿಕೆದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸಚಿನ್ ತೆಂಡುಲ್ಕರ್ (49), 2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (41), 3ನೇ ಸ್ಥಾನದಲ್ಲಿ ರಿಕಿ ಪಾಂಟಿಂಗ್ (30), 4ನೇ ಸ್ಥಾನದಲ್ಲಿ ಸನತ್ ಜಯಸೂರ್ಯ (28), 5ನೇ ಸ್ಥಾನದಲ್ಲಿ ಹಾಶಿಮ್ ಆಮ್ಲ (27) ಇದ್ದಾರೆ. ನಂತರದ ಸ್ಥಾನದಲ್ಲಿರುವುದೇ ರೋಹಿತ್ ಶರ್ಮ. ಅಂದರೆ ಇನ್ನು 5 ಶತಕ ಬಾರಿಸಿದರೆ ರೋಹಿತ್ ವಿಶ್ವದಲ್ಲಿ 3ನೇ ಗರಿಷ್ಠ ಶತಕಧಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಮುಂದೆ ಅವರು ನೇರವಾಗಿ ಸವಾಲೊಡ್ಡುವುದು ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡುಲ್ಕರ್‌ಗೆ. ಈ ಪೈಕಿ ಸಚಿನ್ ನಿವೃತ್ತಿಯಾಗಿರುವುದರಿಂದ ರೋಹಿತ್‌ಗೆ ಅವರನ್ನು ಮೀರುವುದು ಅಸಾಧ್ಯವಾಗುವುದಿಲ್ಲ. ಆದರೆ ಕೊಹ್ಲಿ ಮಾತ್ರ ಸವಾಲಾಗಿಯೇ ಉಳಿಯಬಹುದು. ಇವರಿಬ್ಬರ ಶತಕಗಳ ಸಂಖ್ಯೆಯಲ್ಲಿ ಅಗಾಧ ಅಂತರವಿದೆ. ಏನೇ ಅಂದರೂ ಹೀಗೆ ಒಂದರ ಹಿಂದೊಂದರಂತೆ ಶತಕವನ್ನು ನೀರು ಕುಡಿದಷ್ಟು ಸುಲಭವಾಗಿ ಚಚ್ಚುವ ರೋಹಿತ್, ವಿಶ್ವದ ಶತಕಧಾರಿಗಳ ಪಟ್ಟಿಯಲ್ಲಿ ಸಚಿನ್‌ರನ್ನೂ ಹಿಂದಿಕ್ಕಿ 2ನೇ ಸ್ಥಾನಕ್ಕೆ ಬಂದು ನಿಲ್ಲುತ್ತಾರೆಂದು ನಾವು ಊಹಿಸಿದರೆ; ಅದೇನು ತಪ್ಪಾಗುವುದಿಲ್ಲ! ಸದ್ಯದ ರೋಹಿತ್ ವೇಗವೇ ಹಾಗಿದೆ.
ವಿಶ್ವಕಪ್‌ನಲ್ಲಿನ ರೋಹಿತ್ ಲಯವೇ ಅದಕ್ಕೆ ಸಾಕ್ಷಿ. ಅವರ ಆಸ್ಫೋಟಕ ಆಟಕ್ಕೆ ಎಲ್ಲ ಬ್ಯಾಟ್ಸ್‌ಮನ್‌ಗಳೂ ಮಂಕಾಗಿದ್ದಾರೆ. ಯಾವುದೇ ಪಂದ್ಯಗಳು ನಡೆದರೂ ಅಲ್ಲಿ ಕೊಹ್ಲಿ ಹೆಸರು ಮೇಲಿನ ಸಾಲಿನಲ್ಲಿ ಕಾಣಿಸಿಕೊಳ್ಳುವುದು ಮಾಮೂಲಿ ಎನ್ನುವ ಪರಿಸ್ಥಿತಿಯನ್ನು ರೋಹಿತ್ ಬದಲಿಸಿ, ಅಲ್ಲಿ ತಮ್ಮ ಹೆಸರನ್ನು ಹಾಕಿಸಿಕೊಂಡಿದ್ದಾರೆ. ಇದು ಭಾರತೀಯ ಕ್ರಿಕೆಟ್‌ನ ಮಟ್ಟಿಗೆ ಅತ್ಯಂತ ಸುಂದರ, ಸುಮಧುರ ಗಳಿಗೆ.
ಸಚಿನ್ ಭವಿಷ್ಯ ಸತ್ಯವಾಯ್ತು
ಕೆಲವು ವರ್ಷಗಳ ಹಿಂದೆ ಸಚಿನ್ ತೆಂಡುಲ್ಕರ್ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರೂ ಇದ್ದರು. ಆಗಿನ್ನೂ ಈ ಇಬ್ಬರು ತೀರಾ ಕಿರಿಯರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೂಸುಗಳು. ಅಂತಹ ಹೊತ್ತಿನಲ್ಲಿ ಕಾರ್ಯಕ್ರಮದ ನಿರೂಪಕರು, ನಿಮ್ಮ ದಾಖಲೆಗಳನ್ನೆಲ್ಲ ಮುರಿಯಬಲ್ಲವರೆಲ್ಲ ಯಾರಾದರೂ ಇದ್ದಾರಾ ಎಂದು ಸಚಿನ್‌ರಲ್ಲಿ ಪ್ರಶ್ನಿಸಿದರು. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಸಚಿನ್, ಇಲ್ಲೇ ಇದ್ದಾರೆ ನೋಡಿ ಅವರಿಬ್ಬರು ಎನ್ನುತ್ತ, ಕೊಹ್ಲಿ, ರೋಹಿತ್‌ರತ್ತ ಕೈದೋರಿದ್ದರು. ಅವರು ಹಾಗೆ ಹೇಳಿದ ಕೆಲವೇ ತಿಂಗಳುಗಳಲ್ಲಿ ಈ ಇಬ್ಬರು ಅದನ್ನು ಸಾಬೀತು ಮಾಡುತ್ತ ಸಾಗಿದರು. ವಿಶ್ವ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಹೊಡೆದು ಯಾರೂ ಮಾಡದ ಸಾಧನೆಯನ್ನು ರೋಹಿತ್ ಮಾಡಿದರೆ, ಶತಕಗಳ ಮೇಲೆ ಶತಕ ಬಾರಿಸಿ ಕೊಹ್ಲಿ ಸಮಕಾಲೀನ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇವರಿಬ್ಬರ ಆಕ್ರಮಣವನ್ನು ತಡೆಯುವುದೇ ಕಷ್ಟವೆನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.