ಪಂತ್ ವೈಫಲ್ಯ ಭಾರತಕ್ಕೆ ಹೊರೆಯೆ?
Team Udayavani, Sep 28, 2019, 3:03 AM IST
ಮಾಜಿ ನಾಯಕ ಎಂ.ಎಸ್.ಧೋನಿ ನಿವೃತ್ತಿ ಸನಿಹದಲ್ಲಿದ್ದಾರೆ. ಮುಂದೆ ಟಿ20 ವಿಶ್ವಕಪ್ ಇದ್ದು ಧೋನಿ ನಂತರ ವಿಕೆಟ್‌ಕೀಪಿಂಗ್, ಬ್ಯಾಟಿಂಗ್‌ನಲ್ಲಿ ಕೌಶಲ್ಯವಿರುವ ಮತ್ತೊಬ್ಬ ಆಟಗಾರನ ಅಗತ್ಯತೆ ಇದೆ. ಈ ಹುಡುಕಾಟದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬ್ಯುಸಿಯಾಗಿದೆ. ಆದರೆ ಧೋನಿಗೆ ಸರಿಸಮಾನವಾಗಿ ಇರುವಂತಹ ಮತ್ತೊಬ್ಬ ಕ್ರಿಕೆಟಿಗ ಬಹುತೇಕ ಇನ್ನೂ ಪಕ್ಕಾ ಆಗಿಲ್ಲ. ಭಾರತೀಯ ಕ್ರಿಕೆಟ್‌ನಲ್ಲಿ ಭರವಸೆ ಮೂಡಿಸಿದ್ದ ಉದಯೋನ್ಮುಖರಲ್ಲಿ ರಿಷಭ್ ಪಂತ್ ಕೂಡ ಪ್ರಮುಖರು.
ಅಂತಹ ಕ್ರಿಕೆಟಿಗ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಫಾರ್ಮ್ ನಿರ್ವಹಿಸಿದ್ದು ತಲೆನೋವಿಗೆ ಕಾರಣವಾಗಿದೆ. ಹೌದು, ರಿಷಭ್ ಪಂತ್ 3 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಈ ಬೆನ್ನಲ್ಲೇ ಮಹಿಯನ್ನು ಕಡೆಗಣಿಸಲಾಗಿದೆ ಎಂದು ಬಿಸಿಸಿಐ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ. ಪ್ರಸಾದ್ ಟೀಕೆಯನ್ನು ಅಲ್ಲಗೆಳೆದಿದ್ದರು. ಧೋನಿಯನ್ನು ನಿರ್ಲಕ್ಷಿಸಿಲ್ಲ. ಅವರಿಗೆ ವಿಶ್ರಾಂತಿ ನೀಡಲಾಗಿದೆ ಅಷ್ಟೆ. ಮುಂಬರುವ ವಿಶ್ವಕಪ್ ಹಾಗೂ ಭಾರತ ತಂಡದ ಭವಿಷ್ಯ ಗಮನದಲ್ಲಿಟ್ಟುಕೊಂಡು ಸ್ವತಃ ಧೋನಿಯೇ ರಿಷಭ್ ಪಂತ್ ಆಯ್ಕೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಧೋನಿಗೆ ಬಲವಂತವಾಗಿ ನಿವೃತ್ತಿ ಹೇಳಿಸುವ ಕೆಲಸಕ್ಕೆ ಬಿಸಿಸಿಐ ಎಂದಿಗೂ ಕೈ ಹಾಕುವುದಿಲ್ಲ ಎಂದು ಎಂಎಸ್‌ಕೆ ಪ್ರಸಾದ್ ಸ್ಪಷ್ಟಪಡಿಸಿದ್ದರು. ಆದರೆ 3 ಪಂದ್ಯಗಳ ಟಿ20 ಸರಣಿ ಆರಂಭವಾದ ಬೆನ್ನಲ್ಲೇ ರಿಷಭ್ ಪಂತ್ ವೈಫಲ್ಯ ಬಿಸಿಸಿಐಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಸಂಪೂರ್ಣ ಮಳೆಗೆ ರದ್ದಾಗಿತ್ತು. ಆದರೆ ಮೊಹಾಲಿಯಲ್ಲಿ ನಡೆದ 2ನೇ ಟಿ20 ಹಾಗೂ ಬೆಂಗಳೂರಿನಲ್ಲಿ ನಡೆದ 3ನೇ ಟಿ20ಯಲ್ಲಿ ಬ್ಯಾಟ್ಸ್‌ಮನ್ ಆಗಿ ಪಂತ್ ಭಾರೀ ವೈಫಲ್ಯ ಅನುಭವಿಸಿದ್ದಾರೆ.
