ಪ್ರೊ ಕಬಡ್ಡಿಯೊಳಗೊಂದು ಮಕ್ಕಳ ಕೆಬಿಡಿ
Team Udayavani, Sep 14, 2019, 5:30 AM IST
-ಬೆಂಗಳೂರಲ್ಲೂ ರಂಜಿಸಿದ ಮಕ್ಕಳ ಲೀಗ್
-ಶಾಲಾ ಮಕ್ಕಳಿಗೊಂದು ಭವಿಷ್ಯದ ಭರವಸೆ
ಎಲ್ಲೋ ಇದ್ದ ಕಬಡ್ಡಿ ಪಟುಗಳಿಗೆ ಜೀವನ ನೀಡಿದ್ದು ಪ್ರೊ ಕಬಡ್ಡಿ. ಆರ್ಥಿಕ, ಸಾಮಾಜಿಕವಾಗಿ ಆಟಗಾರರಿಗೆ ವರ್ಚಸ್ಸನ್ನು ತಂದುಕೊಟ್ಟಿದ್ದು ಸ್ಟಾರ್ ಸ್ಪೋರ್ಟ್ಸ್ ಹೆಗ್ಗಳಿಕೆ.
ಇಂತಹ ಲೀಗ್ ಇದೀಗ ಯಶಸ್ವಿ ಆರು ಆವೃತ್ತಿ ಪೂರೈಸಿ ಏಳನೇ ಆವೃತ್ತಿ ಕಾಣುತ್ತಿದೆ. ಲೀಗ್ ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದೆ. ಜತೆಗೆ ಸಂಘಟಕರು ಮಕ್ಕಳಿಗೆ ಕೆಬಿಡಿ ಜೂನಿಯರ್ (ಕಿರಿಯರ ಕಬಡ್ಡಿ) ಎನ್ನುವುದನ್ನು ಪರಿಚಯಿಸಿ ಪ್ರತ್ಯೇಕವಾಗಿ ಆಯೋಜಿಸುತ್ತಿರುವುದು ವಿಶೇಷವಾಗಿದೆ.
ಭವಿಷ್ಯದ ಕಬಡ್ಡಿ ಪಟುಗಳನ್ನು ರೂಪಿಸುವುದಕ್ಕಾಗಿ ಹಾಗೂ ಮಕ್ಕಳಲ್ಲಿ ಕಬಡ್ಡಿ ಕಲಿಕೆಯ ಆಸಕ್ತಿ ಹೆಚ್ಚಿಸುವುದಕ್ಕಾಗಿ ಕೆಬಿಡಿ ಜೂನಿಯರ್ ಆರಂಭಿಸಲಾಗಿದೆ. ಈ ಲೀಗ್ ಪ್ರತ್ಯೇಕವಾಗಿ ನಡೆಸುತ್ತಿರುವ ಕಬಡ್ಡಿ ಸಂಘಟಕರು ಇದೀಗ 3 ವರ್ಷವನ್ನು ಯಶಸ್ವಿಯಾಗಿ ಪೂರೈಸುತ್ತಿದ್ದಾರೆ.
ಇಂತಹ ವಿಶೇಷ ಸಂದರ್ಭದಲ್ಲಿ ಮಕ್ಕಳ ಕಬಡ್ಡಿ ಲೀಗ್ ಕುರಿತ ವಿಶೇಷ ವರದಿ ಇಲ್ಲಿದೆ. ಕಿರಿಯರ ಲೀಗ್ ಆರಂಭಿಸಿದ ಉದ್ದೇಶ, ಆಯೋಜನೆಯ ಬಗೆ, ಸಂಘಟನಾ ಚತುರತೆ, ಚಾಂಪಿಯನ್ ನಿರ್ಧಾರ, ಕೆಬಿಡಿ ಎಂದರೇನು ಸೇರಿದಂತೆ ಅನೇಕ ಕೂತೂಹಲಕಾರಿ ವಿಷಯಗಳ ಬಗೆಗಿನ ಮಾಹಿತಿ ಇಲ್ಲಿದೆ.
ಕೆಬಿಡಿ ಅಂದರೇನು?:
ಶಾಲಾ ಮಟ್ಟದ ಕಿರಿಯರ ಕಬಡ್ಡಿ ಕೂಟವನ್ನು ಕೆಬಿಡಿ ಎಂದು ಕರೆಯಲಾಗುತ್ತದೆ. ಮುಖ್ಯ ಸುತ್ತಿನಲ್ಲಿ ದೇಶದಾದ್ಯಂತ 12 ತಂಡಗಳು ಭಾಗವಹಿಸುತ್ತಿವೆ. ಈಗಾಗಲೇ ಪ್ರೊ ಕಬಡ್ಡಿ ಜತೆಯಲ್ಲೇ ಮೊದಲ ಹಂತದ ಪಂದ್ಯಗಳು ನಡೆಯುತ್ತಿವೆ. 12 ನಗರಗಳ ನಡುವೆ ಪ್ರಶಸ್ತಿ ಪೈಪೋಟಿ ನಡೆಯಲಿದೆ. ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.
