ಐಪಿಎಲ್‌ನಲ್ಲಿ ಆರಂಭಿಕರೇ ಬ್ರಹ್ಮಾಸ್ತ್ರ
Team Udayavani, Apr 14, 2018, 1:57 PM IST
ಈಗಾಗಲೇ ಐಪಿಎಲ್ ಹಬ್ಬ ಆರಂಭವಾಗಿದೆ. ಈ ಬಾರಿಯ ಆರಂಭಿಕ ಹಂತದಲ್ಲಿನ ವಿಶೇಷ ಎಂದರೆ ಆರಂಭಿಕ ಆಟಗಾರರೇ ತಂಡಗಳಿಗೆ ಬ್ರಹ್ಮಾಸ್ತ್ರವಾಗುತ್ತಿರುವುದು. ಕೆ.ಎಲ್.ರಾಹುಲ್ ಪಂಜಾಬ್‌ಗ, ಧವನ್ ಹೈದರಾಬಾದ್‌ಗೆ, ಸುನೀಲ್ ನಾರಾಯಣ್ ಕೆಕೆಆರ್‌ಗೆ ಸಿಕ್ಕಿರುವ ಪ್ರಬಲ ಅಸ್ತ್ರಗಳಾಗಿದ್ದಾರೆ. ಆರಂಭಿಕರು ಸ್ಫೋಟಿಸಿದರೆ ಸಾಕು, ಮಧ್ಯಮ ಕ್ರಮಾಂಕ ನಿರಾಳವಾಗುತ್ತದೆ. ಪಂದ್ಯ ಗೆಲ್ಲುವ ದಾರಿ ಸುಗಮವಾಗುತ್ತದೆ.
“ಐಪಿಎಲ್’ ಚುಟುಕು ಪಂದ್ಯಾವಳಿ ಆರಂಭವಾಗಿದ್ದು, ಆರಂಭಿಕ ಆಟಗಾರರೇ ಎಲ್ಲ ತಂಡಗಳ ಪಾಲಿಗೆ ಬ್ರಹ್ಮಾಸ್ತ್ರವಾಗಿ ಪರಿಣಮಿಸಿದ್ದಾರೆ.
ಪಂದ್ಯ ಗೆಲ್ಲಬೇಕಾದರೆ ಕೆಳ ಕ್ರಮಾಂಕದಲ್ಲಿ ಬರುವ ಆಟಗಾರರು ಚೆನ್ನಾಗಿ ಆಡಬೇಕು ಎಂಬ ಮಾತು ಈ ಹಿಂದೆ ಇತ್ತು. ಆದರೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಆರಂಭಿಕ ಆಟಗಾರರೇ ಮ್ಯಾಚ್ ಫಿನಿಷರ್‌ಗಳಾಗುತ್ತಿದ್ದಾರೆ. ಹೀಗಾಗಿ ಆರಂಭಿಕ ಆಟಗಾರರ ಪ್ರದರ್ಶನದ ಮೇಲೆಯೇ ಯಾವ ತಂಡ ಪಂದ್ಯ ಗೆಲ್ಲುತ್ತೆ ಅಥವಾ ಸೋಲುತ್ತೆ ಎಂದು ಸುಲಭವಾಗಿ ಊಹೆ ಮಾಡಬಹುದಾಗಿದೆ.
ಎದುರಾಳಿ ತಂಡ ಎಷ್ಟೇ ದೊಡ್ಡ ಮೊತ್ತದ ಗುರಿ ನೀಡಿದರೂ ಆರಂಭಿಕ ಆಟಗಾರರು ನೀಡುವ ಪ್ರದರ್ಶನದ ಮೇಲೆ ಸೋಲು-ಗೆಲುವು ನಿಂತಿರುತ್ತದೆ. ಈವರೆಗೆ ನಡೆದಿರುವ ಐಪಿಎಲ್ 11ನೇ ಆವೃತ್ತಿಯ ಅಷ್ಟೋ ಪಂದ್ಯಗಳಲ್ಲಿ ಈ ಮಾತು ನಿಜವಾಗಿದೆ. ಇದೇ ಕಾರಣಕ್ಕಾಗಿಯೇ ಆರಂಭಿಕ ಆಟಗಾರರು ಮೊದಲು ಆರು ಓವರ್‌ಗಳ “ಪವರ್ ಪ್ಲೇ’ನಲ್ಲಿ ಹೊಡಿಬಡಿ ಆಟದ ಮೂಲಕ ತಂಡಕ್ಕೆ ಗರಿಷ್ಠ ರನ್‌ಗಳನ್ನು ತಂದುಕೊಡುತ್ತಾರೆ.