ಭಾರತಕ್ಕೆ ಪಂತ್ ಹೊರೆಯೆ?: ಮೊಹಾಲಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ರಿಷಭ್ ಪಂತ್ 5 ಎಸೆತಗಳಿಂದ ಕೇವಲ 4 ರನ್‌ಗೆ ಔಟಾಗಿದ್ದರು. ಬೆಂಗಳೂರಿನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ 20 ಎಸೆತದಿಂದ 19 ರನ್‌ಗಳಿಸಿ ನಿರಾಶೆ ಮೂಡಿಸಿದ್ದರು. ಮುಂದೆ ಪ್ರಮುಖ ಸರಣಿಗಳಲ್ಲಿ ಪಂತ್‌ಗೆ ಅವಕಾಶ ಸಿಗಬಹುದು. ಇದನ್ನು ಸೂಕ್ತ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಪಂತ್ ಬಳಸಿಕೊಂಡಿಲ್ಲ ಎಂದಾದರೆ ಖಂಡಿತವಾಗಿಯೂ ಭಾರತ ತಂಡಕ್ಕೆ ರಿಷಭ್ ಪಂತ್ ಹೊರೆಯಾಗುವ ಸಾಧ್ಯತೆ ಇದೆ. ಈ ಹಿಂದಿನ ವೆಸ್ಟ್ ಇಂಡೀಸ್ ಸರಣಿಯಲ್ಲೂ ಪಂತ್‌ರಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಿರಲಿಲ್ಲ.
ಸಹಜವಾಗಿಯೇ ಇದು ತಂಡದ ಆಡಳಿತ ಮಂಡಳಿಯನ್ನು ಒತ್ತಡಕ್ಕೆ ಸಿಲುಕಿಸಿದೆ. ಪಂತ್ ಮೊದಲ ಟಿ20 ಪಂದ್ಯದಲ್ಲಿ ವಿಫಲರಾಗಿದ್ದಾಗ ಸ್ವತಃ ಕೋಚ್ ರವಿಶಾಸ್ತ್ರಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ರವಿಶಾಸ್ತ್ರಿ ಮುಂದಿನ ಪಂದ್ಯದಲ್ಲಿ ಪಂತ್ ಇದೇ ರೀತಿಯ ತಪ್ಪನ್ನು ಎಸಗಿದರೆ ಪ್ರತಿಭೆ ಇರಲಿ ಅಥವಾ ಇಲ್ಲದಿರಲಿ ಕಠಿಣ ಕ್ರಮ ತೆಗೆದುಕೊಳ್ಳುವಂತಹ ಆಕ್ರಮಣಕಾರಿ ಮಾತುಗಳನ್ನಾಡಿದ್ದರು. ಪಂತ್ ಬಗ್ಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕೂಡ ಇಂತಹುದೇ ಮಾತುಗಳನ್ನಾಡಿದ್ದರು.ಇಬ್ಬರ ಮಾತಿನ ಹಿಂದೆ ಭಾರತಕ್ಕೆ ಪಂತ್ ಹೊರೆಯಾಗುತ್ತಿದ್ದಾರೆ ಎನ್ನುವ ಅನುಮಾನಗಳು ಮೂಡಿವೆ.
