ಆ ದಿನಗಳು…ಆಗ ಪ್ರತಿ ಮನೆಯಲ್ಲೂ ಬಾವುಟ ಹಾರಾಡುತ್ತಿತ್ತು !
Team Udayavani, Aug 12, 2017, 12:54 PM IST
ನಮಗೆ ಸ್ವಾತಂತ್ರ್ಯ ಬಂತು, ಗಾಂಧೀಜಿ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿತು ಅಂತೆಲ್ಲ ನಾವು ಓದಿ ತಿಳಿದಿದ್ದೇವೆ. ಆದರೆ ಸ್ವಾತಂತ್ರ್ಯ ಬಂದ ಹಿಂದು, ಮುಂದಿನ ದಿನಗಳು ಹೇಗಿದ್ದವು ಗೊತ್ತಾ? ಹಿರಿಯ ಸಾಹಿತಿ, ಪತ್ರಕರ್ತ ಪಿ. ಲಂಕೇಶ್ ತಮ್ಮ ಬಾಲ್ಯದ ಆ ದಿನಗಳನ್ನು ಇಲ್ಲಿ ಹೇಳಿದ್ದಾರೆ.
ಆ ದಿನಗಳಲ್ಲಿ ಸ್ವಾತಂತ್ರ್ಯದ ಗಲಾಟೆ ತಾರಕ ಮುಟ್ಟುತ್ತಿತ್ತು. ಪಾಠ ನಡೆಯುತ್ತಿರಲಿಲ್ಲ. ಹಳ್ಳಿಯಿಂದ ಹಾರ್ನಳ್ಳಿಗೆ ಬಂದ ನನ್ನಂಥವರು ಪೋಲಿ ಬಿದ್ದು ಹಾಳಾಗುವ ಅಪಾಯಗಳಿದ್ದವು. ನಮ್ಮ ಹೆಡ್ ಮಾಸ್ಟರ್ ಸೂರಪ್ಪನವರು ನಮ್ಮನ್ನು ಶಾಲೆಯ ಒಳಗೇ ಇಟ್ಟಿರಲು ಪ್ರಯತ್ನಿಸುತ್ತಿದ್ದರು. ಹಾರ್ನಳ್ಳಿಯ ಹೋರಾಟಗಾರರು ಶಾಲೆ ಬಿಡಿಸಲು ಯತ್ನಿಸಿ ಸಫಲರಾಗುತ್ತಿದ್ದರು. ನಮ್ಮಂಥ ಹಳ್ಳಿಯಿಂದ ಬಂದ ಕುಡಮಿಗಳು ಶಾಲೆಯಲ್ಲೇ ಇರಲು ಸಿದ್ಧರಿದ್ದೆವು. ಆದರೆ ಬಹುಸಂಖ್ಯೆ ನಮ್ಮ ವಿರುದ್ಧ ಇತ್ತು. ಹೊರಗೆ “ಬೋಲೋ ಭಾರತ್ ಮಾತಾಕಿ’ ಎಂಬ ಸದ್ದು ಕೇಳಿದೊಡನೆ “ಜೈ’ ಎಂದು ಎಲ್ಲರೂ ಶಾಲೆಬಿಟ್ಟು ಓಡುತ್ತಿದ್ದರು. ನಾವೂ ಅವರ ಜೊತೆಗೆ ಓಡಲೇಬೇಕಾಗಿತ್ತು. ಇದು ಪ್ರತಿದಿನದ ನಾಟಕವಾಗಿದ್ದುದರಿಂದ ಹಳ್ಳಿಯ ನಮಗೆ ತಲೆರೋಸಿಹೋಗುತ್ತಿತ್ತು. ಮುಂಚೆಯೇ ಸ್ಕೂಲ್ ಇಲ್ಲ ಎಂದು ಹೇಳಿದ್ದರೆ ಮೂರು ಮೈಲಿ ಪ್ರಯಾಣ ಮಾಡುವ ಕಷ್ಟ ತಪ್ಪುತ್ತಿತ್ತು. ಹಾಗೇ ಯಾರೂ ನಮಗೆ ಹೇಳುತ್ತಿರಲಿಲ್ಲ.