12 ವರ್ಷ ವಯೋಮಿತಿಯೊಳಗಿನ ಆಟಗಾರರಿಗೆ ಮಾತ್ರ ಕೆಬಿಡಿ ಯಲ್ಲಿ ಆಡಲು ಅವಕಾಶ. ದೇಶದಾದ್ಯಂತ 12 ನಗರಗಳಿಂದ ಶಾಲಾ ತಂಡಗಳನ್ನು ಕೆಬಿಡಿಗೆ ಆಹ್ವಾನಿಸಲಾಗಿದೆ. ಮೊದಲ ಹಂತದಲ್ಲಿ ಒಂದು ನಗರದಿಂದ 24 ಶಾಲೆಗಳಿಗೆ ಅವಕಾಶ ನೀಡಲಾಗಿದ್ದು ಆ 24 ತಂಡಗಳನ್ನು ಕ್ರಮವಾಗಿ 12ರಂತೆ 2 ಗುಂಪುಗಳಾಗಿ ವಿಭಾಗಿಸಲಾಗುತ್ತದೆ. ಎರಡನೇ ಹಂತದಲ್ಲಿ ಆ 12 ತಂಡಗಳು ಕ್ರಮವಾಗಿ ಪರಸ್ಪರ ಸೆಣಸಾಟ ನಡೆಸುತ್ತವೆ. ಆನಂತರ ತಲಾ ಒಂದು ವಿಭಾಗದಿಂದ 4 ತಂಡಗಳಂತೆ ಒಟ್ಟಾರೆ 2 ವಿಭಾಗದಿಂದ ಎಂಟು ತಂಡಗಳನ್ನು ರಚಿಸಲಾಗುತ್ತದೆ, ಅಲ್ಲಿಂದ ಸೆಮಿಫೈನಲ್, ಫೈನಲ್ ಕ್ರಮವಾಗಿ ನಡೆಯಲಿವೆ. ಪ್ರತಿ ನಗರದಲ್ಲೂ ಫೈನಲ್ ನಡೆಯಲಿದ್ದು ತಲಾ ಒಂದೊಂದು ತಂಡ ಚಾಂಪಿಯನ್ ಆಗಲಿದೆ. ಆ ತಂಡಗಳು ಮುಂದೆ ಕೆಬಿಡಿ ಮುಖ್ಯ ಹಂತದ ಸುತ್ತಿನಲ್ಲಿ ಸೆಣಸಾಟ ನಡೆಸಲಿದೆ. ಗೆದ್ದ ತಂಡ ಸ್ಟಾರ್‌ನ್ಪೋರ್ಟ್ಸ್ ನಿಂದ ವಿಶೇಷ ಪ್ರಶಸ್ತಿ ಪಡೆಯಲಿದೆ.
ನಗರದ ಮಕ್ಕಳಿಂದ ವಿಶೇಷ ಆಸಕ್ತಿ:
ಕಬಡ್ಡಿಯನ್ನು ಹೆಚ್ಚಾಗಿ ಹಳ್ಳಿ ಮಕ್ಕಳು ಆಡುತ್ತಿದ್ದರು. ಒಂದು ಹಂತದಲ್ಲಿ ಕಬಡ್ಡಿಯನ್ನು ಆಡುವುದು ಹಳ್ಳಿ ಮಕ್ಕಳು ಮಾತ್ರ ಎಂಬ ಕಲ್ಪನೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರೊ ಕಬಡ್ಡಿ ಬೆಳೆಯುತ್ತಿದ್ದಂತೆ ಬೆಂಗಳೂರು ಸೇರಿದಂತೆ ದೇಶಾದ್ಯಂತ ಇರುವ ನಗರಗಳ ಶಾಲೆಗಳಲ್ಲಿ ಕಬಡ್ಡಿ ಕಲಿಕೆಗೆ ಮುಂದಾಗಿದ್ದಾರೆ. ಹೀಗಾಗಿ ಕಬಡ್ಡಿ ಕಲಿಕೆಯ ಒಟ್ಟಾರೆ ಚಿತ್ರಣವೇ ಈಗ ಬದಲಾದಂತಾಗಿದೆ. ಪ್ರಮುಖ ನಗರಗಳ ಪ್ರತಿಷ್ಠಿತ ಶಾಲೆಗಳು ತಂಡಗಳನ್ನು ರಚಿಸಿ ಕೆಬಿಡಿ ಗೆ ಕಳುಹಿಸಿಕೊಡುತ್ತಿರುವುದು ವಿಶೇಷವಾಗಿದೆ. ಭವಿಷ್ಯದಲ್ಲಿ ಮತ್ತಷ್ಟು ತಂಡಗಳು ಲೀಗ್‌ಗೆ ತಮ್ಮ ಶಾಲೆಯನ್ನು ಸೇರಿಸಿಕೊಳ್ಳುವಂತೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಹಳ್ಳಿ ಮಕ್ಕಳಿಗೂ ಅವಕಾಶ