ಪಂತ್ ಸಿಡಿಯದಿದ್ದರೆ ಮುಂದಿನ ದಾರಿಯೇನು?: ಈಗಾಗಲೇ ವೈಫಲ್ಯ ಅನುಭವಿಸಿದ್ದರೂ ಬಿಸಿಸಿಐ ರಿಷಭ್ ಪಂತ್‌ಗೆ ಮುಂದಿನ ಕೆಲವು ಪಂದ್ಯಗಳಲ್ಲಿ ಆಡಲು ಅವಕಾಶ ನೀಡುವ ಸಾಧ್ಯತೆ ಇದೆ. ಅಲ್ಲೂ ಪಂತ್ ಇದೇ ಫಾರ್ಮ್ ಮುಂದುವರಿಸಿದರೆ ಭಾರತದ ಮುಂದಿನ ದಾರಿಯೇನು? ಇಂತಹ ಪ್ರಶ್ನೆಗಳು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೆ ಮೂಡುವುದು ಸಹಜ. ಇದಕ್ಕೆ ಉತ್ತರ ಇಲ್ಲಿದೆ.
ಇಶಾನ್ ಕಿಶನ್ ಮೊದಲ ಆಯ್ಕೆ: ಬಿಸಿಸಿಐ ಪಾಟ್ನಾ ಕ್ರಿಕೆಟಿಗ ಇಶಾನ್ ಕಿಶನ್‌ಗೆ ಮಣೆ ಹಾಕಬಹುದು, ಭಾರತ ಕಿರಿಯರ ತಂಡ, ಶೇಷ ಭಾರತ, ಮಂಡಳಿ ಅಧ್ಯಕ್ಷರ ಇಲೆವೆನ್, ಐಪಿಎಲ್‌ನಂತಹ ಕೂಟದಲ್ಲಿ ಆಡಿರುವ ಅನುಭವವನ್ನು ಇಶಾನ್ ಕಿಶನ್ ಹೊಂದಿದ್ದಾರೆ. ಇಶಾನ್ ಕಿಶನ್ ಒಟ್ಟಾರೆ 42 ಪ್ರಥಮ ದರ್ಜೆ ಕ್ರಿಕೆಟ್ ಆಡಿ 5 ಶತಕ, 15 ಅರ್ಧಶತಕ ಒಳಗೊಂಡ ಒಟ್ಟಾರೆ 2639 ರನ್ ಮಾಡಿದ್ದಾರೆ. ಒಟ್ಟು 70 ದೇಶಿ ಟಿ20 ಕ್ರಿಕೆಟ್ ಪಂದ್ಯದಲ್ಲಿ 2 ಶತಕ, 7 ಅರ್ಧಶತಕ ಒಳಗೊಂಡ 1628 ರನ್‌ಗಳಿಸಿದ್ದಾರೆ.
ಸಂಜುಗೂ ಬರಬಹುದು ಬುಲಾವ್: ಇಶಾನ್ ಕಿಶನ್ ಹೆಸರಿನ ಜತೆ ಕೇರಳ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಹೆಸರು ಕೂಡ ಆಯ್ಕೆ ಸಮಿತಿ ಮುಂದಿದೆ. ಐಪಿಎಲ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಅಪ್ರತಿಮ ಆಟ ಪ್ರದರ್ಶಿಸಿದ್ದಾರೆ. ಸಂಜು ಈಗಾಗಲೇ ಭಾರತ ಪರ ಒಂದು ಅಂ.ರಾ. ಟಿ20 ಪಂದ್ಯವನ್ನೂ ಆಡಿದ್ದಾರೆ. ಒಟ್ಟಾರೆ 142 ದೇಶಿ ಟಿ20 ಪಂದ್ಯ ಆಡಿರುವ ಸಂಜು ಸ್ಯಾಮ್ಸನ್ 3353 ರನ್ ಬಾರಿಸಿದ್ದಾರೆ. ಇದು 2 ಶತಕ, 20 ಅರ್ಧಶತಕ ಒಳಗೊಂಡಿದೆ. ಇನ್ನು ಪ್ರಥಮ ದರ್ಜೆನಲ್ಲಿ ಒಟ್ಟು 53 ಪಂದ್ಯ, 2945 ರನ್‌ಗಳಿಸಿದ್ದಾರೆ. 9 ಶತಕ, 11 ಅರ್ಧಶತಕವಿದೆ.