ಆಗಿನ 1946-47ರ ದಿನಗಳು ನಮಗೆ ಈಗ ನೆನಪಾಗುವುದು ಲಕ್ಷಾಂತರ ಬಾವುಟಗಳು ಮತ್ತು ಮೆರವಣಿಗೆಗಳ ಮೂಲಕ. ಪ್ರತಿಯೊಂದು ಅಂಗಡಿ, ದೇವಸ್ಥಾನ, ಕಚೇರಿ, ಮನೆಯ ಮೇಲೂ ಬಾವುಟ ಹಾರಾಡುತ್ತಿತ್ತು. ಗಾಂಧೀಜಿ, ಜಿನ್ನಾ, ನೆಹರೂ ಹೇಳಿಕೆಗಳು ದಿನಪತ್ರಿಕೆಗಳಲ್ಲಿ ಅಚ್ಚಾಗುತ್ತಿದ್ದವು. ಅವನ್ನು ಚರ್ಚಿಸಿ ಹುರಿದುಂಬಿಸಿಕೊಂಡು ಕುಣಿಯುವುದೇ ಎಲ್ಲರ ಕೆಲಸ. ಕೆಲವು ಸಲ ಗಾಂಧೀಜಿ ಎಷ್ಟೇ ಪ್ರಯತ್ನಿಸಿದರೂ ಚಳವಳಿ ಅವರ ಕೈತಪ್ಪಿಹೋಗುತ್ತಿತ್ತು; ಅನೇಕ ಹಿಂಸೆಯ ಪ್ರಕರಣಗಳು ನಡೆದು ಹೋಗುತ್ತಿದ್ದವು. ಗಾಂಧೀಜಿ ಉಪವಾಸ ಮಾಡುತ್ತಿದ್ದರು. ಮತ್ತೆ ಎಲ್ಲ ಸರಿಹೋದಂತೆ ಕಾಣುತ್ತಿತ್ತು. ಗಾಂಧೀಜಿಯ ಸತ್ಯ, ಅಹಿಂಸೆ, ಸತ್ಯಾಗ್ರಹ, ಉಪವಾಸ ಮುಂತಾದುವೆಲ್ಲ ಹಳ್ಳಿಯ ಜನರಿಗೆ ಕಬ್ಬಿಣದ ಕಡಲೆಗಳಂತಿದ್ದವು. ಯಾರೂ ಎಂದೂ ಬಳಸದ ಮಾತುಗಳಂತೆ ಅವರಿಗೆ ಕಾಣುತ್ತಿದ್ದವು. ಆದರೆ ಆ ಮಾತುಗಳ ಬಗ್ಗೆ ಚರ್ಚೆ ಮಾಡಿದವರು, ಭಾಷಣ ಕೇಳಿದವರು ಅಸ್ಪಷ್ಟವಾಗಿಯಾದರೂ ಅರ್ಥ ಮಾಡಿಕೊಂಡಂತಿದ್ದರು. ಆಗ ಸ್ವಾತಂತ್ರ್ಯ ಬರುವ ರಾತ್ರಿ ಗೊತ್ತಾಯಿತು. ಎಲ್ಲೆಲ್ಲೂ ಸಮಾಧಾನ ಮೂಡಿದಂತಾಯಿತು. ಅದೆಲ್ಲ ಮುಗಿಯುವಷ್ಟರಲ್ಲಿ ಹಿಂದೂ-ಮುಸ್ಲಿಂ ಘರ್ಷಣೆ ಶುರುವಾಯಿತು. ಚಿಕ್ಕವರಾಗಿದ್ದ ನಮಗೆಲ್ಲ ಇದು ಅರ್ಥವಾಗುತ್ತಿರಲಿಲ್ಲ. ಜಿನ್ನಾ ಆಗ ಒಬ್ಬೊಬ್ಬ ಮುಸ್ಲಿಂ ಹತ್ತು ಜನ ಹಿಂದೂಗಳನ್ನು ಮುಗಿಸಬಲ್ಲ ಎಂದು