ಕಬಡ್ಡಿ ಕೋರ್ಟ್‌ನಲ್ಲಿ ಪ್ರದೀಪ್ ಎಂಬ ಹುಲಿ
Team Udayavani, Aug 12, 2017, 11:54 AM IST
ಹರ್ಯಾಣದ ಯುವ ಕಬಡ್ಡಿ ಪ್ರತಿಭೆ ಪ್ರದೀಪ್ ನರ್ವಾಲ್‌ರ “ಮಿಟ್ಟಿ ಸೇ ಮ್ಯಾಟ್ ತಕ್” (ಮಣ್ಣಿನಿಂದ ಮ್ಯಾಟ್ ವರೆಗಿನ) ಪಯಣ ಸುಲಭದ್ದಾಗಿರಲಿಲ್ಲ. ಕಬಡ್ಡಿಯೇ ಪ್ರಧಾನವಾಗಿರುವ ನೌರಿನಾಲ್‌ನಲ್ಲಿ ವಿಶೇಷ ಪ್ರತಿಭೆ ಪ್ರದರ್ಶಿಸಿ ಮೆರೆಯುವುದು ಸವಾಲಾಗಿತ್ತು. ನಿರಂತರ ಅಭ್ಯಾಸ ಹಾಗೂ ಕಬಡ್ಡಿ ಬಗೆಗಿನ ಶ್ರದ್ಧೆ, ಪ್ರದೀಪ್‌ರನ್ನು ಸದ್ಯ ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡದ ಯಶಸ್ವಿ ನಾಯಕನನ್ನಾಗಿ ರೂಪಿಸಿದೆ.
ಸೋನಿಪೇಟದ ನೌರಿನಾಲ್ ಗ್ರಾಮದ ಪ್ರದೀಪ್, ಶಾಲಾ ಹಂತದಿಂದಲೇ ಕಬಡ್ಡಿಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಮನೆಯಲ್ಲಿ ಚಿಕ್ಕಪ್ಪ ಕಬಡ್ಡಿ ಪಟುವಾಗಿರುವುದು, ಈತ ಕಬಡ್ಡಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಕಾರಣವಾಯಿತು. ಚಿಕ್ಕಪ್ಪ ನ್ಯಾಷನಲ್ಸ್ ಹಂತದಲ್ಲಿ ಆಡಿದ್ದರಿಂದ ಬಾಲಕ ಪ್ರದೀಪ್‌ನನ್ನೂ ಕಬಡ್ಡಿ ಸೆಳೆಯಿತು. ಕಬಡ್ಡಿ ಕಾರಣದಿಂದಾಗಿಯೇ ಓದು ತಲೆಗೆ ಹತ್ತಲಿಲ್ಲ. ಕ್ಲಾಸ್‌ಗೆ ಚಕ್ಕರ್ ಹೊಡೆಯುತ್ತಿದ್ದ ಪ್ರದೀಪ್‌ಗೆ ಮನೆಯಲ್ಲಿನ ಸದಸ್ಯರು ಕಬಡ್ಡಿಯಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ನೀಡಿದರು. ಟಿವಿಯಲ್ಲಿಯೂ ಕಬಡ್ಡಿ ನೋಡಲು ಪ್ರದೀಪ್ ಇಷ್ಟಪಡುತ್ತಿದ್ದರು. ಸದ್ಯ ಸೋನಿಪೇಟದ 18 ಪಟುಗಳು ಪ್ರೊ ಕಬಡ್ಡಿಯ 5ನೇ ಆವೃತ್ತಿಯಲ್ಲಿ ಆಡುತ್ತಿರುವುದನ್ನು ನೋಡಿದರೆ, ಅಲ್ಲಿಯ ಗ್ರಾಮಗಳಲ್ಲಿ ಕಬಡ್ಡಿ ಸ್ಥಿತಿ-ಗತಿ ಅರ್ಥವಾಗುತ್ತದೆ.
ಶಾಲಾ ಹಾಗೂ ಕಾಲೇಜ್ ಹಂತದಲ್ಲಿ ಟೂರ್ನಿಗಳಲ್ಲಿ ನೀಡಿದ ಉತ್ತಮ ಪ್ರದರ್ಶನ ಪ್ರೊ ಕಬಡ್ಡಿಯಲ್ಲಿ ಅವಕಾಶ ತಂದುಕೊಟ್ಟಿತು. ರೈಡಿಂಗ್‌ನಲ್ಲಿ ಚಾಕಚಕ್ಯತೆ ತೋರುವ ಪ್ರದೀಪ್ ತಂಡದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ “ಬಿ’ ವಲಯದ ಅಂಕ ಪಟ್ಟಿಯಲ್ಲಿ ತಂಡ ಆರಂಭಿಕ ಹಂತದಲ್ಲಿಯೇ ಅಗ್ರ ಸ್ಥಾನಕ್ಕೇರುವಂತೆ ಮಾಡಿದ್ದಾರೆ.