ಹೊಸ ಮುಖ ಶ್ರೀಕರ್ ಭರತ್: ಇದುವರೆಗೆ ಕೇಳಿರದ ಹೆಸರು ಶ್ರೀಕರ್ ಭರತ್, 25 ವರ್ಷದ ಆಂಧ್ರಪ್ರದೇಶ ಕ್ರಿಕೆಟಿಗ ರಣಜಿ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ 37 ಟಿ20 ಆಡಿರುವ ಅವರು 1 ಅರ್ಧಶತಕ ಸೇರಿದಂತೆ 457 ರನ್‌ಗಳಿಸಿದ್ದಾರೆ. 69 ಪ್ರಥಮ ದರ್ಜೆಯಿಂದ 8 ಶತಕ, 20 ಅರ್ಧಶತಕ ಹೊಡೆದಿದ್ದಾರೆ.
ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಧೋನಿ ಸಾಧನೆ?: ಧೋನಿ ನಾಯಕ, ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿ ಎಲ್ಲ ವಿಭಾಗದಲ್ಲೂ ಯಶಸ್ಸು ಕಂಡಿದ್ದಾರೆ. ಜಾರ್ಖಂಡ್‌ನ ಧೋನಿ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಒಟ್ಟು 90 ಟೆಸ್ಟ್ ಆಡಿದ ಅವರು, 4,876 ರನ್‌ಗಳಿಸಿದ್ದಾರೆ. 6 ಶತಕ, 33 ಅರ್ಧಶತಕ ಬಾರಿಸಿದ್ದಾರೆ. ಗರಿಷ್ಠ 224 ರನ್ ವೈಯಕ್ತಿಕ ಶ್ರೇಷ್ಠ ರನ್ ಆಗಿದೆ. ಒಟ್ಟು 350 ಏಕದಿನ ಪಂದ್ಯವನ್ನಾಡಿರುವ ಧೋನಿ ಒಟ್ಟಾರೆ 10,773 ರನ್ ಗಳಿಸಿಕೊಂಡಿದ್ದಾರೆ. 10 ಶತಕ, 73 ಅರ್ಧಶತಕ ಬಾರಿಸಿದ್ದಾರೆ, ಅಜೇಯ 183 ರನ್ ವೈಯಕ್ತಿಕ ಶ್ರೇಷ್ಠ ಸಾಧನೆ. ಒಟ್ಟು 20 ಟಿ20 ಪಂದ್ಯವನ್ನಾಡಿರುವ ಧೋನಿ 2 ಅರ್ಧಶತಕ ಒಳಗೊಂಡ 1,617 ರನ್‌ಗಳಿಸಿದ್ದಾರೆ. ವಿಕೆಟ್ ಹಿಂದೆಯೂ ವೇಗದ ಸ್ಟೆಂಪಿಂಗ್, ಆಕರ್ಷಕ ಕ್ಯಾಚ್ ಹಿಡಿಯುವುದರಲ್ಲಿ ಧೋನಿಗಿಂತ ನಿಸ್ಸೀಮ ವಿಕೆಟ್ ಕೀಪರ್ ಮತ್ತೊಬ್ಬರನ್ನು ಕಂಡಿಲ್ಲ.
ಪಂತ್‌ಗೆ ಅವಕಾಶ ಕೊಡಿ ಎನ್ನುವ ಕೂಗು: ಪದೇ ಪದೇ ಕೆಟ್ಟ ಹೊಡೆಗಳಿಂದ ವಿಕೆಟ್ ಕಳೆದುಕೊಂಡು ಟೀಕೆಗೆ ಗುರಿಯಾಗಿರುವ ರಿಷಭ್ ಪಂತ್‌ಗೆ ಫಾರ್ಮ್ ಕಂಡುಕೊಳ್ಳಲು ಸ್ವಲ್ಪ ಸಮಯಾವಕಾಶ ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನೂ ಸಣ್ಣ ವಯಸ್ಸಿನ ಹುಡುಗ ಅತ್ಮವಿಶ್ವಾಸ ಕಳೆದುಕೊಂಡು ಕುಗ್ಗಬಾರದು. ಬಿಸಿಸಿಐ ಪಂತ್ ಪರ ನಿಂತು ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರೇರೇಪಿಸಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.