ಕೆಬಿಡಿ ಇದೀಗ ಮೂರನೇ ಆವೃತ್ತಿವರೆಗೆ ಬಂದಿದೆ. ಸದ್ಯ ನಗರದ ಮಕ್ಕಳು ಮಾತ್ರ ಕೂಟದಲ್ಲಿ ಹೆಚ್ಚು ಪಾಲ್ಗೊಂಡಿದ್ದಾರೆ. ಆದರೆ 3ನೇ ಆವೃತ್ತಿಯಲ್ಲಿ ಕೆಬಿಡಿಗೆ ಹಳ್ಳಿಯ ಮಕ್ಕಳು ಕಾಲಿಟ್ಟಿದ್ದಾರೆ. ಅದು ಕರ್ನಾಟಕದಿಂದ ಎನ್ನುವುದು ಮತ್ತೂಂದು ವಿಶೇಷತೆ. ಹೊಸ ತಂಡಗಳೆಂದರೆ ಕುಣಿಗಲ್‌ನ ಅರವಿಂದ್ ಅಂತಾರಾಷ್ಟ್ರೀಯ ಶಾಲೆ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೆಎಲ್‌ಇ ಸ್ಕೂಲ್. ವಿಶೇಷವೆಂದರೆ ಅರವಿಂದ್ ಅಂತಾರಾಷ್ಟ್ರೀಯ ಶಾಲೆ ಪಾಲ್ಗೊಂಡ ಮೊದಲ ಆವೃತ್ತಿಯಲ್ಲೇ ರನ್ನರ್‌ಅಪ್ ಆಗಿ ಬೀಗಿದೆ. ಮುಂದೆ ಹೆಚ್ಚಿನ ಹಳ್ಳಿ ತಂಡಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೂಟದ ನೇರ ಪ್ರಸಾರಕ ಸ್ಟಾರ್ ನ್ಪೋರ್ಟ್ಸ್ ಚಿಂತನೆ ನಡೆಸಿದೆ. ಆದರೆ ಕೆಬಿಡಿಗೆ ಅಂತ ಇಂತಿಷ್ಟು ಬಜೆಟ್ ಮೀಸಲಿರಿಸಲಾಗಿದೆ. ಸದ್ಯ ಕ್ಯಾಮೆರಾ, ಊಟದ ವ್ಯವಸ್ಥೆ , ವಸತಿ ಎಲ್ಲವನ್ನು ಕೂಟ್ಟು ನಡೆಸಿಕೊಂಡು ಹೋಗಬೇಕಿದೆ. ಭವಿಷ್ಯದಲ್ಲಿ ಪ್ರಾಯೋಜಕರು ಬಂದರು ಬರಬಹುದು. ಆಗ ಹಳ್ಳಿ ಮಕ್ಕಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ ಎನ್ನುವುದು ಸಂಘಟಕರ ಮಾತು.
ಹೆಣ್ಣು ಮಕ್ಕಳಿಗೆ ಅವಕಾಶ ನೀಡಿ:
ಕೆಬಿಡಿ ಬಾಲಕರ ತಂಡಗಳಿಗೆ ಅವಕಾಶ ಇದೆ. ಆದರೆ ಹೆಣ್ಣು ಮಕ್ಕಳ ತಂಡಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಹುಡುಗಿಯರ ತಂಡಕ್ಕೂ ಕಬಿಡಿ ಆಡಲು ಅವಕಾಶ ನೀಡಬೇಕು ಎನ್ನುವ ಕೂಗು ಕೇಳಿ ಬಂದಿದೆ. ಭವಿಷ್ಯದಲ್ಲಿ ಬಾಲಕಿಯರ ತಂಡವನ್ನೂ ರಚಿಸುವುದಾಗಿ ಸ್ಟಾರ್ ನ್ಪೋರ್ಟ್ಸ್ ಭರವಸೆ ನೀಡಿದೆ. ಆದರೆ ಇದಕ್ಕೆ ಇನ್ನಷ್ಟು ಸಮಯದ ಅವಕಾಶ ಬೇಕಿದೆ ಎನ್ನುವುದು ಸಂಘಟಕರ ವಲಯದಿಂದ ಕೇಳಿ ಬಂದ ಮಾತು.