ಹೊಲಕ್ಕೆ ಹೋಗಲಾಗುತ್ತಿಲ್ಲ ಅನ್ನುವ ನೋವು
ಪ್ರದೀಪ್ ಪ್ರೊ ಕಬಡ್ಡಿಗೆ ಆಯ್ಕೆಯಾಗುವುದಕ್ಕಿಂತ ಮುಂಚೆ ತಮ್ಮ ಜೀರಿಗೆ, ಗೋಧಿ ಬೆಳೆಯುವ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಹೊಲಕ್ಕೆ ಹೋಗುವುದು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಅವರಲ್ಲಿದೆ. ಪ್ರೊ ಕಬಡ್ಡಿ ಜೀವನಕ್ಕೊಂದು ತಿರುವು ನೀಡಿದೆ ಎಂಬುದನ್ನು ಪ್ರದೀಪ್ ಒಪ್ಪಿಕೊಳ್ಳುತ್ತಾರೆ. 2 ಹಾಗೂ 3ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಪರ ಆಡಿದ್ದ ಈತ ಕಳೆದ 3 ಆವೃತ್ತಿಗಳಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಹಿರಿಯರಿಂದ ಕಲಿತ ತಂತ್ರ
ಆಡಿದ ಮೊದಲ ಆವೃತ್ತಿಯಲ್ಲಿ ಪ್ರದೀಪ್ ರೈಡಿಂಗ್‌ಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ಹಿರಿಯ ಪಟುಗಳಿಂದ ಕೆಲ ತಂತ್ರಗಳನ್ನು ಕಲಿತುಕೊಂಡಿದ್ದರಿಂದ ನಂತರದ ಆವೃತ್ತಿಗಳಲ್ಲಿ ಅವಕಾಶಗಳನ್ನು ಪಡೆದು ಮಿಂಚಿದರು. 5ನೇ ಆವೃತ್ತಿಯ ಆರಂಭದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಜಯಿಸಿರುವ ಪಾಟ್ನಾ ಪೈರೇಟ್ಸ್ ತಂಡ 15 ಅಂಕ ದಾಖಲಿಸಿದೆ. ಪ್ರದೀಪ್ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಯಶಸ್ವಿ ರೈಡರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ರಾಷ್ಟ್ರೀಯ ತಂಡದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಚುರುಕಿನ ರೈಡರ್
ಪ್ರದೀಪ್ ನರ್ವಾಲ್‌ಗೆ ಈಗಿನ್ನೂ ಕೇವಲ 20 ವರ್ಷ. ಈ ಚಿಕ್ಕ ವಯಸ್ಸಿನಲ್ಲಿಯೇ ಒಬ್ಬ ಯಶಸ್ವಿ ರೈಡರ್ ಆಗಿ ಗುರುತಿಸಿಕೊಂಡಿದ್ದಾರೆ. ರೈಡಿಂಗ್‌ಗೆ ಹೋದರೆ ಎದುರಾಳಿಗಳ ಮೇಲೆ ಹುಲಿಯಂತೆ ಘರ್ಜಿಸುತ್ತಾರೆ. ಚಿಗರೆಯ ವೇಗದಲ್ಲಿ ನುಗ್ಗಿ ಎದುರಾಳಿಯನ್ನು ಔಟ್ ಮಾಡಿ, ಚಿಂಕೆಯಂತೆ ನೆಗೆಯುತ್ತಾ ತನ್ನ ಕೋರ್ಟ್‌ಗೆ ಮರಳುತ್ತಾರೆ. ಕಳೆದ ಎರಡು ಆವೃತ್ತಿಯಲ್ಲಿ ಪಾಟ್ನಾ ಚಾಂಪಿಯನ್ ಪಟ್ಟ ಪಡೆಯುವಲ್ಲಿ ಪ್ರದೀಪ್ ಪಾತ್ರ ಮಹತ್ವದಾಗಿದೆ. 2016ರಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಪಂದ್ಯಗಳಲ್ಲೂ ಭಾರತ ಚಾಂಪಿಯನ್ ಆಗುವಲ್ಲಿಯೂ ಪ್ರದೀಪ್ ಕೊಡುಗೆ ಮುಖ್ಯವಾದದ್ದು.
“ನಾನು ಹಳ್ಳಿಯಲ್ಲಿ ಮಣ್ಣಿನ ಅಂಕಣದಲ್ಲಿ ಆಡುತ್ತಿದ್ದೆ. ಪ್ರೊ ಕಬಡ್ಡಿಗೆ ಆಯ್ಕೆಗೊಂಡ ನಂತರ ಲೈಟ್ಸ್‌ಗಳಲ್ಲಿ, ಅಬ್ಬರಿಸುವ ಮ್ಯೂಸಿಕ್, ಪ್ರೇಕ್ಷಕರು, ಕ್ಯಾಮೆರಾ ಮುಂದೆ ಆಡುವಾಗ ಮುಜುಗರವಾಗುತ್ತಿತ್ತು. ಆದರೆ ಕೆಲ ದಿನಗಳ ನಂತರ ರೂಢಿಯಾಯಿತು. ಕಬಡ್ಡಿಯೇ ಗ್ರಾಮದ ಮುಖ್ಯ ಕ್ರೀಡೆಯಾಗಿದ್ದರಿಂದ ಉಳಿದ ಆಟಗಾರರಿಗಿಂತ ವಿಶೇಷತೆಯನ್ನು ತೋರಿಸುವುದು ಅವಶ್ಯಕವಾಗಿತ್ತು. ಕಬಡ್ಡಿ ಬಗೆಗಿನ ತುಡಿತ, ಕಬಡ್ಡಿ ಪರಂಪರೆಯನ್ನು ಮುಂದುವರಿಸಬೇಕೆನ್ನುವ ಹಟ ನನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ’
ಪ್ರದೀಪ್ ನರ್ವಾಲ್, ಕಬಡ್ಡಿ ಆಟಗಾರ
ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.