ಕದ್ರಿ ಮಂಜುನಾಥ
Team Udayavani, Feb 17, 2018, 3:25 AM IST
ಮಂಗಳೂರು ಕೇಂದ್ರ ಬಸ್ ನಿಲ್ದಾಣದಿಂದ ಕೇವಲ 4 ಕಿ.ಮೀ ಅಂತರದಲ್ಲಿರುವ ಒಂದು ಪಾವನ ಪುಣ್ಯ ಕ್ಷೇತ್ರವೇ ಕದ್ರಿ. ಈ ಕ್ಷೇತ್ರಕ್ಕೆ ಸಾಕಷ್ಟು ಪೌರಾಣಿಕ ಹಿನ್ನೆಲೆಯೂ ಇದೆ. ಸುತ್ತಮುತ್ತಲಿನ ಹಚ್ಚ ಹಸಿರು ಪ್ರಕೃತಿ ಸೌಂದರ್ಯದ ನಡುವೆ ದಟ್ಟವಾದ ಗಿಡಮರಗಳ ಮಧ್ಯೆ, ಬೆಟ್ಟದ ಮೇಲೆ ನೆಲೆಸಿರುವ ಮಂಜುನಾಥನ ಮಹಿಮೆ ಅಪಾರ.
ಸುಮಾರು 11 ರಿಂದ 12 ನೇ ಶತಮಾನದಲ್ಲಿ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಲಾದ ಈ ಕುರಿತು ಹೀಗೆಂದು ಸ್ಥಳಪುರಾಣವಿದೆ. ಹಿಂದೆ ಪರಶುರಾಮರು ತಮ್ಮ ತಂದೆ ಕಶ್ಯಪ ಮುನಿಗಳಿಗೆ ತೊಂದರೆಮಾಡಿದ ಕ್ಷ$ತ್ರಿಯ ರಾಜರೆಲ್ಲರನ್ನೂ ವಧಿಸಿ, ಪ್ರಾಯಶ್ಚಿತ ಮಾಡಿಕೊಳ್ಳಲು ತಪ್ಪಸ್ಸನ್ನಾಚರಿಸಲು ಸೂಕ್ತವಾದ ಸ್ಥಳದ ಹುಡುಕಾಟ ನಡೆಸುತ್ತಿದ್ದಾಗ, ಶಿವನು ಕದಳಿವೃಕ್ಷಗಳಿಂದ ಕೂಡಿದ ಈ ಕದ್ರಿ ಕ್ಷೇತ್ರವೇ ನಿನ್ನ ತಪ್ಪಸ್ಸಿಗೆ ಸೂಕ್ತ ತಾಣವೆಂದು ದಾರಿ ತೋರಿದನಂತೆ. ಪರಶುರಾಮ ತಪಸ್ಸನ್ನಾಚರಿಸಲು ಈ ಕ್ಷೇತ್ರಕ್ಕೆ ಬಂದಾಗ ಇಲ್ಲಿನ ಪ್ರದೇಶವನ್ನು ಸಮುದ್ರ ಸಂಪೂಣರ್ವಾಗಿ ಆವರಿಸಿಕೊಂಡಿತ್ತಂತೆ. ಆಗ ಪರಶುರಾಮರು ನಮ್ರತೆಯಿಂದ ಸಮುದ್ರ ರಾಜನಿಗೆ ಕದಳಿವನದಲ್ಲಿ ತಪ್ಪಸ್ಸನ್ನಾಚರಿಸಲು ಸ್ವಲ್ಪ ಜಾಗ ನೀಡಬೇಕೆಂದು ಕೇಳಿಕೊಂಡಾಗ ಸಮುದ್ರರಾಜ ಜಾಗ ನೀಡಲು ನಿರಾಕರಿಸಿದನಂತೆ. ಇದರಿಂದ ಕುಪಿತನಾದ ಪರಶುರಾಮರು ತಮ್ಮಲ್ಲಿರುವ ಪರಶುವನ್ನು ಸಮುದ್ರ ರಾಜನತ್ತ ಎಸೆದರು. ಆಗ ಇದಕ್ಕೆ ಹೆದರಿದ ಸಮುದ್ರರಾಜ ಕದಳಿವನದಿಂದ ಹಿಂದೆ ಸರಿದು ಪರಶುರಾಮರಿಗೆ ಈ ತಾಣವನ್ನು ಬಿಟ್ಟುಕೊಟ್ಟನೆಂಬ ಪೌರಾಣಿಕ ಹಿನ್ನೆಲೆ ಇದೆ. ನಂತರ ಪರಶುರಾಮರು ತಪ್ಪಸ್ಸನ್ನಾಚರಿಸಿದಾಗ, ಶಿವನ ಜೊತೆ ಪಾರ್ವತಿ ಕೂಡ ಪ್ರತ್ಯಕ್ಷವಾಗಿ ಈ ಕ್ಷೇತ್ರದಲ್ಲಿಯೇ ನೆಲೆಸಿದರು ಎನ್ನಲಾಗುತ್ತಿದೆ. ಇಲ್ಲಿ ಶಿವ ಮಂಜುನಾಥನ ರೂಪದಲ್ಲಿ ನೆಲೆಸಿದ್ದಾನೆ. ಹಾಗೇ ಶಿವನ ಅಣತಿಯಂತೆ ಸಪ್ತಕೋಟಿ ತೀರ್ಥಗಳು ಇಲ್ಲಿ 7 ತೀರ್ಥ ಕುಂಡಗಳಾಗಿ ನೆಲೆಸಿವೆ.
ದೇವಸ್ಥಾನದ ಹಿಂಭಾಗದಲ್ಲಿರುವ ಒಂದು ಗೋಮುಖದಿಂದ ನಿರಂತರವಾಗಿ ತೀರ್ಥ ಉದ್ಭವವಾಗಿ ಹರಿದು ಬರುತ್ತದೆ. ಅದು ಕಾಶಿ ಕ್ಷೇತ್ರದ ಭಗೀರಥಿ ನದಿಯ ತೀರ್ಥವೆಂದು ಹೇಳಲಾಗುತ್ತಿದೆ. ಈ ನೀರು ಹರಿದು ಬಂದು 9 ಪತ್ರ ಹೊಂಡಗಳಲ್ಲಿ ಶೇಖರಣೆಯಾಗುತ್ತದೆ. ಈ ಹೊಂಡಗಳಿರುವ ಜಾಗವನ್ನು ಮೋಕ್ಷ ಧಾಮವೆಂದು ಕರೆಯಲಾಗುತ್ತದೆ. ಇಲ್ಲಿ ಸುಂದರವಾದ ವಿಘ್ನೇಶ್ವರನ ವಿಗ್ರಹವಿದೆ. ಅದರ ಕೆಳಭಾಗದಲ್ಲಿರುವ ಈ ಹೊಂಡಗಳಲ್ಲಿ ಭಕ್ತಾದಿಗಳು ಮಿಂದು ನಂತರ ಅಲ್ಲಿಯೇ ಮೇಲ್ಭಾಗದಲ್ಲಿರುವ ಚಂದ್ರಮೌಳೀಶ್ವರನ ಲಿಂಗಕ್ಕೆ ಅಭಿಷೇಕ ಮಾಡಿ ನಂತರ ಶ್ರೀಮಂಜುನಾಥನ ದರ್ಶಶನ ಮಾಡುವ ವಾಡಿಕೆ ಇಲ್ಲಿದೆ.
ಇನ್ನು ಪ್ರತಿದಿನವೂ ವಿಶೇಷ ಅಲಂಕಾರಗಳಿಂದ ಪೂಜಿಸಲ್ಪಡುವ ಮಂಜುನಾಥ, ವಿಶೇಷ ದಿನಗಳಾದ ಶಿವರಾತ್ರಿಯಂದು ಇನ್ನೂ ವಿಶೇಷವಾಗಿ ಅಲಂಕೃತಗೊಂಡಿರುತ್ತಾನೆ. ಈ ಸಂದರ್ಭದಲ್ಲಿ ದೂರದೂರಿನಿಂದ ಲಕ್ಷಾಂತರ ಭಕ್ತಾದಿಗಳು ಬಂದು ಮಂಜುನಾಥನ ದರ್ಶನ ಪಡೆದು ಪುನಿತರಾಗುತ್ತಿದ್ದಾರೆ.
ತಲುಪುವ ಮಾರ್ಗ : ದೇಶದ ಪ್ರಮುಖ ನಗರಗಳಿಂದ ಮಂಗಳೂರಿಗೆ ಸಾಕಷ್ಟು ಬಸ್, ರೈಲು ಹಾಗೂ ಮಾನ ಸೌಕರ್ಯಗಳಿವೆ. ಇಲ್ಲಿಂದ ಕೇವಲ 4 ಕಿ.ಮೀ. ಅಂತರದಲ್ಲಿರುವ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಾಕಷ್ಟು ಬಸ್ ಹಾಗೂ ಆಟೋಗಳ ಸೌಕರ್ಯವಿದೆ.
ಆಶಾ ಎಸ್. ಕುಲಕರ್ಣಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.