ವೃತ್ತಿಪರರಂತೆ ಮಕ್ಕಳ ಆಟ: ಶಿವಣ್ಣ
ಚೆನ್ನೈ, ಹೈದರಾಬಾದ್‌ನಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಮೊದಲ ಪ್ರಯತ್ನದಲ್ಲೇ ನಮ್ಮ ಕುಣಿಗಲ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು ವಿಶೇಷ, ಒಬ್ಬೊಬ್ಬ ಆಟಗಾರರು ಪ್ರದೀಪ್ ನರ್ವಾಲ್‌ರಂತೆ ರೈಡ್ ಮಾಡುತ್ತಾರೆ. ವೃತ್ತಿಪರ ಆಟಗಾರಂತೆ ಕಾಣುತ್ತಾರೆ. ಇದನ್ನು ನೋಡಲು ಖುಷಿ ಆಗುತ್ತದೆ. ಸಾರ್ಥಕತೆಯ ಭಾವನೆ ಮೂಡುತ್ತದೆ. ಮೂರು ಸಾವಿರ ಜನರಲ್ಲಿ ಒಂದೊಂದು ಸಿಟಿಯಿಂದಲೂ ತಲಾ 10-20 ಆಟಗಾರರು ಭವಿಷ್ಯದ ಪ್ರೊ ಕಬಡ್ಡಿ ಆಟಗಾರರಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದು ಕೆಬಿಡಿ ಜೂನಿಯರ್ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಶಿವಣ್ಣ ಹೇಳುತ್ತಾರೆ.
ಶ್ರೀಚೈತನ್ಯ ಚಾಂಪಿಯನ್
ಉದ್ಯಾನನಗರಿಯಲ್ಲಿ ಪ್ರೊ ಕಬಡ್ಡಿ ಬೆಂಗಳೂರು ಚರಣದ ವೇಳದೆ ನಡೆದ ಕಬಡ್ಡಿ ಲೀಗ್‌ನಲ್ಲಿ ಚೈತನ್ಯ ಎಚ್‌ಎಸ್‌ಎರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್‌ನಲ್ಲಿ ಶ್ರೀಚೈತನ್ಯ ಎಚ್‌ಎಸ್‌ಆರ್ ತಂಡವು 22-21 ರೋಚಕ ಹೋರಾಟದಲ್ಲಿ ಅರವಿಂದ್ ಅಂತಾರಾಷ್ಟ್ರೀಯ ಶಾಲಾ ತಂಡವನ್ನು ಸೋಲಿಸಿತು. ಬೆಂಗಳೂರು ತಂಡದ ಪರ ಸುಜಯ್ (13 ರೈಡಿಂಗ್ ಅಂಕ) ಹಾಗೂ ಆರ್ಯನ್ ಮೂರು ಟ್ಯಾಕಲ್ ಅಂಕ ಪಡೆದು ಬೆಂಗಳೂರು ಜಯಕ್ಕೆ ತಮ್ಮ ಕೊಡುಗೆ ನೀಡಿದರು. ವಿಜಯಿ ತಂಡವನ್ನು ಬೆಂಗಳೂರು ಬುಲ್ಸ್ ತಂಡದ ತಾರಾ ಆಟಗಾರ ಪವನ್ ಸೆಹ್ರಾವತ್ ಅಭಿನಂದಿಸಿದರು. ಮತ್ತಷ್ಟು ಸಾಧನೆಗಳು ಮುಂದಿನ ದಿನಗಳಲ್ಲಿ ಮಕ್ಕಳಿಂದ ಆಗಲಿ ಹಾರೈಸಿದರು. ಒಟ್ಟಾರೆ ಕೂಟದಲ್ಲಿ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಅರವಿಂದ್ ಅಂತಾರಾಷ್ಟ್ರೀಯ ಶಾಲೆ, ರಾಯಲ್ ಕಾನ್ಕರ್ಡ್ ಕಲ್ಯಾಣ್ ನಗರ್, ಶ್ರೀಚೈತನ್ಯ ಎಚ್‌ಎಸ್‌ಆರ್, ಕೆಎಲ್‌ಇ ಸ್ಕೂಲ್, ಡಿಪಿಎಸ್ ನಾರ್ಥ್, ವಿಎಸ್‌ಎಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ಲೌರೆನ್ಸ್ ಹೈಸ್ಕೂಲ್ ತಂಡಗಳು ಪಾಲ್ಗೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.