ಹೇಳಿದನೆಂದು ಜನ ಮಾತಾಡಿಕೊಳ್ಳುತ್ತಿದ್ದರು. ನಮಗೆ ಮುಸ್ಲಿಮರು ಕಾಣಿಸುತ್ತಿದ್ದುದು ಹಾರನಹಳ್ಳಿಯಲ್ಲಿ ಮಾತ್ರ. ನಮ್ಮ ಹತ್ತಾರು ಹಳ್ಳಿಗಳಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇರಲಿಲ್ಲ. ಒಬ್ಬೊಬ್ಬ ಮುಸ್ಲಿ ಹತ್ತು ಜನ ಹಿಂದೂಗಳನ್ನು ಮುಗಿಸಬೇಕಾದರೆ ಆತ ಹಾರನಹಳ್ಳಿಯಿಂದ ನಮ್ಮೂರ ಕಡೆಗೆ ಬರುವುದು ಅನಿವಾರ್ಯವಾಗಿತ್ತು. ಇದನ್ನು ಹೇಳಿಕೊಂಡು ಹಳ್ಳಿಯ ಜನ ನಗುತ್ತಿದ್ದರು. ಅವರ ನಗೆ ಉತ್ತರ ಭಾರತ ಕೋಮುಗಲಭೆಯಲ್ಲಿ ಹತ್ತಿಕೊಂಡು ಉರಿದಾಗ ಕೂಡ ಅಡಗಲಿಲ್ಲ. ಯಾಕೆಂದರೆ ಅದೆಲ್ಲ ಸುದ್ದಿಯಾಗಿತ್ತು. ಎದುರಿಗೆ ನಡೆದದ್ದಾಗಿರಲಿಲ್ಲ.
ಇದು ನನ್ನಿಂದ ಹೊರಗೆ ನಡೆಯುತ್ತಿದ್ದದ್ದು. ಈ ಹತ್ತು ಹನ್ನೆರಡನೆ ವಯಸ್ಸಿನಲ್ಲಿ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅನಾಮಿಕನಾದ ಹುಡುಗನ ಕಾತರಗಳು ಹೆಚ್ಚು ಕುತೂಹಲಕರ. ದೇಶದ ಸ್ವಾತಂತ್ರದ ಬಗ್ಗೆ ನನ್ನ ವ್ಯಕ್ತಿತ್ವವನ್ನು ತೊಡಗಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಯಾಕೆಂದರೆ ನಾನಿದ್ದ ಸ್ತರದಲ್ಲಿ ಸ್ವಂತದ್ದು ಮತ್ತು ಬಾಹ್ಯದ್ದು ಎರಡನ್ನೂ ತಿಳಿದುಕೊಂಡು ಮುನ್ನಡೆಸುವವರು ಇರಲಿಲ್ಲ. ಬೆಳ್ಳನೆಯ ಬಟ್ಟೆ ಹಾಕಿಕೊಂಡು ಎತ್ತರವಾದ ಸ್ಥಳದಲ್ಲಿ ನಿಂತು ಗಂಭೀರವಾಗಿ ಮಾತಾಡಿ ಹೊರಟುಹೋಗುತ್ತಿದ್ದ ನಾಯಕರಿಗೂ ನನ್ನ ಸುತ್ತ ಇದ್ದವರಿಗೂ ತುಂಬ ವ್ಯತ್ಯಾಸವಿತ್ತು. ಹೆಡ್ ಮಾಸ್ಟರ್ ಸೂರಪ್ಪನವರ ಕತ್ತುಪಟ್ಟಿ ಹಿಡಿದು ಹೊಡೆದಿದ್ದ ಚಂದ್ರಶೇಖರ್ ಬಹಳ ಸಂಭ್ರಮದಿಂದ ಪ್ರಭಾತ್‌ಫೇರಿ ನಡೆಸುತ್ತಿದ್ದ. ಪೋಲಿಬಿದ್ದ ಮಹಾರುದ್ರ ಎನ್ನುವವನನ್ನು, ಇಡೀ ಹಾರನಹಳ್ಳಿ ಬೆಚ್ಚಿ ಆಲಿಸುವಂತೆ ಅವನಪ್ಪ ಹೊಡೆಯುತ್ತಿದ್ದ. ಮಹಾರುದ್ರನ ಪೋಲಿತನದ ವಿವರ ನನಗೆ ಗೊತ್ತಿರಲಿಲ್ಲ. ಆದರೆ ಅವನ ಅಪ್ಪ ಅವನ ಕಾಲುಗಳನ್ನು ಸೀಳುವಂತೆ ಹಿಡಿದು ಚಚ್ಚುತ್ತಿದ್ದುದನ್ನು ನಾನು ನೋಡಿದ್ದೆ. ಅದೇ ಮಹಾರುದ್ರ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಮೆರವಣಿಗೆ ತೆಗೆಯತ್ತಿದ್ದ. ಭತ್ತದ ಕಂಟ್ರೋಲ್ ರೇಷನಿಂಗ್ ಶುರುವಾಗಿ ಸರ್ಕಾರದವರು ನಮ್ಮ ಊರಿಗೆ ದಂಡೆತ್ತಿ ಬಂದು, ಬಚ್ಚಿಟ್ಟಿದ್ದ ಭತ್ತ ಜಪ್ತಿ ಮಾಡುತ್ತಿದ್ದ ಕಾಲದಲ್ಲಿ ಬ್ಲಾಕ್ ಮಾರ್ಕೆಟ್ ಮಾಡುತ್ತಿದ್ದರು. ಕದ್ದು ನಾಟಾ ಸಾಗಿಸುತ್ತಿದ್ದವರು ಸ್ವಾತಂತ್ರ್ಯ ಚಳವಳಿಯಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು. ಇವರೆಲ್ಲರಂತೆಯೇ ಕೆಲವರು ಒಳ್ಳೆಯವರೂ ಇರಬಹುದು. ಇವರು ಒಳ್ಳೆಯವರು, ಇವರು ಕೆಟ್ಟವರು ಎಂದು ವಿಂಗಡಿಸಿ ಹೇಳುವ ಶಕ್ತಿ ಆಗ ನಮಗೆ ಇರಲಿಲ್ಲ. ಅಂತೆಯೇ ನಮ್ಮ ಊರನ್ನು ಬಿಟ್ಟು ಹಾರನಹಳ್ಳಿಯನ್ನು ನನ್ನ ಪ್ರಜ್ಞೆಯಲ್ಲಿ ಅರಗಿಸಿಕೊಳ್ಳುತ್ತಿದ್ದ ನನಗೆ ಸ್ವಾತಂತ್ರ್ಯ ಚಳವಳಿ ನನ್ನದಾಗದೆ ಕಿರಿಕಿರಿಯಾಗುತ್ತಿತ್ತು.