ಇದು ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿದಂತಾಗುತ್ತಿದೆ. ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸುವುದರಿಂದ ರನ್ ಹಾಗೂ ಎಸೆತಗಳ ನಡುವಿನ ಅಂತರ ಕಡಿಮೆಯಾಗುತ್ತಿದ್ದು, ಗುರಿಯನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತಿದೆ.
ಆರಂಭಿಕರಿಂದಲೇ ದಾಖಲೆ
ಟಿ20 ಪಂದ್ಯದಲ್ಲಿ ಪ್ರತಿ ಎಸೆತವೂ ಮುಖ್ಯವಾಗಿರುತ್ತದೆ. ಅತಿ ಹೆಚ್ಚು ಎಸೆತಗಳನ್ನು ಎದುರಿಸಲು ಆರಂಭಿಕ ಆಟಗಾರರಿಗೆ ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿಯೇ ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳು ಇಂದಿಗೂ ಆರಂಭಿಕ ಆಟಗಾರರ ಹೆಸರಿನಲ್ಲಿಯೇ ಇವೆ. ಆರಂಭಿಕ ಆಟಗಾರರಾಗಿ ನೀಡುವ ಪ್ರದರ್ಶನ ಹೆಚ್ಚು ಗಮನ ಸೆಳೆಯುತ್ತದೆ.
ಮಧ್ಯಮ ಕ್ರಮಾಂಕ ನಿರಾಳ
ಎದುರಾಳಿ ತಂಡ 200 ರನ್‌ಗಳ ಗುರಿ ನೀಡಿದರೂ ಆರಂಭಿಕ ಆಟಗಾರರೇ ಕಡಿಮೆ ಎಸೆತಗಳಲ್ಲಿ ಅರ್ಧದಷ್ಟು ರನ್ ಗಳಿಸುತ್ತಿರುವುದರಿಂದ ಮಧ್ಯಮ ಕ್ರಮಾಂಕದ ಆಟಗಾರರ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ. ಆರಂಭಿಕರು ಔಟಾಗುವ ವೇಳೆಗೆ ಸರಾಸರಿ ಎಸೆತಗಳು ಹಾಗೂ ಗೆಲ್ಲಲು ಬೇಕಾದ ರನ್‌ಗಳು ಸಮಾನವಾಗಿರುತ್ತವೆ. ಇದರಿಂದಾಗಿ ಸುಲಭವಾಗಿ ಗುರಿ ಬೆನ್ನಟ್ಟಲು ಸಹಾಯವಾಗುತ್ತಿದೆ.
ಐಪಿಎಲ್ ಚರಿತ್ರೆಯಲ್ಲಿ ವೇಗದ ಅರ್ಧಶತಕ
ಪ್ರಸಕ್ತ ಋತುವಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಆಡುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಐಪಿಎಲ್‌ನಲ್ಲಿ ಅತಿ ವೇಗವಾಗಿ ಅರ್ಧಶತಕ ಗಳಿಸುವ ಮೂಲಕ ಮಿಂಚಿದ್ದಾರೆ. 14 ಎಸೆತಗಳನ್ನು ಎದುರಿಸಿದ ಅವರು, 6 ಬೌಂಡರಿ ಹಾಗೂ 4 ಬರೋಬ್ಬರಿ ಸಿಕ್ಸರ್ ಗಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದರು.
ಅಬ್ಬರಿಸುತ್ತಿರುವ ಧವನ್
ಭಾರತದ ತಂಡದ ಆರಂಭಿಕ ಆಟಗಾರನಾಗಿರುವ ಶಿಖರ್ ಧವನ್, ಸನ್‌ರೈಸರ್ ಹೈದರಾಬಾದ್ ಪರ ಆರಂಭಿಕರಾಗಿ ಅಬ್ಬರಿಸುತ್ತಿದ್ದಾರೆ. ತಾವಾಡಿದ ಮೊದಲ ಪಂದ್ಯದಲ್ಲಿ 78 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇದರಿಂದಾಗಿ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ರಾಜಸ್ಥಾನ್ ರಾಯಲ್ಸ್ ನೀಡಿದ್ದ ಸುಲಭ ಗುರಿ ಮುಟ್ಟಲು ಸಾಧ್ಯವಾಯಿತು.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ ತಂಡ 202 ರನ್ ಗಳಿಸುವ ಮೂಲಕ ಪ್ರಸಕ್ತ ಸಾಲಿನ ಪ್ರಸಕ್ತ ಸಾಲಿನ ಅತಿ ಹೆಚ್ಚು ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಜಯದ ನಗೆ ಬೀರಲು ಸಹ ಆರಂಭಿಕ ಆಟಗಾರರೇ ಕಾರಣವಾದರು. ಚೆನ್ನೈ ತಂಡದ ಪರವಾಗಿ ಆರಂಭಿಕರಾಗಿ ಮೈದಾನಕ್ಕಿಳಿದ ಶೇನ್ ವ್ಯಾಟ್ಸನ್ ಹಾಗೂ ಅಂಬಟಿ ರಾಯುಡು ಮೊದಲ ವಿಕೆಟ್‌ಗೆ ಕೇವಲ ಆರು ಓವರ್‌ಗಳಲ್ಲಿ 75 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟಿರು. ಇದರಿಂದ ದೊಡ್ಡ ಮೊತ್ತವನ್ನು ಚೇಸ್ ಮಾಡಲು ಸಾಧ್ಯವಾಯಿತು.
11 ಕೋಟಿ ರೂ.ಗೆ ಹರಾಜಾದಾಗ ಹುಬ್ಬೇರಿಸಿದ್ದರು
ಕಳೆದ ಒಂದು ವರ್ಷದ ಅವಧಿಯಲ್ಲಿ ಕೆ.ಎಲ್.ರಾಹುಲ್ ರಾಷ್ಟ್ರೀಯ ತಂಡದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೂ 2018ನೇ ಐಪಿಎಲ್ ಆವೃತ್ತಿಯ ಹರಾಜಿನಲ್ಲಿ 11 ಕೋಟಿ ರೂ.ಗೆ ಪಂಜಾಬ್ ತಂಡಕ್ಕೆ ಹರಾಜಾಗಿದ್ದರು. ಇದು, ದಿಗ್ಗಜ ಕ್ರಿಕೆಟಿಗರಿಗೂ ಸಿಗದ ಮೊತ್ತವಾಗಿತ್ತು. ಹೀಗಾಗಿ ಕ್ರೀಡಾ ಜಗತ್ತು ಹುಬ್ಬೇರಿಸುವಂತೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಪಂಚಾಬ್ ಫ್ರಾಂಚೈಸಿ ವಿರುದ್ಧ ಟ್ರೋಲ್ ಮಾಡಲಾಗಿತ್ತು. ಆದರೆ, ರಾಹುಲ್ ಪ್ರಥಮ ಪಂದ್ಯದಲ್ಲಿಯೇ ಡೆಲ್ಲಿ ವಿರುದ್ಧ ಸಿಡಿಲಿನ ಬ್ಯಾಟಿಂಗ್ ಪ್ರದರ್ಶಿಸಿ ತಾವು ದೊಡ್ಡ ಮೊತ್ತದ ರಹಾಜಿನ ಹಣ ಪಡೆಯುವ ಸಾಮರ್ಥ್ಯ ಹೊಂದಿದ ಆಟಗಾರನೆಂದು ಸಾಬೀತು ಪಡಿಸಿಕೊಂಡಿದ್ದಾರೆ.
ಸುನೀಲ್‌ಗೆ ಅದೃಷ್ಟ ತಂದ ಬಡ್ತಿ
ವೆಸ್ಟ್ ಇಂಡೀಸ್‌ನ ಸುನೀಲ್ ನಾರಾಯಣ್ ಒಬ್ಬ ಬೌಲರ್. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಲೈನ್‌ಗೆ ಇಳಿಯುತ್ತಿದ್ದರು. ಆದರೆ, 2017ನೇ ಐಪಿಎಲ್‌ನಲ್ಲಿ ಅಂದಿನ ಕೆಕೆಆರ್ ತಂಡದ ನಾಯಕನಾಗಿದ್ದ ಗೌತಮ್ ಗಂಭೀರ್ ಮಾಡಿದ ಪ್ರಯೋಗ ಕೈ ಹಿಡಿಯಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ಸುನೀಲ್ ಅವರನ್ನು ಕೆಲವು ಪಂದ್ಯಗಳಲ್ಲಿ ದಿಢೀರ್ ಎಂದು ಆರಂಭಿಕರಾಗಿ ಕಣಕ್ಕೆ ಇಳಿಸಲಾಯಿತು. ಸುನೀಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟರು. ಈ ಬಾರಿ ಆರ್‌ಸಿಬಿ ವಿರುದ್ಧ 17 ಎಸೆತದಲ್ಲಿ ಅರ್ಧಶತಕ ಸಿಡಿಸಿದ ಅವರು ತಂಡದ ಗೆಲುವಿಗೆ ಕಾರಣರೂ ಆದರು.
ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.