ಸ್ವಾತಂತ್ರ್ಯ ಬಂದ ವರ್ಷ ಪರೀಕ್ಷೆಗಳೇ ಇಲ್ಲದೆ ತೇರ್ಗಡೆ ಮಾಡಿದರು. ವಿದ್ಯಾರ್ಥಿಗಳು, ಅಧ್ಯಾಪಕರು ಬಹುಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎಂಬುದು ಸರ್ಕಾರ ಕೊಟ್ಟ ಕಾರಣ; ಆದರೆ ಅಲ್ಲಿಯವರೆಗೆ ಪ್ರತಿಯೊಬ್ಬ ರಾಜಕಾರಣಿಯೂ ವೇದಿಕೆಯಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಭ್ಯಾಸದಲ್ಲಿ ಆಸಕ್ತಿ ವಹಿಸಬೇಕು. ರಾಜಕೀಯಕ್ಕೆ ಇಳಿಯಬಾರದು ಅನ್ನುತ್ತಿದ್ದರು. ಅವರ ಮಾತನ್ನು ಮೀರಿ ವಿದ್ಯಾರ್ಥಿಗಳು ರಾಜಕೀಯಕ್ಕೆ ಧುಮುಕಿದರು. ನಮ್ಮೂರ ಪ್ಲೇಗು, ಕಾಲರಾ, ಕ್ಷಾಮ, ದನದ ಕಾಯಿಲೆ- ಎಲ್ಲದರ ಮಧ್ಯೆ ರಾಜಕಾರಣಿಗಳು ಶಿಕ್ಷಣದ ಬಗ್ಗೆ ಎಲ್ಲರನ್ನೂ ಕೊರೆಯುತ್ತಲೇ ಇದ್ದರು. ಇಡೀ ದೇಶಕ್ಕೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕೆಂಬುದು ಯಾವನಿಗೂ ಹೊಳೆಯಲಿಲ್ಲ. ಅಷ್ಟರಲ್ಲೇ ವಿದ್ಯಾರ್ಥಿಗಳು ಸಾಕಷ್ಟು ಕೊಬ್ಬಿದ್ದರು. ಪ್ರಜೆಗಳು ಸ್ವಾತಂತ್ರ್ಯ ಸಂಗ್ರಾಮದ ಅಂಗವಾಗಿಯೇ ಹೊಣೆಗೇಡಿತನ ಬೆಳೆಸಿಕೊಂಡಿದ್ದರು. ತಮ್ಮ ರಾಜಕೀಯದ ಉದ್ದೇಶವೇ ಈ ಹೊಣೆಗಾರಿಕೆ, ಕ್ರಿಯಾಶೀಲತೆ, ಅಧಿಕಾರಕ್ಕಾಗಿ ವ್ಯಕ್ತಿಗಳ ಸಿದ್ಧತೆ ಎಂದು ಮಾತಾಡುತ್ತಿದ್ದವರು ಗಾಂಧೀಜಿ. ಆದರೆ ಅವರೂ ಆಡಳಿತದ ನಿರ್ಜೀವ ಯಂತ್ರದ ಭಾಗವೆಂಬಂತೆ ಜನ ನೋಡತೊಡಗಿದರು; ಅವರ ದ್ವನಿ ಚಿಕ್ಕದಾಗುತ್ತಾ ಹೋಯಿತು. ಇಂಥ ಸಂದರ್ಭದಲ್ಲಿ ಹುಟ್ಟಿದ್ದು ವಯಸ್ಕರ ಶಿಕ್ಷಣ ಸಮಿತಿ. ಇಡೀ ದೇಶದ ಸಾಕ್ಷರತೆಯೇ ಶೇ.20ರಷ್ಟು ಭಾಗ ಇದ್ದಾಗ, ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕೂ ಆಗದೆ ಇದ್ದಾಗ ವಯಸ್ಕರ ಶಿಕ್ಷಣ ಶುರುಮಾಡಿದರು. ನಿರೀಕ್ಷಿಸಿದಂತೆ ವಿಫಲವಾಯಿತು. ಆದರೆ ಅನೇಕ ಶಿಕ್ಷಣ ಕೇಂದ್ರಗಳಿಗೆ ಪುಸ್ತಕ ಬಂತು. ವಯಸ್ಕರು ಓದಲಿಲ್ಲ, ಬರೆಯಲಿಲ್ಲ. ನಮ್ಮೂರ ವಯಸ್ಕರ ಶಿಕ್ಷಣದ ಪುಸ್ತಕ ಭಂಡಾರ ಉಪಯೋಗವಾದದ್ದು ನನಗೊಬ್ಬನಿಗೇ ಎಂದು ಕಾಣುತ್ತದೆ.
(ಕೃಪೆ; ಪಿ. ಲಂಕೇಶ್ ಅವರ ಹುಳಿಮಾವಿನ ಮರ- ಆತ್ಮಕತೆಯಿಂದ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.